ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಆಭರಣ ಮಳಿಗೆ, ಹೋಟೆಲ್‌ ಉದ್ಯಮ ಉಸಾಬರಿ ಸರ್ಕಾರಕ್ಕೆ ಬೇಕೇ?

Last Updated 19 ಮಾರ್ಚ್ 2021, 19:31 IST
ಅಕ್ಷರ ಗಾತ್ರ

ಈಗಿನ ಕಾಲಘಟ್ಟದಲ್ಲಿ ಸರ್ಕಾರದ ಆದ್ಯತೆಯು ಚಿನ್ನದ ಆಭರಣ ಮಳಿಗೆ ತೆರೆಯುವುದು ಅಥವಾ ಹೋಟೆಲ್‌ ಮುನ್ನಡೆಸುವುದು ಅಲ್ಲ.

ರಾಜ್ಯ ಸರ್ಕಾರದ ಎರಡು ಇಲಾಖೆಗಳು ಇತ್ತೀಚೆಗೆ ಕೈಗೊಂಡ ಎರಡು ಪ್ರತ್ಯೇಕ ತೀರ್ಮಾನಗಳು ಉದ್ಯಮ ವಲಯದ ಗಮನವನ್ನು ಸೆಳೆದಿವೆ. ಉದ್ಯಮದ ಬೇರೆ ಬೇರೆ ವಲಯಗಳಲ್ಲಿ ಸರ್ಕಾರದ ಪಾತ್ರ ಏನಿರಬೇಕು, ಎಷ್ಟಿರಬೇಕು ಎಂಬ ಚರ್ಚೆಗೆ ಆಹಾರವಾಗಿವೆ. ವಿಶ್ವ ಪ್ರಸಿದ್ಧ ಪ್ರವಾಸಿ ತಾಣಗಳಾದ ಹಂಪಿ, ಬಾದಾಮಿ, ವಿಜಯಪುರ ಮತ್ತು ಬೇಲೂರಿನಲ್ಲಿ ಸರ್ಕಾರವು ಒಟ್ಟು ₹ 84 ಕೋಟಿ ಖರ್ಚು ಮಾಡಿ ತಾರಾ ಹೋಟೆಲ್‌ಗಳನ್ನು ನಿರ್ಮಿಸಲಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ಮಾಡಿದ ಘೋಷಣೆ ಹಾಗೂ ರಾಜ್ಯದ ಹಲವೆಡೆ ಸರ್ಕಾರವೇ ಚಿನ್ನದ ಆಭರಣ ಮಳಿಗೆಗಳನ್ನು ತೆರೆಯಲಿದೆ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ ನಿರಾಣಿ ಅವರು ನೀಡಿರುವ ಹೇಳಿಕೆಯು ಚರ್ಚೆಯ ಕೇಂದ್ರದಲ್ಲಿ ಇವೆ. ಕೇಂದ್ರದಲ್ಲಿ ಇರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ‘ವಾಣಿಜ್ಯ ವಹಿವಾಟು ನಡೆಸುವುದು ಸರ್ಕಾರದ ಕೆಲಸ ಅಲ್ಲ’ ಎಂಬ ತಾತ್ವಿಕ ನಿಲುವು ತಾಳಿದೆ. ಉದ್ಯಮದ ನಾಲ್ಕು ವಲಯಗಳನ್ನು ಗುರುತಿಸಿರುವ ಕೇಂದ್ರವು ಆ ನಾಲ್ಕು ವಲಯಗಳಲ್ಲಿ ಮಾತ್ರ ಸರ್ಕಾರಿ ಸ್ವಾಮ್ಯದ ಕಂಪನಿಗಳು ಕಾರ್ಯಾಚರಣೆ ನಡೆಸುವುದು, ಇನ್ನುಳಿದ ವಲಯಗಳಲ್ಲಿನ ಸರ್ಕಾರಿ ಸ್ವಾಮ್ಯದ ಕಂಪನಿಗಳನ್ನು ಖಾಸಗಿಯವರಿಗೆ ಮಾರಾಟ ಮಾಡಬಹುದು ಎಂಬ ನಿರ್ಧಾರಕ್ಕೆ ಬಂದಿದೆ. ರಾಜ್ಯದ ಮಟ್ಟದಲ್ಲಿ ಯಾವ ವಲಯದಲ್ಲಿ ಸರ್ಕಾರಿ ಸ್ವಾಮ್ಯದ ಕಂಪನಿಗಳ ಅಸ್ತಿತ್ವ ಇರಬೇಕು, ಯಾವ ವಲಯವನ್ನು ಖಾಸಗಿಯವರಿಗೆ ಸಂಪೂರ್ಣವಾಗಿ ಮುಕ್ತವಾಗಿಸಬಹುದು ಎಂಬ ವಿಚಾರವಾಗಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರಕ್ಕೆ ಯಾವುದೇ ತಾತ್ವಿಕ ನಿಲುವು ಇರುವಂತೆ ಕಂಡುಬರುತ್ತಿಲ್ಲ. ಕೇಂದ್ರ ಸರ್ಕಾರ ತಾಳಿರುವ ನಿಲುವನ್ನೇ ರಾಜ್ಯವೂ ಅನುಕರಿಸಬೇಕು ಎಂದೇನೂ ಇಲ್ಲ. ಆದರೆ, ಮುಕ್ತ ಮಾರುಕಟ್ಟೆ ವ್ಯವಸ್ಥೆಯನ್ನು ಒಪ್ಪಿಕೊಂಡಿರುವ ಸಂದರ್ಭದಲ್ಲಿ ಸರ್ಕಾರವು ಹೋಟೆಲ್‌ ಆರಂಭಿಸುವ, ಚಿನ್ನದ ಆಭರಣ ಮಳಿಗೆಗಳನ್ನು ನಡೆಸುವ ಕೆಲಸ ಮಾಡಬೇಕಿರುವ ಅನಿವಾರ್ಯ ಏನಿದೆ ಎಂಬ ಪ್ರಶ್ನೆಗೆ ಆಳುವವರ ಬಳಿ ಉತ್ತರ ಇದ್ದಂತಿಲ್ಲ.

ಇಂದಿನ ಕಾಲಘಟ್ಟದಲ್ಲಿ ರಾಜ್ಯ ಅಥವಾ ಕೇಂದ್ರ ಸರ್ಕಾರದ ಆದ್ಯತೆಗಳು ಚಿನ್ನದ ಆಭರಣ ಅಂಗಡಿ ತೆರೆಯುವುದು ಅಥವಾ ಹೋಟೆಲ್‌ ಮುನ್ನಡೆಸುವುದು ಅಲ್ಲ. ಚಿನ್ನದ ವ್ಯಾಪಾರ, ಆತಿಥ್ಯ ಉದ್ಯಮ ಕ್ಷೇತ್ರಗಳಲ್ಲಿ ಖಾಸಗಿಯವರಿಂದ ಬಂಡವಾಳ ಹೂಡಿಕೆ ಆಗುವಂತೆ ಮಾಡುವುದು, ಅಲ್ಲಿ ಆರೋಗ್ಯಕರ ಸ್ಪರ್ಧೆಯ ವಾತಾವರಣ ಇರುವಂತೆ ಮಾಡಬೇಕಿರುವುದು ಸರ್ಕಾರದ ಕರ್ತವ್ಯ. ರಾಜ್ಯದ ಪ್ರವಾಸಿ ತಾಣಗಳಿಗೆ ಅತ್ಯುತ್ತಮ ಗುಣಮಟ್ಟದ ಸಾರಿಗೆ ಸಂಪರ್ಕ ಕಲ್ಪಿಸುವುದು ಸರ್ಕಾರದ ಆದ್ಯತೆಯ ಕೆಲಸ ಆಗಬೇಕು, ಪ್ರವಾಸಿ ತಾಣಗಳಲ್ಲಿ ಹೋಟೆಲ್‌ ನಡೆಸುವ ಕೆಲಸವನ್ನು ಖಾಸಗಿಯವರಿಗೆ ಬಿಟ್ಟುಕೊಡಬೇಕು. ಇದರಿಂದ ಖಾಸಗಿ ಬಂಡವಾಳ ಹರಿದುಬರುತ್ತದೆ, ಉದ್ಯೋಗ ಸೃಷ್ಟಿಯೂ ಆಗುತ್ತದೆ. ಸರ್ಕಾರವು ಆತಿಥ್ಯ ಉದ್ಯಮ ಬೆಳೆಯಲು ಅಗತ್ಯವಿರುವ ನೀತಿ–ನಿಯಮ ರೂಪಿಸುವ, ನಿಯಮ ಉಲ್ಲಂಘಿಸುವವರನ್ನು ಸರಿದಾರಿಗೆ ತರುವ ಕೆಲಸವನ್ನು ನೋಡಿಕೊಳ್ಳಬೇಕು. ಎಲ್ಲ ಉದ್ಯಮಿಗಳಿಗೆ ಸಮಾನ ಅವಕಾಶ ಕಲ್ಪಿಸಿ ಸರ್ಕಾರವು ನಿಯಂತ್ರಕನ ಸ್ಥಾನದಲ್ಲಿ ಕ್ರಿಯಾಶೀಲ ಆಗಿರಬೇಕೇ ವಿನಾ ತಾನೇ ಒಂದು ಉದ್ಯಮ ನಡೆಸುವ ಅಗತ್ಯವಂತೂ ಕಾಣುತ್ತಿಲ್ಲ. ಚಿನ್ನದ ಆಭರಣ ಮಳಿಗೆ ತೆರೆಯುವ ವಿಚಾರಕ್ಕೂ ಇದೇ ಮಾತು ಅನ್ವಯಿಸಬಹುದು. ಚಿನ್ನಾಭರಣಗಳನ್ನು ತಯಾರಿಸುವ ಹಾಗೂ ಮಾರಾಟ ಮಾಡುವ ಉದ್ಯಮಗಳು ರಾಜ್ಯದಲ್ಲಿಯೂ ರಾಷ್ಟ್ರ ಮಟ್ಟದಲ್ಲಿಯೂ ಹಲವು ಇವೆ. ಈ ಎಲ್ಲ ಉದ್ಯಮಗಳ ಜೊತೆ ಸರ್ಕಾರ ತಾನೂ ಒಂದು ಚಿನ್ನಾಭರಣದ ಅಂಗಡಿ ತೆರೆದು ಸ್ಪರ್ಧೆಗೆ ನಿಲ್ಲಬೇಕಾದ ಅಗತ್ಯ ಖಂಡಿತ ಇಲ್ಲ. ಈಗಾಗಲೇ ಇರುವ ಉದ್ಯಮಗಳು ಇನ್ನಷ್ಟು ಬೆಳೆಯಲು ಅಗತ್ಯ ವಾತಾವರಣ ಸೃಷ್ಟಿಸಿಕೊಟ್ಟರೆ ಉದ್ಯೋಗ ಸೃಷ್ಟಿಯನ್ನೂ ತೆರಿಗೆ ಮೂಲಕ ರಾಜ್ಯದ ಬೊಕ್ಕಸಕ್ಕೆ ವರಮಾನ ತಂದುಕೊಡುವ ಕೆಲಸವನ್ನೂ ಖಾಸಗಿ ಉದ್ಯಮಗಳೇ ಮಾಡುತ್ತವೆ. ರಾಜ್ಯ ಸರ್ಕಾರವು ಹೂಡಿಕೆ ಮಾಡಲೇಬೇಕಾದ ಕೆಲವು ಕ್ಷೇತ್ರಗಳು ಖಂಡಿತ ಇವೆ. ಆರೋಗ್ಯ, ಶಿಕ್ಷಣ, ಮೂಲಸೌಕರ್ಯ ಇವು ಅಂತಹ ಕೆಲವು ಕ್ಷೇತ್ರಗಳು. ಇಲ್ಲಿ ಹೂಡಿಕೆ ಮಾಡಬೇಕಿರುವುದು ಸರ್ಕಾರದಿಂದ ಆದ್ಯತೆಯ ಮೇರೆಗೆ ಆಗಬೇಕಿರುವ ಕೆಲಸ. ಸರ್ಕಾರವು ತಾನೇ ಉದ್ಯಮ ನಡೆಸಬೇಕಾದ ಅನಿವಾರ್ಯ ಈಗಿಲ್ಲ; ಆ ಕಾಲಘಟ್ಟ ಸಂದಿದೆ. ಉದ್ಯಮ ನಡೆಸುವ ಬದಲು ಜನರನ್ನು ಸಶಕ್ತರನ್ನಾಗಿಸುವ ಕೆಲಸಕ್ಕೆ ಸರ್ಕಾರ ಆದ್ಯತೆ ನೀಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT