ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಐಸಿಎಚ್‌ಆರ್ ಪೋಸ್ಟರ್ ವಿವಾದ; ನೆಹರೂ ಭಾವಚಿತ್ರ ಬಿಟ್ಟಿದ್ದು ಅಕ್ಷಮ್ಯ

Last Updated 6 ಸೆಪ್ಟೆಂಬರ್ 2021, 3:43 IST
ಅಕ್ಷರ ಗಾತ್ರ

ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಸಂಬಂಧಿಸಿದಂತೆಭಾರತೀಯ ಇತಿಹಾಸ ಸಂಶೋಧನಾ ಮಂಡಳಿಯು (ಐಸಿಎಚ್‌ಆರ್‌) ಸಿದ್ಧಪಡಿಸಿದ ಪೋಸ್ಟರ್‌ನಲ್ಲಿ ಜವಾಹರಲಾಲ್ ನೆಹರೂ ಅವರ ಭಾವ ಚಿತ್ರ ಇಲ್ಲದಿರುವುದು ಆ ಸಂಸ್ಥೆಯ ಸಣ್ಣತನವನ್ನು, ಬೇಜವಾಬ್ದಾರಿತನವನ್ನು ತೋರಿಸಿದೆ. ಸಂಸ್ಥೆಯು ಆಡಳಿತ ನಡೆಸುತ್ತಿರುವವರ ಅಡಿಯಾಳಿನಂತೆ ವರ್ತಿಸುತ್ತಿರುವುದನ್ನು ಕೂಡ ಇದು ತೋರಿಸುತ್ತಿದೆ.

ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಈ ಭಿತ್ತಿಪತ್ರವನ್ನು ಪ್ರಕಟಿಸಲಾಗಿದೆ. ಇತಿಹಾಸದ ಕುರಿತ ಸಂಶೋಧನೆಗೆ ಮುಡಿ ಪಾಗಿರುವ ಸಂಸ್ಥೆಯೊಂದಕ್ಕೆ ಶೋಭೆ ತರುವ ನಡೆ ಇದಲ್ಲ. ಸ್ವಾತಂತ್ರ್ಯವನ್ನು ಸಂಭ್ರಮಿಸುವ ಉದ್ದೇಶದಿಂದ ಈ ಭಿತ್ತಿಪತ್ರ ರೂಪಿಸಲಾಗಿದೆ. ದೇಶದ ಸ್ವಾತಂತ್ರ್ಯ ಹೋರಾಟಗಾರರ ಪೈಕಿ ಪ್ರಮುಖರನ್ನು ಗೌರವಿಸುವ ಉದ್ದೇಶ ಕೂಡ ಇದಕ್ಕೆ ಇದೆ. ಈ ಭಿತ್ತಿಪತ್ರದಲ್ಲಿ ಎಂಟು ಜನ ನಾಯಕರ ಚಿತ್ರಗಳು ಇವೆ. ಮಹಾತ್ಮ ಗಾಂಧಿ, ರಾಜೇಂದ್ರ ಪ್ರಸಾದ್, ಡಾ.ಬಿ.ಆರ್. ಅಂಬೇಡ್ಕರ್, ಸರ್ದಾರ್ ವಲ್ಲಭಭಾಯ್ ಪಟೇಲ್, ಸುಭಾಷ್‌ ಚಂದ್ರ ಬೋಸ್, ಭಗತ್‌ ಸಿಂಗ್, ಮದನ್‌ ಮೋಹನ್‌ ಮಾಳವೀಯ, ವಿ.ಡಿ.ಸಾವರ್ಕರ್ ಭಾವಚಿತ್ರಗಳು ಇದರಲ್ಲಿ ಇವೆ. ಆದರೆ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ನಿಭಾಯಿಸಿದ್ದ, ದೇಶದ ಮೊದಲ ಪ್ರಧಾನಿ ಆಗಿದ್ದ ನೆಹರೂ ಅವರ ಚಿತ್ರ ಇಲ್ಲ. ಕೈಬಿಟ್ಟಿರುವುದು ನೆಹರೂ ಅವರ ಚಿತ್ರವನ್ನು ಮಾತ್ರವೇ ಅಲ್ಲ. ನಾಯಕರ ಸಾಲಿನಲ್ಲಿ ಮುಸ್ಲಿಂ ಸಮುದಾಯದವರ ಚಿತ್ರ ಇಲ್ಲ. ದಕ್ಷಿಣ ಭಾರತದ ಯಾವೊಬ್ಬ ನಾಯಕನ ಚಿತ್ರವೂ ಇದರಲ್ಲಿ ಇಲ್ಲ; ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದ ಯಾವ ಮಹಿಳೆಯ ಚಿತ್ರವೂ ಇಲ್ಲ. ಭಾರತವು ಬಹು ಜನರ ನಾಡು. ಬಹುತ್ವವೇ ಇಲ್ಲಿನ ಶಕ್ತಿ. ಇಂದಿನ ಆಳುವ ವರ್ಗವು ಭಾರತವನ್ನು ಏಕರೂಪಿ ರಾಷ್ಟ್ರ
ವನ್ನಾಗಿ ಚಿತ್ರಿಸಲು ಎಷ್ಟೇ ಪ್ರಯತ್ನಿಸಿದರೂ, ಇಲ್ಲಿನ ಬಹುತ್ವ ಹಾಗೂ ಬಹುತ್ವದಲ್ಲಿ ಇರುವ ಶಕ್ತಿಯನ್ನು ನಿರಾಕರಿಸಲು ಸಾಧ್ಯವಿಲ್ಲ. ಹಾಗಾಗಿ, ಎಲ್ಲರೂ ಸೇರಿ ನಡೆಸಿದ ಹೋರಾಟದ ಫಲವಾಗಿ ಸಿಕ್ಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಪೋಸ್ಟರ್‌ ರೂಪಿಸುವಾಗ ಬಹುತ್ವದ ಬಗ್ಗೆಯೂ ಆಲೋಚಿಸಬೇಕಿತ್ತು.

ಭಾರತದ ಸ್ವಾತಂತ್ರ್ಯ ಹೋರಾಟವನ್ನು ಸಹಸ್ರಾರು ತೊರೆಗಳನ್ನು ತನ್ನ ಒಡಲೊಳಕ್ಕೆ ಸೇರಿಸಿಕೊಂಡು ಹರಿಯುವ ಗಂಗೆಗೆ ಹೋಲಿಸಿದ್ದಾರೆಕವಿ ಮನಸ್ಸಿನ ವ್ಯಕ್ತಿಗಳು. ಇಡೀ ಸ್ವಾತಂತ್ರ್ಯ ಹೋರಾಟವು ಒಂದು ಮಹಾಕಾವ್ಯಕ್ಕೆ ಸಮ ಎಂದು ಕರೆದಿದ್ದೂ ಇದೆ. ದೇಶದ ಸ್ವಾತಂತ್ರ್ಯ ಹೋರಾಟವು ಬೇರೆ ಯಾವುದಕ್ಕೂ ಹೋಲಿಸಲು ಸಾಧ್ಯವಿಲ್ಲದ ಮಹಾಕಾವ್ಯ ಎನ್ನುವುದಾದರೆ, ಆ ಕಾವ್ಯದಲ್ಲಿ ನೆಹರೂ ಒಬ್ಬ ಪ್ರಮುಖ ಪಾತ್ರಧಾರಿ ಎಂಬುದನ್ನು ಮರೆಯುವಂತಿಲ್ಲ. ನೆಹರೂ ಅವರ ರಾಜಕೀಯ ತೀರ್ಮಾನಗಳ ಬಗ್ಗೆ ಇಂದು ಹಲವು ದೃಷ್ಟಿಕೋನ ಗಳಿಂದ, ಹಲವು ಸೈದ್ಧಾಂತಿಕ ನೆಲೆಗಳಿಂದ ಚರ್ಚೆ ಗಳು ನಡೆದಿರಬಹುದು. ಆದರೆ, ವಸ್ತುನಿಷ್ಠ ಚರ್ಚೆಯು ಅವರು ಸ್ವಾತಂತ್ರ್ಯ ಹೋರಾಟಕ್ಕೆ ನೀಡಿದ ಕೊಡುಗೆಯನ್ನು ನಿರಾಕರಿಸುವುದಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ನೆಹರೂ ಅವರು ಸರಿಸುಮಾರು 10 ವರ್ಷ ಜೈಲುವಾಸ ಅನುಭವಿಸಿದರು. ಎಲ್ಲ ವರ್ಗಗಳಿಗೆ ಸೇರಿದ ಜನರ ಪ್ರೀತಿಯನ್ನು ಸಂಪಾದಿಸಿದವರು. ದೇಶದ ಇತಿಹಾಸವನ್ನು ಗಮನದಲ್ಲಿ ಇರಿಸಿಕೊಂಡು, ಭವಿಷ್ಯದಲ್ಲಿ ಏನು ಮಾಡಬೇಕು ಎಂಬ ಆಲೋಚನೆಗಳು ನೆಹರೂ ಅವರಲ್ಲಿದ್ದವು. ದೇಶದ ಸಮಕಾಲೀನ ಸ್ಥಿತಿ ಹಾಗೂ ಭವಿಷ್ಯದ ಆಕಾಂಕ್ಷೆಗಳ ಬಗ್ಗೆ ಅವರಲ್ಲಿ ಅರಿವು ಇತ್ತು. ಸ್ವಾತಂತ್ರ್ಯ ದೊರೆತ ಹೊಸದರಲ್ಲಿ ದೇಶದ ನೀತಿಗಳನ್ನು ರೂಪಿಸಿದ್ದು ನೆಹರೂ ಅವರಲ್ಲಿದ್ದ ಆಲೋಚನೆಗಳು. ನೆಹರೂ ಅವರ ಆಲೋಚನೆಗಳ ಬಗ್ಗೆ, ಅವರು ಪ್ರತಿಪಾದಿಸಿದ್ದ ಸಿದ್ಧಾಂತಗಳ ಬಗ್ಗೆ ಬಿಜೆಪಿಯ ಹಲವು ನಾಯಕರಿಗೆ ಆಕ್ಷೇಪಗಳು ಇವೆ ಎಂಬುದು ನಿಜ. ಅದನ್ನು ಅವರು ಸಾರ್ವಜನಿಕವಾಗಿಯೇ ಹೇಳಿಕೊಂಡಿದ್ದೂ ಇದೆ. ಹೀಗಾಗಿಯೇ, ನೆಹರೂ ಹೆಸರನ್ನು ಇತಿಹಾಸದಿಂದ ಅಳಿಸಿಹಾಕುವ ಯತ್ನ ನಡೆದಿದೆ, ಜನರ ಸ್ಮೃತಿಪಟಲದಲ್ಲಿ ಅವರ ಬಗ್ಗೆ ನಕಾರಾತ್ಮಕ ಚಿತ್ರಣ ನೀಡುವ ಯತ್ನವೂ ಆಗಿದೆ.

ಇತಿಹಾಸವು ರಾಜಕೀಯದ ಅಡಿಯಾಳು ಆಗಬಾರದು. ಇತಿಹಾಸದ ಅಧ್ಯಯನಕ್ಕೆ ಇರುವ ವೃತ್ತಿ ಪರ ವೇದಿಕೆಯಾಗಿರುವ ಐಸಿಎಚ್‌ಆರ್‌, ಸರ್ಕಾರದ ಅಥವಾ ಆಡಳಿತಾರೂಢ ಪಕ್ಷದ ತಾಳಕ್ಕೆ ಹೆಜ್ಜೆ ಹಾಕಬೇಕಾಗಿಲ್ಲ. ಸರ್ಕಾರದ ಇಷ್ಟಗಳಿಗೆ ಅನುಗುಣವಾಗಿ ಇತಿಹಾಸದ ಘಟನೆಗಳನ್ನು ಚಿತ್ರಿಸುವ, ಐತಿ ಹಾಸಿಕ ವ್ಯಕ್ತಿಗಳ ಸಾಧನೆಗಳನ್ನು ಮರೆಮಾಚುವ ಕೆಲಸವನ್ನೂ ಅದು ಮಾಡಬೇಕಾಗಿಲ್ಲ. ಮುಂದಿನ ದಿನಗಳಲ್ಲಿ ಇನ್ನಷ್ಟು ಭಿತ್ತಿಪತ್ರಗಳನ್ನು ಪ್ರಕಟಿಸಬೇಕಿದೆ, ಅವುಗಳಲ್ಲಿ ನೆಹರೂ ಅವರ ಚಿತ್ರ ಇರುತ್ತದೆ ಎಂದು ಸಂಸ್ಥೆಯು ಹೇಳಿದೆ. ಆದರೆ ಅಮೃತ ಮಹೋತ್ಸವಕ್ಕೆ ಸಂಬಂಧಿಸಿದಂತೆ ಮೊದಲು ಬಿಡುಗಡೆ ಮಾಡಿದ ಭಿತ್ತಿಪತ್ರದಲ್ಲಿ ನೆಹರೂ ಅವರ ಚಿತ್ರ ಕೈಬಿಡುವ ಮೂಲಕ ಸಂಸ್ಥೆಯು ತಪ್ಪು ಸಂದೇಶವನ್ನು ರವಾನಿಸಿ ಆಗಿದೆ.

ಆಡಳಿತಾರೂಢ ಪಕ್ಷದ ರಾಜಕೀಯಕ್ಕೆ ಯಾರ ಹೆಸರು ಎಷ್ಟರಮಟ್ಟಿಗೆ ಸಹಕಾರಿ ಆಗಬಲ್ಲದು ಎಂಬುದನ್ನು ಆಧರಿಸಿ ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆಗಳನ್ನು ಅಳೆಯಲಾಗುತ್ತದೆ ಎಂಬ ಸಂದೇಶ ಅದು. ಈ ರೀತಿ ಆಗಿರುವುದು ತೀರಾ ದುರದೃಷ್ಟಕರ. ಹಲವು ಸೈದ್ಧಾಂತಿಕ ಹಿನ್ನೆಲೆಗಳನ್ನು ಹೊಂದಿದ್ದ ನಾಯಕರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ್ದಾರೆ. ಅವರ ಸಂಪ್ರದಾಯ, ಆಚರಣೆ, ಸಂಸ್ಕೃತಿ ಬೇರೆ ಬೇರೆ ಆಗಿದ್ದವು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ದೇಶದ
ಸ್ವಾತಂತ್ರ್ಯವನ್ನು ಸಂಭ್ರಮಿಸುವುದು ಅಂದರೆ ಅವರೆಲ್ಲರನ್ನೂ ಗೌರವಿಸುವ ಕೆಲಸ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT