ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಅತಿಥಿ ಉಪನ್ಯಾಸಕರ ಮುಷ್ಕರ ನಿರ್ಲಕ್ಷ್ಯ ಸಲ್ಲ; ಪರಿಹಾರ ಅಗತ್ಯ

Published 24 ಡಿಸೆಂಬರ್ 2023, 23:57 IST
Last Updated 24 ಡಿಸೆಂಬರ್ 2023, 23:57 IST
ಅಕ್ಷರ ಗಾತ್ರ

ಸೇವಾಭದ್ರತೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಶೈಕ್ಷಣಿಕ ಬಿಕ್ಕಟ್ಟಿಗೆ ಕಾರಣವಾಗಿದೆ. ಮುಷ್ಕರ ಆರಂಭವಾಗಿ ತಿಂಗಳು ಕಳೆದಿದ್ದರೂ ಉಪನ್ಯಾಸಕರೊಂದಿಗೆ ತಾರ್ಕಿಕ ಒಪ್ಪಂದವೊಂದಕ್ಕೆ ಬರುವಲ್ಲಿ ಸರ್ಕಾರ ಯಶಸ್ವಿಯಾಗಿಲ್ಲ. ಸರ್ಕಾರಿ ಪದವಿ ಕಾಲೇಜುಗಳು ಬಹುಮಟ್ಟಿಗೆ ಅತಿಥಿ ಉಪನ್ಯಾಸಕರನ್ನೇ ಅವಲಂಬಿಸಿದ್ದು, ಅವರಲ್ಲಿ ಬಹುತೇಕರು ತರಗತಿಗಳನ್ನು ಬಹಿಷ್ಕರಿಸಿ ಹೋರಾಟದಲ್ಲಿ ತೊಡಗಿರುವುದರಿಂದಾಗಿ ಶೈಕ್ಷಣಿಕ ಚಟುವಟಿಕೆಗಳು ಸ್ಥಗಿತಗೊಂಡಿವೆ, ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪರೀಕ್ಷೆಗಳು ಸನ್ನಿಹಿತವಾಗಿರುವ ಸಂದರ್ಭದಲ್ಲಿ ತರಗತಿಗಳು ಪೂರ್ಣ ಪ್ರಮಾಣದಲ್ಲಿ ನಡೆಯದೆ ವಿದ್ಯಾರ್ಥಿಗಳು ಒತ್ತಡ ಅನುಭವಿಸಬೇಕಾಗಿದೆ. ಪದವಿ ಹಂತದಲ್ಲಿ ಪ್ರತಿಯೊಂದು ದಿನವೂ ಅಮೂಲ್ಯವಾಗಿರುವಾಗ, ತಿಂಗಳಿಗೂ ಹೆಚ್ಚು ಕಾಲ ತರಗತಿಗಳು ನಡೆಯದಿರುವುದು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಒಳ್ಳೆಯದಲ್ಲ. ವಿದ್ಯಾರ್ಥಿಗಳ ಕಲಿಕೆಗೆ ತೊಂದರೆ ಉಂಟಾಗಿರುವುದಕ್ಕೆ ಅತಿಥಿ ಉಪನ್ಯಾಸಕರನ್ನಷ್ಟೇ ಹೊಣೆ ಮಾಡುವುದರಲ್ಲಿ ಅರ್ಥವಿಲ್ಲ. ದೀರ್ಘ ಕಾಲದಿಂದ ಅವರ ಬೇಡಿಕೆಗಳು ನನೆಗುದಿಗೆ ಬಿದ್ದಿವೆ. ರಾಜ್ಯದಲ್ಲಿರುವ 430 ಸರ್ಕಾರಿ ಪದವಿ ಕಾಲೇಜುಗಳಲ್ಲಿ 10 ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದಾರೆ. ಇಂದಲ್ಲ ನಾಳೆ ಉದ್ಯೋಗ ಕಾಯಂ ಆಗಬಹುದೆನ್ನುವ ನಿರೀಕ್ಷೆಯಲ್ಲಿ 15–20 ವರ್ಷಗಳನ್ನು ಕಳೆದವರಿದ್ದಾರೆ; ಕನಿಷ್ಠ ಗೌರವಧನ ಪಡೆದು ಹತ್ತಾರು ವರ್ಷ ಕಾರ್ಯನಿರ್ವಹಿಸಿದ್ದಾರೆ. ಅವರ ನಿರೀಕ್ಷೆ ಈವರೆಗೆ ಮರೀಚಿಕೆಯಾಗಿಯೇ ಉಳಿದಿದೆ. ತಮ್ಮ ಬೇಡಿಕೆಗಳನ್ನು ಮುಂದಿಟ್ಟು ಆಗಾಗ ಧರಣಿ, ಮುಷ್ಕರ ನಡೆಸಿದ್ದರಿಂದ ಸಣ್ಣಪುಟ್ಟ ಬೇಡಿಕೆಗಳು ಈಡೇರಿರುವುದು ಬಿಟ್ಟರೆ ಅತಿಥಿ ಉಪನ್ಯಾಸಕರ ಜೀವನ ಅತಂತ್ರವಾಗಿಯೇ ಮುಂದುವರಿದಿದೆ. ಅಧಿಕಾರಕ್ಕೆ ಬಂದರೆ ಅತಿಥಿ ಉಪನ್ಯಾಸಕರಿಗೆ ಸೇವಾಭದ್ರತೆ ಒದಗಿಸುವುದಾಗಿ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ಪಕ್ಷ
ಭರವಸೆ ನೀಡಿತ್ತು. ಆ ಭರವಸೆಯನ್ನು ಈಡೇರಿಸಿ ಎಂದು ಅತಿಥಿ ಉಪನ್ಯಾಸಕರು ಈಗ ಒತ್ತಾಯಿಸುತ್ತಿರುವುದು ನ್ಯಾಯೋಚಿತವಾಗಿಯೇ ಇದೆ. 

ಉಪನ್ಯಾಸಕ ವೃತ್ತಿ ಕಾಯಂ ಆಗುವುದೆನ್ನುವ ನಂಬಿಕೆಯಿಂದ ಪರ್ಯಾಯ ಉದ್ಯೋಗ ಮಾರ್ಗಗಳನ್ನು ಹುಡುಕಿಕೊಳ್ಳುವ ಗೋಜಿಗೆ ಹೋಗದ ಹಲವರ ಬದುಕು ಅತಂತ್ರ ಸ್ಥಿತಿಯಲ್ಲಿದೆ. ಹಲವು ಅಭ್ಯರ್ಥಿಗಳ ವಯೋಮಿತಿ ಮೀರಿದೆ. ವಯೋಮಿತಿಯನ್ನು ವಿಸ್ತರಿಸಿ ಉದ್ಯೋಗ ಕಾಯಂ ಮಾಡುವಂತೆ ಮುಷ್ಕರನಿರತರು ಆಗ್ರಹಿಸುತ್ತಿದ್ದಾರೆ. ರಾಜ್ಯದ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳ ಬೋಧಕರಲ್ಲಿ ಶೇಕಡ 70ರಷ್ಟು ಅತಿಥಿ ಉಪನ್ಯಾಸಕರೇ ಇದ್ದಾರೆ. ಕಡಿಮೆ ಸಂಭಾವನೆ ಪಡೆದು ಒತ್ತಡದಲ್ಲಿ ಕಾರ್ಯನಿರ್ವಹಿಸುವ ಅನಿವಾರ್ಯ ಅವರದಾಗಿದೆ. ಉದ್ಯೋಗ ಭದ್ರತೆಯಿಲ್ಲದ ಪರಿಸ್ಥಿತಿಯಲ್ಲಿಯೇ ಅವರು ಕಾರ್ಯನಿರ್ವಹಿಸಬೇಕಾಗಿದೆ. ಪಿಎಚ್‌.ಡಿ. ಸೇರಿದಂತೆ ಸಮರ್ಪಕ ವಿದ್ಯಾರ್ಹತೆಯನ್ನು ಒಳಗೊಂಡಿದ್ದರೂ ದೀರ್ಘ ಕಾಲದ ಬೋಧನೆಯ ಅನುಭವ ಹೊಂದಿದ್ದರೂ ಅತಿಥಿ ಉಪನ್ಯಾಸಕರಿಗೆ ಸೇವಾಭದ್ರತೆ ಒದಗಿಸುವ ದಿಸೆಯಲ್ಲಿ ಸರ್ಕಾರದ ಕಡೆಯಿಂದ ಪ್ರಾಮಾಣಿಕ ಪ್ರಯತ್ನ ಆಗಿಲ್ಲ. ಪದವಿ ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಕಾಯಂ ಬೋಧಕರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆ ಆಗುತ್ತಲೇ ಇದೆ. ಖಾಲಿಯಾದ ಹುದ್ದೆಗಳನ್ನು ಭರ್ತಿ ಮಾಡುವುದಕ್ಕೆ ಸರ್ಕಾರ ಮುಂದಾಗಿಲ್ಲ. ಅತಿಥಿ ಉಪನ್ಯಾಸಕರ ನೆರವಿನಿಂದಲೇ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪೂರೈಸಬೇಕಾದ ಸ್ಥಿತಿಯಿದೆ. ಹೊಸ ಹೊಸ ಕಾಲೇಜು ಮತ್ತು ಜಿಲ್ಲೆಗೊಂದು ವಿಶ್ವವಿದ್ಯಾಲಯವನ್ನು ಸ್ಥಾಪಿಸುವಲ್ಲಿ ತೋರಿಸುವ ಉತ್ಸಾಹವನ್ನು ಉಪನ್ಯಾಸಕರ ನೇಮಕದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸರ್ಕಾರ ತೋರಿಲ್ಲ. ಇದರಿಂದಾಗಿ ಉನ್ನತ ಶಿಕ್ಷಣದ ಗುಣಮಟ್ಟ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವ ಬಗ್ಗೆ ಸರ್ಕಾರ ಇನ್ನಾದರೂ ತನ್ನ ನಿರ್ಲಕ್ಷ್ಯ ಧೋರಣೆಯಿಂದ ಹೊರಬರಬೇಕು. ಸೇವಾಭದ್ರತೆಯಿಲ್ಲದ ಸ್ಥಿತಿಯಲ್ಲಿ ಉಪನ್ಯಾಸಕರಿಂದ ಪರಿಣಾಮಕಾರಿ ಬೋಧನೆ ಸಾಧ್ಯವಿಲ್ಲ ಹಾಗೂ ಅದರ ಪರಿಣಾಮ ವಿದ್ಯಾರ್ಥಿಗಳ ಮೇಲೂ ಆಗುತ್ತದೆ ಎನ್ನುವುದನ್ನು ಸರ್ಕಾರ ಗಮನದಲ್ಲಿಟ್ಟುಕೊಳ್ಳಬೇಕು. ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸುವ ಸಾಧ್ಯತೆಗಳನ್ನು ಸಹಾನುಭೂತಿಯಿಂದ ಪರಿಶೀಲಿಸಬೇಕು. ವಿದ್ಯಾರ್ಥಿಗಳ ಹಿತರಕ್ಷಣೆಯನ್ನು ನಿರ್ಲಕ್ಷಿಸದೆ, ಆದ್ಯತೆಯ ವಿಷಯವಾಗಿ ಇದನ್ನು ಸರ್ಕಾರ ಪರಿಗಣಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT