ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಹಗರಣದಲ್ಲಿ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಮತ್ತು ಸಿಬಿಐ ಬಂಧಿಸಿ 17 ತಿಂಗಳು ಸೆರೆಮನೆಯಲ್ಲಿ ಇರಿಸಿದ್ದವು. ಈ ಎರಡೂ ತನಿಖಾ ಸಂಸ್ಥೆಗಳನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ತ್ವರಿತವಾಗಿ ವಿಚಾರಣೆ ಪೂರ್ಣಗೊಳಿಸದೆ, ಜಾಮೀನು ಪಡೆಯುವ ಅವರ ಹಕ್ಕನ್ನು ಕಸಿದುಕೊಳ್ಳಲಾಗಿದೆ ಎಂದೂ ನ್ಯಾಯಾಲಯ ಹೇಳಿದೆ. ಸಿಸೋಡಿಯಾ ಅವರು ಜಾಮೀನಿಗಾಗಿ ಕಂಬ ಸುತ್ತುವಂತೆ ಮಾಡಬಾರದಿತ್ತು; ಜಾಮೀನಿಗಾಗಿ ಅವರು ವಿಚಾರಣಾ ನ್ಯಾಯಾಲಯದಿಂದ ಸುಪ್ರೀಂ ಕೋರ್ಟ್‌ವರೆಗೆ ಅಲೆಯುವಂತೆ ಮಾಡಿ, ಜಾಮೀನು ಪ್ರಕ್ರಿಯೆಯನ್ನೇ ಹಾವು–ಏಣಿ ಆಟ ಮಾಡಲಾಯಿತು; ಜಾಮೀನು ನೀಡದೆ, ಅದೇ ಅವರಿಗೆ ಶಿಕ್ಷೆ ಎಂಬಂತೆ ಮಾಡಲಾಗದು ಎಂದು ಸುಪ್ರೀಂ ಕೋರ್ಟ್ ಕಟುವಾಗಿ ಹೇಳಿದೆ.
ವಿಚಾರಣೆಯು ಆರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ತನಿಖಾಧಿಕಾರಿಗಳು ಕಳೆದ ವರ್ಷವೇ ನ್ಯಾಯಾಲಯಕ್ಕೆ ಹೇಳಿದ್ದರು. ಆದರೆ, ಅದು ಈಗಲೂ ಆರಂಭವೇ ಆಗಿಲ್ಲ. ನ್ಯಾಯಾಲಯವೇ ಹೇಳಿರುವಂತೆ, ಈ ವರ್ಷವೂ ವಿಚಾರಣೆ ಆರಂಭಗೊಳ್ಳುವ ಕ್ಷೀಣ ಸಾಧ್ಯತೆಯೂ ಇಲ್ಲ; ಏಕೆಂದರೆ
ಪ್ರಕರಣದಲ್ಲಿ 493 ಸಾಕ್ಷಿಗಳನ್ನು ಪಟ್ಟಿ ಮಾಡಲಾಗಿದೆ, ಸಾವಿರಕ್ಕೂ ಹೆಚ್ಚು ದಾಖಲೆಗಳಿವೆ, ಅವು ಲಕ್ಷಕ್ಕೂ ಹೆಚ್ಚು ಪುಟಗಳಿವೆ. ಸಿಸೋಡಿಯಾ ಅವರ ಕಾರಣದಿಂದಲೇ ತನಿಖೆ ವಿಳಂಬವಾಗಿದೆ ಎಂಬ ತನಿಖಾ ಸಂಸ್ಥೆಗಳ ಆರೋಪವನ್ನೂ ನ್ಯಾಯಪೀಠವು ತಳ್ಳಿಹಾಕಿದೆ. ಈಗ ನ್ಯಾಯಾಲಯವು ಜಾಮೀನು ನೀಡಲು ಕೊಟ್ಟಿರುವ ಕಾರಣವು ಎಲ್ಗಾರ್ ಪರಿಷತ್ ಪ್ರಕರಣ, ದೆಹಲಿ ಗಲಭೆ ಪ್ರಕರಣಗಳಂತಹ ಇನ್ನೂ ಕೆಲವು ಪ್ರಕರಣಗಳಿಗೆ ಸಂಬಂಧಿಸಿ ಕೂಡ ಪ್ರಸ್ತುತ ಎನಿಸುತ್ತದೆ. ನ್ಯಾಯಾಲಯ ಈಗ ಕೇಳಿರುವ ಪ್ರಶ್ನೆಗಳು ಜಾಮೀನು ಅರ್ಜಿಗಳ ಕುರಿತು ತೀರ್ಮಾನ ಕೈಗೊಳ್ಳುವಾಗ ಹಾಗೂ ತನಿಖಾ ಸಂಸ್ಥೆಗಳ ವರ್ತನೆಯನ್ನು ಅವಲೋಕಿಸುವಾಗ ಕೂಡ ಮಹತ್ವದ್ದಾಗುತ್ತವೆ. ಅಪರಾಧವು ಗಂಭೀರವಾಗಿದೆ ಎಂಬ ಕಾರಣದಿಂದ ವಿಚಾರಣೆ ವಿಳಂಬಗೊಳ್ಳು
ವಂತೆ ಮಾಡಲಾಗದು ಎಂಬುದನ್ನು ನ್ಯಾಯಾಲಯವು ದೃಢಪಡಿಸಿದೆ. ಜಾಮೀನು ನೀಡಿಕೆಯು ಅತ್ಯಂತ ಬಿಗಿಯಾಗಿರುವ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಮತ್ತು ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆಯ ಅಡಿಯಲ್ಲಿನ ಪ್ರಕರಣಗಳಲ್ಲಿಯೂ ಸ್ವಾತಂತ್ರ್ಯದ ಹಕ್ಕನ್ನು ನಿರಾಕರಿಸಲು ಆಗದು ಎಂಬುದನ್ನೂ ಕೋರ್ಟ್ ಸ್ಪಷ್ಟಪಡಿಸಿದಂತಿದೆ. ಸಿಸೋಡಿಯಾ ಅವರು ಪರಾರಿಯಾಗಿ ತಲೆಮರೆಸಿಕೊಳ್ಳುವ ಸಾಧ್ಯತೆ ಇಲ್ಲ. ಹಾಗೆಯೇ ಅವರು ಸಾಕ್ಷ್ಯ ನಾಶಪಡಿಸಲೂ ಸಾಧ್ಯವಿಲ್ಲ. ಅವರು ತಮ್ಮ ಕಚೇರಿಗೆ ಮತ್ತು ದೆಹಲಿ ವಿಧಾನಸಭಾ ಕಾರ್ಯಾಲಯಕ್ಕೆ ಪ್ರವೇಶಿಸಬಾರದು ಎಂಬ ತನಿಖಾ ಸಂಸ್ಥೆಗಳ ಕೋರಿಕೆಯನ್ನೂ ನ್ಯಾಯಾಲಯವು ತಿರಸ್ಕರಿಸಿದೆ.
ಜಾಮೀನು ನೀಡುವ ಹೊಣೆಯಿಂದ ಕೆಳ ನ್ಯಾಯಾಲಯಗಳು ನುಣುಚಿಕೊಳ್ಳುತ್ತಿವೆ; ಸುಲಭವಾಗಿ ಜಾಮೀನು ನೀಡಬಹುದಾದ ಪ್ರಕರಣಗಳು ಕೂಡ ಸುಪ್ರೀಂ ಕೋರ್ಟ್‌ವರೆಗೆ ಬರುತ್ತವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈಗಿನ ತೀರ್ಪು ಕೆಳ ನ್ಯಾಯಾಲಯಗಳಿಗೆ ಮಾರ್ಗದರ್ಶಕವಾಗಿದೆ. ‘ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಜಾಮೀನು ನಿರಾಕರಿಸಬಹುದು’ ಮತ್ತು ‘ತನಿಖಾ ಪ್ರಕ್ರಿಯೆಯೇ ದಂಡನೆಯಾಗಿ ಪರಿವರ್ತನೆ ಆಗಬಾರದು’ ಎಂಬ ಪರಿಕಲ್ಪನೆಗಳು ಹೊಸವೇನೂ ಅಲ್ಲ. ಆದರೆ, ಈ ಪರಿಕಲ್ಪನೆಗಳು ಪದೇಪದೇ ಉಲ್ಲಂಘನೆ ಆಗುತ್ತಿರುವ ಈಗಿನ ಕಾಲದಲ್ಲಿ ಇದನ್ನು ಪುನರುಚ್ಚರಿಸಬೇಕಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಪ್ರಕರಣವೂ ಸೇರಿ ಹಲವು ಪ್ರಕರಣಗಳ ಮೇಲೆ ನ್ಯಾಯಾಲಯದ ಈಗಿನ ಅಭಿಪ್ರಾಯಗಳು ಪರಿಣಾಮ ಬೀರಬಹುದು. ಕೇಜ್ರಿವಾಲ್ ಅವರಿಗೆ ಇ.ಡಿ. ದಾಖಲಿಸಿಕೊಂಡಿರುವ ಪ್ರಕರಣದಲ್ಲಿ ಜಾಮೀನು ಸಿಕ್ಕಿದ್ದರೂ ಸಿಬಿಐ ದಾಖಲಿಸಿದ ಪ್ರಕರಣದಲ್ಲಿ ಜಾಮೀನು ಸಿಗದ ಕಾರಣ ಅವರು ಸೆರೆಮನೆಯಲ್ಲಿಯೇ ಉಳಿಯುವಂತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.