ಗುರುವಾರ , ಮಾರ್ಚ್ 23, 2023
28 °C

ಸಂಪಾದಕೀಯ | ಕರ್ನಾಟಕ ಲೋಕಸೇವಾ ಆಯೋಗ ಆಗಲಿ ಇನ್ನಷ್ಟು ಪಾರದರ್ಶಕ

ಸಂಪಾದಕೀಯ Updated:

ಅಕ್ಷರ ಗಾತ್ರ : | |

ಯಾವುದೇ ಅಭ್ಯರ್ಥಿಯು ಮಾಹಿತಿ ಹಕ್ಕು ಕಾಯ್ದೆಯಡಿ ತನ್ನ ಉತ್ತರಪತ್ರಿಕೆಯ ಪ್ರತಿಯನ್ನು ಕೇಳಿದರೆ ಅದನ್ನು ಕಡ್ಡಾಯವಾಗಿ ನೀಡಬೇಕು ಎಂದು ಕರ್ನಾಟಕ ಲೋಕಸೇವಾ ಆಯೋಗಕ್ಕೆ (ಕೆಪಿಎಸ್‌ಸಿ) ಹೈಕೋರ್ಟ್‌ ಸೂಚಿಸಿದೆ. ಇದು, ಕೆಪಿಎಸ್‌ಸಿಯಲ್ಲಿ ಪಾರದರ್ಶಕತೆ ತರುವ ದಿಸೆಯಲ್ಲಿ ಅತ್ಯಂತಮಹತ್ವಪೂರ್ಣವಾದ ಆದೇಶ. ಉತ್ತರಪತ್ರಿಕೆಯ ಪ್ರತಿ ನೀಡಿಕೆಗೆ ಸಂಬಂಧಿಸಿದ ಮೇಲ್ಮನವಿಯ ವಿಚಾರಣೆ ನಡೆಸಿ, ರಾಜ್ಯ ಮಾಹಿತಿ ಆಯೋಗ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಕೆಪಿಎಸ್‌ಸಿಯು ಹೈಕೋರ್ಟ್‌ ಮೆಟ್ಟಿಲೇರಿತ್ತು. ಗೆಜೆಟೆಡ್ ಪ್ರೊಬೇಷನರಿ ನೇಮಕಾತಿಗಾಗಿ ಕಳೆದ ವರ್ಷದ ಜನವರಿಯಲ್ಲಿ ಆಯ್ಕೆ ಪಟ್ಟಿ ಪ್ರಕಟವಾಗಿತ್ತು. ಅದರಲ್ಲಿ ಆಯ್ಕೆಯಾಗದ ಅಭ್ಯರ್ಥಿಯೊಬ್ಬರು ಮುಖ್ಯ ಲಿಖಿತ ಪರೀಕ್ಷೆಯಲ್ಲಿನ ತಮ್ಮ ಉತ್ತರ ಪತ್ರಿಕೆಯ ಪ್ರತಿಯನ್ನು ಮಾಹಿತಿ ಹಕ್ಕು ಕಾಯ್ದೆಯಡಿ ತಮಗೆ ನೀಡುವಂತೆ ಕೇಳಿದ್ದರು. ಈ ಬೇಡಿಕೆಯನ್ನು ಕೆಪಿಎಸ್‌ಸಿ ನಿರಾಕರಿಸಿತ್ತು. ಅಂಗೇಶ್ ಕುಮಾರ್ ಪ್ರಕರಣದಲ್ಲಿ ಉತ್ತರಪತ್ರಿಕೆಗಳ ಪ್ರತಿಯನ್ನು ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದ್ದುದನ್ನು ಕಾರಣವಾಗಿ ನೀಡಿತ್ತು. ಆಗ ಅಭ್ಯರ್ಥಿಯು ಮಾಹಿತಿ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದರು.

‘ಅಂಗೇಶ್ ಕುಮಾರ್ ಪ್ರಕರಣದಲ್ಲಿ, ತಮ್ಮೊಂದಿಗೆ ಯುಪಿಎಸ್‌ಸಿ ಪರೀಕ್ಷೆ ಬರೆದಿದ್ದ ಎಲ್ಲರ ಉತ್ತರಪತ್ರಿಕೆಗಳ ಪ್ರತಿಯನ್ನು ಅರ್ಜಿದಾರರು ಕೇಳಿದ್ದರು. ಅದನ್ನೆಲ್ಲ ಕೊಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಆದರೆ ಇಲ್ಲಿ ಅಭ್ಯರ್ಥಿ ತಾನು ಬರೆದ ಉತ್ತರ
ಪತ್ರಿಕೆಯ ಪ್ರತಿಯನ್ನು ಮಾತ್ರ ಕೇಳುತ್ತಿರುವುದರಿಂದ ಅದನ್ನು ನೀಡಬಹುದು. ಈ ಪ್ರಕರಣಕ್ಕೆ ಅಂಗೇಶ್ ಕುಮಾರ್ ಪ್ರಕರಣದ ಹೋಲಿಕೆ ತರವಲ್ಲ’ ಎಂದು ಮಾಹಿತಿ ಆಯೋಗ ಆದೇಶ ನೀಡಿತ್ತು.

ಇದನ್ನು ಒಪ್ಪಿಕೊಳ್ಳದ ಕೆಪಿಎಸ್‌ಸಿಯು ಹೈಕೋರ್ಟ್ ಮೆಟ್ಟಿಲೇರಿತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ‘ಉತ್ತರ ಪತ್ರಿಕೆಗಳ ಪ್ರತಿ ನೀಡುವುದರಿಂದ ಪಾರದರ್ಶಕತೆ ಖಚಿತವಾಗುತ್ತದೆ. ಅಭ್ಯರ್ಥಿ ತನ್ನ ಉತ್ತರಪತ್ರಿಕೆಯ ಪ್ರತಿ ಕೇಳಿರುವುದರಲ್ಲಿ ಸಾರ್ವಜನಿಕ ಹಿತಾಸಕ್ತಿ ಇದೆ. ಆದರೆ ಮಾಹಿತಿ ನೀಡುವಾಗ ಮೌಲ್ಯಮಾಪಕರ ಗುರುತು ಪತ್ತೆಯಾಗದಂತೆ ನೋಡಿಕೊಳ್ಳಬೇಕು. ಮೌಲ್ಯಮಾಪನ ಮಾಡಲಾದ ಉತ್ತರಪತ್ರಿಕೆಯ ಪ್ರತಿಯನ್ನು ಪರೀಕ್ಷೆ ಬರೆದ ಅಭ್ಯರ್ಥಿಗೆ ನೀಡದಿರಲು ಸಕಾರಣ ಕಾಣುತ್ತಿಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಆದೇಶವನ್ನು ಒಪ್ಪಿಕೊಂಡು, ಯಾವುದೇ ಸಬೂಬು ಹೇಳದೆ ಕೆಪಿಎಸ್‌ಸಿಯು ಉತ್ತರ
ಪತ್ರಿಕೆಯ ಪ್ರತಿಯನ್ನು ಒದಗಿಸಬೇಕು. ಈ ಮೂಲಕ, ತಾನು ಬದಲಾಗುತ್ತಿದ್ದೇನೆ ಎನ್ನುವುದನ್ನು ಸಾಬೀತುಪಡಿಸಬೇಕು.

ಇದು ಒಬ್ಬ ಅಭ್ಯರ್ಥಿಗೆ ಸಂಬಂಧಿಸಿದ ವಿಷಯವಾದರೂ ಪಾರದರ್ಶಕತೆಯ ಲವಲೇಶವೂ ಇಲ್ಲದ ಕೆಪಿಎಸ್‌ಸಿಯಲ್ಲಿ ಅಂತಹದ್ದೊಂದು ಮುಂದಡಿಗೆ ಪೂರಕವಾದ ಮಹತ್ವಪೂರ್ಣ ಆದೇಶ ಎಂದೇ ಇದನ್ನು ಪರಿಗಣಿಸಬಹುದು. ಕೆಪಿಎಸ್‌ಸಿ ಯಾವಾಗಲೂ ಜನರಿಂದ ದೂರವೇ ಇರುತ್ತದೆ, ಅಲ್ಲಿ ಏನು ನಡೆಯುತ್ತಿದೆ ಎನ್ನುವುದು ಸಾರ್ವಜನಿಕರಿಗೆ ಗೊತ್ತೇ ಆಗುವುದಿಲ್ಲ ಎಂಬ ದೂರುಗಳಿವೆ. ಇತ್ತೀಚಿನ ವರ್ಷಗಳಲ್ಲಂತೂ ಹಗರಣಗಳ ಕಾರಣಗಳಿಂದಲೇ ಅದು ಹೆಚ್ಚು ಸುದ್ದಿಯಾಗುತ್ತಿದೆ. ಇಂತಹ ಆರೋಪಗಳಿಂದ ಹೊರಬರುವುದಕ್ಕೂ ಇದೊಂದು ಸದವಕಾಶ. ಗೆಜೆಟೆಡ್ ಪ್ರೊಬೇಷನರಿ ಅಭ್ಯರ್ಥಿಗಳ ಆಯ್ಕೆಗೆ ನಡೆಯುವ ಸಂದರ್ಶನದ ಅಂಕಗಳನ್ನು ರಾಜ್ಯ ಸರ್ಕಾರ ಇತ್ತೀಚೆಗೆ ಕಡಿಮೆ ಮಾಡಿದೆ. ಅದೇ ರೀತಿ, ಕೆಪಿಎಸ್‌ಸಿ ಕಾರ್ಯನಿರ್ವಹಣೆಯಲ್ಲಿ ಸುಧಾರಣೆ ತರಲು ರಚಿಸಲಾಗಿದ್ದ ಪಿ.ಸಿ.ಹೋಟಾ ಸಮಿತಿಯ ಹಲವು ಶಿಫಾರಸುಗಳನ್ನೂ ಒಪ್ಪಿಕೊಂಡಿದೆ. ಹಾಗೆಯೇ, ಅಭ್ಯರ್ಥಿ ಬಯಸಿದರೆ, ಮೌಲ್ಯಮಾಪನ ಮಾಡಿದ ಉತ್ತರಪತ್ರಿಕೆಗಳ ಪ್ರತಿಯನ್ನು ನೀಡುವ ಕ್ರಮವನ್ನೂ ಜಾರಿಗೆ ತಂದರೆ ಆಯೋಗದ ಬಗ್ಗೆ ಸಾರ್ವಜನಿಕರಲ್ಲಿ ವಿಶ್ವಾಸ ಮೂಡುತ್ತದೆ. ಜೊತೆಗೆ ರಾಜ್ಯದ ಲಕ್ಷಾಂತರ ಉದ್ಯೋಗ ಆಕಾಂಕ್ಷಿಗಳಿಗೂ ಸಕಾರಾತ್ಮಕ ಸಂದೇಶ ರವಾನೆಯಾದಂತೆ ಆಗುತ್ತದೆ. ಕೆಪಿಎಸ್‌ಸಿಯಲ್ಲಿ ಸುಧಾರಣೆಯ ಪರ್ವ ಆರಂಭವಾಗುವುದಕ್ಕೂ ಇದು ಸಕಾಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು