ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಪ್ರಧಾನಿಯ ಮೌನ ಸರಿಯೇ?

Last Updated 12 ಮೇ 2021, 19:31 IST
ಅಕ್ಷರ ಗಾತ್ರ

ಕೋವಿಡ್–19 ಸಾಂಕ್ರಾಮಿಕವು ದೇಶದಲ್ಲಿ ನಗರ, ಪಟ್ಟಣಗಳೆನ್ನದೆ ತನ್ನ ವಿಕಾರ ರೂಪವನ್ನು ಪ್ರದರ್ಶಿಸುತ್ತ ಸಾಗಿದೆ. ನಾವು ಈಗ ಕಾಣುತ್ತಿರುವ ಸಾವುಗಳ ಸುಳಿಗೆ ಬಂದು ಸಿಲುಕಿದ್ದು ಹೇಗೆ ಎಂಬ ಬಗ್ಗೆ ದೇಶದಲ್ಲಿ ಚರ್ಚೆ ನಡೆಯುತ್ತಿದೆ. ಪದಗಳನ್ನು ಬಳಸಿ, ಕೆಲವೊಮ್ಮೆ ಅಂಕಿಅಂಶಗಳನ್ನು ಬಳಸಿ ಚರ್ಚೆಗಳನ್ನು ನಡೆಸಲಾಗುತ್ತಿದೆ. ಈ ಚರ್ಚೆಗಳು ಟಿ.ವಿ. ಸ್ಟುಡಿಯೋಗಳಿಗೆ, ಪತ್ರಿಕೆಗಳಿಗೆ ಸೀಮಿತವಾಗಿವೆ ಎನ್ನಲಾಗದು. ಪ್ರತೀ ವ್ಯಕ್ತಿಯ ಮನಸ್ಸನ್ನೂ ಕೋವಿಡ್–19 ಸಂಬಂಧಿತ ಚರ್ಚೆಯು ತಲುಪಿದೆ.

ಪ್ರತೀ ವ್ಯಕ್ತಿಯೂ ತನ್ನದೇ ಆದ ಬಗೆಯಲ್ಲಿ ಈ ಸಾಂಕ್ರಾಮಿಕದ ಬಗ್ಗೆ ಆಲೋಚನೆ ನಡೆಸಿದ್ದಾನೆ. ಆದರೆ, ಈ ಹೊತ್ತಿನಲ್ಲಿ ಜನರ ನಡುವೆ ಮಾತುಕತೆ ನಡೆಯುತ್ತಿಲ್ಲ. ಏಕೆಂದರೆ, ಒಬ್ಬರು ಇನ್ನೊಬ್ಬರನ್ನು ಭೇಟಿ ಮಾಡಿ ಮಾತುಕತೆ ನಡೆಸಲು ಅವಕಾಶ ಸಿಗುತ್ತಿಲ್ಲ. ಚುನಾವಣಾ ರ್‍ಯಾಲಿ ಸೇರಿದಂತೆ, ಚಲನಶೀಲ ಸಮಾಜವೊಂದರಲ್ಲಿ ಹತ್ತು ಹಲವು ಬೇಡಿಕೆಗಳನ್ನು ಇಟ್ಟುಕೊಂಡು ನಡೆಯುತ್ತಿದ್ದ ರ್‍ಯಾಲಿಗಳ ಆರ್ಭಟ ತಗ್ಗಿದೆ.

ಪ್ರತಿಭಟನೆಗಳ ಬಿಸಿ ತಗ್ಗಿದೆ, ಪ್ರತಿಭಟನೆಗಳು ಆನ್‌ಲೈನ್‌ಗೆ ಸೀಮಿತ ಆದಂತಿವೆ. ನಗರ, ಪೇಟೆಗಳ ಬೀದಿಗಳಲ್ಲಿ ವಾಹನಗಳ ಅಬ್ಬರ ಇಲ್ಲ, ಜನರ ಹೆಜ್ಜೆಯ ಸದ್ದು ಕೂಡ ಇಲ್ಲ. ಕೋವಿಡ್‌ ಪೀಡಿತರಾಗಿದ್ದ ಕೆಲವು ಯುವಕರಿಗೆ, ಇಳಿ ವಯಸ್ಸಿನವರಿಗೆ ಸಾವಿಗೆ ಮೊದಲು ತಮ್ಮ ಕುಟುಂಬದವರ ಜೊತೆ ಕೊನೆಯ ಮಾತುಗಳನ್ನು ಆಡಲೂ ಸಾಧ್ಯವಾಗಿಲ್ಲ. ಇಂತಹ ಸಾವುಗಳು ಮೌನವನ್ನೂ ಅಸಹನೀಯ ಆಗಿಸುತ್ತವೆ. ಮೌನ ದಿನಹೋದಂತೆಲ್ಲ ಹೆಚ್ಚು ಗಾಢವಾಗುತ್ತಿದೆ. ಚರ್ಚೆಗಳ, ಮಾತುಕತೆಗಳ ಕೇಂದ್ರದಲ್ಲಿ ಇರಬೇಕಿದ್ದ, ಮೌನದ ನಡುವೆಯೂ ಕಾಣಿಸಿಕೊಳ್ಳಬೇಕಿದ್ದ ಧ್ವನಿಯೊಂದು ಕಾಣದಂತೆ ಆಗಿದೆ.

ಅದು ಪ್ರಧಾನಿ ನರೇಂದ್ರ ಮೋದಿ ಅವರ ದನಿ. ಆತಂಕ ಮತ್ತು ಭಯ ಜನರ ಮನಸ್ಸನ್ನು ಆಳುತ್ತಿರುವ, ಅತ್ಯಂತ ಗಂಭೀರವಾದ ಈ ಸಂದರ್ಭದಲ್ಲಿ ಪ್ರಧಾನಿಯವರು ರಾಷ್ಟ್ರವನ್ನು ಉದ್ದೇಶಿಸಿ ಮಾತುಗಳನ್ನು ಆಡಿಲ್ಲ. ಅವರು ಕಡೆಯ ಬಾರಿ ಜನರನ್ನು ಉದ್ದೇಶಿಸಿ ಮಾತನಾಡಿದ್ದು ಏಪ್ರಿಲ್ ತಿಂಗಳಲ್ಲಿ. ಆಗ ಅವರು ಚುನಾವಣಾ ವೇದಿಕೆಗಳಿಂದ ಒಂದಿಷ್ಟು ಭರವಸೆಗಳನ್ನು ನೀಡುತ್ತಿದ್ದರು, ಎದುರಾಳಿಗಳಿಗೆ ಸವಾಲು ಹಾಕುತ್ತಿದ್ದರು. ನಂತರ ಅವರು, ಜನರನ್ನು ಉದ್ದೇಶಿಸಿ ಒಂದು ಭಾಷಣ ಮಾಡಿದರು. ಆ ಭಾಷಣದಲ್ಲಿ ಅವರು, ಕೆಲವು ನಿಯಮಗಳನ್ನು ಪಾಲಿಸುವಂತೆ ಜನರಿಗೆ ಕರೆ ನೀಡಿದ್ದರು. ಆ ನಿಯಮಗಳನ್ನು ಕೆಲವು ಸಂದರ್ಭಗಳಲ್ಲಿ ಅವರೂ ಪಾಲಿಸಿಲ್ಲ, ಇತರರೂ ಪಾಲಿಸುತ್ತಿಲ್ಲ.

ಕೋವಿಡ್‌–19ರ ಎರಡನೆಯ ಅಲೆಯು ದೇಶದಾದ್ಯಂತ ತನ್ನ ಬಾಹುಗಳನ್ನು ಚಾಚಿರುವಾಗ, ಸಾಂಕ್ರಾಮಿಕದ ನಿರ್ವಹಣೆಗೆ ಸಂಬಂಧಿಸಿದಂತೆ ಹಲವು ವಿಷಯಗಳು ಚರ್ಚೆಯ ಮುನ್ನೆಲೆಗೆ ಬಂದಿವೆ. ಲಸಿಕೆ, ಆಮ್ಲಜನಕದ ಸಿಲಿಂಡರ್‌, ಆಸ್ಪತ್ರೆಗಳಲ್ಲಿನ ಹಾಸಿಗೆಗಳ ಕೊರತೆ, ಸ್ಮಶಾನಗಳಲ್ಲಿ ಅಂತ್ಯಸಂಸ್ಕಾರಕ್ಕೆ ಜನ ಕಾದು ನಿಂತಿದ್ದು, ಲಾಕ್‌ಡೌನ್‌ ಕ್ರಮಗಳನ್ನು ಜಾರಿಗೆ ತಂದ ಬಗೆ, ಜೀವನೋಪಾಯಕ್ಕೆ ಸಂಬಂಧಿಸಿದ ವಿಚಾರಗಳು, ಮುಂದಿನ ದಿನಗಳಲ್ಲಿ ದೇಶದ ಅರ್ಥ ವ್ಯವಸ್ಥೆಯ ಮೇಲೆ ಆಗಲಿರುವ ಪರಿಣಾಮ... ಇವೆಲ್ಲ ಚರ್ಚೆಯಾಗುತ್ತಿವೆ.

ಇವೆಲ್ಲವುಗಳ ಬಗ್ಗೆ ಸರ್ಕಾರ ಏನೆಂದು ಯೋಚಿಸುತ್ತಿದೆ? ಅದು ಏನು ಮಾಡುತ್ತಿದೆ? ಇಂದಿಗೆ, ನಾಳೆಗೆ ಸರ್ಕಾರ ರೂಪಿಸುತ್ತಿರುವ ಯೋಜನೆಗಳೇನು? ಪ್ರಧಾನಿಯವರು ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಿದ್ದಾರೆ. ಪ್ರಧಾನಿಯವರು ತಮ್ಮ ಸಂಪುಟ ಸಹೋದ್ಯೋಗಿಗಳು ಹಾಗೂ ಅಧಿಕಾರಿಗಳ ಜೊತೆ ಮಾತುಕತೆ ನಡೆಸುತ್ತಿರಬಹುದು. ಆದರೆ, ಅತ್ಯಂತ ಕಷ್ಟದ ಹಾಗೂ ಅತ್ಯಂತ ಅನಿಶ್ಚಿತವಾದ ಈ ದಿನಗಳಲ್ಲಿ ಜನರ ಜೊತೆ ಪ್ರಧಾನಿ ಮಾತನಾಡುತ್ತಿಲ್ಲ.

ಮೋದಿ ಅವರು ಮಾತನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಂಡವರು. ಅವರು ಸಂವಾದವನ್ನು ಹೆಚ್ಚಾಗಿ ನಡೆಸುವುದಿಲ್ಲವಾದರೂ, ಬೇರೆ ರಾಜಕಾರಣಿಗಳು ಅಸೂಯೆಪಟ್ಟುಕೊಳ್ಳುವ ರೀತಿಯಲ್ಲಿ ಜನರ ಜೊತೆ ಸಂವಹನ ನಡೆಸುತ್ತಾರೆ. ಜನತಂತ್ರ ವ್ಯವಸ್ಥೆಯಲ್ಲಿ ನಾಯಕನು ಜನರಿಗೆ ಬೇಕಾದಾಗ ಅವರ ಜೊತೆ ಮಾತನಾಡಬೇಕು, ತನಗೆ ಬೇಕಾದಾಗ ಮಾತ್ರ ಜನರ ಜೊತೆ ಮಾತನಾಡುವುದಲ್ಲ. ಮೌನವಾಗಿರುವುದು ಕಾರ್ಯತಂತ್ರದ ಒಂದು ಭಾಗವೆಂದಾದರೆ, ಅದು ತಪ್ಪು ಎನ್ನಬೇಕಾಗುತ್ತದೆ. ಪ್ರಧಾನಿಯವರ ಮಾತು ಬೆಳ್ಳಿ. ಆದರೆ, ಅವರ ಮೌನವು ಬಂಗಾರವೇನೂ ಅಲ್ಲ. ರಾಷ್ಟ್ರೀಯ ಬಿಕ್ಕಟ್ಟಿನ ಸಂದರ್ಭದಲ್ಲಿ ಯಾವ ಪ್ರಧಾನಿಯೂ ಮೌನದಿಂದ ಇರಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT