ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ವಾಸಕೋಶಗಳಲ್ಲಿ ಕೊಳಕುಗಾಳಿಯ ಮಾರಿ; ತಿಳಿವಳಿಕೆ ಹೆಚ್ಚಿಸಲು ಹುಡುಕಬೇಕಿದೆ ದಾರಿ

Last Updated 23 ಡಿಸೆಂಬರ್ 2020, 20:53 IST
ಅಕ್ಷರ ಗಾತ್ರ

ವಾಯುಮಾಲಿನ್ಯದಿಂದಾಗಿಯೇ ಭಾರತದಲ್ಲಿ 2019ರಲ್ಲಿ ಸುಮಾರು 17 ಲಕ್ಷ ಜನರು ಅಸುನೀಗಿದ್ದಾರೆಂದು ಭಾರತೀಯ ವಿಜ್ಞಾನಿಗಳು ದಾಖಲಿಸಿದ್ದು ಲ್ಯಾನ್ಸೆಟ್‌ ಪತ್ರಿಕೆಯಲ್ಲಿ ಇದೀಗ ಪ್ರಕಟವಾಗಿದೆ. ನಾವೆಲ್ಲ ಸದಾ ಕಡೆಗಣಿಸುತ್ತಿದ್ದ ಹೊಗೆ, ದೂಳು, ತೇಲುಕಣಗಳು ಅದೆಷ್ಟು ದೊಡ್ಡ ದುರಂತಕ್ಕೆ ಕಾರಣವಾಗಬಲ್ಲವು ಎಂಬುದಕ್ಕೆ ಅಂಕಿಅಂಶದ ಚಿತ್ರಣ ಸಿಕ್ಕಂತಾಗಿದೆ. ಇದು ಕೇವಲ ಕೆಮ್ಮುದಮ್ಮಿನಂಥ ವ್ಯಕ್ತಿಗತ ಆರೋಗ್ಯದ ಮೇಲಷ್ಟೇ ಅಲ್ಲ, ರಾಷ್ಟ್ರದ ಆರ್ಥಿಕ ಸ್ಥಿತಿಗೂ ಬಲವಾದ ಹೊಡೆತ ಕೊಡುತ್ತಿದೆ.

ಶ್ವಾಸಕೋಶಕ್ಕೆ ಸಂಬಂಧಿಸಿದ ಅಸ್ವಸ್ಥತೆ, ಅಶಕ್ತತೆ ಹಾಗೂ ಅವಧಿಯ ಮುಂಚಿನ ಸಾವಿನಿಂದಾಗಿ ರಾಷ್ಟ್ರಕ್ಕೆ ಸುಮಾರು ₹ 2.60 ಲಕ್ಷ ಕೋಟಿಯಷ್ಟು ಆರ್ಥಿಕ ನಷ್ಟ ಸಂಭವಿಸುತ್ತಿದೆ ಎಂದು ಈ ತಜ್ಞರು ಅಂದಾಜು ಮಾಡಿದ್ದಾರೆ. ದಕ್ಷಿಣ ಭಾರತದ ರಾಜ್ಯಗಳ ಪೈಕಿ ಕರ್ನಾಟಕದಲ್ಲೇ ಅತಿಹೆಚ್ಚು ನಷ್ಟ ಸಂಭವಿಸುತ್ತಿದೆ ಎಂದು ಹೇಳಲಾಗಿದೆ.

ನಷ್ಟದ ಜೊತೆಗೆ, ನಮ್ಮ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇಕಡ 0.4ರಷ್ಟು ಹಣವೆಲ್ಲ ಶ್ವಾಸಸಂಬಂಧಿ ಕಾಯಿಲೆಗಳ ನಿರ್ವಹಣೆ ಮತ್ತು ಚಿಕಿತ್ಸೆಗೇ ವೆಚ್ಚವಾಗುತ್ತಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ನಿರ್ದೇಶಕರು ಹೇಳಿದ್ದಾರೆ. ಈಚಿನ ವರ್ಷಗಳಲ್ಲಿ ಮಹಾನಗರಗಳಲ್ಲಿ ವಾಯುಮಾಲಿನ್ಯವನ್ನು ಅಳೆಯುವ ಸಾಧನಗಳನ್ನು ವ್ಯಾಪಕವಾಗಿ ಅಳವಡಿಸಲಾಗುತ್ತಿದೆ ನಿಜ. ಉದ್ಯಮಗಳನ್ನೂ ನಗರದಿಂದ ದೂರಪ್ರದೇಶಕ್ಕೆ ಸಾಗಿಸಲಾಗಿದೆ. ಆದರೆ ಗಾಳಿಗೆ ಗಡಿಯೇ ಇಲ್ಲದಿರುವಾಗ ನಗರಗಳನ್ನಷ್ಟೆ ಚೊಕ್ಕಟ ಇಡುವ ಕ್ರಮ ಕೇವಲ ಕಣ್ಣೊರೆಸುವ ಯತ್ನವಾದೀತು.

ಪಂಜಾಬ್‌, ಹರಿಯಾಣ ರೈತರು ಭತ್ತದ ಹುಲ್ಲಿಗೆ ಬೆಂಕಿ ಕೊಡುವ ಸಂದರ್ಭದಲ್ಲೇ ದೆಹಲಿಯಲ್ಲಿ ಕರಾಳ ಮಾಲಿನ್ಯ ಕವಿಯುತ್ತ, ದೇಶವಿದೇಶಗಳಲ್ಲಿ ಭಾರತವೆಂಬ ಬಿಂಬಕ್ಕೆ ಪದೇಪದೇ ಕಪ್ಪುಮಸಿ ಬಳಿಯುತ್ತಿದೆ. ಇದ್ದುದರಲ್ಲಿ ಹಳ್ಳಿಗಳಲ್ಲಿ ಸೌದೆ ಒಲೆಯ ಬದಲು ಅನಿಲ ಸಿಲಿಂಡರ್‌ಗಳ ಬಳಕೆಯನ್ನು ಹೆಚ್ಚಿಸಲು ಒತ್ತು ಕೊಡಲಾಗುತ್ತಿದೆ. ಅದರಿಂದಾಗಿ ಮನೆಯೊಳಗಿನ ಮಾಲಿನ್ಯ ಕಡಿಮೆಯಾಗುತ್ತಿದೆ ನಿಜ. ಆದರೆ ಹೊರಾಂಗಣದಲ್ಲಿ ಎಲ್ಲೆಲ್ಲೂ ಅಭಿವೃದ್ಧಿಯ ದೂಳಿನ ಭರಾಟೆ, ಕಳಪೆ ಯಂತ್ರೋಪಕರಣಗಳ ಎಗ್ಗಿಲ್ಲದ ಬಳಕೆ, ವಾಹನಗಳ ರಬ್ಬರ್‌ ಸವೆತದಿಂದ ಏಳುವ ಸೂಕ್ಷ್ಮಕಣಗಳು, ಪ್ಲಾಸ್ಟಿಕ್‌ ತ್ಯಾಜ್ಯಗಳನ್ನು ಸುಡುವ ಪ್ರಕ್ರಿಯೆಗಳು ಲಂಗುಲಗಾಮಿಲ್ಲದೆ ಹೆಚ್ಚುತ್ತಿವೆ.

ರಾಷ್ಟ್ರದ ರಾಜಧಾನಿಯಲ್ಲೇ ಮಾಲಿನ್ಯ ನಿಯಂತ್ರಣ ಕ್ರಮಗಳು ವಿಫಲವಾಗುತ್ತಿವೆಯೆಂದರೆ ಸಣ್ಣಪುಟ್ಟ ನಗರ-ಪಟ್ಟಣಗಳಲ್ಲಿ, ಹಳ್ಳಿಗಳಲ್ಲಿ ಅದೆಂಥ ಸ್ಥಿತಿ ಇದ್ದೀತೆಂದು ನಾವು ಊಹಿಸಬಹುದು. ಜನರಲ್ಲಿ ಆರೋಗ್ಯಪ್ರಜ್ಞೆಯನ್ನು ಮೂಡಿಸುವ ಕೆಲಸವಂತೂ ಮರೆತೇ ಹೋದಂತಿದೆ. ಆಹಾರ ಉತ್ಪನ್ನಗಳಲ್ಲಿ ರಾಸಾಯನಿಕ ವಿಷಗಳ ಸೇರ್ಪಡೆ, ಕಳಪೆದರ್ಜೆಯ ಖಾದ್ಯತೈಲದ ಬಳಕೆ, ಶುಚಿತ್ವದ ಪ್ರಜ್ಞೆಯೇ ಇಲ್ಲದೆ ರಸ್ತೆಬದಿಯ ತಿಂಡಿಪೇಯಗಳಲ್ಲಿ ಪ್ಲಾಸ್ಟಿಕ್‌ ತಟ್ಟೆಲೋಟ, ಚೀಲಗಳ ಎಗ್ಗಿಲ್ಲದ ಬಳಕೆ- ಇವೆಲ್ಲವುಗಳ ಒಟ್ಟಾರೆ ಪರಿಣಾಮ ಏನೆಂದರೆ, ಜಗತ್ತಿನಲ್ಲೇ ಅತಿಹೆಚ್ಚು ಮಧುಮೇಹ, ಹೃದ್ರೋಗ, ಲಕ್ವ, ಕ್ಷಯ ಹಾಗೂ ಶ್ವಾಸಕೋಶ ಕಾಯಿಲೆಪೀಡಿತರು ನಮ್ಮ ದೇಶದಲ್ಲೇ ಇದ್ದಾರೆ.

ಈ ಎಲ್ಲ ಕಾಯಿಲೆಗಳೂ ಒಂದಕ್ಕೊಂದು ಪೂರಕವಾಗಿ, ಕೊಳಕು ಪರಿಸರದಲ್ಲಿ ಒಂದನ್ನೊಂದು ಹೆಚ್ಚಿಸುತ್ತ ಹೋಗುತ್ತವೆ. ನಮ್ಮಲ್ಲಿ ಕೋವಿಡ್– 19ರಿಂದಾಗಿ ಪ್ರತಿದಿನ ಸುಮಾರು 500 ಜನರು ಸಾವಪ್ಪುತ್ತಿದ್ದರೆ, ಜೀವನವಿಧಾನಕ್ಕೆ ಸಂಬಂಧಿಸಿದ ಈ ಕಾಯಿಲೆಗಳಿಂದ 22 ಸಾವಿರ ಜನರು ಅಸುನೀಗುತ್ತಿದ್ದಾರೆ. ಇಂಥ ಅಪ್ರಸಿದ್ಧ ಕಾಯಿಲೆಗಳ ಬಗ್ಗೆ ಯಾವುದೇ ಜನಪ್ರತಿನಿಧಿಗಳು ಮಾತಾಡಿದ್ದನ್ನು ನಾವು ಕೇಳಿಯೇ ಇಲ್ಲ. ಸಾಲದ್ದಕ್ಕೆ ಸಾರ್ವಜನಿಕ ಆರೋಗ್ಯಕ್ಕೆ ಅತಿ ಕಡಿಮೆ (ಜಿಡಿಪಿಯ ಶೇಕಡ 1ಕ್ಕಿಂತ ಕಡಿಮೆ) ಹಣವನ್ನು ವ್ಯಯಿಸುವ ದೇಶಗಳ ಸಾಲಿನಲ್ಲಿ ನಾವೂ ಇದ್ದೇವೆ.

ಈ ವರ್ಷ ಕೋವಿಡ್‌- 19ರಿಂದ ದೇಶದಲ್ಲಿ ಸಂಭವಿಸಿದ ಸಾವಿನ ಒಟ್ಟೂ ಸಂಖ್ಯೆ ಇದೀಗ ಒಂದೂವರೆ ಲಕ್ಷವನ್ನು ಸಮೀಪಿಸುತ್ತಿದೆ. ಇದರಿಂದಾದ ಸಾಮಾಜಿಕ, ಆರ್ಥಿಕ ತುಮುಲ– ತಲ್ಲಣಗಳನ್ನು ಪರಿಗಣಿಸಿದರೆ, ಅದಕ್ಕಿಂತ ಹತ್ತು ಪಟ್ಟು ಹೆಚ್ಚಿನ ಸಾವಿಗೆ ಕಾರಣವಾಗುತ್ತಿರುವ ವಾಯುಮಾಲಿನ್ಯ ನಮ್ಮನ್ನೆಂದೂ ಗಂಭೀರವಾಗಿ ತಟ್ಟಿದ್ದಿಲ್ಲ. ವೈರಾಣುಗಳ ಬಗೆಗಿನ ಚಾರಿತ್ರಿಕ ಭಯಭೀತಿ, ಅದು ವಿದೇಶದಿಂದ ವಿಮಾನದ ಮೂಲಕ ಅಬ್ಬರದ ಪ್ರಚಾರದೊಂದಿಗೆ ಬಂದಿದ್ದು, ಅದು ಹುಟ್ಟಿಸಿದ ಜಾಗತಿಕ ಭಯದುಬ್ಬರ ಮತ್ತು ಇವೆಲ್ಲ ಗಾಬರಿಗಳೂ ಒಟ್ಟಾಗಿದ್ದರಿಂದ ಉಂಟಾದ ಆರ್ಥಿಕ ಸಂಕಟಗಳಿಂದಾಗಿ ಇಡೀ ಲೋಕವೇ ಧಿಗ್ಗನೆದ್ದು ಪ್ರತಿಬಂಧಕ ಕ್ರಮಗಳಿಗೆಂದು ಸಮರೋಪಾದಿಯಲ್ಲಿ ಟೊಂಕಕಟ್ಟಿದ್ದು ಸ್ವಾಗತಾರ್ಹ ಬೆಳವಣಿಗೆಯೇನೊ ಹೌದು.

ಅಂಥ ಚುರುಕಿನ ಪ್ರತಿಸ್ಪಂದನೆಯನ್ನು ವಾಯುಮಾಲಿನ್ಯದ ಮಟ್ಟಿಗೆ ನಿರೀಕ್ಷಿಸಲೂ ಸಾಧ್ಯವಿಲ್ಲ. ಅದೊಂದು ಮಹಾಮಾರಿ ಎಂದು ಯಾವ ಜಾಗತಿಕ ಸಂಸ್ಥೆಯೂ ಘಂಟಾಘೋಷ ಮಾಡುತ್ತಿಲ್ಲ. ಏಕೆಂದರೆ ಇದು ಪ್ರಗತಿಯ ಧಾವಂತದಲ್ಲಿ ಜನಾರೋಗ್ಯವನ್ನೇ ಮರೆತು ಓಟಕಿತ್ತಿರುವ ಕೆಲವೇ ಕೆಲವು ದೇಶಗಳಿಗಷ್ಟೇ ಅಂಟಿದ ಶಾಪವಾಗಿದೆ. ಈ ಕುರಿತು ಜಾಗೃತಿ ಮೂಡಿಸುವ ಕೆಲಸ ಜನಸಾಮಾನ್ಯರ ಸ್ತರದಲ್ಲಷ್ಟೇ ಅಲ್ಲ, ಮಾಲಿನ್ಯ ನಿಯಂತ್ರಣ ಸಂಸ್ಥೆಗಳಲ್ಲೂ ವಿಧಾನ ಮಂಡಲಗಳಲ್ಲೂ ಸಂಸತ್ತಿನಲ್ಲೂ ನಡೆಯಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT