ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ | ಅಂತರ್ಜಾಲ ಸೇವೆ ಸ್ಥಗಿತ: ಒಪ್ಪತಕ್ಕ ನಡೆ ಅಲ್ಲ

Published 24 ಮೇ 2024, 22:30 IST
Last Updated 24 ಮೇ 2024, 22:30 IST
ಅಕ್ಷರ ಗಾತ್ರ

ಅಂತರ್ಜಾಲ ಸೇವೆಯನ್ನು ಸ್ಥಗಿತಗೊಳಿಸುವ ವಿಚಾರದಲ್ಲಿ ಭಾರತವು ಸತತ ಆರನೆಯ ವರ್ಷದಲ್ಲಿಯೂ ಜಾಗತಿಕವಾಗಿ ಮುಂಚೂಣಿ ಸ್ಥಾನ ಪಡೆದಿದೆ. ಇದು ಹೆಮ್ಮೆಪಡಬೇಕಾದ ಸಂಗತಿಯೇನೂ ಅಲ್ಲ. ಭಾರತದಲ್ಲಿ ಎಷ್ಟು ಬಾರಿ ಅಂತರ್ಜಾಲ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು, ಎಷ್ಟು ವಿಸ್ತಾರವಾದ ಪ್ರದೇಶಕ್ಕೆ, ಅವಧಿಗೆ ಅನ್ವಯವಾಗುವಂತೆ ಸ್ಥಗಿತಗೊಳಿಸಲಾಗಿತ್ತು ಎಂಬುದನ್ನು ಆಧರಿಸಿ ಈ ಮುಂಚೂಣಿ ಸ್ಥಾನವನ್ನು ನೀಡಲಾಗಿದೆ. ಜಾಗತಿಕ ಅಂತರ್ಜಾಲ ಸಂಘಟನೆಯಾದ ‘ಕೀಪ್ ಇಟ್ ಆನ್’ ನೀಡಿರುವ ಮಾಹಿತಿ ಪ್ರಕಾರ, ಭಾರತದಲ್ಲಿ ಕಳೆದ ವರ್ಷ 116 ಬಾರಿ ಅಂತರ್ಜಾಲ ಸೇವೆಯನ್ನು ಸ್ಥಗಿತಗೊಳಿಸ
ಲಾಗಿತ್ತು. ಅಂತರ್ಜಾಲ ಸೇವೆಯು ಅತಿಹೆಚ್ಚು ಬಾರಿ ಸ್ಥಗಿತವಾಗಿದ್ದು ಮಣಿಪುರ ಹಾಗೂ ಪಂಜಾಬ್‌ನಲ್ಲಿ. ಅಂತರ್ಜಾಲ ಸೇವೆಯನ್ನು ಸೀಮಿತ ಸ್ಥಳಕ್ಕೆ ಅನ್ವಯವಾಗುವಂತೆ ಸ್ಥಗಿತಗೊಳಿಸುವ ಬದಲು, ದೊಡ್ಡ ಪ್ರದೇಶವೊಂದಕ್ಕೆ ಅನ್ವಯವಾಗುವಂತೆ ಸ್ಥಗಿತಗೊಳಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ ಎಂದು ಸಂಘಟನೆ ಸಿದ್ಧಪಡಿಸಿರುವ ವರದಿಯು ಹೇಳಿದೆ. ಮಣಿಪುರದಲ್ಲಿ ಈ ಸೇವೆಯನ್ನು 47 ಬಾರಿ ಸ್ಥಗಿತಗೊಳಿಸ
ಲಾಗಿತ್ತು. ಪಂಜಾಬ್‌ನಲ್ಲಿ ಒಂದು ಬಾರಿ ರಾಜ್ಯದಾದ್ಯಂತ ಸೇವೆ ಸ್ಥಗಿತಗೊಳಿಸಲಾಗಿತ್ತು. ಮಣಿಪುರದಲ್ಲಿ 2023ರಲ್ಲಿ ಸೇವೆಯನ್ನು 212 ದಿನಗಳವರೆಗೆ ಸ್ಥಗಿತಗೊಳಿಸಲಾಗಿತ್ತು. 2023ರಲ್ಲಿ 13 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸೇವೆಯನ್ನು ಸ್ಥಗಿತ ಮಾಡಲಾಗಿತ್ತು. ಅಂತರ್ಜಾಲ ಸೇವೆ ಸ್ಥಗಿತಗೊಳಿಸಿದ ನಿದರ್ಶನಗಳು ಹಾಗೂ ಸ್ಥಗಿತದ ಅವಧಿಯು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಸಾಗಿದೆ. ಅಂತರ್ಜಾಲ ಸೇವೆ ಸ್ಥಗಿತಗೊಳಿಸುವಲ್ಲಿ ಮುಂಚೂಣಿಯಲ್ಲಿ ಇರುವ ದೇಶಗಳ ಸಾಲಿನಲ್ಲಿ ಎರಡನೆಯ ಸ್ಥಾನದಲ್ಲಿ ಮ್ಯಾನ್ಮಾರ್ ಇದೆ. ಇಲ್ಲಿ 37 ಬಾರಿ ಸೇವೆ ಸ್ಥಗಿತಗೊಳಿಸಲಾಗಿತ್ತು. ಇದರ ನಂತರದ ಸ್ಥಾನಗಳಲ್ಲಿ ಇರಾನ್, ಪ್ಯಾಲೆಸ್ಟೀನ್ ಮತ್ತು ಉಕ್ರೇನ್ ಇವೆ. ಇದು, ಭಾರತವು ಪಡೆದಿರುವ ಸ್ಥಾನ ಎಂಥದ್ದು ಎಂಬುದನ್ನು ಹೇಳುವಂತಿದೆ.

ಅಂತರ್ಜಾಲ ಸೇವೆಯು ಇಂದು ಸಂವಹನಕ್ಕೆ ಅತ್ಯಂತ ಅಗತ್ಯ. ಭಾರತದಲ್ಲಿ 82.5 ಕೋಟಿಗೂ ಹೆಚ್ಚು ಜನ ಅಂತರ್ಜಾಲ ಸೇವೆಯನ್ನು ಬಳಸುತ್ತಿದ್ದಾರೆ. ಇದು ಜಗತ್ತಿನಲ್ಲಿ ಎರಡನೆಯ ಅತಿದೊಡ್ಡ ಅಂತರ್ಜಾಲ ಬಳಕೆದಾರರ ಸಮೂಹ. 2023ರಲ್ಲಿ ದೇಶದಲ್ಲಿ ಅಂತರ್ಜಾಲ ಬಳಕೆದಾರರ ಪ್ರಮಾಣವು ಅದರ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇಕಡ 8ರಷ್ಟು ಬೆಳವಣಿಗೆ ಕಂಡಿದೆ. ಡಿಜಿಟಲ್ ಮಾಧ್ಯಮದ ಮೂಲಕ ಮನರಂಜನಾ ಕಾರ್ಯಕ್ರಮಗಳನ್ನು ವೀಕ್ಷಿಸುವುದು, ಸಂವಹನ ನಡೆಸುವುದು, ಸಾಮಾಜಿಕ ಜಾಲತಾಣ
ಗಳನ್ನು ಬಳಕೆ ಮಾಡುವುದು ಈಗ ಬಹುತೇಕರ ಪ್ರತಿನಿತ್ಯದ ಜೀವನದ ಭಾಗ. ಅಂತರ್ಜಾಲ ಸೇವೆಯನ್ನು ಸ್ಥಗಿತಗೊಳಿಸಿದಾಗ ದಿನನಿತ್ಯದ ಸಹಜ ಚಟುವಟಿಕೆಗಳಿಗೆ ಅಡ್ಡಿ ಉಂಟಾಗುತ್ತದೆ. ಅದಕ್ಕಿಂತ ಮುಖ್ಯವಾಗಿ, ಅಂತರ್ಜಾಲ ಸೇವೆಯನ್ನು ಸ್ಥಗಿತಗೊಳಿಸಿದಾಗ ಅಭಿವ್ಯಕ್ತಿ ಸ್ವಾತಂತ್ರ್ಯವನ್ನೂ ನಿರಾಕರಿಸಿದಂತೆ ಆಗುತ್ತದೆ. ಈ ಸೇವೆ ಸ್ಥಗಿತಗೊಂಡಾಗ ಮಾಹಿತಿ ಪ್ರಸರಣವು ನಿಲ್ಲುತ್ತದೆ. ಅದು ಸೆನ್ಸಾರ್‌ನಂತಹ ಕ್ರಮಕ್ಕೆ ಸಮನಾಗುತ್ತದೆ. ತಾನು ಅಂತರ್ಜಾಲ ಸೇವೆಯನ್ನು ಸ್ಥಗಿತಗೊಳಿಸುವುದರ ವಿರುದ್ಧ ಇರುವುದಾಗಿ ಸುಪ್ರೀಂ ಕೋರ್ಟ್‌ ಹಲವು ಬಾರಿ ಸ್ಪಷ್ಟಪಡಿಸಿದೆ. ಅನುರಾಧಾ ಭಾಸಿನ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್, ಸರ್ಕಾರವು ಹೇರುವ ಅಂತರ್ಜಾಲ ಸೇವೆಯ ಸ್ಥಗಿತದ ಆದೇಶವು ತಾತ್ಕಾಲಿಕವಾಗಿರಬೇಕು, ಸೀಮಿತವಾಗಿರಬೇಕು, ಕಾನೂನುಬದ್ಧವಾಗಿರಬೇಕು ಮತ್ತು ಸಮಸ್ಯೆಯೊಂದನ್ನು ನಿಭಾಯಿಸುವುದಕ್ಕೆ ಎಷ್ಟು ಬೇಕೋ ಅಷ್ಟು ಮಾತ್ರವೇ ಇರಬೇಕು ಎಂದು ಹೇಳಿದೆ. ಸರ್ಕಾರವು ತನ್ನ ಅಧಿಕಾರವನ್ನು ನ್ಯಾಯಸಮ್ಮತವಾಗಿಯೇ ಬಳಸಬೇಕು ಎಂಬ ದೃಷ್ಟಿಯಿಂದ ಸುಪ್ರೀಂ ಕೋರ್ಟ್‌ ಕೆಲವು ಷರತ್ತುಗಳನ್ನೂ ವಿಧಿಸಿದೆ. ಇವೆಲ್ಲವುಗಳ ನಡುವೆಯೂ, ಅಂತರ್ಜಾಲ ಸೇವೆಯನ್ನು ಸ್ಥಗಿತಗೊಳಿಸುವ ಪ್ರವೃತ್ತಿ ಹೆಚ್ಚಾಗಿದೆ.

ಅಂತರ್ಜಾಲ ಸೇವೆ ಸ್ಥಗಿತದ ಕ್ರಮದಿಂದಾಗಿ ಅತ್ಯಂತ ಹೆಚ್ಚು ಸಂಕಷ್ಟವನ್ನು ಅನುಭವಿಸಿದ್ದು ಕಾಶ್ಮೀರ ಮತ್ತು ಮಣಿಪುರ. ಸಂವಿಧಾನದ 370ನೆಯ ವಿಧಿಯ ಅಡಿಯಲ್ಲಿ ನೀಡಿದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆದ ನಂತರ 2019ರಲ್ಲಿ ಕಾಶ್ಮೀರದಲ್ಲಿ ಅತಿಹೆಚ್ಚಿನ ಅವಧಿಗೆ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಪ್ರತಿಭಟನೆಗಳನ್ನು ನಿಯಂತ್ರಿಸುವಲ್ಲಿ ಒಂದು ಅಸ್ತ್ರವೆಂಬಂತೆ ಅಂತರ್ಜಾಲ ಸೇವೆಯನ್ನು ಸ್ಥಗಿತಗೊಳಿಸುವುದೂ ಇದೆ. ರೈತರ ಪ್ರತಿಭಟನೆಗಳ ವಿಚಾರದಲ್ಲಿಯೂ ಈ ಅಸ್ತ್ರ ಪ್ರಯೋಗ ಆಗಿತ್ತು. ಆದರೆ ಕಾನೂನು ಮತ್ತು ಸುವ್ಯವಸ್ಥೆಯನ್ನು ನಿಯಂತ್ರಣಕ್ಕೆ ತರಲು ಇದನ್ನು ಬಳಸುವುದು ತರವಲ್ಲ. ಆ ರೀತಿ ಮಾಡುವುದು ವಾಸ್ತವದಲ್ಲಿ ಸಮಸ್ಯೆಯನ್ನೇ ಸೃಷ್ಟಿಸುತ್ತದೆ. ಸಹಜ ಸಂವಹನ ಹಾಗೂ ಮಾತುಕತೆಗಳನ್ನು ನಿರ್ಬಂಧಿಸಿದಾಗ ಸುಳ್ಳುಸುದ್ದಿಗಳು ಹೆಚ್ಚಾಗುತ್ತವೆ, ಅಧಿಕಾರ ವ್ಯವಸ್ಥೆಯ ಬಗ್ಗೆ ಅಪನಂಬಿಕೆ ಹೆಚ್ಚಾಗುತ್ತದೆ. ಇದರಿಂದ ಸಾಮಾಜಿಕ ಒತ್ತಡಗಳು ಹೆಚ್ಚುತ್ತವೆ, ನಾಗರಿಕ ಸಮಾಜ ದುರ್ಬಲಗೊಳ್ಳಲು ಕಾರಣವಾಗುತ್ತದೆ. ಆಗ ಪ್ರಭುತ್ವವು ಇನ್ನಷ್ಟು ನಿರಂಕುಶವಾಗಿ ವರ್ತಿಸುತ್ತದೆ. ಪ್ರಜಾತಂತ್ರ ವ್ಯವಸ್ಥೆಗಳಲ್ಲಿ ಈ ಬಗೆಯ ಸ್ಥಗಿತದ ಕ್ರಮವು ಬಹಳ ಕಡಿಮೆ. ಅಷ್ಟೇಅಲ್ಲ, ಭಾರತಕ್ಕೆ ಹೋಲಿಸಿದರೆ, ಸರ್ವಾಧಿಕಾರ ಇರುವ ದೇಶಗಳಲ್ಲಿ ಹಾಗೂ ಕಲಹಪೀಡಿತ ದೇಶಗಳಲ್ಲಿ ಕೂಡ ಈ ಬಗೆಯ ನಿರ್ಬಂಧಗಳು ಕಡಿಮೆ. ಅಂತರ್ಜಾಲ ಸೇವೆಯನ್ನು ಸ್ಥಗಿತಗೊಳಿಸುವುದರಿಂದ ಆಗುವ ಆರ್ಥಿಕ ನಷ್ಟ ಸಹ ಬಹಳ ಗಣನೀಯವಾದುದು. 2023ರ
ಮೊದಲಾರ್ಧದಲ್ಲಿ ಅಂತರ್ಜಾಲ ಸೇವೆಯ ಸ್ಥಗಿತದಿಂದ ದೇಶಕ್ಕೆ 1.9 ಬಿಲಿಯನ್ ಡಾಲರ್ (ಅಂದಾಜು ₹ 15 ಸಾವಿರ ಕೋಟಿ) ನಷ್ಟವಾಗಿದೆ ಎಂಬ ವರದಿಗಳು ಇವೆ. ಈ ಸೇವೆಯನ್ನು ಸ್ಥಗಿತಗೊಳಿಸುವುದು ದೇಶದಲ್ಲಿ ಪ್ರಜಾತಂತ್ರವು ದುರ್ಬಲವಾಗುತ್ತಿರುವುದರ ಇನ್ನೊಂದು ಲಕ್ಷಣವಾಗಿ ಕಾಣುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT