ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಕೆಪಿಎಸ್‌ಸಿ ನೇಮಕಾತಿ ಅಕ್ರಮಕ್ಕೆ ರಕ್ಷಣೆ ಬೇಡ

Last Updated 2 ಜೂನ್ 2021, 19:15 IST
ಅಕ್ಷರ ಗಾತ್ರ

ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ)2011ರಲ್ಲಿ ನಡೆಸಿದ ಗೆಜೆಟೆಡ್ ಪ್ರೊಬೇಷನರಿ ಅಧಿಕಾರಿಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಆಯೋಗದ ಅಂದಿನ ಅಧ್ಯಕ್ಷ ಮತ್ತು ಸದಸ್ಯರ ವಿರುದ್ಧ ವಿಚಾರಣೆಗೆ (ಪ್ರಾಸಿಕ್ಯೂಷನ್‌) ಅನುಮತಿ ನೀಡದೇ ಇರುವ ರಾಜ್ಯ ಸಚಿವ ಸಂಪುಟದ ನಿರ್ಧಾರ ಯಾವುದೇ ದೃಷ್ಟಿಯಿಂದಲೂ ಸರಿಯಲ್ಲ. ಇದು ಭ್ರಷ್ಟಾಚಾರಿಗಳಿಗೆ, ಸ್ವಜನಪಕ್ಷಪಾತ ನಡೆಸಿದವರಿಗೆ ನೀಡುವ ರಕ್ಷಣೆ ಎನ್ನದೆ ಬೇರೆ ವಿಧಿಯಿಲ್ಲ. ಅಕ್ರಮಗಳ ಕೂಟವಾಗಿರುವ ಕೆಪಿಎಸ್‌ಸಿಯನ್ನು ಸರಿದಾರಿಗೆ ತರುವ ಜವಾಬ್ದಾರಿ ಹೊತ್ತಿರುವ ರಾಜ್ಯ ಸರ್ಕಾರವು ಹೊಣೆಗಾರಿಕೆಯನ್ನು ಮರೆತು ಅಕ್ರಮದಲ್ಲಿ ಭಾಗಿಯಾಗಿದ್ದವರನ್ನು ರಕ್ಷಿಸಲು ಮುಂದಾಗಿರುವುದು ಸರ್ವಥಾ ಸಲ್ಲ. ಸಿಐಡಿ ತನಿಖೆ ನಡೆಸಿ ಅಕ್ರಮಗಳನ್ನು ಬಯಲಿಗೆಳೆದಿದೆ. ಯಾವ ಯಾವ ಹಂತದಲ್ಲಿ ಅಕ್ರಮಗಳಾಗಿವೆ ಎನ್ನುವುದನ್ನು ಬಿಚ್ಚಿಟ್ಟಿದೆ. ಇದರ ಆಧಾರದಲ್ಲಿಯೇ ರಾಜ್ಯ ಸರ್ಕಾರವು 2011ನೇ ಸಾಲಿನ ನೇಮಕಾತಿ ಅಧಿಸೂಚನೆಯನ್ನು ರದ್ದು ಮಾಡಿದೆ. ಅಧಿಸೂಚನೆ ರದ್ದು ಮಾಡಿರುವುದನ್ನು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿವೆ. 2011ರ ನ.3ರಂದುಕೆಪಿಎಸ್‌ಸಿಯು 362 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿತ್ತು. ಪರೀಕ್ಷೆಗಳನ್ನು ನಡೆಸಿ, 2014ರ ಮಾರ್ಚ್ 22ರಂದು ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗಿತ್ತು. ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಅಭ್ಯರ್ಥಿಯೊಬ್ಬರು ಅಂದಿನ ಅಡ್ವೊಕೇಟ್ ಜನರಲ್‌ಗೆ (ಎ.ಜಿ) ಪತ್ರ ಬರೆದಿದ್ದರು. ಎ.ಜಿ. ಶಿಫಾರಸಿನಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು. ನಂತರ 2014ರ ಜೂನ್ 27ರಂದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಅಕ್ರಮಗಳ ತನಿಖೆಯ ಹೊಣೆಯನ್ನು ಸಿಐಡಿಗೆ ವಹಿಸಿತ್ತು. ತನಿಖೆ ನಡೆಸಿದ ಸಿಐಡಿ ಮಧ್ಯಂತರ ವರದಿ ನೀಡಿದ ಆಧಾರದಲ್ಲಿ ಅಂದಿನ ಸರ್ಕಾರ ನೇಮಕಾತಿ ಅಧಿಸೂಚನೆಯನ್ನು ವಾಪಸು ಪಡೆದಿತ್ತು. ಇದರ ವಿರುದ್ಧ ಕೆಲವು ಅಭ್ಯರ್ಥಿಗಳುಕರ್ನಾಟಕ ಆಡಳಿತ ನ್ಯಾಯಮಂಡಳಿಗೆ (ಕೆಎಟಿ) ಹೋಗಿದ್ದರು. ಸರ್ಕಾರದ ಆದೇಶವನ್ನು ರದ್ದು ಮಾಡಿದ ಕೆಎಟಿ, ಆಯ್ಕೆಯಾದ ಎಲ್ಲ ಅಭ್ಯರ್ಥಿಗಳಿಗೂ ನೇಮಕಾತಿ ಪತ್ರ ಕೊಡುವಂತೆ ಸೂಚಿಸಿತ್ತು. ಆದರೆ ಕೆಎಟಿ ಆದೇಶವನ್ನು ಹೈಕೋರ್ಟ್ ರದ್ದು ಮಾಡಿತ್ತು. ಇದನ್ನು ಸುಪ್ರೀಂ ಕೋರ್ಟ್ ಕೂಡ ಎತ್ತಿ ಹಿಡಿದಿತ್ತು. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕೆಪಿಎಸ್‌ಸಿಯ ಅಂದಿನ ಅಧ್ಯಕ್ಷ ಗೋನಾಳ್ ಭೀಮಪ್ಪ, ಸದಸ್ಯರಾದ ಮಂಗಳಾ ಶ್ರೀಧರ್, ಎಸ್.ಆರ್.ರಂಗಮೂರ್ತಿ, ಎನ್.ಮಹದೇವ್, ಎಚ್.ವಿ.ಪಾರ್ಶ್ವನಾಥ್, ಎಸ್.ದಯಾಶಂಕರ್, ಎಚ್.ಡಿ.ಪಾಟೀಲ್, ಬಿ.ಎಸ್.ಕೃಷ್ಣಪ್ರಸಾದ್, ಎನ್.ರಾಮಕೃಷ್ಣ ಮತ್ತು ಬಿ.ಪಿ.ಕನಿರಾಮ್ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ– 1988ರ ಸೆಕ್ಷನ್‌ 19(1) ಅನ್ವಯ ಪ್ರಕರಣ ದಾಖಲಿಸಿ ಪ್ರಾಸಿಕ್ಯೂಷನ್‌ಗೆ ಸಿಐಡಿ ಅನುಮತಿ ಕೇಳಿತ್ತು. ರಾಜ್ಯ ಸರ್ಕಾರ ಈಗ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿಲ್ಲ.

ಕೆಪಿಎಸ್‌ಸಿ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿರುವುದು ಇದು ಮೊದಲೇನೂ ಅಲ್ಲ. 2011ನೇ ಸಾಲಿಗಿಂತ ಮೊದಲೂ ಅಕ್ರಮಗಳು ನಡೆದಿದ್ದವು. ನಂತರ ನಡೆದ ನೇಮಕಾತಿಗಳಲ್ಲಿಯೂ ಅಕ್ರಮಗಳು ನಡೆದಿವೆ. ಅದಕ್ಕಾಗಿ 2011ನೇ ಸಾಲಿನ ಅಭ್ಯರ್ಥಿಗಳನ್ನು ಮಾತ್ರ ಬಲಿಪಶು ಮಾಡುವುದು ಬೇಡ ಎಂದು ಕೆಲವು ರಾಜಕಾರಣಿಗಳು ವಾದಿಸುತ್ತಿದ್ದಾರೆ. ಇದರಲ್ಲಿ ಯಾವ ಅರ್ಥವೂ ಇಲ್ಲ. 2011ನೇ ಸಾಲಿನ ನೇಮಕಾತಿ ಅಧಿಸೂಚನೆ ರದ್ದಾಗಿರುವುದರಿಂದ ಕೆಲವು ಅಭ್ಯರ್ಥಿಗಳಿಗೆ ನಿರಾಶೆಯಾಗಿರುವುದು ನಿಜ. ಆದರೆ ಅದನ್ನೇ ಮುಂದಿಟ್ಟು ಅಕ್ರಮಗಳನ್ನು ಒಪ್ಪಿಕೊಳ್ಳುವುದು ಮತ್ತು ಅಕ್ರಮ ಮಾಡಿದವರಿಗೆ ಯಾವುದೇ ಶಿಕ್ಷೆಯಾಗದಂತೆ ನೋಡಿಕೊಳ್ಳುವುದು ಮಹಾ ಅಪರಾಧ. ಕೆಪಿಎಸ್‌ಸಿಯಲ್ಲಿ ಅಕ್ರಮಗಳು ನಡೆಯದಂತೆ ನಮ್ಮ ಆಡಳಿತಗಾರರು ನೋಡಿಕೊಳ್ಳಬೇಕು. ಅದು ಅವರ ಸಂವಿಧಾನಬದ್ಧ ಜವಾಬ್ದಾರಿ ಕೂಡ. ಅಕ್ರಮಗಳ ಕೂಪವಾಗಿರುವ ಮತ್ತು ‘ಮ್ಯಾರೇಜ್ ಬ್ಯೂರೊ’ ಆಗಿ ಪರಿವರ್ತನೆಯಾಗಿರುವ ಕೆಪಿಎಸ್‌ಸಿಗೆ ಕಾಯಕಲ್ಪ ನೀಡುವ ಕಡೆಗೆ ಆದ್ಯತೆ ನೀಡಬೇಕೇ ವಿನಾ ಅಕ್ರಮಗಳನ್ನು ಸಮರ್ಥಿಸಿಕೊಳ್ಳುವ ಕೆಲಸ ಮಾಡಬಾರದು. ಕೆಪಿಎಸ್‌ಸಿ ಶುದ್ಧಗೊಳಿಸಿ ಅದರ ನೇಮಕಾತಿಯ ಬಗ್ಗೆ ಜನರಲ್ಲಿ ವಿಶ್ವಾಸ ಮೂಡಿಸುವುದು ಸರ್ಕಾರದ ಆದ್ಯ ಕರ್ತವ್ಯ. ನೇಮಕಾತಿಯನ್ನು ರದ್ದು ಮಾಡಿ, ಕೆಪಿಎಸ್‌ಸಿ ಸುಧಾರಿಸುವುದಕ್ಕಾಗಿ ಪಿ.ಸಿ.ಹೋಟಾ ಸಮಿತಿ ರಚನೆಗೆ ಕಾರಣರಾದ ಸಿದ್ದರಾಮಯ್ಯ ಅವರೇ ಈಗ ಅಕ್ರಮದ ಪರವಾಗಿ ಮಾತನಾಡುತ್ತಿರುವುದು ಅತ್ಯಂತ ವಿಷಾದನೀಯ. ಅಕ್ರಮ ಮಾಡಿರುವ ಅಭ್ಯರ್ಥಿಗಳು ಹಾಗೂ ಕೆಪಿಎಸ್‌ಸಿ ಸದಸ್ಯರನ್ನು ಸಮರ್ಥನೆ ಮಾಡಿಕೊಳ್ಳಲು ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಈ ಮೂರೂ ಪಕ್ಷಗಳ ಮುಖಂಡರು ಮುಂದಾಗಿರುವುದು ದುರಂತ. ಜನಹಿತದ ಕೆಲಸಗಳಿಗೆ ಸಂಬಂಧಪಟ್ಟಂತೆ ಒಬ್ಬರ ಮೇಲೆ ಒಬ್ಬರು ಕೆಸರೆರಚುವ ರಾಜಕಾರಣಿಗಳು ಅಕ್ರಮ ಸಮರ್ಥನೆಗೆ ಮಾತ್ರ ಒಂದಾಗಿರುವುದು ವಿಪರ್ಯಾಸ. ಹೈಕೋರ್ಟ್, ಸುಪ್ರೀಂ ಕೋರ್ಟ್‌ ಆದೇಶದಂತೆ ರಾಜ್ಯ ಸರ್ಕಾರ ನಡೆದುಕೊಳ್ಳಬೇಕು. ಕೆಪಿಎಸ್‌ಸಿ ಅಕ್ರಮಗಳನ್ನು ಬಯಲು ಮಾಡಿರುವ ಸಿಐಡಿಗೆ ಪೂರ್ಣ ಸ್ವಾತಂತ್ರ್ಯವನ್ನು ನೀಡಿ ಅಂದಿನ ಅಧ್ಯಕ್ಷ ಮತ್ತು ಸದಸ್ಯರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಬೇಕು. ತಪ್ಪು ಮಾಡಿದವರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಅದು ರಾಜ್ಯ ಸರ್ಕಾರದ ಬಹುಮುಖ್ಯ ಕರ್ತವ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT