ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಗ್ರ ದೃಷ್ಟಿಕೋನದ ಕೊರತೆ ನಡುವೆಯೂ ಕೆಲವು ಭರವಸೆಗಳು

Last Updated 8 ಫೆಬ್ರುವರಿ 2019, 20:35 IST
ಅಕ್ಷರ ಗಾತ್ರ

ರಾಜಕೀಯ ಅನಿಶ್ಚಿತತೆಯ ನಡುವೆ ಸಮ್ಮಿಶ್ರ ಸರ್ಕಾರದ ಎರಡನೇ ಬಜೆಟ್ ಮಂಡನೆಯಾಗಿದೆ. ಹಣಕಾಸಿನ ಹೊಣೆಯನ್ನೂ ತಮ್ಮಲ್ಲಿಯೇ ಇಟ್ಟುಕೊಂಡಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ರಾಜಕೀಯ ಸಮರ್ಪಕತೆ ಮತ್ತು ಎಲ್ಲವನ್ನೂ ಎಲ್ಲರನ್ನೂ ಒಳಗೊಂಡಿರುವಂತೆ ತೋರಿಸಿಕೊಳ್ಳುವ ಅಭಿಲಾಷೆಯಿಂದ ಹೊರಬರಲು ಸಾಧ್ಯವಾಗಿಲ್ಲ. ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಮಂಡಿತವಾಗಿರುವ ಈ ಬಜೆಟ್ ಸಹಜವಾಗಿಯೇ ಕೆಲವು ರಾಜಕೀಯ ಸಂದೇಶಗಳನ್ನೂ ಒಳಗೊಂಡಿದೆ. ಆಯುಷ್ಮಾನ್ ಭಾರತ ಯೋಜನೆಯಲ್ಲಿ ರಾಜ್ಯದ ಪಾಲು ಕೇಂದ್ರಕ್ಕಿಂತ ದೊಡ್ಡದು ಎಂಬುದನ್ನು ಹೆಚ್ಚು ಸ್ಪಷ್ಟವಾಗಿ ತೋರಿಸಿಕೊಡಲು ಅವರು ಬಳಸಿರುವ ಪದಪುಂಜಗಳೇ ಇದನ್ನು ಹೇಳುತ್ತಿವೆ. ಕುಮಾರಸ್ವಾಮಿಯವರ ಈ ರಾಜಕೀಯ ಅಗತ್ಯಗಳನ್ನೆಲ್ಲಾ ಪರಿಗಣಿಸಿಯೇ ಈ ಬಜೆಟ್ ಅನ್ನು ಅರ್ಥ ಮಾಡಿಕೊಳ್ಳಲು ಹೊರಟರೆ ಢಾಳಾಗಿ ಕಾಣಿಸುವುದು ಸಮಗ್ರ ದೃಷ್ಟಿಕೋನವೊಂದರ ಕೊರತೆ. ಚುನಾವಣೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಮತದಾರರನ್ನು ಒಲಿಸಿಕೊಳ್ಳಲೇಬೇಕೆಂಬ ಸಂಕಲ್ಪದಿಂದ ರೂಪಿಸುವ ಬಜೆಟ್‌ಗೂ ಒಂದು ಸಮಗ್ರ ದೃಷ್ಟಿಕೋನವಿರಲು ಸಾಧ್ಯ ಎಂಬುದನ್ನು ಈ ಹಿಂದಿನ ಕೆಲವು ಹಣಕಾಸು ಸಚಿವರು ತೋರಿಸಿಕೊಟ್ಟಿದ್ದರು. ಆದರೆ ಆರ್ಥಿಕ ಒಳನೋಟಗಳನ್ನು ಇಲ್ಲಿ ಕಾಣಲು ಸಾಧ್ಯವಿಲ್ಲ. ಮಾಮೂಲಾಗಿ ಹೆಚ್ಚು ಮೊತ್ತವನ್ನು ಪಡೆಯುವ ಲೋಕೋಪಯೋಗಿ, ನೀರಾವರಿ, ಸಮಾಜ ಕಲ್ಯಾಣದಂಥ ಕ್ಷೇತ್ರಗಳು ಈ ಬಾರಿಯೂ ತಮ್ಮ ಪಾಲನ್ನು ಪಡೆದಿವೆ. ಪ್ರಾದೇಶಿಕ ಹಂಚಿಕೆಯನ್ನು ನೋಡಿದರೂ ಅದರಲ್ಲಿಯೂ ಹೆಚ್ಚಿನ ವ್ಯತ್ಯಾಸಗಳಾಗಿಲ್ಲ. ಕರ್ನಾಟಕ ಬಹುಕಾಲದಿಂದ ಅನುಸರಿಸಿಕೊಂಡು ಬಂದಿರುವ ವಿತ್ತೀಯ ಶಿಸ್ತನ್ನು ಕುಮಾರ ಸ್ವಾಮಿಯವರ ಬಜೆಟ್ ಕೂಡಾ ಮುಂದುವರಿಸಿದೆ. ಎಲ್ಲಾ ಬಗೆಯ ಜನಪ್ರಿಯ ಹಂಚಿಕೆಗಳ ನಡುವೆಯೂ ವಿತ್ತೀಯ ಕೊರತೆಯನ್ನು ಶೇ 2.6ರೊಳಗೆ ನಿಲ್ಲಿಸಲು ಸಾಧ್ಯವಾಗಿರುವುದು ಮೆಚ್ಚುಗೆಗೆ ಅರ್ಹವಾದ ಸಂಗತಿಯೇ. ಪ್ರಸಕ್ತ ಬಜೆಟ್‌ ತನ್ನ ಎಲ್ಲಾ ಮಿತಿಗಳ ಮಧ್ಯೆಯೂ ಕೆಲವು ಕ್ಷೇತ್ರಗಳಲ್ಲಿ ಬಹಳ ಧನಾತ್ಮಕವಾದ ಅಂಶಗಳನ್ನು ಒಳಗೊಂಡಿದೆ. ಅದರಲ್ಲಿ ಬಹುಮುಖ್ಯವಾದವು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ನಗರಾಭಿವೃದ್ಧಿ. ಇವುಗಳನ್ನು ಹೊರತುಪಡಿಸಿದ ಕ್ಷೇತ್ರಗಳ ವಿಚಾರದಲ್ಲಿ ಆಳವಾದ ಚಿಂತನೆಗಿಂತ ಹೆಚ್ಚಾಗಿ ತೋರಿಕೆಯ ಒಳಗೊಳ್ಳುವಿಕೆಯು ಬಹುಮುಖ್ಯವಾಗಿ ಪರಿಗಣಿತವಾಗಿಬಿಟ್ಟಿದೆ.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣದಲ್ಲಿ ನಾಲ್ಕು ಆದ್ಯತಾ ಕ್ಷೇತ್ರಗಳನ್ನು ಬಜೆಟ್ ಬಹಳ ಸ್ಪಷ್ಟವಾಗಿ ಗುರುತಿಸಿಕೊಂಡಿದೆ. ಶಾಲೆಗಳ ಮೂಲ ಸೌಕರ್ಯಗಳ ಆಧುನೀಕರಣ, ಶಿಕ್ಷಕರ ಸಾಮರ್ಥ್ಯವರ್ಧನೆ, ಶಾಲಾ ಆಡಳಿತದಲ್ಲಿ ಪಾರದರ್ಶಕತೆ ತರುವುದು ಮತ್ತು ಕಲಿಕಾ ಫಲಿತಾಂಶಗಳ ಸುಧಾರಣೆ. ಅಂದರೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಕ್ಷೇತ್ರದಲ್ಲಿ ಏನು ಮಾಡಬೇಕೆಂಬ ಸ್ಪಷ್ಟ ಪರಿಕಲ್ಪನೆ ಸರ್ಕಾರಕ್ಕಿದೆ. ನಗರಾಭಿವೃದ್ಧಿಯ ವಿಚಾರದಲ್ಲಿಯೂ ಈ ತನಕದ ಆಲೋಚನೆಗಳಿಗಿಂತ ಭಿನ್ನವಾಗಿದೆ. ಎಲ್ಲದಕ್ಕಿಂತ ಮುಖ್ಯವಾಗಿರುವುದು ಬೆಂಗಳೂರಿನ ಸಾರ್ವಜನಿಕ ಸಾರಿಗೆಯನ್ನು ಉತ್ತಮಪಡಿಸುವುದಕ್ಕೆ ನೀಡಿರುವ ಒತ್ತು. ಇದರ ಜೊತೆಯಲ್ಲೇ ಘೋಷಿಸಲಾಗಿರುವ ಮಹಾತ್ಮ ಗಾಂಧಿ ನಗರಾಭಿವೃದ್ಧಿ ಯೋಜನೆಯಲ್ಲಿ ಕರ್ನಾಟಕದ ಎರಡನೇ ಹಂತದ ನಗರಗಳ ಅಭಿವೃದ್ಧಿಯ ಉದ್ದೇಶವನ್ನು ಇರಿಸಿಕೊಳ್ಳಲಾಗಿದೆ. ಹತ್ತು ಪ್ರಮುಖ ಜಿಲ್ಲಾ ಕೇಂದ್ರಗಳು ಈ ಯೋಜನೆಯ ಅಡಿಯಲ್ಲಿ ತಲಾ ₹ 150 ಕೋಟಿಯಿಂದ 200 ಕೋಟಿ ಪಡೆಯಲಿವೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣದ ವಿಚಾರದಲ್ಲಿ ಇರುವ ಸ್ಪಷ್ಟತೆ ಉನ್ನತ ಶಿಕ್ಷಣಕ್ಕೆ ಬರುವ ವೇಳೆಗೆ ಕಾಣೆಯಾಗಿಬಿಟ್ಟಿದೆ. ‘ತಂತ್ರಜ್ಞಾನ ವಿಧಿವಾದ’ ಹಣಕಾಸು ಸಚಿವರನ್ನು ಆವರಿಸಿಕೊಂಡಿರುವುದರಿಂದ ಎಲ್ಲವನ್ನೂ ಅವರು ‘ಮಿಥ್ಯಾವಾಸ್ತವ’ದಲ್ಲಿಯೇ ಸಾಧಿಸಲು ಹೊರಡುತ್ತಾರೆ. ಉನ್ನತ ಶಿಕ್ಷಣಕ್ಕೂ ಕೌಶಲಾಭಿವೃದ್ಧಿಗೂ ನಡುವಣ ವ್ಯತ್ಯಾಸವನ್ನು ಗುರುತಿಸದೆಯೇ ಪ್ರಸ್ತಾವಗಳನ್ನು ಮುಂದಿಡಲಾಗಿದೆ. ಎಲ್ಲಾ ಪ್ರಥಮ ದರ್ಜೆ ಕಾಲೇಜುಗಳಲ್ಲಿಯೂ ಉದ್ಯೋಗ ಆಧಾರಿತ ಶಿಕ್ಷಣವೆಂದರೆ ಅವುಗಳೆಲ್ಲವನ್ನೂ ಪಾಲಿಟೆಕ್ನಿಕ್ ಆಗಿ ಬದಲಾಯಿಸಲಾಗುತ್ತದೆಯೇ? ಆಮೂಲಾಗ್ರವಾದ ಸುಧಾರಣೆಯನ್ನು ನಿರೀಕ್ಷಿಸುತ್ತಿರುವ ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಬಜೆಟ್ ಏನನ್ನೂ ಕೊಡುತ್ತಿಲ್ಲ ಎಂಬುದು ವಾಸ್ತವ. ಸಾಮಾಜಿಕ ನ್ಯಾಯ ಮತ್ತು ಸಾಮಾಜಿಕ ಒಳಗೊಳ್ಳುವಿಕೆ ಎಂಬ ಪರಿಕಲ್ಪನೆಗಳು ಕೇವಲ ಸಾಂಕೇತಿಕ ಕೊಡುಗೆಗಳಾಗಿ ಪರಿವರ್ತನೆಗೊಂಡು ಬಹಳ ಕಾಲವಾಯಿತು. ಈ ಬಜೆಟ್‌ನಲ್ಲಿಯೂ ಈ ಬಗೆಯ ಸಾಂಕೇತಿಕ ಕೊಡುಗೆಗಳ ಬಹುದೊಡ್ಡ ಪಟ್ಟಿಯಿದೆ. ಸಾಮಾಜಿಕ ನ್ಯಾಯ ಮತ್ತು ಒಳಗೊಳ್ಳುವಿಕೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡಿರುವ ಕಲ್ಯಾಣ ಕಾರ್ಯಕ್ರಮಗಳನ್ನು ಹೊಸದಾಗಿ ನಿರ್ವಚಿಸುವ ಅಗತ್ಯವಿದೆ ಎಂಬುದನ್ನು ಈ ಬಜೆಟ್ ಕೂಡಾ ಹೇಳುತ್ತಿದೆ. ನಿರ್ದಿಷ್ಟ ಜಾತಿ, ಸಮುದಾಯಗಳು ಮತ್ತು ಕ್ಷೇತ್ರಗಳಿಗೆ ಒಂದಷ್ಟು ಹಣವನ್ನು ಒದಗಿಸುವುದರ ಮೂಲಕ ನಿಜ ಅರ್ಥದ ಅಭಿವೃದ್ಧಿಯನ್ನಾಗಲೀ ಬದಲಾವಣೆಯನ್ನಾಗಲೀ ಸಾಧಿಸಲು ಆಗುವುದಿಲ್ಲ. ಈ ವಿಚಾರದಲ್ಲಿ ಸಮಗ್ರ ಮರುಚಿಂತನೆಯ ಅಗತ್ಯವೇ ಇದೆ. ಚುನಾವಣೆಯ ಹೊಸ್ತಿಲಲ್ಲಿ, ಸಮ್ಮಿಶ್ರ ಸರ್ಕಾರವೊಂದು ಅನುಭವಿಸುವ ರಾಜಕೀಯ ಅನಿಶ್ಚಿತತೆಯ ನಡುವೆ ಅಂಥದ್ದೊಂದು ಒಳನೋಟವುಳ್ಳ ಬಜೆಟ್ ಅನ್ನು ಬಯಸಿದರೂ ಅದು ಸಿಗಲಾರದು ಎಂಬುದು ವಾಸ್ತವ.

* ಇವನ್ನೂ ಓದಿ...

*ಸಣ್ಣ ನೀರಾವರಿ, ಅಂತರ್ಜಲ ವೃದ್ಧಿಗೆ ಆದ್ಯತೆ

* ‘ಉಕ್ಕುವ ಹಾಲಿಗೆ ನೀರು ಚಿಮುಕಿಸಿದಂತೆ’

*ಅನ್ನದಾತನಿಗೆ ಹತ್ತಾರು ಯೋಜನೆ, ರಾಜ್ಯದಲ್ಲಿ ಪ್ರತ್ಯೇಕ ಬೆಳೆ ವಿಮೆ ಯೋಜನೆ

*ಬಜೆಟ್‌: ಯಾರು ಏನಂತಾರೆ?

*ಉದ್ಯಮ ವಲಯಕ್ಕೆ ಉತ್ತೇಜಕ ಬುತ್ತಿ

*ಬಜೆಟ್: ಪರಿಶಿಷ್ಟ ವರ್ಗಕ್ಕೆ ಭರ್ಜರಿ ಕೊಡುಗೆ

*ಸರ್ಕಾರ ಜನರ ಕಣ್ಣಿಗೆ ಮಣ್ಣೆರಚಿದೆ: ಯಡಿಯೂರಪ್ಪ

*ಸಾಲ ಮನ್ನಾಕ್ಕೆ ಇನ್ನೂ ಹಣ ಕೊಡುವೆ: ಕುಮಾರಸ್ವಾಮಿ

*ಬೆಂಗಳೂರೇ ಮೊದಲು; ಉಳಿದವು ನಂತರ...

*ಪ್ರತಿಭಟನೆ ಮಧ್ಯೆಯೇ ಬಜೆಟ್ ಭಾಷಣ

*ಬಜೆಟ್‌ನಲ್ಲಿ ಜಿಲ್ಲಾವಾರು ಹಂಚಿಕೆ; ಸಮತೋಲನದ ಸರ್ಕಸ್

*ಬರ ಪರಿಸ್ಥಿತಿ: ಆರ್ಥಿಕ ವೃದ್ಧಿ ದರ ಕುಸಿತ

*ಮತ ಫಸಲಿಗಾಗಿ ಕುಮಾರ ಬಿತ್ತನೆ

*ವಿಶ್ವವಿಖ್ಯಾತ ತಾಣವಾಗಿ ಬಾದಾಮಿ ಅಭಿವೃದ್ಧಿ

*ಸಹಸ್ರ ಶಾಲೆಗಳ ಸ್ಥಾಪನೆ

*ಸ್ವಾಮೀಜಿ ಊರುಗಳಲ್ಲಿ ಸಾಂಸ್ಕೃತಿಕ ಕೇಂದ್ರಗಳು

*ಹೊಸ ಕ್ರೀಡಾ ವಸತಿ ನಿಲಯಗಳ ಘೋಷಣೆ

*ಆರೋಗ್ಯ ಮತ್ತು ಕುಟುಂಬ ಕಲ್ಯಾಣಕ್ಕೆ ಆದ್ಯತೆ

*‘ಮಾತೃಶ್ರೀ’ ಯೋಜನೆ ಸಹಾಯಧನ ಹೆಚ್ಚಳ

*ಆನ್‌ಲೈನ್‌ ಮೂಲಕ ಸಿಇಟಿ, ವಿದ್ಯಾರ್ಥಿಗಳಿಗೆ ಡಿಜಿಟಲ್‌ ಅಂಕಪಟ್ಟಿ

*ಬಜೆಟ್‌ನಲ್ಲಿ ಮಠಮಾನ್ಯಗಳ ತೃಪ್ತಿಪಡಿಸುವ ಯತ್ನ

*ಬಜೆಟ್‌: ಯಾರು ಏನಂತಾರೆ?

*ಚಲನಶೀಲ ಬೆಂಗಳೂರಿಗೆ ‘ಮತ್ತೊಂದು ಕಾವೇರಿ’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT