ಬುಧವಾರ, ಏಪ್ರಿಲ್ 8, 2020
19 °C

ಸಂಪಾದಕೀಯ | ದೇಶದ ಅಂತಃಸಾಕ್ಷಿ ಕಲಕಿದ 'ನಿರ್ಭಯಾ' ಪ್ರಕರಣಕ್ಕೆ ನ್ಯಾಯಿಕ ಅಂತ್ಯ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ರಾಜರ, ಕಂಪನಿಗಳ, ವಿದೇಶಿಯರ ಆಡಳಿತವನ್ನು ಕಂಡ ಭಾರತವು ಪ್ರಜಾತಂತ್ರವನ್ನು ಅಪ್ಪಿಕೊಂಡಾಗ, ‘ಸರ್ವರಿಗೂ ಅಭಯ’ವನ್ನು ಖಾತರಿಪಡಿಸುವ ಉದ್ದೇಶವೂ ಇತ್ತು. ಅಭಯ ಎಂಬುದು ಭಾರತದ ಪರಂಪರೆಯ ಭಾಗವೂ ಹೌದು. ದುಷ್ಟ ಕೃತ್ಯಗಳನ್ನು ಎಸಗಿದವರಿಗೆ ಪ್ರಭುತ್ವವೇ ಮುಂದೆ ನಿಂತು, ತನ್ನ ಪೊಲೀಸ್ ವ್ಯವಸ್ಥೆ, ನ್ಯಾಯಾಂಗ ವ್ಯವಸ್ಥೆಯ ಮೂಲಕ ಶಿಕ್ಷೆ ಆಗುವಂತೆ ನೋಡಿಕೊಳ್ಳುವುದು ನಾವು ಕಟ್ಟಿಕೊಂಡ ಆಧುನಿಕ ವ್ಯವಸ್ಥೆಯು ‘ಅಭಯ’ವೆಂಬ ಮೌಲ್ಯವನ್ನು ಕ್ರಿಯಾರೂಪಕ್ಕೆ ತಂದ ಬಗೆ.

2012ರಲ್ಲಿ ದೆಹಲಿಯಲ್ಲಿ ‘ನಿರ್ಭಯಾ’ ಮೇಲೆ ಅತ್ಯಾಚಾರ ನಡೆಸಿ, ಆಕೆಯನ್ನು ಅಮಾನುಷವಾಗಿ ಕೊಂದುಹಾಕಿದ ಅಕ್ಷಯ್ ಠಾಕೂರ್, ಪವನ್ ಗುಪ್ತಾ, ವಿನಯ್ ಶರ್ಮಾ ಮತ್ತು ಮುಕೇಶ್ ಸಿಂಗ್‌ನನ್ನು ಈಗ ನೇಣುಗಂಬಕ್ಕೆ ಏರಿಸಿ ಆಗಿದೆ. ದೇಶದ ಅಂತಃಸಾಕ್ಷಿಯನ್ನು ಕಲಕಿದ್ದ ಪ್ರಕರಣವೊಂದು ಈ ಮೂಲಕ ಅಂತ್ಯಗೊಂಡಂತೆ ಆಗಿದೆ. ನಿರ್ಭಯಾಳನ್ನು ಈ ದುಷ್ಟರು ಯಾವ ರೀತಿ ಹಿಂಸಿಸಿದ್ದರು, ಆಕೆಯ ಮೇಲೆ ಅದ್ಯಾವ ರೀತಿಯ ದೌರ್ಜನ್ಯ ನಡೆದಿತ್ತು ಎಂಬುದನ್ನು ಇಲ್ಲಿ ಪುನಃ ಉಲ್ಲೇಖಿಸುವ ಅಗತ್ಯ ಇಲ್ಲ. ಆ ದೌರ್ಜನ್ಯ ಹಾಗೂ ವಿಕಾರವನ್ನು ವಿವರಿಸುವಲ್ಲಿ ಪದಗಳು ಸೋಲಬಹುದು, ಮಾತು ಬಡವಾಗಬಹುದು. ಯಾವ ಹೆಣ್ಣುಮಗಳಿಗೂ ಎದುರಾಗಬಾರದ ಸ್ಥಿತಿ ಅದು.

ಮನುಷ್ಯರೇ ಅಷ್ಟು ಕ್ರೂರವಾಗಿ ವರ್ತಿಸಿದ್ದರೇ ಎಂದು ಯಾರಾದರೂ ಅನುಮಾನಪಟ್ಟುಕೊಳ್ಳಬಹುದು. ಕ್ರೌರ್ಯವೇ ನಾಚಿಕೊಳ್ಳುವಂತಹ ಕೃತ್ಯ ಅದು. ಅದಕ್ಕೆ ಕಾರಣರಾದವರು ನೇಣಿಗೇರಲಿ ಎಂದು ದೇಶದ ಸಾಕ್ಷಿಪ್ರಜ್ಞೆಯೂ ಬಯಸಿದ್ದಿರಬಹುದು. ಅದಕ್ಕೆ ಅನುಗುಣವಾಗಿಯೇ, ಆ ಕೃತ್ಯವನ್ನು ಅಪರೂಪದಲ್ಲಿ ಅಪರೂಪದ ಪ್ರಕರಣ ಎಂದು ಪರಿಗಣಿಸಿದ ನ್ಯಾಯಾಂಗವು ಅವರಿಗೆ ಮರಣದಂಡನೆಯ ಹೊರತು ಇನ್ಯಾವ ಶಿಕ್ಷೆಯೂ ಸೂಕ್ತವಾಗದು ಎನ್ನುವ ತೀರ್ಮಾನಕ್ಕೆ ಬಂತು. 

ವ್ಯವಸ್ಥೆ ಈಗ ನೀಡಬಹುದಾದ ಅತ್ಯುಗ್ರ ಶಿಕ್ಷೆ ಮರಣದಂಡನೆ. ನಿರ್ಭಯಾ ಪ್ರಕರಣದ ಅಪರಾಧಿಗಳನ್ನು ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು ಎಂದು ನ್ಯಾಯಾಂಗ ಹೇಳಿದ ನಂತರವೂ ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ನಿಂತಿಲ್ಲ ಎಂಬುದು ವಿವೇಕಿಗಳ ಮನಸ್ಸನ್ನು ಕಲಕುವ ಸಂಗತಿ. ಅಂದರೆ, ಈ ಪ್ರಕರಣವನ್ನು ಇಟ್ಟುಕೊಂಡು, ಅತ್ಯಾಚಾರದಂತಹ ಹೀನ ಕೃತ್ಯಗಳನ್ನು ತಡೆಯುವಲ್ಲಿ ಮರಣದಂಡನೆ ಎಷ್ಟು ಪರಿಣಾಮಕಾರಿ ಎಂಬ ಪ್ರಶ್ನೆಯನ್ನೂ ಕೇಳಿಕೊಳ್ಳಬಹುದು. ಮರಣದಂಡನೆಯು ಅಪರಾಧವನ್ನು ತಡೆಯುವಲ್ಲಿ ಎಷ್ಟು ಪರಿಣಾಮಕಾರಿ ಎಂಬುದನ್ನು ಅಂಕಿ–ಅಂಶಗಳನ್ನು ಆಧರಿಸಿ ತೀರ್ಮಾನಿಸುವುದು ಒಂದು ಬಗೆ.

‘ಮರಣದಂಡನೆಯು, ಜೀವಾವಧಿ ಶಿಕ್ಷೆಗಿಂತ ಹೆಚ್ಚಿನ ಭೀತಿಯನ್ನು ಸೃಷ್ಟಿಸುವ ಶಕ್ತಿ ಹೊಂದಿದೆ ಎಂಬುದನ್ನು ಹೇಳಲು ಆಧಾರಗಳು ಇಲ್ಲ ಎನ್ನುವ ವಿಚಾರದಲ್ಲಿ ವಿಶ್ವದಾದ್ಯಂತ ಒಮ್ಮತ ಮೂಡುತ್ತಿದೆ’ ಎಂದು ದೇಶದ ಕಾನೂನು ಆಯೋಗವು 2015ರಲ್ಲಿ ಸಲ್ಲಿಸಿದ ವರದಿಯಲ್ಲಿ ಹೇಳಿದೆ. ‘ದೇಶದ ವಿರುದ್ಧ ಯುದ್ಧ ಸಾರಿದ ಪ್ರಕರಣಗಳನ್ನು ಹೊರತುಪಡಿಸಿ, ಇನ್ನೆಲ್ಲ ಪ್ರಕರಣಗಳಲ್ಲೂ ಮರಣದಂಡನೆಯನ್ನು ರದ್ದು ಮಾಡಬೇಕು’ ಎಂದು ಆಯೋಗವು ಶಿಫಾರಸು ಮಾಡಿದೆ. ಆದರೆ ಬಚನ್ ಸಿಂಗ್ ಪ್ರಕರಣದಲ್ಲಿ ಮರಣದಂಡನೆಯ ವಿಚಾರವಾಗಿ ಸುಪ್ರೀಂ ಕೋರ್ಟ್‌ ಉಲ್ಲೇಖಿಸಿರುವ ಕೆಲವು ಅಂಶಗಳು ಇಲ್ಲಿ ಗಮನಾರ್ಹ.

‘ಮರಣದಂಡನೆಯು ಅಪರಾಧ ಎಸಗಬಹುದಾದವರಲ್ಲಿ ಭೀತಿ ಮೂಡಿಸುವ ಕೆಲಸವನ್ನು ನಿಜಕ್ಕೂ ಮಾಡುತ್ತದೆಯೇ ಇಲ್ಲವೇ ಎಂಬುದನ್ನು ಅಂಕಿ–ಅಂಶಗಳ ಮೂಲಕ ಸಾಬೀತು ಮಾಡಲಾಗದು. ಕೊಲೆ ಮಾಡಬಹುದಾಗಿದ್ದ ಎಷ್ಟು ವ್ಯಕ್ತಿಗಳು ಮರಣದಂಡನೆ ಭೀತಿಯ ಕಾರಣದಿಂದಾಗಿ ಕೊಲೆ ಮಾಡುವುದಕ್ಕೆ ಹಿಂಜರಿದರು ಎಂಬುದನ್ನು ತೀರ್ಮಾನಿಸುವುದಕ್ಕೆ ಅಗತ್ಯವಿರುವ ಅಂಕಿ–ಅಂಶಗಳನ್ನು ಕಲೆಹಾಕುವುದು ಕಷ್ಟದ ಕೆಲಸ’ ಎಂದು ಆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಹೇಳಿದೆ. ಕೊಲೆಯನ್ನು ಉಲ್ಲೇಖಿಸಿ ಕೋರ್ಟ್‌ ಹೇಳಿದ್ದ ಮಾತುಗಳ ಅರ್ಥವ್ಯಾಪ್ತಿಯನ್ನು ಅತ್ಯಾಚಾರ ಪ್ರಕರಣಗಳಿಗೂ ಅನ್ವಯಿಸಿ ನೋಡಬಹುದು. ‘ಮರಣ ದಂಡನೆಯನ್ನು ರದ್ದು ಮಾಡುವತ್ತ ಸಾಗುವ ಸಮಯ ಬಂದಿದೆ’ ಎಂದು, ವಿವಿಧ ತೀರ್ಪುಗಳನ್ನು, ನ್ಯಾಯಶಾಸ್ತ್ರದ ವಿವಿಧ ಮಗ್ಗುಲುಗಳನ್ನು ಪರಿಶೀಲಿಸಿ ಕಾನೂನು ಆಯೋಗ ಹೇಳಿರುವುದು ಕೂಡ ವಿಚಾರಯೋಗ್ಯ. ಇವೆಲ್ಲ ಇದ್ದರೂ, ನಿರ್ಭಯಾ ಪ್ರಕರಣದಲ್ಲಿ ವ್ಯಕ್ತವಾದ ಕ್ರೌರ್ಯದ ಬಗೆಯು ನ್ಯಾಯಿಕ, ಬೌದ್ಧಿಕ ಮತ್ತು ನೈತಿಕತೆಯ ಯಾವುದೇ ಚೌಕಟ್ಟಿಗೆ ನಿಲುಕುವುದಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು