ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಮರಾಠಾ ಮೀಸಲಾತಿ ಅಸಿಂಧು ದೂರಗಾಮಿ ಪರಿಣಾಮದ ತೀರ್ಪು

Last Updated 9 ಮೇ 2021, 19:31 IST
ಅಕ್ಷರ ಗಾತ್ರ

ಮಹಾರಾಷ್ಟ್ರ ಸರ್ಕಾರವು ಉದ್ಯೋಗ ಮತ್ತು ಶಿಕ್ಷಣದಲ್ಲಿ ಮರಾಠಾ ಸಮುದಾಯಕ್ಕೆ ಪ್ರತ್ಯೇಕವಾಗಿ ಕಲ್ಪಿಸಿದ್ದ ಮೀಸಲಾತಿಯನ್ನು ಸುಪ್ರೀಂ ಕೋರ್ಟ್‌ ರದ್ದುಗೊಳಿಸಿರುವುದು ನಿರೀಕ್ಷಿತವೇ ಆಗಿದೆ. 2018ರಲ್ಲಿ ಮರಾಠಾ ಸಮುದಾಯಕ್ಕೆ ಶೇಕಡ 16ರಷ್ಟು ಮೀಸಲಾತಿಗೆ ಅನುವಾಗಿಸುವ ಕಾಯ್ದೆಯನ್ನು ಮಹಾರಾಷ್ಟ್ರ ಸರ್ಕಾರ ಅನುಷ್ಠಾನಗೊಳಿಸಿತ್ತು. ಇದನ್ನು ಪ್ರಶ್ನಿಸಿ ಕೆಲವರು ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದಾಗ, ಈ ಕಾಯ್ದೆಯನ್ನು ಹೈಕೋರ್ಟ್ ಎತ್ತಿಹಿಡಿದಿತ್ತು. ಆದರೆ, ಮೀಸಲಾತಿ ಪ್ರಮಾಣವನ್ನು ಶಿಕ್ಷಣ ಕ್ಷೇತ್ರದಲ್ಲಿ ಶೇಕಡ 12ಕ್ಕೆ ಮತ್ತು ಉದ್ಯೋಗದಲ್ಲಿ ಶೇಕಡ 13ಕ್ಕೆ ಇಳಿಸಿತ್ತು.ಈಗ ಸುಪ್ರೀಂ ಕೋರ್ಟ್‌ ಈ ಮೀಸಲಾತಿಯನ್ನು ಅಸಿಂಧುಗೊಳಿಸಿದೆ.

ಒಟ್ಟು ಮೀಸಲಾತಿಯು ಶೇಕಡ 50ರ ಮಿತಿಯನ್ನು ಮೀರಬಾರದು ಎನ್ನುವ 1992ರ ಇಂದಿರಾ ಸಾಹ್ನಿ ಪ್ರಕರಣದಲ್ಲಿ ತಾನು ನೀಡಿರುವ ತೀರ್ಪನ್ನು ಉಲ್ಲೇಖಿಸಿರುವ ಸುಪ್ರೀಂ ಕೋರ್ಟ್, ‘ಮರಾಠಾ ಸಮುದಾಯವು ಉದ್ಯೋಗ, ಶಿಕ್ಷಣ ಮತ್ತು ಸಾರ್ವಜನಿಕ ಜೀವನದಲ್ಲಿ ಗಣನೀಯ ಪ್ರಾತಿನಿಧ್ಯ ಹೊಂದಿದೆ. ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಹಿಂದುಳಿದಿದೆ ಎಂಬ ಆ ಸಮುದಾಯದ ವಾದ ಸಮರ್ಥನೀಯವಲ್ಲ’ ಎಂದಿದೆ. ಹಿಂದೆಯೂ ಹಲವು ಪ್ರಕರಣಗಳಲ್ಲಿ ಒಟ್ಟು ಮೀಸಲಾತಿಯ ಪ್ರಮಾಣ ಶೇ 50ರ ಮಿತಿಯನ್ನು ಮೀರುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಇದು ಅಚ್ಚರಿಯ ಸಂಗತಿಯೇನೂ ಅಲ್ಲ. ಇಂದಿರಾ ಸಾಹ್ನಿ ಪ್ರಕರಣದಲ್ಲಿ ನೀಡಿದ ತೀರ್ಪಿನ ಮರುಪರಿಶೀಲನೆ ಇಲ್ಲ ಎಂದೂ ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿದೆ.

ಸುಪ್ರೀಂ ಕೋರ್ಟ್‌ನ ಈ ತೀರ್ಪು ದೂರಗಾಮಿ ಪರಿಣಾಮಗಳನ್ನು ಹೊಂದಿದೆ.ಮಹಾರಾಷ್ಟ್ರ ಮಾದರಿಯಲ್ಲಿ ಹಲವು ರಾಜ್ಯಗಳು ಈಗಾಗಲೇ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲು ಪ್ರಯತ್ನ ನಡೆಸಿವೆ. ಕರ್ನಾಟಕದಲ್ಲಿ ಲಿಂಗಾಯತ ಪಂಚಮಸಾಲಿ ಸಮುದಾಯದವರು ತಮ್ಮನ್ನು ಹಿಂದುಳಿದ ವರ್ಗಗಳ 2ಎ ಪ್ರವರ್ಗಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಇತ್ತೀಚೆಗೆ ಬೃಹತ್ ರ್‍ಯಾಲಿ ನಡೆಸಿದ್ದರು.

ಕರ್ನಾಟಕ ಸರ್ಕಾರವೂ ಮೀಸಲಾತಿ ಪ್ರಮಾಣವನ್ನು ಶೇ 50ಕ್ಕಿಂತ ಹೆಚ್ಚು ಮಾಡಬೇಕು ಎಂದು ಕೋರ್ಟ್‌ಗೆ ತನ್ನ ನಿಲುವು ತಿಳಿಸಿತ್ತು. ಛತ್ತೀಸಗಡ ಸರ್ಕಾರವು ಹಿಂದೆ ಸುಗ್ರೀವಾಜ್ಞೆ ಹೊರಡಿಸಿ ಒಟ್ಟು ಮೀಸಲಾತಿಯ ಪ್ರಮಾಣವನ್ನು ಶೇ 82ಕ್ಕೆ ಹೆಚ್ಚಿಸಿತ್ತು. ಆದರೆ ಅಲ್ಲಿನ ಹೈಕೋರ್ಟ್ ಅದನ್ನು ರದ್ದುಗೊಳಿಸಿತು. ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಇನ್ನಷ್ಟು ಜಾತಿ, ಸಮುದಾಯಗಳನ್ನು ಸೇರಿಸಿದರೆ ಆಯಾ ರಾಜ್ಯಗಳು ತಮ್ಮಲ್ಲಿರುವ ಒಟ್ಟು ಮೀಸಲಾತಿಯ ಪ್ರಮಾಣವನ್ನು ಹೆಚ್ಚಿಸುವುದು ಅನಿವಾರ್ಯ. ಆದರೆ, ಅತ್ಯಂತ ಅಸಾಮಾನ್ಯವಾದ ಪರಿಸ್ಥಿತಿಯಲ್ಲಿ ಮೀಸಲಾತಿಯ ಮಿತಿಯನ್ನು ಜಾಸ್ತಿ ಮಾಡಬಹುದು ಎಂದು ಇಂದಿರಾ ಸಾಹ್ನಿ ಪ್ರಕರಣದ ತೀರ್ಪಿನಲ್ಲಿ ಸ್ಪಷ್ಟಪಡಿಸಲಾಗಿದೆ. ಮರಾಠಾ ಮೀಸಲಾತಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಲ್ಲಿ ‘ಮರಾಠಾ ಸಮುದಾಯದ ಬೇಡಿಕೆಯನ್ನು ಅಸಾಮಾನ್ಯ ಸಂದರ್ಭದ ಬೇಡಿಕೆಯೆಂದು ಪರಿಗಣಿಸಲು ಸೂಕ್ತ ಕಾರಣಗಳಿಲ್ಲ’ ಎಂದು ಹೇಳಿದೆ.

ಇದೇ ಸಂದರ್ಭದಲ್ಲಿ ಸಂವಿಧಾನದ 102ನೇ ತಿದ್ದುಪಡಿಯನ್ನು ಪ್ರಶ್ನಿಸಿದ ಅರ್ಜಿಯನ್ನೂ ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಮರಾಠಾ ಮೀಸಲಾತಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್, ಇಂದಿರಾ ಸಾಹ್ನಿ ಪ್ರಕರಣದ ತೀರ್ಪನ್ನು ಮತ್ತೆ ಎತ್ತಿ ಹಿಡಿದಿದ್ದರೂ ‘ಅಸಾಮಾನ್ಯ ಸಂದರ್ಭದ ಬೇಡಿಕೆ’ ಎನ್ನುವ ವಿನಾಯಿತಿಯು ಮೀಸಲಾತಿಯ ಈ ವಿಷಯವನ್ನು ಮುಂದೆಯೂ ಚರ್ಚೆಯ ವಸ್ತುವಾಗಿ ಇರಿಸಲಿದೆ.

ಆಯಾ ರಾಜ್ಯಗಳಲ್ಲಿನ ಪ್ರಬಲ ಜಾತಿಗಳ ರಾಜಕೀಯ ಒತ್ತಡವನ್ನು ನಿಭಾಯಿಸಲು ಹಲವು ರಾಜ್ಯ ಸರ್ಕಾರಗಳು ಮೀಸಲಾತಿ ಪ್ರಮಾಣದ ಹೆಚ್ಚಳಕ್ಕೆ ಕೋರ್ಟ್ ಮೊರೆ ಹೋಗುವ ಸಾಧ್ಯತೆ ಇರುವುದರಿಂದ, ಈ ವಿಷಯವು ಮುಕ್ತ ಚರ್ಚೆಯ ಸಂಗತಿಯಾಗಿ ಮುಂದೆಯೂ ಉಳಿದುಕೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT