ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಆಂಧ್ರ, ಒಡಿಶಾ ವಿಧಾನಸಭಾ ಚುನಾವಣೆ: ವಿಶ್ವಾಸ ಕಳಕೊಂಡ ಆಡಳಿತ ಪಕ್ಷಗಳು

Published 6 ಜೂನ್ 2024, 0:54 IST
Last Updated 6 ಜೂನ್ 2024, 0:54 IST
ಅಕ್ಷರ ಗಾತ್ರ

ವಿಧಾನಸಭೆಗಳಿಗೆ ನಡೆದ ಚುನಾವಣೆಯಲ್ಲಿ ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂನಲ್ಲಿ ಆಡಳಿತಾರೂಢ ಪಕ್ಷಗಳು ಅಧಿಕಾರ ಉಳಿಸಿಕೊಂಡಿವೆ. ಆದರೆ ಆಂಧ್ರಪ್ರದೇಶ ಮತ್ತು ಒಡಿಶಾದಲ್ಲಿ ಆಡಳಿತದಲ್ಲಿದ್ದ ಪಕ್ಷಗಳು ಅಧಿಕಾರ ಕಳೆದುಕೊಂಡಿವೆ. ನಾರಾ ಚಂದ್ರಬಾಬು ನಾಯ್ಡು ಅವರ ತೆಲುಗುದೇಶಂ ಪಕ್ಷದ (ಟಿಡಿಪಿ) ನೇತೃತ್ವದ ಎನ್‌ಡಿಎ ಆಂಧ್ರಪ್ರದೇಶದಲ್ಲಿ ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. ವೈ.ಎಸ್‌. ಜಗನ್‌ಮೋಹನ್‌ ರೆಡ್ಡಿ ನೇತೃತ್ವದ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷವು ನೆಲಕಚ್ಚಿದೆ. ನವೀನ್‌ ಪಟ್ನಾಯಕ್‌ ಅವರ ಬಿಜು ಜನತಾದಳವು ಒಡಿಶಾದಲ್ಲಿ ಅಧಿಕಾರ ಕಳೆದುಕೊಂಡಿದೆ. ಅಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಆಂಧ್ರಪ್ರದೇಶದ ಎನ್‌ಡಿಎ ಮೈತ್ರಿಕೂಟದಲ್ಲಿ ಬಿಜೆಪಿ ಕಿರಿಯ ಪಾಲುದಾರ ಮಾತ್ರವಾದರೆ, ಒಡಿಶಾದಲ್ಲಿ ಆ ಪಕ್ಷಕ್ಕೆ ಇದೇ ಮೊದಲ ಬಾರಿಗೆ ಅಧಿಕಾರ ಸಿಕ್ಕಿದೆ. ಎರಡೂ ರಾಜ್ಯಗಳಲ್ಲಿ ಬಿಜೆಪಿ ವಿವಿಧ ಕಾರ್ಯತಂತ್ರಗಳ ಮೂಲಕ ನೆಲೆ ವಿಸ್ತರಿಸಿಕೊಳ್ಳುವ ಪ್ರಯತ್ನ ನಡೆಸಿತ್ತು. ಈ ರಾಜ್ಯಗಳಲ್ಲಿ ಸಿಕ್ಕ ಹೆಚ್ಚಿನ ಜನಬೆಂಬಲವು ಕೇಂದ್ರದಲ್ಲಿ ಸರ್ಕಾರ ರಚಿಸುವಲ್ಲಿಯೂ ಆ‍ ಪಕ್ಷಕ್ಕೆ ನೆರವು ನೀಡಿದೆ. ಜೊತೆಗೆ ಟಿಡಿ‍ಪಿಯ 16 ಸಂಸದರ ಬೆಂಬಲವೂ ದೊರೆಯಲಿದೆ. 

ಆಂಧ್ರಪ್ರದೇಶದಲ್ಲಿ ಟಿಡಿ‍ಪಿ ಗೆದ್ದ ಕ್ಷೇತ್ರಗಳ ಸಂಖ್ಯೆ 135; ಮೈತ್ರಿಕೂಟದ ಪಾಲುದಾರರಾದ ಪವನ್ ಕಲ್ಯಾಣ್‌ ನೇತೃತ್ವದ ಜನಸೇನಾ ಮತ್ತು ಬಿಜೆಪಿ ಕ್ರಮವಾಗಿ 21 ಮತ್ತು 8 ಕ್ಷೇತ್ರಗಳಲ್ಲಿ ಗೆದ್ದಿವೆ. ವೈಎಸ್‌ಆರ್‌ ಕಾಂಗ್ರೆಸ್‌ 11 ಕ್ಷೇತ್ರಗಳಿಗೆ ಕುಸಿದಿದೆ. ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷವನ್ನು ಜನರು ಸಂಪೂರ್ಣವಾಗಿ
ತಿರಸ್ಕರಿಸಿದ್ದಾರೆ. ಅವಿಭಜಿತ ಆಂಧ್ರಪ್ರದೇಶದಲ್ಲಿ ಎರಡು ಬಾರಿ ಮತ್ತು ವಿಭಜಿತ ಆಂಧ್ರಪ್ರದೇಶದಲ್ಲಿ ಒಂದು ಬಾರಿ ಮುಖ್ಯಮಂತ್ರಿಯಾಗಿದ್ದ ಚಂದ್ರಬಾಬು ನಾಯ್ಡು ಅವರ ಮೇಲೆ ರಾಜ್ಯದ ಜನರು ಸಂಪೂರ್ಣ ವಿಶ್ವಾಸ ಇರಿಸಿದ್ದಾರೆ. ವೈಎಸ್‌ಆರ್‌ಸಿಪಿ ನೇತೃತ್ವದ ಸರ್ಕಾರವು ಹಲವು ಜನಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿತ್ತು. ಆದರೆ, ಆಡಳಿತದ ಬಗ್ಗೆ ಅಸಮಾಧಾನ ಇತ್ತು. ಸರ್ಕಾರವು ನಿರಂಕುಶವಾಗಿದೆ, ದ್ವೇಷ ರಾಜಕಾರಣ ನಡೆಸಿದೆ ಎಂಬ ಭಾವನೆ ಜನರಲ್ಲಿ ಇತ್ತು. ಏಕೆಂದರೆ, ಚಂದ್ರಬಾಬು ನಾಯ್ಡು ಅವರನ್ನು ಭ್ರಷ್ಟಾಚಾರದ ಆರೋಪದಲ್ಲಿ ಬಂಧಿಸಿ ಕಳೆದ ವರ್ಷ ಜೈಲಿಗೆ ಅಟ್ಟಲಾಗಿತ್ತು. ಈ ಬಂಧನವು ನಾಯ್ಡು ಅವರಿಗೆ ಜನರ ಸಹಾನುಭೂತಿ ತಂದುಕೊಟ್ಟಿರಬಹುದು. ನಾಯ್ಡು ಅವರು ಜನಕಲ್ಯಾಣದ ಹಲವು ಭರವಸೆ
ಗಳನ್ನು ನೀಡಿದ್ದರು. ಉದ್ಯೋಗ ಸೃಷ್ಟಿ ಮತ್ತು ಉದ್ಯಮ ಸ್ಥಾಪನೆಗೆ ಮಹತ್ವ ನೀಡುವುದಾಗಿ ಹೇಳಿದ್ದರು. ಇವು ಜನರಿಗೆ ಅಗತ್ಯವಾಗಿ ಬೇಕಾಗಿದ್ದ ವಿಚಾರಗಳಾಗಿದ್ದವು. ರಾಜ್ಯದ ರಾಜಧಾನಿಯ ಕುರಿತಂತೆ ವೈಎಸ್‌ಆರ್‌ಸಿಪಿ ನೇತೃತ್ವದ ಸರ್ಕಾರ ಸೃಷ್ಟಿಸಿದ್ದ ಗೊಂದಲ ಕೂಡ ಆ ಪಕ್ಷಕ್ಕೆ ಪ್ರತಿಕೂಲವಾಗಿ ಕೆಲಸ ಮಾಡಿದೆ. 

ಒಡಿಶಾದಲ್ಲಿ ನವೀನ್‌ ಪಟ್ನಾಯಕ್‌ ಅವರ 24 ವರ್ಷಗಳ ಸುದೀರ್ಘ ಆಳ್ವಿಕೆಗೆ ಬಿಜೆಪಿ ಕೊನೆ ಹಾಡಿದೆ. ಅಲ್ಲಿ ಬಿಜೆಪಿ 78 ಕ್ಷೇತ್ರಗಳಲ್ಲಿ ಗೆದ್ದರೆ, ಬಿಜೆಡಿ 51 ಕ್ಷೇತ್ರಗಳಲ್ಲಿ ಗೆದ್ದಿದೆ. ಆಡಳಿತವಿರೋಧಿ ಅಲೆಯು ಬಿಜೆಪಿಗೆ ನೆರವಾಗಿದೆ. ನವೀನ್‌ ಪಟ್ನಾಯಕ್‌ ಅವರು ಆರನೇ ಬಾರಿಯೂ ಅಧಿಕಾರಕ್ಕೆ ಏರಿದ್ದರೆ ಅತಿ ದೀರ್ಘಕಾಲ ಅಧಿಕಾರದಲ್ಲಿದ್ದ ಮುಖ್ಯಮಂತ್ರಿ ಎಂಬ ಹಿರಿಮೆಗೆ ಪಾತ್ರರಾಗುತ್ತಿದ್ದರು. ಈಗ ಈ ಹಿರಿಮೆಯು ಸಿಕ್ಕಿಂನ ಪವನ್‌ ಚಾಮ್ಲಿಂಗ್‌ ಅವರಿಗೆ ಇದೆ. ಈ ಹಿಂದೆ ಎಂದೂ ಸೋತಿಲ್ಲದ ಪಟ್ನಾಯಕ್ ಅವರು ಸ್ಪರ್ಧಿಸಿದ್ದ ಎರಡು ಕ್ಷೇತ್ರಗಳ ಪೈಕಿ ಒಂದರಲ್ಲಿ ಸೋತಿದ್ದಾರೆ. ಸರ್ಕಾರದ ಕುರಿತು ಜನರಿಗೆ ಬೇಸರ ಬಂದಿತ್ತು ಮತ್ತು ಅವರಿಗೆ ಬದಲಾವಣೆ ಬೇಕಾಗಿತ್ತು. ತಮಿಳುನಾಡಿನವರಾದ ಮಾಜಿ ಐಎಎಸ್‌ ಅಧಿಕಾರಿ ವಿ.ಕೆ. ಪಾಂಡ್ಯನ್‌ ಅವರನ್ನು ಪಟ್ನಾಯಕ್‌ ಅವರು ಹೆಚ್ಚಾಗಿ ಅವಲಂಬಿಸಿದ್ದರು. ಬಿಜೆಪಿ ಇದನ್ನೇ ಅಸ್ತ್ರವಾಗಿಸಿಕೊಂಡು ಒಡಿಯಾ ಅಸ್ಮಿತೆಯನ್ನು ಭಾವನಾತ್ಮಕವಾಗಿ ಬಳಸಿಕೊಂಡಿತು. ಒಡಿಯಾ ಅಸ್ಮಿತೆಗೆ ಸಂಬಂಧಿಸಿದ ಇತರ ವಿಚಾರಗಳನ್ನೂ ಪಕ್ಷವು ವ್ಯಾಪಕವಾಗಿ ಬಳಸಿಕೊಂಡಿದೆ. ಪಟ್ನಾಯಕ್ ಮತ್ತು ಅವರ ಪಕ್ಷವು ಅತಿಯಾದ ಆತ್ಮವಿಶ್ವಾಸ ತೋರಿದ್ದಲ್ಲದೆ, ದಶಕಗಳಿಂದ ಅಧಿಕಾರದಲ್ಲಿ ಇದ್ದ ಕಾರಣ ಜನರ ಮನಃಸ್ಥಿತಿಯನ್ನು ಅರಿಯಲು ವಿಫಲವಾಯಿತು. ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿಗೆ ಬಿಜೆಡಿ ಅಗತ್ಯ ಇದ್ದಾಗಲೆಲ್ಲ ಬೆಂಬಲವನ್ನು ನೀಡಿತ್ತು. ಆದರೆ, ರಾಜ್ಯದಲ್ಲಿ ಅದುವೇ ಬಿಜೆಡಿಗೆ ಮುಳುವಾಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT