ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ‘ಕರ್ಮಯೋಗಿ’: ಅಧಿಕಾರಶಾಹಿ ಜನಸ್ನೇಹವನ್ನೂ ರೂಢಿಸಿಕೊಳ್ಳಲಿ

Last Updated 3 ಸೆಪ್ಟೆಂಬರ್ 2020, 19:45 IST
ಅಕ್ಷರ ಗಾತ್ರ

ಕಲಿಕೆ, ಕೌಶಲ ರೂಢಿಸಿಕೊಳ್ಳುವಿಕೆ, ಹೀಗೆ ರೂಢಿಸಿಕೊಂಡ ಕೌಶಲವನ್ನು ಉತ್ತಮಪಡಿಸಿಕೊಳ್ಳುವಿಕೆಯು ವ್ಯಕ್ತಿಯ ಜೀವನದಲ್ಲಿ ನಿರಂತರವಾಗಿ ನಡೆಯುತ್ತಲೇ ಇರಬೇಕಾದ ಪ್ರಕ್ರಿಯೆ. ‘ಇನ್ನು ಕಲಿಕೆ ಇಲ್ಲ, ಎಲ್ಲವನ್ನೂ ಕಲಿತಾಯಿತು’ ಎಂದು ಯಾರಾದರೂ ಹೇಳಲು ಸಾಧ್ಯವೇ? ವಿಜ್ಞಾನ ಮತ್ತು ತಂತ್ರಜ್ಞಾನ, ಸಾಮಾಜಿಕ ವ್ಯವಸ್ಥೆಗಳೆಲ್ಲವೂ ಅನಿರೀಕ್ಷಿತ ವೇಗದಲ್ಲಿ ದಾಪುಗಾಲು ಹಾಕುತ್ತಿರುವ ಈಗಿನ ದಿನಗಳಲ್ಲಿ ಜ್ಞಾನ ಮತ್ತು ಕೌಶಲಗಳು ಕ್ಷಣಕ್ಷಣಕ್ಕೂ ಹೊಸತನದತ್ತ ಸಾಗುತ್ತಿರುತ್ತವೆ. ಇಂದಿನ ಆಧುನಿಕತೆ ಎನ್ನುವುದು ಪ್ರತಿದಿನ, ಪ್ರತಿಕ್ಷಣ ಹೊಸತಾಗುವುದೇ ಆಗಿದೆ. ಎಲ್ಲವೂ ಬದಲಾಗುತ್ತಿರುವ ಪರಿಯು ಎಷ್ಟೊಂದು ವ್ಯಾಪಕ ಮತ್ತು ಪ್ರಭಾವಿ ಎಂದರೆ, ಇದನ್ನು ಮೈಗೂಡಿಸಿಕೊಳ್ಳದೇ ಇರುವವರು ಆಧುನಿಕ ಕಾಲದಲ್ಲಿದ್ದರೂ ಹಳಬರು ಎನಿಸಿಕೊಳ್ಳಬೇಕಾಗುತ್ತದೆ. ಯಾವುದೇ ವೃತ್ತಿಯಲ್ಲಿ ಇರುವವರು ಕೂಡ ತಮ್ಮ ಕೌಶಲವನ್ನು ನಿರಂತರವಾಗಿ ಒರೆಗೆ ಹಚ್ಚಿ, ಅನುದಿನ ನಿಕಷಕ್ಕೆ ಒಡ್ಡಿಕೊಳ್ಳದೇ ಇದ್ದರೆ ಅಪ್ರಸ್ತುತರಾಗಿಬಿಡುತ್ತಾರೆ.

ಸರ್ಕಾರಿ ಸೇವೆಯಲ್ಲಿ ಇರುವವರೂ ಇದಕ್ಕೆ ಹೊರತಲ್ಲ. ಹಾಗಾಗಿಯೇ, ‘ಮಿಷನ್‌ ಕರ್ಮಯೋಗಿ’ ಎಂಬ ಯೋಜನೆಗೆ ಕೇಂದ್ರ ಸಚಿವ ಸಂಪುಟವು ಅನುಮೋದನೆ ಕೊಟ್ಟಿದೆ. ಇದರ ಪೂರ್ಣ ಹೆಸರು ‘ನಾಗರಿಕ ಸೇವೆಗಳ ಸಾಮರ್ಥ್ಯ ವೃದ್ಧಿಯ ರಾಷ್ಟ್ರೀಯ ಕಾರ್ಯಕ್ರಮ’. ನಾಗರಿಕ ಸೇವೆಗೆ ಸೇರಿಕೊಂಡವರ ಸಾಮರ್ಥ್ಯ ವೃದ್ಧಿ ಇದರ ಉದ್ದೇಶ. ಜಾಗತಿಕ ಮಟ್ಟದ ಕೌಶಲ, ಸಾಮರ್ಥ್ಯವನ್ನು ರೂಢಿಸಿಕೊಳ್ಳುವುದರ ಜತೆಗೆ ಭಾರತದ ಸಂಸ್ಕೃತಿಯ ಬಗ್ಗೆ ಸಂವೇದನಾಶೀಲರಾಗಿರುವಂತೆ ಅಧಿಕಾರಿಗಳನ್ನು ರೂಪಿಸುವುದು ಈ ಕಾರ್ಯಕ್ರಮದ ಉದ್ದೇಶ.

ಈಗ ನಮ್ಮ ಅಧಿಕಾರಶಾಹಿಯು ‘ನಿಯಮ ಆಧಾರಿತ’ವಾಗಿ ಕೆಲಸ ಮಾಡುತ್ತದೆ; ಅದನ್ನು ‘ಪಾತ್ರ ಆಧಾರಿತ’ವಾಗಿ ಪರಿವರ್ತಿಸುವ ಕನಸನ್ನು ಈ ಯೋಜನೆಯು ಹೊಂದಿದೆ. ‘ನಾಗರಿಕ ಸೇವಕರು ಯಾವ ರೀತಿಯಲ್ಲಿ ಇರಬೇಕು ಎಂಬ ಸರ್ಕಾರದ ಮುನ್ನೋಟವನ್ನು ಆಧರಿಸಿ ಯೋಜನೆ ರೂಪುಗೊಳ್ಳಲಿದೆ. ಈಗಿನ ಜಗತ್ತಿನ ಸವಾಲುಗಳನ್ನು ಎದುರಿಸಲು ಇಂದಿನ ನಾಗರಿಕ ಸೇವಕರು ಸೃಜನಶೀಲರು, ಹೊಸತನದ ಅನ್ವೇಷಕರು, ಕ್ರಿಯಾಶೀಲರು, ವಿನಯವಂತರು, ವೃತ್ತಿಪರರು, ಪ್ರಗತಿಪರರು ಮತ್ತು ಚೈತನ್ಯಶೀಲರಾಗಿರಬೇಕು’ ಎಂದಿರುವ ಕೇಂದ್ರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಕಾರ್ಯದರ್ಶಿ ಸಿ. ಚಂದ್ರಮೌಳಿ, ‘ಮಿಷನ್‌ ಕರ್ಮಯೋಗಿ’ಯ ಚೌಕಟ್ಟು ಬಿಡಿಸಿಟ್ಟಿದ್ದಾರೆ.

ಅಧಿಕಾರಶಾಹಿಯ ಬಗ್ಗೆ ಜನರಲ್ಲಿ ಮೆಚ್ಚುಗೆಯ ಭಾವ ಇರುವುದು ಕಡಿಮೆ. ಅಧಿಕಾರಶಾಹಿಯ ತೊಡಕಿನಿಂದಾಗಿಯೇ ಎಷ್ಟೋ ಯೋಜನೆಗಳು ಸಾಕಾರಗೊಂಡಿಲ್ಲ ಅಥವಾ ಚಾಲನೆ ಸಿಕ್ಕ ಯೋಜನೆಗಳು ಅರ್ಧದಲ್ಲಿ ನಿಂತುಬಿಟ್ಟಿವೆ ಎಂಬ ಆರೋಪಗಳು ಆಗೀಗ ಕೇಳಿಬರುತ್ತಲೇ ಇರುತ್ತವೆ. ಅಧಿಕಾರಿಗಳ ಜತೆಗೆ ಜನರಿಗೆ ಸ್ನೇಹ ಸಂಬಂಧ ಇರುವುದು ವಿರಳ. ಜನಪರವಾಗಿ ಇರುವುದನ್ನು ಬಿಟ್ಟು, ನಿಯಮ ಆಧಾರಿತವಾದ ಧೋರಣೆಯನ್ನು ಅಧಿಕಾರಿಗಳು ಅನುಸರಿಸುವುದೇ ಇದಕ್ಕೆ ಕಾರಣ ಆಗಿರಬಹುದು. ಈ ಧೋರಣೆಯನ್ನೇ ಬದಲಾಯಿಸಲು ಹೊರಟಿರುವುದು ಸ್ವಾಗತಾರ್ಹ. ಅಧಿಕಾರಿಗಳನ್ನು ಸಮಾಜಮುಖಿ ಮಾಡುವ ಯತ್ನವೂ ‘ಮಿಷನ್‌ ಕರ್ಮಯೋಗಿ’ಯಲ್ಲಿ ಇದೆ ಎಂದು ಅರ್ಥೈಸಿಕೊಳ್ಳಬಹುದು. ಏಕೆಂದರೆ, ಭಾರತದ ಸಂಸ್ಕೃತಿಯ ಬಗ್ಗೆ ಸಂವೇದನಾಶೀಲರನ್ನಾಗಿ ಮಾಡುವ ಗುರಿಯನ್ನೂ ಈ ಕಾರ್ಯಕ್ರಮವು ಹೊಂದಿದೆ.

ಆದರೆ, ಈ ಸಂಸ್ಕೃತಿಯು ಎಲ್ಲರನ್ನೂ ಒಳಗೊಂಡ ಬಹುಸಂಸ್ಕೃತಿ ಆಗಿರುವಂತೆ ಕಾರ್ಯಕ್ರಮ ಅನುಷ್ಠಾನ ಮಾಡುವವರು ಎಚ್ಚರ ವಹಿಸಬೇಕು. ಇಲ್ಲವಾದರೆ, ಅಧಿಕಾರಿಗಳು ಪ್ರಭಾವಿ ಸಂಸ್ಕೃತಿಯತ್ತ ಮಾತ್ರ ಸೂಕ್ಷ್ಮತೆ ಬೆಳೆಸಿಕೊಂಡು, ಬಹುಸಂಸ್ಕೃತಿಯತ್ತ ಕುರುಡಾಗಬಹುದು. ಭ್ರಷ್ಟ, ಅದಕ್ಷ, ಸಂವೇದನೆರಹಿತ, ಬದಲಾವಣೆಗೆ ಒಗ್ಗದ ಸಮೂಹ ಎಂಬ ಭಾವನೆ ಅಧಿಕಾರಶಾಹಿಯ ಬಗ್ಗೆ ಬಹಳ ಜನರಲ್ಲಿ ಇದೆ. ವ್ಯಾಪಕವಾಗಿರುವ ಈ ಭಾವನೆಯಲ್ಲಿ ಸತ್ಯಾಂಶ ಇಲ್ಲ ಎಂದು ಹೇಳುವುದು ಕಷ್ಟ. ಬದಲಾವಣೆಗೆ ಒಗ್ಗದವರು ಎಂದರೆ ಹೊಸದರ ಕಲಿಕೆಗೆ ಹಿಂದೇಟು ಹಾಕುವವರು ಎಂದೇ ಅರ್ಥ.

ಭ್ರಷ್ಟಾಚಾರವನ್ನು ತಡೆಯಲು ನಮ್ಮಲ್ಲಿ ನೀತಿ, ನಿಯಮಗಳಿವೆ. ದಂಡನೆಯ ಭಯ ಮೂಡಿಸಿಯಾದರೂ ಭ್ರಷ್ಟಾಚಾರವನ್ನು ತಡೆಗಟ್ಟಲು ಸಾಧ್ಯವಾಗಬಹುದು. ಆದರೆ, ಸಂವೇದನೆರಹಿತ, ಯಥಾಸ್ಥಿತಿ ಪ್ರತಿಪಾದಕರನ್ನು ಈ ರೀತಿ ಸರಿದಾರಿಗೆ ತರಲು ಸಾಧ್ಯವಿಲ್ಲ. ಅವರ ಮನಃಪರಿವರ್ತನೆಯೇ ಆಗಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಬದುಕನ್ನು ಸುಗಮ ಮತ್ತು ಸುಂದರಗೊಳಿಸುವುದರಲ್ಲಿ ಅಧಿಕಾರಿಗಳ ಪಾಲು ದೊಡ್ಡದಿದೆ. ಮಿಷನ್‌ ಕರ್ಮಯೋಗಿಯ ಮೂಲಕ ಅಧಿಕಾರಶಾಹಿಯು ನಿತ್ಯ ಕಲಿಯುವಂತಾದರೆ, ಜನಸ್ನೇಹಿಯಾದರೆ, ದಕ್ಷ ಮತ್ತು ಚೈತನ್ಯಯುತವಾದರೆ, ಭಾರತಕ್ಕೆ ಅದು ಬಹುದೊಡ್ಡ ಕೊಡುಗೆ ಆದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT