ಕೇರಳ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾರದಾ ಮುರಳೀಧರನ್ ಅವರು ಫೇಸ್ಬುಕ್ನಲ್ಲಿ ಈಚೆಗೆ ಪ್ರಕಟಿಸಿರುವ ಬರಹವೊಂದು ಸಮಾಜದಲ್ಲಿ ಬಹಳ ಆಳವಾಗಿ ಬೇರೂರಿರುವ, ಮೈಬಣ್ಣ ಆಧಾರಿತ ಪೂರ್ವಗ್ರಹಗಳ ಬಗ್ಗೆ ದೊಡ್ಡ ಚರ್ಚೆ ಹುಟ್ಟುಹಾಕಿದೆ. ಮುಖ್ಯ ಕಾರ್ಯದರ್ಶಿಯಾಗಿ ತಮ್ಮ ಅಧಿಕಾರ ಅವಧಿಯನ್ನು ಯಾರೋ ಅಪರಿಚಿತ ವ್ಯಕ್ತಿಯೊಬ್ಬರು ತಮ್ಮ ಪತಿ ವಿ. ವೇಣು ಅವರ ಅಧಿಕಾರ ಅವಧಿಯ ಜೊತೆ ಹೋಲಿಸಿದ್ದುದರ ಬಗ್ಗೆ ಶಾರದಾ ಬರೆದಿದ್ದಾರೆ. ವೇಣು ಅವರ ಮೈಬಣ್ಣ ಎಷ್ಟು ಬಿಳಿಯಾಗಿದೆಯೋ ಅಷ್ಟೇ ಕಪ್ಪಾಗಿದೆ ಶಾರದಾ ಅವರ ಅಧಿಕಾರ ಅವಧಿ ಎಂಬುದು ಆ ಅಪರಿಚಿತನ ಮಾತು. ಆ ವ್ಯಕ್ತಿಯು ಶಾರದಾ ಅವರ ಕಪ್ಪು ಮೈಬಣ್ಣವನ್ನೂ ಪರೋಕ್ಷವಾಗಿ ಬೊಟ್ಟು ಮಾಡಿದ್ದಾನೆ. ‘ಇದು ಕಪ್ಪು ಎಂದು ಕರೆಸಿಕೊಳ್ಳುವುದಕ್ಕೆ ಸಂಬಂಧಿಸಿದೆ (ಅದರ ಜೊತೆಯಲ್ಲೇ, ಹೆಣ್ಣಾಗಿರುವುದಕ್ಕೂ ಇಲ್ಲಿ ಒಂದು ಸಂಬಂಧ ಇದೆ), ಇದರ ಬಗ್ಗೆ ತೀವ್ರವಾಗಿ ನಾಚಿಕೆಪಟ್ಟುಕೊಳ್ಳಬೇಕು ಎಂಬಂತಿದೆ’ ಎಂದು ಶಾರದಾ ಬರೆದಿದ್ದಾರೆ. ಶಾರದಾ ಅವರ ಈ ಬರಹವು ಮೈಬಣ್ಣ ಆಧರಿಸಿದ ಪೂರ್ವಗ್ರಹಗಳತ್ತ ಗಮನ ಸೆಳೆದಿದೆ. ಶಾರದಾ ಅವರ ಬರಹವು ಎರಡು ಪೂರ್ವಗ್ರಹಗಳನ್ನು ಪ್ರಧಾನವಾಗಿ ತೋರಿಸಿದೆ. ಮೊದಲನೆಯದು, ಕಪ್ಪಾಗಿರುವುದು; ಎರಡನೆಯದು, ಹೆಣ್ಣುಮಕ್ಕಳಿಗೆ ಸಂಬಂಧಿಸಿದ್ದು. ಮಹಿಳೆಯರನ್ನು ನಮ್ಮ ಸಮಾಜವು ಪುರುಷರನ್ನು ನೋಡುವ ರೀತಿಯಲ್ಲೇ ನೋಡುವುದಿಲ್ಲ. ಮಹಿಳೆಯ ಚರ್ಮದ ಬಣ್ಣ ಯಾವುದು ಎಂಬುದು ಕೂಡ ಆಕೆಯ ಬಗ್ಗೆ ಸಮಾಜ ತೀರ್ಮಾನ ತೆಗೆದುಕೊಳ್ಳುವಾಗ ಪ್ರಭಾವ ಬೀರುತ್ತದೆ. ಪೂರ್ವಗ್ರಹಪೀಡಿತ ಮನಸ್ಸುಗಳು ಹೆಣ್ಣಿನ ಬಗ್ಗೆ ತಾತ್ಸಾರ ಮನೋಭಾವ ಬೆಳೆಸಿಕೊಂಡಿರುತ್ತವೆ, ಅದರಲ್ಲೂ ಕಪ್ಪು ಮೈಬಣ್ಣದ ಹೆಣ್ಣಿನ ಬಗ್ಗೆ ಪೂರ್ವಗ್ರಹವು ತೀವ್ರವಾಗಿ ಇರುತ್ತದೆ.

ಪೂರ್ವಗ್ರಹಗಳು ಹಾಗೂ ಮೈಬಣ್ಣದ ಆಧಾರದಲ್ಲಿ ತಾರತಮ್ಯ ಎಸಗುವುದು ಬಹಳ ವ್ಯಾಪಕವಾಗಿದೆ. ಬಿಳಿ ಮೈಬಣ್ಣ ಅಂದರೆ ಒಳ್ಳೆಯದು, ಕಪ್ಪು ಮೈಬಣ್ಣ ಹೊಂದಿರುವುದು ಕೆಟ್ಟದ್ದು ಎಂಬ ಆಲೋಚನೆಯು ನಮ್ಮ ಸಮಾಜದ ಪ್ರಜ್ಞೆಯ ಆಳಕ್ಕೆ ಇಳಿದುಬಿಟ್ಟಿದೆ. ಇದು ನಮ್ಮ ಆಲೋಚನೆ, ನಮ್ಮ ನಡತೆ ಮತ್ತು ನಮ್ಮ ಭಾಷೆಯ ಮೇಲೆ ಪ್ರಭಾವ ಬೀರಿದೆ. ಹಲವು ಬಗೆಗಳಲ್ಲಿ ಈ ಪ್ರಭಾವ ಕಾಣಿಸುತ್ತದೆ. ಮೈಬಣ್ಣದ ಬಗ್ಗೆ ಸಮಾಜದ ಧೋರಣೆ ಹೇಗಿದೆ ಎಂಬುದನ್ನು ವೈವಾಹಿಕ ಸಂಬಂಧ ಬಯಸಿ ನೀಡುವ ಜಾಹೀರಾತುಗಳಲ್ಲಿ ನೇರವಾಗಿಯೋ ಪರೋಕ್ಷವಾಗಿಯೋ ಇರುವ ‘ಗೋಧಿಬಣ್ಣದವರು ಬೇಕು’ ಎಂಬ ಒಕ್ಕಣೆಯು ಬಹಳ ಚೆನ್ನಾಗಿ ವಿವರಿಸುತ್ತದೆ. ಹೆಣ್ಣುಮಕ್ಕಳಲ್ಲಿ ಬಹಳಷ್ಟು ಮಂದಿ ತಮ್ಮ ಮೈಬಣ್ಣದ ಕಾರಣಕ್ಕಾಗಿ ದುಬಾರಿ ಬೆಲೆ ತೆತ್ತಿದ್ದಾರೆ. ನಮ್ಮ ಕಲೆ, ಸಾಹಿತ್ಯ ಮತ್ತು ಸಮಾಜದ ಜೀವನದ ಇತರ ಹಲವು ಚಟುವಟಿಕೆಗಳಲ್ಲಿ ಇವೆಲ್ಲ ಕಾಣುತ್ತವೆ. ಚರ್ಮದ ಬಣ್ಣವನ್ನು ಬದಲಾಯಿಸುವುದಾಗಿ ಹೇಳುವ ಉದ್ಯಮದ ಮೇಲೆ ಕೋಟ್ಯಂತರ ರೂಪಾಯಿ ಸುರಿಯಲಾಗುತ್ತಿದೆ. ಸಾಮಾಜಿಕ ಹಾಗೂ ಆರ್ಥಿಕ ಹಿಂದುಳಿದಿರುವಿಕೆಗೂ ಸಮುದಾಯಗಳ ಚರ್ಮದ ಬಣ್ಣಕ್ಕೂ ಹಲವು ಸಂದರ್ಭಗಳಲ್ಲಿ ನಂಟು ಇದೆ. ಕಪ್ಪು ಮೈಬಣ್ಣದವರು ಎಂದರೆ ಹಿಂದುಳಿದವರು ಎಂದು ಭಾವಿಸಿರುವುದೂ ಇದೆ. ಕಪ್ಪು ಎಂದರೆ ಕೆಟ್ಟದ್ದೆಲ್ಲವನ್ನೂ ಪ್ರತಿನಿಧಿಸುತ್ತದೆ ಎನ್ನುವ ಧೋರಣೆಯು ಭಾರತಕ್ಕೆ ಮಾತ್ರ ಸೀಮಿತವಾದುದಲ್ಲ, ಇದು ಎಲ್ಲೆಡೆ ಕಾಣುವ ಜಾಡ್ಯ. ಕಪ್ಪು ಎಂದರೆ ಕೆಡುಕು ಎಂಬ ಭಾವನೆಯನ್ನು ಬಿಳಿ ಮೈಬಣ್ಣ ಹೊಂದಿಲ್ಲದವರ ಮನಸ್ಸಿನಲ್ಲಿಯೂ ತುಂಬಲಾಗಿದೆ. ಇದರ ಪರಿಣಾಮವಾಗಿ ಕಪ್ಪು ಮೈಬಣ್ಣದ ವ್ಯಕ್ತಿಗಳು ಕೀಳರಿಮೆ ಬೆಳೆಸಿಕೊಂಡಿರುವುದಿದೆ, ಅವರ ಆತ್ಮಗೌರವಕ್ಕೆ ಪೆಟ್ಟುಬಿದ್ದ ನಿದರ್ಶನಗಳು ಇವೆ. ಜನಾಂಗೀಯವಾದದ ಬೇರುಗಳು ಇರುವುದು ಕೂಡ ಇಂತಹ ಧೋರಣೆಗಳಲ್ಲಿಯೇ.

ಆದರೆ, ಅತ್ಯುನ್ನತ ಹುದ್ದೆಯಲ್ಲಿ ಇರುವ ಅಧಿಕಾರಿಯೊಬ್ಬರು ಕೂಡ ಈ ಬಗೆಯ ಧೊರಣೆಯ ಸಂತ್ರಸ್ತೆ ಎಂಬುದು ಈ ಪೂರ್ವಗ್ರಹವು ಎಷ್ಟು ಬಲಶಾಲಿಯಾಗಿ ಬೆಳೆದಿದೆ ಎನ್ನುವುದನ್ನು ತೋರಿಸುತ್ತದೆ. ಈ ವಿಚಾರವನ್ನು ಬಹಿರಂಗವಾಗಿ ಹೇಳುವ ಮೂಲಕ ಶಾರದಾ ಅವರು ಒಳ್ಳೆಯ ಕೆಲಸ ಮಾಡಿದ್ದಾರೆ. ತಾನು ಮಗುವಾಗಿದ್ದಾಗ ಬೆಳ್ಳನೆಯ ಮೈಬಣ್ಣ ಹೊಂದಲು ಬಯಸಿದ್ದುದಾಗಿ, ತಾನು ಪರಿಪೂರ್ಣ ಅಲ್ಲ ಎಂದು ಭಾವಿಸಿದ್ದುದಾಗಿ ಹೇಳಿಕೊಂಡಿದ್ದಾರೆ. ಮೈಬಣ್ಣಕ್ಕೆ ಮೌಲ್ಯವನ್ನು ಆರೋಪಿಸುವ ಸಾಮಾಜಿಕ ಧೋರಣೆಯನ್ನು ಇಲ್ಲವಾಗಿಸಬೇಕಿದೆ. ಆದರೆ ಈಗಾಗಲೇ ಕಲಿತಿರುವ ಇಂತಹ ಕೆಟ್ಟ ಬುದ್ಧಿಯನ್ನು ಬಿಡುವುದಕ್ಕೆ ಸಮಾಜಕ್ಕೆ ಬಹಳ ಕಾಲ ಬೇಕಾಗಬಹುದು. ಚರ್ಮದ ಬಣ್ಣ ಯಾವುದೇ ಇದ್ದರೂ ಎಲ್ಲರೂ ಸಮಾನರು ಎನ್ನುವ ಪಾಠವನ್ನು ಶಾಲೆಗಳಲ್ಲಿಯೇ ಹೇಳಿಕೊಡಬೇಕು. ಇದು ಒಂದು ನೈತಿಕ ಮೌಲ್ಯವಾಗಿ ಸಮಾಜದಲ್ಲಿಯೂ ವ್ಯಾಪಕವಾಗಿ ಪಸರಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.