ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ: ಅತ್ಯಾಚಾರ ತಡೆ– ಕಾಯ್ದೆಯಷ್ಟೇ ಸಾಕೆ? ಮನೋಭಾವ ಬದಲಾಗಬೇಡವೇ?

Published 4 ಸೆಪ್ಟೆಂಬರ್ 2024, 19:12 IST
Last Updated 4 ಸೆಪ್ಟೆಂಬರ್ 2024, 19:12 IST
ಅಕ್ಷರ ಗಾತ್ರ

‘ಅಪರಾಜಿತ ಮಹಿಳೆ ಮತ್ತು ಮಕ್ಕಳ (‍ಪಶ್ಚಿಮ ಬಂಗಾಳ ಅಪರಾಧ ಕಾಯ್ದೆಗಳು ಮತ್ತು ತಿದ್ದುಪಡಿ) ಮಸೂದೆ–2024’ಕ್ಕೆ ಪಶ್ಚಿಮ ಬಂಗಾಳ ವಿಧಾನಸಭೆ ಮಂಗಳವಾರ ಅಂಗೀಕಾರ ನೀಡಿದೆ. ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಎಸಗಿದವರಿಗೆ ಶಿಕ್ಷೆ ನೀಡಲು ಈಗಾಗಲೇ ಇದ್ದ ಅವಕಾಶಗಳನ್ನು ಈ ಮಸೂದೆಯಲ್ಲಿ ಇನ್ನಷ್ಟು ವಿಸ್ತರಿಸಲಾಗಿದೆ. ಶಿಕ್ಷೆಯನ್ನು ಕಠಿಣಗೊಳಿಸಲಾಗಿದೆ. ಅತ್ಯಾಚಾರ ಅಥವಾ ಸಾಮೂಹಿಕ ಅತ್ಯಾಚಾರದಿಂದಾಗಿ ಸಂತ್ರಸ್ತೆಯು ಮೃತಪಟ್ಟರೆ ಅಥವಾ ಪ್ರಜ್ಞಾಹೀನ ಸ್ಥಿತಿ ತಲುಪಿದರೆ ಅತ್ಯಾಚಾರಿ ಅಥವಾ ಅತ್ಯಾಚಾರಿಗಳಿಗೆ ಮರಣದಂಡನೆ ವಿಧಿಸುವ ಅವಕಾಶವನ್ನು ಈ ಮಸೂದೆಯು ಕಲ್ಪಿಸುತ್ತದೆ. ಅತ್ಯಾಚಾರ ಆರೋಪವು ದೃಢಪಟ್ಟರೆ ಅತ್ಯಾಚಾರಿಗೆ ಜೀವಾವಧಿ ಶಿಕ್ಷೆ ವಿಧಿಸುವ ಅವಕಾಶ ಇದೆ; ಅಪರಾಧಿಗೆ ಶಿಕ್ಷೆಯ ಅವಧಿಯಲ್ಲಿ ಪೆರೋಲ್‌ಗೆ ಕೂಡ ಅವಕಾಶ ಇರುವುದಿಲ್ಲ. ಭಾರತೀಯ ನ್ಯಾಯಸಂಹಿತೆಯಲ್ಲಿಯೂ ಅತ್ಯಾಚಾರ ಅಪರಾಧಕ್ಕೆ ಮರಣದಂಡನೆ ವಿಧಿಸುವ ಅವಕಾಶ ಇದೆ. ಅದಕ್ಕೂ ಹಿಂದೆ ಜಾರಿಯಲ್ಲಿದ್ದ ಭಾರತೀಯ ದಂಡಸಂಹಿತೆಯಲ್ಲಿಯೂ ಕೆಲವು ರೀತಿಯ ಅತ್ಯಾಚಾರ ಪ್ರಕರಣಗಳಲ್ಲಿ ಗಲ್ಲು ಶಿಕ್ಷೆ ವಿಧಿಸುವ ಅವಕಾಶ ಇತ್ತು. ಹೊಸ ಮಸೂದೆಯಲ್ಲಿ ಶಿಕ್ಷೆಯನ್ನು ಇನ್ನಷ್ಟು ಕಠಿಣಗೊಳಿಸಲಾಗಿದೆ. ಅತ್ಯಾಚಾರ ಎಸಗಿದವರಿಗೆ ಕಠಿಣ ಶಿಕ್ಷೆ ಹಿಂದಿನಿಂದಲೂ ಇದ್ದರೂ ಅದು ಅಪರಾಧವನ್ನು ತಡೆಯುತ್ತಿಲ್ಲ ಎಂಬುದು ವಿಷಾದನೀಯ ವಿಚಾರ. ಲೈಂಗಿಕ ದೌರ್ಜನ್ಯವೂ ಸೇರಿದಂತೆ ಯಾವುದೇ ಅಪರಾಧ ನಡೆಯುವುದನ್ನು ಮರಣದಂಡನೆಯ ಭೀತಿಯು ತಡೆಯುತ್ತಿಲ್ಲ. ಶಿಕ್ಷೆಯ ತೀವ್ರತೆ ಅಲ್ಲ ಬದಲಿಗೆ ಶಿಕ್ಷೆ ಆಗುವುದು ಖಚಿತ ಎಂಬ ಭಯವು ಅಪ‍ರಾಧ ಕೃತ್ಯಗಳನ್ನು ತಡೆಯುತ್ತದೆ ಎಂಬುದು ಅಪರಾಧ ನ್ಯಾಯಶಾಸ್ತ್ರದ ಮೂಲಭೂತ ತಳಹದಿಯಾಗಿದೆ. 

ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯಲು ಕಾರಣ ಕಾನೂನುಗಳು ದುರ್ಬಲವಾಗಿವೆ ಎಂಬುದು ಅಲ್ಲ; ಬದಲಿಗೆ ಈ ಕಾನೂನುಗಳು ಸರಿಯಾಗಿ ಜಾರಿಯಾಗುವುದಿಲ್ಲ ಎಂಬುದಾಗಿದೆ. ಪಶ್ಚಿಮ ಬಂಗಾಳ ವಿಧಾನಸಭೆಯು ಅಂಗೀಕರಿಸಿರುವ ಹೊಸ ಮಸೂದೆಯು ಪ್ರಕರಣದ ತ್ವರಿತ ತನಿಖೆ ಮತ್ತು ವಿಚಾರಣೆಯ ಭರವಸೆಯನ್ನು ನೀಡಿದೆ. ಇಂತಹ ಅಂಶಗಳು ಈಗ ಇರುವ ಕಾನೂನುಗಳಲ್ಲಿಯೂ ಇವೆ. ಆದರೆ, ಅವು ಸರಿಯಾಗಿ ಅನುಷ್ಠಾನಗೊಳ್ಳುತ್ತಿಲ್ಲ. ಇಡೀ ದೇಶವನ್ನು ಬೆಚ್ಚಿ ಬೀಳಿಸಿದ್ದ ‘ನಿರ್ಭಯಾ’ ಪ್ರಕರಣದಲ್ಲಿ ಕೂಡ ಶಿಕ್ಷೆ ಖಚಿತಗೊಳ್ಳಲು ಏಳು ವರ್ಷಗಳು ಬೇಕಾಗಿದ್ದವು. ಅತ್ಯಾಚಾರ ಪ್ರಕರಣಗಳಲ್ಲಿ ಅಪರಾಧ ಸಾಬೀತು ಪ್ರಮಾಣವು ಶೇ 27–28ರಷ್ಟು ಮಾತ್ರ ಇದೆ. ಕಠಿಣ ಶಿಕ್ಷೆ ವಿಧಿಸಲು ಅವಕಾಶ ಇರುವ ಕಾಯ್ದೆಗಳು ದೇಶದಲ್ಲಿ ಜಾರಿಯಲ್ಲಿದ್ದರೂ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಏರುತ್ತಲೇ ಇದೆ. ಸಂತ್ರಸ್ತೆಯು ಅತ್ಯಾಚಾರಿಯ ಸಂಬಂಧಿ ಅಥವಾ ಗೊತ್ತಿರುವ ವ್ಯಕ್ತಿ ಎಂಬ ಕಾರಣಕ್ಕೆ ಹಲವು ಪ್ರಕರಣಗಳು ವರದಿಯಾಗುವುದೇ ಇಲ್ಲ. ದೂರು ದಾಖಲಿಸಿದರೆ ಅದರ ಪರಿಣಾಮ ಎದುರಿಸಬೇಕಾದೀತು ಅಥವಾ ಅವಮಾನ ಅನುಭವಿಸಬೇಕಾದೀತು ಎಂಬುದು ಕೂಡ ಪ್ರಕರಣ ವರದಿಯಾಗದೇ ಇರುವುದಕ್ಕೆ ಕಾರಣಗಳಾಗಿವೆ. ಮಹಿಳೆಯರನ್ನು ಅಗೌರವದಿಂದ ಕಾಣುವ ಮತ್ತು ಮಹಿಳೆಯು ಒಂದು ವಸ್ತು ಮಾತ್ರ ಎಂಬ ಭಾವಿಸಿರುವ ಮನಃಸ್ಥಿತಿಯನ್ನು ಬದಲಾಯಿಸುವುದರ ಮೂಲಕ ಲೈಂಗಿಕ ಹಿಂಸೆಯನ್ನು ತಡೆಯುವುದಕ್ಕೆ ಸಾಧ್ಯವಿದೆ. ಕ್ರೌರ್ಯ ಎಸಗಲು ಅವಕಾಶ ಇಲ್ಲದಂತೆ ನೋಡಿಕೊಳ್ಳುವ ಮೂಲಕವೂ ಲೈಂಗಿಕ ಹಿಂಸೆಯನ್ನು ತಡೆಯಬಹುದು. ಕಾನೂನು ಬದಲಾಯಿಸುವುದಕ್ಕಿಂತ ಇದು ಹೆಚ್ಚು ಪರಿಣಾಮಕಾರಿಯಾದುದು. ಲಿಂಗತ್ವ ಸಂಬಂಧಗಳನ್ನು ವ್ಯಾಖ್ಯಾನಿಸುವ ಹಲವು ಧೋರಣೆಗಳು ಮತ್ತು ವರ್ತನಾ ವಿಧಗಳು ಬದಲಾಗಬೇಕಾಗಿದೆ. ಕೆಲಸದ ಸ್ಥಳಗಳು ಮತ್ತು ಸಾರ್ವಜನಿಕ ಸ್ಥಳಗಳನ್ನು ಹೆಚ್ಚು ಸುರಕ್ಷಿತಗೊಳಿಸಬೇಕು ಹಾಗೂ ಮಹಿಳೆಯರಿಗೆ ಪೂರಕವಾಗಿರುವಂತೆ ನೋಡಿಕೊಳ್ಳಬೇಕು. ಈಗಾಗಲೇ ಹಲವು ಕಾಯ್ದೆಗಳು ಇವೆ. ಇನ್ನಷ್ಟು ಹೊಸ ಕಾಯ್ದೆಗಳನ್ನು ಜಾರಿಗೆ ತರುವುದರಿಂದ ವಾಸ್ತವವು ಬದಲಾಗುವುದಿಲ್ಲ. 

ಕೋಲ್ಕತ್ತದ ಆಸ್ಪತ್ರೆಯಲ್ಲಿ ಕಳೆದ ತಿಂಗಳು ನಡೆದ ವೈದ್ಯಕೀಯ ವಿದ್ಯಾರ್ಥಿನಿಯ ಮೇಲಿನ ಅತ್ಯಾಚಾರ ಮತ್ತು ಹತ್ಯೆ ಪ್ರಕರಣವನ್ನು ರಾಜ್ಯ ಸರ್ಕಾರವು ನಿರ್ವಹಿಸಿದ ರೀತಿಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಹಾಗಾಗಿಯೇ, ಈ ಟೀಕೆಗೆ ರಾಜಕೀಯ ಪ್ರತಿಕ್ರಿಯೆಯಾಗಿ ರಾಜ್ಯ ಸರ್ಕಾರವು ಹೊಸ ಮಸೂದೆಯನ್ನು ರೂಪಿಸಿದೆ. ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರವು ತನ್ನ ಮಹಿಳಾಸ್ನೇಹಿ ನೀತಿ ಮತ್ತು ನಿಲುವುಗಳಿಗೆ ಹೆಸರಾಗಿದೆ. ಈ ಹೆಸರನ್ನು ಉಳಿಸಿಕೊಳ್ಳುವುದು ಹೊಸ ಮಸೂದೆ ರೂಪಿಸಿದ್ದರ ಹಿಂದೆ ಇರುವ ಉದ್ದೇಶ ಆಗಿರಬಹುದು. ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಸಮರದಲ್ಲಿ ಸರ್ಕಾರಕ್ಕೆ ಒಂದು ರಾಜಕೀಯ ನಿಲುವು ಮತ್ತು ಸಮರ್ಥನೆಯ ಅಂಶವಾಗಿ ಈ ಮಸೂದೆ ನೆರವಾಗಬಹುದು; ವಾಸ್ತವವನ್ನು ಈ ಮಸೂದೆಯು ಬದಲಾಯಿಸುವ ಸಾಧ್ಯತೆ ಕಡಿಮೆ. ಈ ಮಸೂದೆಯು ಕೇಂದ್ರದಲ್ಲಿ ಇರುವ ಕಾಯ್ದೆಗಳಿಗಿಂತ ಭಿನ್ನವಾಗಿ ಇರುವುದರಿಂದ, ರಾಷ್ಟ್ರಪತಿಯವರ ಅಂಕಿತವೂ ಬೇಕಾಗಿದೆ. ರಾಷ್ಟ್ರಪತಿ ಅಂಕಿತ ಸಿಗದೇ ಹೋಗಬಹುದು; ಹಾಗಾದರೆ, ಮತ್ತೊಂದು ಸುತ್ತಿನ ರಾಜಕೀಯ ಸಂಘರ್ಷ ನಡೆಯುವುದು ಖಚಿತ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT