ಭಾನುವಾರ, ಆಗಸ್ಟ್ 1, 2021
22 °C
ಬಂಗಾರಪೇಟೆ ತಹಶೀಲ್ದಾರ್ ಕೊಲೆ ಪ್ರಕರಣ

ಕರ್ತವ್ಯನಿರತ ಅಧಿಕಾರಿಯ ಕೊಲೆ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲಿ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಬಂಗಾರಪೇಟೆ ತಾಲ್ಲೂಕಿನ ತಹಶೀಲ್ದಾರ್‌ ಬಿ.ಕೆ. ಚಂದ್ರಮೌಳೇಶ್ವರ ಅವರು ಕೊಲೆಯಾಗಿರುವುದು ಸಮಾಜದಲ್ಲಿನ ನೈತಿಕಸ್ಥೈರ್ಯವನ್ನು ಉಡುಗಿಸುವಂತಹದ್ದು. ಕರ್ತವ್ಯನಿರತರಾಗಿದ್ದ ಸಂದರ್ಭದಲ್ಲಿ ಈ ಹತ್ಯೆ ನಡೆದಿರುವುದು ಆಘಾತಕಾರಿ. ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಕಳವಂಚಿ ಗ್ರಾಮದಲ್ಲಿನ ಭೂವಿವಾದಕ್ಕೆ ಸಂಬಂಧಿಸಿದಂತೆ ಸರ್ವೆ ಕಾರ್ಯಕ್ಕೆ ಹೋಗಿದ್ದ ಅವರನ್ನು ವೆಂಕಟಾಚಲಪತಿ ಎನ್ನುವ ವ್ಯಕ್ತಿ ಚಾಕುವಿನಿಂದ ಎದೆಗೆ ಇರಿದು ಕೊಂದಿದ್ದಾರೆ ಎಂದು ವರದಿಯಾಗಿದೆ.

ಭೂವ್ಯಾಜ್ಯಗಳಿಗೆ ಸಂಬಂಧಿಸಿದಂತೆ ಬಣಗಳ ನಡುವೆ ಹೊಡೆದಾಟ, ಕೊಲೆಗಳು ನಡೆಯುವುದು ಅಪರೂಪವೇನಲ್ಲ. ಆದರೆ, ವಿವಾದಕ್ಕೆ ಸಂಬಂಧಿಸಿರದ ಸರ್ಕಾರಿ ಅಧಿಕಾರಿ ತನ್ನ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಕೊಲೆಗೀಡಾ ಗುವುದನ್ನು ಊಹಿಸಿಕೊಳ್ಳುವುದೂ ಕಷ್ಟ. ಇಂಥ ಕೃತ್ಯಗಳು ಕಾನೂನು–ಸುವ್ಯವಸ್ಥೆಯ ಬಗ್ಗೆ ಜನರಲ್ಲಿನ ನಂಬಿಕೆಗೆ ಪೆಟ್ಟು ನೀಡುತ್ತವೆ ಹಾಗೂ ನಾಗರಿಕ ಸಮಾಜದಲ್ಲಿನ ನೈತಿಕ ತಳಹದಿಯಲ್ಲಿ ಉಂಟಾಗಿರುವ ಬಿರುಕುಗಳ ಬಗ್ಗೆ ಆತಂಕ ಹುಟ್ಟಿಸುತ್ತವೆ. ಮೌಲ್ಯ ವ್ಯವಸ್ಥೆಯ ಬಗ್ಗೆ ಮಾತನಾಡುವಾಗ, ತಹಶೀಲ್ದಾರ್‌ ಅವರನ್ನು ಕೊಂದಿದ್ದಾರೆ ಎನ್ನಲಾದ ವ್ಯಕ್ತಿ ನಿವೃತ್ತ ಶಿಕ್ಷಕ ಎನ್ನುವುದನ್ನೂ ಗಮನಿಸಬೇಕು. ಕರ್ತವ್ಯ ನಿರ್ವಹಣೆಯ ಸಂಬಂಧದಲ್ಲಿ ಅಧಿಕಾರಿಗಳು ಜೀವ ಕಳೆದುಕೊಂಡಾಗ ಅದು ಕೊಲೆಯ ಪ್ರಸಂಗವೊಂದಷ್ಟೇ ಆಗಿರದೆ, ನಾಡಿನ ಕಾನೂನು– ಸುವ್ಯವಸ್ಥೆಯ ಪ್ರಶ್ನೆಯೂ ಆಗಿರುತ್ತದೆ. ಆ ಕಾರಣದಿಂದಾಗಿಯೇ ಅಧಿಕಾರಿಗಳ ಮೇಲೆ ನಡೆಯುವ ಹಲ್ಲೆಗಳನ್ನು ನಾಗರಿಕ ಸಮಾಜ ಹಾಗೂ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಅಧಿಕಾರಿಯೊಬ್ಬ ಸರ್ಕಾರದ ಪ್ರತಿನಿಧಿಯೂ ಆಗಿರುತ್ತಾನೆ ಎನ್ನುವುದನ್ನು ತಿಳಿದೂ ಕೆಲವೊಮ್ಮೆ ಅವರ ಮೇಲೆ ದಾಳಿ ನಡೆಯುವುದಿದೆ. ಮರಳು ಹಾಗೂ ಗಣಿಗಾರಿಕೆ ಮಾಫಿಯಾ ತಮ್ಮ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾದ ಅಧಿಕಾರಿಗಳ ಮೇಲೆ ದೌರ್ಜನ್ಯ ನಡೆಸಿದ ಹಾಗೂ ಅವರನ್ನು ಕೊಂದ ಉದಾಹರಣೆಗಳಿವೆ. ಪ್ರಸ್ತುತ ಪ್ರಕರಣದಲ್ಲಿ ತಹಶೀಲ್ದಾರರ ಕೊಲೆಯು ಪೊಲೀಸರ ಸಮ್ಮುಖದಲ್ಲಿಯೇ ನಡೆದಿದೆ. ತಾಲ್ಲೂಕಿನ ದಂಡಾಧಿಕಾರಿಯೂ ಆಗಿರುವ ತಹಶೀಲ್ದಾರರಿಗೇ ಪೊಲೀಸರು ಭದ್ರತೆ ಒದಗಿಸಲಾಗದಿದ್ದರೆ ಸಾಮಾನ್ಯ ಜನರ ರಕ್ಷಣೆಯ ಪಾಡೇನು ಎಂಬ ಪ್ರಶ್ನೆಯೂ ಇಲ್ಲಿ ಮೂಡುತ್ತದೆ. 

ಅಧಿಕಾರಿಗಳ ಆತ್ಮಬಲ ಕುಗ್ಗಿಸುವಂತಹ ಕೃತ್ಯಗಳು ಕರ್ನಾಟಕಕ್ಕೆ ಸೀಮಿತವೇನಲ್ಲ. ತೆಲಂಗಾಣದಲ್ಲಿ ಗಿಡ ನೆಡಲು ಗ್ರಾಮವೊಂದಕ್ಕೆ ಬಂದಿದ್ದ ಮಹಿಳಾ ಅರಣ್ಯಾಧಿಕಾರಿಯೊಬ್ಬರನ್ನು ಶಾಸಕ ಹಾಗೂ ಆತನ ಬೆಂಬಲಿಗರು ಥಳಿಸಿದ್ದ ಘಟನೆ ಕಳೆದ ವರ್ಷ ನಡೆದಿತ್ತು. ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ವಿಧಿಸಲಾಗಿದ್ದ ಲಾಕ್‌ಡೌನ್‌ ಅನುಷ್ಠಾನದ ಕರ್ತವ್ಯದಲ್ಲಿ ತೊಡಗಿದ್ದ ಪೊಲೀಸ್‌ ಅಧಿಕಾರಿಗಳ ಮೇಲೆ ಪಂಜಾಬ್‌ನಲ್ಲಿ ಹಲ್ಲೆ ನಡೆದಿತ್ತು. ಏಪ್ರಿಲ್‌ನಲ್ಲಿ ನಡೆದ ಆ ಪ್ರಕರಣದಲ್ಲಿ ಆರು ಅಧಿಕಾರಿಗಳು ಗಂಭೀರವಾಗಿ ಗಾಯಗೊಂಡಿದ್ದರು ಹಾಗೂ ಅಧಿಕಾರಿಯೊಬ್ಬರ ಕೈ ಕತ್ತರಿಸಲಾಗಿತ್ತು.

ಕರ್ನಾಟಕದಲ್ಲೂ ಕೊರೊನಾ ನಿಯಂತ್ರಣ ಕಾರ್ಯದಲ್ಲಿ ತೊಡಗಿದ್ದ ಆರೋಗ್ಯ ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿರುವ ಪ್ರಕರಣಗಳು ರಾಜ್ಯದ ಬೇರೆ ಬೇರೆ ಭಾಗಗಳಿಂದ ವರದಿಯಾಗಿವೆ. ಇಂಥ ಪ್ರಕರಣಗಳು ಅಧಿಕಾರಿವರ್ಗದ ಆತ್ಮವಿಶ್ವಾಸವನ್ನು ಉಡುಗಿಸುತ್ತವೆ. ಸಾರ್ವಜನಿಕ ವಲಯದಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ರಕ್ಷಣೆ ಇಲ್ಲದೇ ಹೋದರೆ ಅವರು ನಿಷ್ಪಕ್ಷಪಾತವಾಗಿ ಹಾಗೂ ನಿರ್ಭಯದಿಂದ ಕೆಲಸ ಮಾಡುವುದು ಸಾಧ್ಯವಾಗುವುದಿಲ್ಲ. ಕೊರೊನಾ ಸೋಂಕು ವ್ಯಾಪಕವಾಗಿರುವ ಪ್ರಸಕ್ತ ಸಂದರ್ಭದಲ್ಲಂತೂ ಮನೆಯಿಂದ ಹೊರಗೆ ಬಂದು ಕೆಲಸ ಮಾಡುವುದೇ ಸಾಹಸ ಎನ್ನುವಂತಾಗಿದೆ. ಸಂಕಷ್ಟದ ಸಮಯದಲ್ಲೂ ಕರ್ತವ್ಯದಲ್ಲಿ ತೊಡಗಿರುವವರ ಮೇಲೆ ಹಲ್ಲೆ ನಡೆಯತೊಡಗಿದರೆ ಅಧಿಕಾರಿಗಳು ಕೆಲಸ ನಿರ್ವಹಿಸುವುದಾದರೂ ಹೇಗೆ? ತಹಶೀಲ್ದಾರ್‌ ಕೊಲೆಗೆ ಸಂಬಂಧಿಸಿದಂತೆ ತಪ್ಪಿತಸ್ಥ ವ್ಯಕ್ತಿಗೆ ಕಠಿಣ ಶಿಕ್ಷೆಯಾಗುವಂತೆ ಸರ್ಕಾರ ನೋಡಿಕೊಳ್ಳಬೇಕು. ಆ ಮೂಲಕ ಅಧಿಕಾರಿಗಳ ಆತ್ಮವಿಶ್ವಾಸ ವೃದ್ಧಿಸುವ ಕೆಲಸ ನಡೆಯಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು