ಬುಧವಾರ, ಆಗಸ್ಟ್ 10, 2022
25 °C

ಸಂಪಾದಕೀಯ: ಐಪಿಎಲ್ ಅಂಗಳದಲ್ಲಿ ಮೂಡಿದ ಹೊಸ ಹೆಜ್ಜೆ ಗುರುತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಹದಿನೈದನೇ ಆವೃತ್ತಿಯ ಮುಕ್ತಾಯದೊಂದಿಗೆ ಕ್ರಿಕೆಟ್ ರಂಗದಲ್ಲಿ ಹೊಸದೊಂದು ಪರ್ವ ಆರಂಭವಾಯಿತು. 63 ದಿನಗಳು ನಡೆದ ಸುದೀರ್ಘ ಟೂರ್ನಿಯಲ್ಲಿ ಈ ಸಲವೇ ಪದಾರ್ಪಣೆ ಮಾಡಿದ ಗುಜರಾತ್ ಟೈಟನ್ಸ್‌ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿತು. ಈ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಕೆಲವು ತಿಂಗಳುಗಳ ಹಿಂದಷ್ಟೇ ಅಂತರ ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರಿ ಹಿನ್ನಡೆ ಅನುಭವಿಸಿದ್ದರು. ಗಾಯದ ಸಮಸ್ಯೆಯಿಂದ ಪದೇ ಪದೇ ಬಳಲಿದ್ದರು. ಇದೀಗ ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿ ದ್ದಾರೆ. ಇವಲ್ಲದೆ ಇನ್ನೂ ಕೆಲವು ಕಾರಣಗಳಿಂದ ಈ ಟೂರ್ನಿಯು ಗಮನ ಸೆಳೆದಿದೆ. 2008ರಲ್ಲಿ ಐಪಿಎಲ್ ಆರಂಭವಾದಾಗ ಎಂಟು ತಂಡಗಳು ಕಣದಲ್ಲಿ ಇದ್ದವು. ಆದರೆ ಇದೇ ಮೊದಲ ಸಲ ಹತ್ತು ತಂಡಗಳು ಆಡಿದವು. ಗುಜರಾತ್ ಟೈಟನ್ಸ್ ಮತ್ತು ಲಖನೌ ಸೂಪರ್‌ ಜೈಂಟ್ಸ್‌ ತಂಡ ಈ ಬಾರಿ ಹೊಸದಾಗಿ ಸೇರಿದವು. ಕನ್ನಡಿಗ ಕೆ.ಎಲ್. ರಾಹುಲ್ ನಾಯಕತ್ವದ ಲಖನೌ ತಂಡವು ಪ್ಲೇ ಆಫ್‌ ಪ್ರವೇಶಿಸಿದ್ದು ಗಮನಾರ್ಹ ಸಾಧನೆ. ಕೋವಿಡ್‌ನಿಂದಾಗಿ ಟೂರ್ನಿಯನ್ನು ಎರಡು ವರ್ಷ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಆಯೋಜಿಸಲಾಗಿತ್ತು. ಈ ಬಾರಿ ಭಾರತದಲ್ಲಿಯೇ ನಡೆಸಲಾಯಿತು. ಲೀಗ್ ಹಂತದ 70 ಪಂದ್ಯಗಳು ಮುಂಬೈನ ವಾಂಖೆಡೆ, ಬ್ರೆಬೊರ್ನ್, ಡಿ.ವೈ. ಪಾಟೀಲ ಕ್ರೀಡಾಂಗಣ ಮತ್ತು ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ನಡೆದವು. ಮೊದಲ ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಪಂದ್ಯಗಳು ಕೋಲ್ಕತ್ತದಲ್ಲಿ ಆಯೋಜನೆಗೊಂಡವು. ಎರಡನೇ ಕ್ವಾಲಿಫೈಯರ್ ಹಾಗೂ ಫೈನಲ್ ಪಂದ್ಯ ಅಹಮದಾಬಾದಿನ ನರೇಂದ್ರ ಮೋದಿ ಕ್ರೀಡಾಂಗಣ ದಲ್ಲಿ ನಡೆದವು. ಈ ಎರಡೂ ಪಂದ್ಯಗಳಿಗೆ ಒಂದು ಲಕ್ಷಕ್ಕಿಂತಲೂ ಹೆಚ್ಚು ಪ್ರೇಕ್ಷಕರು ಸೇರಿದ್ದರು. ಕೋವಿಡ್ ನಾಲ್ಕನೇ ಅಲೆಯ ಭೀತಿಯಿಂದಾಗಿ ಟೂರ್ನಿಯ ಆರಂಭಿಕ ಪಂದ್ಯಗಳಿಗೆ ಕ್ರೀಡಾಂಗಣ ಸಾಮರ್ಥ್ಯದ ಶೇ 50ರಷ್ಟು ಮಂದಿಗೆ ಅವಕಾಶ ನೀಡಲಾಗಿತ್ತು. ಆಟಗಾರರು ಮತ್ತು ಸಿಬ್ಬಂದಿಗೆ ಬಯೋಬಬಲ್ (ಜೀವಸುರಕ್ಷಾ) ವ್ಯವಸ್ಥೆಯನ್ನು ಮುಂದುವರಿಸಲಾ
ಗಿತ್ತು. ಐಪಿಎಲ್ ಯಶಸ್ಸಿನಿಂದ ಹುರುಪುಗೊಂಡಿರುವ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಮುಂದಿನ ತಿಂಗಳು ತನ್ನ ಆತಿಥ್ಯದಲ್ಲಿ ನಡೆಸಲಿರುವ ದಕ್ಷಿಣ ಆಫ್ರಿಕಾ ಎದುರಿನ ಸರಣಿಗೆ ಬಯೋಬಬಲ್ ಜಾರಿಗೊಳಿಸದಿರಲು ತೀರ್ಮಾನಿಸಿದೆ. ಇದು ಸಕಾರಾತ್ಮಕ ಸುದ್ದಿಯೇ ಸರಿ.

ಟೂರ್ನಿಯ ಕೆಲವು ಪಂದ್ಯಗಳು ನೀರಸವೆನಿಸಿದ್ದು ಸುಳ್ಳಲ್ಲ. ಇದರಿಂದಾಗಿ ಟೂರ್ನಿಯ ಆಯೋಜನೆ ಮಾದರಿಯಲ್ಲಿ ಮಾರ್ಪಾಟುಗಳನ್ನು ಮಾಡಿ, ಪಂದ್ಯದ ದಿನಗಳನ್ನು ಕಡಿಮೆ ಮಾಡುವುದು ಸೂಕ್ತ. ಈ ಸಲ ಕೆಲವು ಅಚ್ಚರಿಗಳೂ ದಾಖಲಾದವು. ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್‌ ತಂಡವು ಸತತ ಎಂಟು ಪಂದ್ಯಗಳನ್ನು ಸೋತಿತು. ಭಾರತ ತಂಡದ ನಾಯಕರೂ ಆಗಿರುವ ರೋಹಿತ್ ಶರ್ಮಾ ನೇತೃತ್ವದ ಮುಂಬೈ ತಂಡವು ಪ್ಲೇ ಆಫ್‌ಗೂ ಪ್ರವೇಶಿಸಲಿಲ್ಲ. ‘ಹಿಟ್‌ಮ್ಯಾನ್’ ಖ್ಯಾತಿಯ ಶರ್ಮಾ ವೈಫಲ್ಯ ಅನುಭವಿಸಿದರು. ಹೋದ ಸಲದ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್‌ ಕೂಡ ಲೀಗ್ ಹಂತದಲ್ಲಿಯೇ ನಿರಾಶೆ ಅನುಭವಿಸಿತು. ಟೂರ್ನಿಯ ಆರಂಭದಲ್ಲಿ ಮಹೇಂದ್ರ ಸಿಂಗ್ ಧೋನಿ ಅವರು ನಾಯಕತ್ವವನ್ನು ರವೀಂದ್ರ ಜಡೇಜ ಅವರಿಗೆ ಹಸ್ತಾಂತರಿಸಿದ್ದರು. ಆದರೆ, ತಂಡವು ಸತತ ಸೋಲಿನ ಹಾದಿ ಹಿಡಿದ ಪರಿಣಾಮ, ಎಂಟು ಪಂದ್ಯಗಳ ನಂತರ ಧೋನಿ ಮರಳಿ ನಾಯಕತ್ವ ವಹಿಸಿಕೊಂಡರು. ಗಾಯದ ಕಾರಣ ಹೇಳಿ ಟೂರ್ನಿಯಿಂದ ಜಡೇಜ ಹೊರನಡೆದಿದ್ದು ಚರ್ಚೆಗೂ ಕಾರಣವಾಗಿತ್ತು. ಜನಪ್ರಿಯ ತಂಡವಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎರಡನೇ ಕ್ವಾಲಿಫೈಯರ್‌ನಲ್ಲಿ ಸೋತು ಹೊರಬಿತ್ತು. ಫಫ್ ಡುಪ್ಲೆಸಿ ನಾಯಕತ್ವದಲ್ಲಿ ಆಡಿದ ಈ ತಂಡದಲ್ಲಿ ಸ್ಥಾನ ಪಡೆದ ದಿನೇಶ್ ಕಾರ್ತಿಕ್ ಮಿಂಚಿದರು. ಆದರೆ ‘ರನ್‌ ಯಂತ್ರ’ ಖ್ಯಾತಿಯ ವಿರಾಟ್ ಕೊಹ್ಲಿ ವೈಫಲ್ಯ ಅನುಭವಿಸಿದರು. ಈ ಟೂರ್ನಿಯಲ್ಲಿ ಅಂಪೈರ್‌ಗಳ ಕೆಲವು ಅನುಮಾನಾಸ್ಪದ ತೀರ್ಪುಗಳೂ ಸದ್ದು ಮಾಡಿದವು. ಲೀಗ್ ಹಂತದಲ್ಲಿ ರಾಜಸ್ಥಾನ್ ರಾಯಲ್ಸ್ ಎದುರಿನ ಪಂದ್ಯದಲ್ಲಿ ನೋಬಾಲ್ ತೀರ್ಪು ನೀಡದ ಅಂಪೈರ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ ನಾಯಕ ರಿಷಭ್ ಪಂತ್ ಪ್ರತಿಭಟಿಸಿ ದ್ದರು. ಇದಲ್ಲದೆ ನಿಗದಿತ ಸಮಯದಲ್ಲಿ ಓವರ್‌ಗಳನ್ನು ಪೂರ್ಣಗೊಳಿಸದಿರುವುದು, ಅಶಿಸ್ತಿನ ನಡವಳಿಕೆ ಮತ್ತು ನಿಯಮ ಉಲ್ಲಂಘನೆ ಪ್ರಕರಣಗಳೂ ವರದಿಯಾದವು. ಇವು ಕ್ರೀಡಾಸ್ಫೂರ್ತಿಯ ದೃಷ್ಟಿಯಿಂದ ಒಳ್ಳೆಯದಲ್ಲ. ಬಹುಕೋಟಿ ಆದಾಯದ ವೈಭವೋಪೇತ ಟೂರ್ನಿಯು ಯುವಸಮೂಹಕ್ಕೆ ಆದರ್ಶದ ವೇದಿಕೆಯಾಗಬೇಕು. ಈ ಟೂರ್ನಿಯ ಮೂಲಕ ವೇಗದ ಬೌಲರ್ ಉಮ್ರಾನ್ ಮಲಿಕ್, ಆಯುಷ್ ಬದೋನಿ, ಸ್ಪಿನ್ನರ್ ರವಿ ಬಿಷ್ಣೋಯಿ ಮತ್ತು ರಜತ್ ಪಾಟೀದಾರ್ ಅವರಂತಹ ಯುವಪ್ರತಿಭೆಗಳು ಗಮನ ಸೆಳೆದಿದ್ದಾರೆ. ಇನ್ನು ಮೈದಾನದ ಹೊರಗೆ ಬಹಳಷ್ಟು ಬೆಟ್ಟಿಂಗ್ ಪ್ರಕರಣಗಳು ವರದಿಯಾಗಿರುವುದು ಕಳವಳಕಾರಿ. ಇದಕ್ಕೆ ತಡೆಯೊಡ್ಡಲು ಸರ್ಕಾರ ಇನ್ನೂ ಕಠಿಣ ನಿಯಮಗಳನ್ನು ರೂಪಿಸಲು ಮುಂದಾಗಬೇಕಿದೆ. ಈ ಕೆಲಸಕ್ಕೆ ಬಿಸಿಸಿಐ ಕೂಡ ಕೈಜೋಡಿಸಬೇಕು. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು