ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಹೊಸ ವರ್ಷದ ಸಂಭ್ರಮಾಚರಣೆ ಮೈಮರೆವು ಸಲ್ಲ, ಎಚ್ಚರಿಕೆ ಅಗತ್ಯ

Last Updated 29 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ಹೊಸ ಉತ್ಸಾಹ ಹಾಗೂ ನಿರೀಕ್ಷೆಗಳನ್ನು ಮೂಡಿಸುವ ಹೊಸ ವರ್ಷವನ್ನು ಜನರು ಸಂಭ್ರಮದಿಂದ ಸ್ವಾಗತಿಸುವುದು ಪ್ರತೀ ಡಿಸೆಂಬರ್‌ 31ರ ಮಧ್ಯರಾತ್ರಿ ಕಾಣಿಸುವ ವಿದ್ಯಮಾನ. ಈ ಬಾರಿ ಇಂಥ ಸಾರ್ವಜನಿಕ ಸಂಭ್ರಮಕ್ಕೆ ಸ್ವಯಂ ನಿಯಂತ್ರಣ ಹಾಕಿಕೊಳ್ಳಬೇಕಾಗಿದೆ.

ಕೊರೊನಾ ಸೋಂಕು ಹರಡುವಿಕೆಗೆ ಕಡಿವಾಣ ಹಾಕುವ ಉದ್ದೇಶದಿಂದ, ಹೊಸ ವರ್ಷದ ಸಂಭ್ರಮಾಚರಣೆಗೆ ಸರ್ಕಾರವೂ ಕೆಲವು ನಿರ್ಬಂಧಗಳನ್ನು ವಿಧಿಸಿದೆ. ಸಂಭ್ರಮಾಚರಣೆಗೆ ಸಂಬಂಧಿಸಿದಂತೆ ಸರ್ಕಾರ ರೂಪಿಸಿರುವ ಮಾರ್ಗಸೂಚಿ ನಿಯಮಗಳನ್ನು ಸಾರ್ವಜನಿಕರು ಕಟ್ಟುನಿಟ್ಟಾಗಿ ಅನುಸರಿಸುವುದು ಕಾನೂನುಪಾಲನೆಯಷ್ಟೇ ಅಲ್ಲ, ಸಾಮಾಜಿಕ ಬದ್ಧತೆಯ ದ್ಯೋತಕವೂ ಹೌದು.

ಕೊರೊನಾ ಸೋಂಕು ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಾರದಿರುವುದರಿಂದಾಗಿ, ಹೆಚ್ಚು ಜನ ಸೇರುವ ಅವಕಾಶಗಳನ್ನು ಸರ್ಕಾರ ನಿರಾಕರಿಸುತ್ತಿರುವುದು ಸರಿಯಾಗಿಯೇ ಇದೆ. ಗಣೇಶ ಚತುರ್ಥಿ, ದಸರಾ, ದೀಪಾವಳಿ ಸೇರಿದಂತೆ ವಿವಿಧ ಹಬ್ಬಗಳ ಆಚರಣೆ ಸಂದರ್ಭದಲ್ಲೂ ಹೆಚ್ಚು ಜನಸಂದಣಿಯಾಗದಂತೆ ಸರ್ಕಾರ ಕ್ರಮ ಕೈಗೊಂಡಿತ್ತು. ಪ್ರಸ್ತುತ, ಡಿಸೆಂಬರ್‌ 31ರ ಸಂಜೆ 6ರಿಂದ ಜನವರಿ 1ರ ಬೆಳಿಗ್ಗೆ 6ರವರೆಗೆ ಬೆಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ರಸ್ತೆ, ಉದ್ಯಾನ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷಾಚರಣೆಗೆ ಅವಕಾಶ ನಿರಾಕರಿಸಲಾಗಿದೆ. ಅಪಾರ್ಟ್‌ಮೆಂಟ್‌ ಸಮುಚ್ಚಯದ ನಿವಾಸಿಗಳು ಹಾಗೂ ಕ್ಲಬ್‌ನವರು ತಂತಮ್ಮ ನಿಗದಿತ ಜಾಗದಲ್ಲಿ ಆಚರಣೆ ಮಾಡಲಿಕ್ಕೆ ಅನುಮತಿಯಿದ್ದರೂ ಆ ಕಾರ್ಯಕ್ರಮಗಳಿಗೆ ಹೊರಗಿನವರನ್ನು ಸೇರಿಸಲಿಕ್ಕೆ ಅವಕಾಶವಿಲ್ಲ. ಮುನ್ನೆಚ್ಚರಿಕೆ ಕ್ರಮಗಳನ್ನು ಸಾರ್ವಜನಿಕರ ಹಿತಾಸಕ್ತಿಯ ಕಾರಣದಿಂದಾಗಿ ರೂಪಿಸಲಾಗಿದ್ದು, ಅವುಗಳನ್ನು ಎಲ್ಲರೂ ಸ್ವಯಂಪ್ರೇರಣೆಯಿಂದ ಪಾಲಿಸುವುದು ಅಗತ್ಯ.

ಹೊಸ ವರ್ಷದ ಆಗಮನದ ಜೊತೆಗೆ ಗ್ರಾಮ ಪಂಚಾಯಿತಿ ಚುನಾವಣೆಗಳ ಫಲಿತಾಂಶವೂ ಇಂದು (ಡಿ. 30) ಪ್ರಕಟವಾಗಲಿದೆ. ಚುನಾವಣೆ ಫಲಿತಾಂಶದ ಸಂದರ್ಭದಲ್ಲಿ ಗೆದ್ದವರ ಬೆಂಬಲಿಗರು ಒಟ್ಟುಗೂಡುವುದು, ವಿಜಯೋತ್ಸವ ಆಚರಿಸುವುದು ಸಾಮಾನ್ಯ. ಅಂಥ ಆಚರಣೆಗಳಿಗೆ ಈ ಬಾರಿ ಕಡಿವಾಣ ಹಾಕಬೇಕಾಗಿದೆ. ವೈಯಕ್ತಿಕ ನೆಲೆಗಳಲ್ಲಿ ಸಂಭ್ರಮಾಚರಣೆ ಸೀಮಿತಗೊಳ್ಳಬೇಕೇ ವಿನಾ ರಸ್ತೆಗಳಲ್ಲಿ ಗುಂಪುಗೂಡಿ ಸಂಭ್ರಮ ಆಚರಿಸುವುದಕ್ಕೆ ಅಥವಾ ಪಟಾಕಿ ಸಿಡಿಸಲಿಕ್ಕೆ ಇದು ಸರಿಯಾದ ಸಮಯವಲ್ಲ.

ಹೊಸ ವರ್ಷದ ಸಂದರ್ಭದಲ್ಲಿ ಸಂಭ್ರಮಕ್ಕಿಂತಲೂ ಹೆಚ್ಚಾದ ಸಾಮಾಜಿಕ ಹೊಣೆಗಾರಿಕೆಯನ್ನು ನಾವು ನಿರ್ವಹಿಸಬೇಕಾಗಿದೆ. ಕೊರೊನಾ ವಿರುದ್ಧದ ಸಂಘರ್ಷದಲ್ಲಿ ಅತ್ಯಂತ ನಿರ್ಣಾಯಕ ವಾದ ಸಂದರ್ಭ ಪ್ರಸ್ತುತ ನಮ್ಮ ಮುಂದಿದೆ. ಕೊರೊನಾ ಸೋಂಕಿನ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿರುವಾಗಲೇ, ಎರಡನೇ ಅಲೆ ಆರಂಭವಾಗಲಿದೆ ಎನ್ನುವ ಆತಂಕವೂ ತಲೆದೋರಿದೆ.

ಲಸಿಕೆ ದೊರೆಯುವ ದಿನಗಳೂ ಸನ್ನಿಹಿತವಾಗುತ್ತಿವೆ. ಇನ್ನೊಂದೆಡೆ, ಬ್ರಿಟನ್‌ನಲ್ಲಿ ವರದಿಯಾಗಿರುವ ರೂಪಾಂತರಗೊಂಡಿರುವ ಕೊರೊನಾ ವೈರಾಣು ರಾಜ್ಯವನ್ನೂ ಪ್ರವೇಶಿಸಿದೆ. ಇಂಗ್ಲೆಂಡ್‌ನಿಂದ ಬೆಂಗಳೂರಿಗೆ ಬಂದಿರುವ ಮೂವರಲ್ಲಿ ರೂಪಾಂತರಗೊಂಡಿರುವ ಕೊರೊನಾ ವೈರಾಣು ಕಾಣಿಸಿಕೊಂಡಿದೆ. ಹೊಸ ಸ್ವರೂಪ ಪಡೆದುಕೊಂಡಿರುವ ಕೊರೊನಾ, ಶೇ 70ರಷ್ಟು ಹೆಚ್ಚು ವೇಗವಾಗಿ ಪ್ರಸಾರಗೊಳ್ಳುತ್ತದೆ ಎನ್ನಲಾಗಿದೆ. ಹೊಸ ಸ್ವರೂಪದ ಕೊರೊನಾ ನಿಯಂತ್ರಿಸಲು ಇಂಗ್ಲೆಂಡ್‌ ಹೆಣಗಾಡುತ್ತಿದೆ.

ವಿಶ್ವದ ವಿವಿಧ ಭಾಗಗಳಲ್ಲಿ ಕೊರೊನಾದ ಎರಡನೇ ಅಲೆ ಕಾಣಿಸಿಕೊಂಡಿದೆ. ಸಾಂಕ್ರಾಮಿಕ ವೈರಸ್‌ ನಿಯಂತ್ರಿಸಲು ಅಭಿವೃದ್ಧಿ ಹೊಂದಿದ ದೇಶಗಳೇ ಒದ್ದಾಡುತ್ತಿವೆ. ಪರಿಸ್ಥಿತಿ ಅತ್ಯಂತ ಸೂಕ್ಷ್ಮವಾಗಿರುವಾಗ, ಸಂಭ್ರಮದ ಹೆಸರಿನಲ್ಲಿ ಮೈಮರೆತರೆ ಅಪಾಯಕ್ಕೆ ಆಹ್ವಾನ ನೀಡಿದಂತೆಯೇ. ಕೊರೊನಾ ವೈರಸ್‌ ನಿಯಂತ್ರಣಕ್ಕೆ ಮುನ್ನೆಚ್ಚರಿಕೆಯೇ ಮದ್ದು ಎನ್ನುವುದನ್ನು ಮನಗಂಡು, ಸಾಮೂಹಿಕ ಜವಾಬ್ದಾರಿ ನಿರ್ವಹಿಸಬೇಕಾದ ಸಂದರ್ಭವಿದು.

ಲಾಕ್‌ಡೌನ್‌ ಕಾರಣದಿಂದಾಗಿ ತತ್ತರಗೊಂಡಿದ್ದ ಸಾರ್ವಜನಿಕ ವಲಯಗಳು ನಿಧಾನವಾಗಿ ಚೇತರಿಸಿಕೊಳ್ಳುತ್ತಿವೆ. ಸಾರ್ವಜನಿಕ ಜೀವನ ಕೂಡ ನಿಧಾನವಾಗಿ ಹಳಿಗೆ ಬರುತ್ತಿದೆ. ಜನವರಿ 1ರಿಂದ ಎಸ್ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯು ತರಗತಿಗಳು ಆರಂಭವಾಗುತ್ತಿವೆ. ಇಂಥ ಸಂಕ್ರಮಣ ಸಂದರ್ಭದಲ್ಲಿ ಕೊಂಚ ಎಡವಟ್ಟಾದರೂ ಅತ್ಯಂತ ಸೂಕ್ಷ್ಮವಾಗಿರುವ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ. ಅಂಥ ಅಪಾಯಕ್ಕೆ ಆಸ್ಪದ ಕಲ್ಪಿಸದಿರುವ ವಿವೇಕವನ್ನು ಸಮಾಜ ಪ್ರದರ್ಶಿಸಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT