ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಕಾರ್ಮಿಕರ ಮುಷ್ಕರ, ದಾಂದಲೆ ಹೂಡಿಕೆಸ್ನೇಹಿ ವರ್ಚಸ್ಸಿಗೆ ಧಕ್ಕೆ

Last Updated 18 ಡಿಸೆಂಬರ್ 2020, 19:31 IST
ಅಕ್ಷರ ಗಾತ್ರ

ಲಾಕ್‌ಡೌನ್‌ ನಂತರದ ಆರ್ಥಿಕ ಬಿಕ್ಕಟ್ಟಿನ ಕಾಲಘಟ್ಟದಲ್ಲಿ ಉದ್ಯಮಗಳು ಹಾಗೂ ನೌಕರರ ಪಾಲಿಗೆ ಅಹಿತಕರವೆನಿಸುವ ಕನಿಷ್ಠ ಮೂರು ಪ್ರಸಂಗಗಳು ಕರ್ನಾಟಕದಲ್ಲಿ ನಡೆದಿವೆ. ಬೆಂಗಳೂರು ಸಮೀಪದ ಬಿಡದಿಯಲ್ಲಿ ಇರುವ ಟೊಯೊಟಾ ಕಿರ್ಲೋಸ್ಕರ್ ಮೋಟರ್ಸ್‌ ಕಂಪನಿಯ ಕಾರ್ಖಾನೆಯಲ್ಲಿ ಕಾರ್ಮಿಕರು ಒಂದು ತಿಂಗಳಿಗೂ ಹೆಚ್ಚಿನ ಅವಧಿಯಿಂದ ಮುಷ್ಕರ ನಡೆಸುತ್ತಿದ್ದಾರೆ.

ಕೋಲಾರ ಜಿಲ್ಲೆಯ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿನ ವಿಸ್ಟ್ರಾನ್‌ ಕಂಪನಿಯ ಆವರಣದಲ್ಲಿ ಕಾರ್ಮಿಕರು ನಡೆಸಿದ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ನಷ್ಟವಾಗಿದೆ ಎಂದು ವರದಿಯಾಗಿದೆ. ಸಾರಿಗೆ ನಿಗಮಗಳ ನೌಕರರು ನಡೆಸಿದ ಮುಷ್ಕರದಿಂದಾಗಿ ರಾಜ್ಯದ ವಿವಿಧೆಡೆ ಬಸ್‌ ಸಂಚಾರ ಅಸ್ತವ್ಯಸ್ತಗೊಂಡ ಕಾರಣ ಸಾರ್ವಜನಿಕರು ತೊಂದರೆಗೆ ಒಳಗಾಗಿದ್ದರು. ಲಾಕ್‌ಡೌನ್ ಅವಧಿಯಲ್ಲಿ ಉದ್ಯಮಗಳು ತಮ್ಮ ಉತ್ಪನ್ನಗಳಿಗೆ ಬೇಡಿಕೆಯೇ ಇಲ್ಲದಂತಾಗಿ ಬಸವಳಿದಿದ್ದವು.

ಈಗ ಕೆಲವು ತಿಂಗಳುಗಳಿಂದ ಮಾರುಕಟ್ಟೆಯಲ್ಲಿ ಉತ್ಪನ್ನಗಳಿಗೆ ಬೇಡಿಕೆ ತುಸು ಪ್ರಮಾಣದಲ್ಲಿಯಾದರೂ ಹೆಚ್ಚಾಗುತ್ತಿದ್ದು, ಉದ್ಯಮಗಳಲ್ಲಿ ಆಶಾಭಾವ ಮೂಡುತ್ತಿದೆ. ಅವು ಉತ್ಪಾದನೆಗೆ ಚುರುಕು ನೀಡಿ ಲಾಕ್‌ಡೌನ್‌ ಅವಧಿಯಲ್ಲಿ ಆಗಿರುವ ನಷ್ಟವನ್ನು ಭರ್ತಿ ಮಾಡಿಕೊಳ್ಳುವ ನಿರೀಕ್ಷೆಯಲ್ಲಿವೆ. ಇಂತಹ ಸಂದರ್ಭದಲ್ಲಿ ನಡೆದಿರುವ ಈ ಮೂರು ಬಿಡಿ ಘಟನೆಗಳಿಂದ ಆಗಿರುವ ಮತ್ತು ಆಗುವ ನಷ್ಟ ಆಯಾ ಉದ್ಯಮ ಸಮೂಹಕ್ಕೆ ಮಾತ್ರವೇ ಸೀಮಿತವಲ್ಲ. ಇಡೀ ರಾಜ್ಯದ ಔದ್ಯಮಿಕ ವಾತಾವರಣದ ಬಗ್ಗೆಯೇ ಹೂಡಿಕೆದಾರರಲ್ಲಿ ಕಳವಳ ಮೂಡಲು ಇದು ಕಾರಣವಾಗಬಹುದು. ಹೊಸ ಹೂಡಿಕೆ ತರುವ ಮಾತುಗಳನ್ನು ಆಡುತ್ತಿರುವ ಸರ್ಕಾರ ತಕ್ಷಣ ಇತ್ತ ಗಮನಹರಿಸಿ, ಇಂತಹ ಪ್ರಸಂಗಗಳು ಯಾವ ಕಾರಣಕ್ಕೂ ಮರುಕಳಿಸದಂತೆ ನೋಡಿಕೊಳ್ಳಬೇಕು.

ವೇತನ ಹಾಗೂ ಕೆಲಸದ ನಿಯಮಗಳ ವಿಚಾರವಾಗಿ ಈ ಮೂರೂ ಅನಪೇಕ್ಷಣೀಯ ವಿದ್ಯಮಾನಗಳು ನಡೆದಿರುವಂತಿವೆ. ಕಾರ್ಮಿಕರಿಗೆ ಕಾಲಕಾಲಕ್ಕೆ ವೇತನ ಸಿಗುವಂತೆ ನೋಡಿಕೊಳ್ಳುವುದು, ಆ ವೇತನ ಕಾನೂನಿಗೆ ಅನುಗುಣವಾಗಿ ಇರುವಂತೆ ನೋಡಿಕೊಳ್ಳುವುದು, ಕೆಲಸದ ಸ್ಥಳದಲ್ಲಿ ನಿಯಮಗಳ ಉಲ್ಲಂಘನೆ ಆಗದಂತೆ ನಿಗಾ ವಹಿಸುವುದು ಉದ್ಯಮಗಳ ಹೊಣೆಯೂ ಹೌದು, ಸರ್ಕಾರದ ಹೊಣೆಯೂ ಹೌದು.

ಕೋವಿಡ್–19 ಕಾರಣದಿಂದಾಗಿ ದೇಶದ ಉದ್ಯಮ ವಲಯವು ತೀರಾ ಸಂಕೀರ್ಣ ಬಿಕ್ಕಟ್ಟನ್ನು ಎದುರಿಸುತ್ತಿದೆ. ಲಾಕ್‌ಡೌನ್‌ನಿಂದಾಗಿ ಸ್ಥಗಿತಗೊಂಡಿದ್ದ ಉದ್ಯಮ ಚಟುವಟಿಕೆಗಳು ಕೆಲವು ತಿಂಗಳುಗಳ ಹಿಂದಷ್ಟೇ ಆರಂಭವಾಗಿವೆ. ಲಾಕ್‌ಡೌನ್‌ ಇರಬಹುದು ಅಥವಾ ಕಾರ್ಮಿಕರ ಮುಷ್ಕರ ಇರಬಹುದು, ಇನ್ನೊಂದು ಅವಧಿಗೆ ತಯಾರಿಕೆಗಳು ಸ್ತಬ್ಧಗೊಂಡರೆ ಅದರಿಂದ ಬೀಳುವ ಏಟನ್ನು ತಾಳಿಕೊಳ್ಳುವ ಶಕ್ತಿ ಎಲ್ಲ ಉದ್ಯಮಗಳಿಗೂ ಇರುವುದಿಲ್ಲ. ಕಾರ್ಮಿಕರು ತಮ್ಮ ‘ಹಕ್ಕುಗಳಿಗಾಗಿ’ ಮುಷ್ಕರದ ಹಾದಿ ಹಿಡಿದು, ಉದ್ಯಮವೇ ನೆಲಕಚ್ಚುವ ಸ್ಥಿತಿ ಎದುರಾದರೆ? ಆಗ, ‘ಹಕ್ಕುಗಳನ್ನು ರಕ್ಷಿಸಿ’ ಎಂಬ ಆಗ್ರಹಕ್ಕೆ ಅರ್ಥವೇ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ಯಾವುದೇ ಸಂಘಟನೆಯು ಮುಷ್ಕರದ ಹಾದಿ ಹಿಡಿಯುವುದು ಸರಿಯಲ್ಲ.

ಮಾತುಕತೆಯ ಮೂಲಕವೇ ಸಮಸ್ಯೆಗಳನ್ನು ಸಾವಧಾನವಾಗಿ ಬಗೆಹರಿಸಿಕೊಳ್ಳಬೇಕಿರುವ ಸಂದರ್ಭ ಇದು– ಅಂತಹ ಮಾತುಕತೆಗೆ ಅಗತ್ಯವಿರುವ ವಾತಾವರಣ ನಿರ್ಮಿಸಿಕೊಡುವುದು ಉದ್ಯಮಗಳ ಜವಾಬ್ದಾರಿಯೂ ಹೌದು. ಉದ್ಯಮಗಳು ತಮ್ಮಲ್ಲಿ ಹಣ ಹೂಡಿಕೆ ಮಾಡಿದವರಿಗೂ, ತಮ್ಮನ್ನು ನಂಬಿ ಕೆಲಸ ಮಾಡುತ್ತಿರುವವರಿಗೂ ಉತ್ತರದಾಯಿ ಆಗಿರಬೇಕು. ಷೇರುದಾರರು, ಕಾರ್ಮಿಕರು ಉದ್ಯಮದ ಯಶಸ್ಸಿನಲ್ಲಿ ಭಾಗೀದಾರರು.

ಹೂಡಿಕೆದಾರರು ಎಷ್ಟು ಪ್ರೀತಿಯಿಂದ ತಮ್ಮ ಹಣವನ್ನು ಉದ್ಯಮದಲ್ಲಿ ಹೂಡಿಕೆ ಮಾಡುತ್ತಾರೋ ಕಾರ್ಮಿಕರು ಕೂಡ ಅಷ್ಟೇ ಪ್ರೀತಿಯಿಂದ ತಮ್ಮ ಶ್ರಮವನ್ನು ಉದ್ಯಮದ ಹಿತ ಕಾಯಲು ಬಳಸಿಕೊಳ್ಳಬೇಕು. ಇದಕ್ಕೆ ಪ್ರತಿಯಾಗಿ ಉದ್ಯಮ ಸಂಸ್ಥೆಗಳ ನಾಯಕತ್ವದ ಸ್ಥಾನದಲ್ಲಿರುವವರು ಧರ್ಮದರ್ಶಿಗಳಂತೆ ವರ್ತಿಸಿ ಷೇರುದಾರರು ಹಾಗೂ ಕಾರ್ಮಿಕರ ಹಿತ ಕಾಯಬೇಕು. ಕಾರ್ಮಿಕ ಕಾನೂನುಗಳ ಉಲ್ಲಂಘನೆ ಆಗದಂತೆ ಸರ್ಕಾರಗಳು ಸದಾ ನಿಗಾ ಇರಿಸಬೇಕು. ಆಗ ಇಂತಹ ಸಂಘರ್ಷಗಳಿಗೆ ಆಸ್ಪದ ಇರುವುದಿಲ್ಲ.

ಜಾಗತಿಕ ಮಟ್ಟದಲ್ಲಿ ಹೂಡಿಕೆದಾರರಿಂದ ಸಾಮಾಜಿಕ ಹೊಣೆಗಾರಿಕೆ ಪ್ರಜ್ಞೆ ಹೆಚ್ಚು ವ್ಯಕ್ತವಾಗುತ್ತಿದೆ. ತಾವು ಹೂಡಿಕೆ ಮಾಡುವ ಉದ್ಯಮವು ಪಾರಿಸರಿಕ, ಸಾಮಾಜಿಕ ಕಳಕಳಿ ಹೊಂದಿರಬೇಕು, ಅಲ್ಲಿನ ಕಾರ್ಪೊರೇಟ್ ಆಡಳಿತ ಅತ್ಯುತ್ತಮ ಮಟ್ಟದಲ್ಲಿರಬೇಕು ಎಂದು ಹೂಡಿಕೆದಾರರು ಬಯಸುತ್ತಾರೆ.

ಸಾಮಾಜಿಕ ಕಳಕಳಿ ಅಂದರೆ ಕಾರ್ಮಿಕರ ಜೊತೆ ಒಳ್ಳೆಯ ಸಂಬಂಧ ಇಟ್ಟುಕೊಳ್ಳುವುದೂ ಸೇರಿದೆ. ಹೂಡಿಕೆ ಬಯಸುವ ಉದ್ಯಮಗಳು ಈ ಆಯಾಮದ ಬಗ್ಗೆಯೂ ಆಲೋಚಿಸಿ ಮುಂದಡಿ ಇರಿಸಬೇಕು; ಕಾರ್ಮಿಕರು ‘ಹಕ್ಕು’ಗಳಿಗೆ ಆಗ್ರಹಿಸುವಾಗ ತಾವು ಹಿಡಿದ ಮಾರ್ಗ ಯಾವುದು ಎಂಬುದನ್ನೂ ಎಚ್ಚರಿಕೆಯಿಂದ ಗಮನಿಸಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT