ಶನಿವಾರ, ಸೆಪ್ಟೆಂಬರ್ 18, 2021
30 °C

ಸಂಪಾದಕೀಯ| ಆಮ್ಲಜನಕದ ಕೊರತೆಯಿಂದ ಸಾವು: ವಾಸ್ತವವನ್ನು ನಿರಾಕರಿಸುವುದು ಏಕೆ?

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಕೋವಿಡ್‌ ಚಿಕಿತ್ಸೆಯ ಸಂದರ್ಭದಲ್ಲಿ ‘ಆಮ್ಲಜನಕದ ಕೊರತೆಯ ಕಾರಣದಿಂದಾಗಿ ರೋಗಿಗಳು ಮೃತಪಟ್ಟಿರುವ ಬಗ್ಗೆ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ ನಿರ್ದಿಷ್ಟವಾಗಿ ವರದಿಗಳು ಬಂದಿಲ್ಲ’ ಎಂಬ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ರಾಜ್ಯ ಸಚಿವೆ ಭಾರತಿ ಪ್ರವೀಣ್ ಪವಾರ್ ಅವರ ಹೇಳಿಕೆಯು ಸಂಪೂರ್ಣವಾಗಿ ತಪ್ಪು. ಈ ಉತ್ತರವು ಮನುಷ್ಯರ ಸಾವಿಗೆ ಸಂಬಂಧಿಸಿದ್ದಾಗಿಲ್ಲದೆ ಇದ್ದಿದ್ದರೆ, ಇದನ್ನು ಬಹುದೊಡ್ಡ ತಮಾಷೆ ಎಂದು ಭಾವಿಸಬಹುದಿತ್ತು. ಸಚಿವರು ತೀರಾ ಯಾಂತ್ರಿಕವಾಗಿ ಉತ್ತರ ನೀಡಿದ್ದಾರೆ. ವಾಸ್ತವ ಏನು ಎಂಬುದನ್ನು ಉಪೇಕ್ಷಿಸಿದ್ದಾರೆ. ದೇಶದ ಹಲವು ಪ್ರದೇಶಗಳಲ್ಲಿನ ಸ್ಥಿತಿ ಏನಿತ್ತು ಎಂಬುದನ್ನು ಅರಿತುಕೊಳ್ಳದೆ, ಕಣ್ಣು ಮುಚ್ಚಿ ಕುಳಿತುಕೊಂಡಿದ್ದಾರೆ ಎಂದು ಹೇಳಬೇಕಾಗುತ್ತದೆ. ರಾಜ್ಯಗಳಿಂದ ಬಂದ ವರದಿಗಳನ್ನು ಆಧರಿಸಿ ಸಚಿವರು ಈ ಉತ್ತರ ನೀಡಿದ್ದಾರೆ. ರಾಜ್ಯಗಳು, ತಮ್ಮಲ್ಲಿ ಕೋವಿಡ್‌ ರೋಗಿಗಳು ಸತ್ತಿದ್ದಕ್ಕೆ ಆಮ್ಲಜನಕದ ಕೊರತೆ ಕಾರಣ ಎಂದು ಹೇಳಿಲ್ಲ ಎನ್ನಲಾಗಿದೆ. ಕೋವಿಡ್‌ನಿಂದಾಗಿ ವ್ಯಕ್ತಿಯೊಬ್ಬ ಮೃತಪಟ್ಟಾಗ, ಅದಕ್ಕೆ ಕಾರಣ ಆಮ್ಲಜನಕದ ಕೊರತೆ ಅಥವಾ ಇತರ ಯಾವುದೋ ನಿರ್ದಿಷ್ಟ ಲೋಪ ಎಂದು ಮರಣ ಪ್ರಮಾಣಪತ್ರಗಳಲ್ಲಿ, ವೈದ್ಯಕೀಯ ದಾಖಲೆಗಳಲ್ಲಿ ನಮೂದಾಗದೆ ಇರಬಹುದು. ಹೀಗಿದ್ದರೂ, ಕಣ್ಣಿಗೆ ರಾಚಿರುವ ಸತ್ಯವನ್ನು ಈ ಆಧಾರದಲ್ಲಿ ಸರ್ಕಾರಗಳು ನಿರಾಕರಿಸಬೇಕಾಗಿಲ್ಲ. ನಿರ್ದಿಷ್ಟವಾಗಿ ಆಮ್ಲಜನಕದ ಕೊರತೆಯಿಂದಲೇ ಆಗಿರುವ ಸಾವುಗಳ ಸಂಖ್ಯೆಯನ್ನು ನೀಡುವುದು ಕೇಂದ್ರ ಸರ್ಕಾರಕ್ಕೆ ಕಷ್ಟವಾಗುತ್ತಿತ್ತೇನೋ. ಆದರೂ, ಆಮ್ಲಜನಕದ ಕೊರತೆಯಿಂದ ಸಾವು ಸಂಭವಿಸಿದ ವರದಿಗಳೇ ಇಲ್ಲ ಎಂದು ಉತ್ತರಿಸುವ ಅಗತ್ಯ ಇರಲಿಲ್ಲ. ಮಾನವೀಯ ಬಿಕ್ಕಟ್ಟಿನ ಸಂದರ್ಭಗಳಲ್ಲಿ ನೀಡುವ ಉತ್ತರಗಳು ತೀರಾ ಯಾಂತ್ರಿಕವಾಗಿ ಇರಬಾರದು; ಉತ್ತರಗಳು ವಾಸ್ತವವನ್ನು ನಿರಾಕರಿಸುವಂತೆಯೂ ಇರಬಾರದು.

ಈ ವರ್ಷದ ಏಪ್ರಿಲ್‌, ಮೇ ತಿಂಗಳುಗಳಲ್ಲಿ ಕೊರೊನಾ ಸಾಂಕ್ರಾಮಿಕದ ಎರಡನೆಯ ಅಲೆ ಬಹಳ ತೀವ್ರವಾಗಿತ್ತು. ಈ ಸಂದರ್ಭದಲ್ಲಿ ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ವೈದ್ಯಕೀಯ ಆಮ್ಲಜನಕದ ಕೊರತೆ ಎದುರಾಗಿತ್ತು. ಹಲವು ಆಸ್ಪತ್ರೆಗಳು ವೈದ್ಯಕೀಯ ಆಮ್ಲಜನಕ ಪೂರೈಸುವಂತೆ ಮನವಿ ಮಾಡಿದ್ದವು, ಆಮ್ಲಜನಕ ಸಿಗದ ಕಾರಣದಿಂದಾಗಿಯೇ ರೋಗಿಗಳಲ್ಲಿ ಕೆಲವರು ಮೃತಪಟ್ಟರು. ಕುಟುಂಬದ ಸದಸ್ಯರನ್ನು ಆಸ್ಪತ್ರೆಗೆ ದಾಖಲಿಸಿದ್ದವರು, ತಮ್ಮವರಿಗೆ ಆಮ್ಲಜನಕ ಬೇಕಿದೆ ಎಂಬ ಮನವಿಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಮಾಡಿಕೊಳ್ಳುತ್ತಿದ್ದರು. ರೋಗಿಗಳಿಗೆ ಆಮ್ಲಜನಕ ತಂದುಕೊಡಲು ಹಲವಾರು ಸಂಘ–ಸಂಸ್ಥೆಗಳು ಶ್ರಮಿಸಿದವು. ರಾಜ್ಯದ ಚಾಮರಾಜನಗರ ಜಿಲ್ಲೆಯಲ್ಲಿಯೂ ಆಮ್ಲಜನಕದ ಕೊರತೆಯಿಂದಲೇ ಕೆಲವು ರೋಗಿಗಳು ಮೃತಪಟ್ಟಿದ್ದಾರೆ. ದೇಶದ ರಾಜಧಾನಿ ದೆಹಲಿಯ ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಕೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಸೂಚನೆ ನೀಡಿತ್ತು. ಕರ್ನಾಟಕ ಕೂಡ ತನ್ನ ಪಾಲಿನ ಆಮ್ಲಜನಕ ಪಡೆದುಕೊಳ್ಳಲು ನ್ಯಾಯಾಲಯದಲ್ಲಿ ವಾದ ಮಂಡನೆ ಮಾಡಬೇಕಾದ ಸ್ಥಿತಿ ಎದುರಾಗಿತ್ತು. ವೈದ್ಯಕೀಯ ಆಮ್ಲಜನಕದ ಕೊರತೆ ಹಾಗೂ ಅದರ ಪರಿಣಾಮವಾಗಿ ಜನರ ಮನಸ್ಸಿನಲ್ಲಿ ಸೃಷ್ಟಿಯಾದ ಭೀತಿ, ರೋಗಿಗಳು ಸಾವನ್ನಪ್ಪಿದ್ದು... ಇವೆಲ್ಲ ದೇಶದ ಪ್ರಜ್ಞೆಯಲ್ಲಿ ಅಚ್ಚೊತ್ತಿ ನಿಂತಿವೆ. ಸಾಮಾಜಿಕ ಜಾಲತಾಣಗಳನ್ನು ತಡಕಾಡಿದರೆ, ಎರಡನೆಯ ಅಲೆಯು ಉತ್ತುಂಗದಲ್ಲಿದ್ದ ಸಂದರ್ಭದ ಮಾಧ್ಯಮ ವರದಿಗಳನ್ನು ಗಮನಿಸಿದರೆ ಇವೆಲ್ಲ ಗೊತ್ತಾಗುತ್ತವೆ. ಹೀಗಿರುವಾಗ, ಆಮ್ಲಜನಕದ ಕೊರತೆಯಿಂದ ಸಾವು ಸಂಭವಿಸಿರುವ ಬಗ್ಗೆ ವರದಿಗಳು ಇಲ್ಲ ಎಂದು ಹೇಳುವುದು ಆತ್ಮವಂಚನೆ ಆಗುತ್ತದೆ. ಆಮ್ಲಜನಕ ಸಕಾಲದಲ್ಲಿ ಸಿಗದ ಕಾರಣದಿಂದಾಗಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರ ಪಾಲಿಗೆ ಈ ಉತ್ತರ ಯಾವ ಸಂದೇಶವನ್ನು ರವಾನಿಸಬಹುದು? ಅಹಿತಕರ ಸತ್ಯಗಳನ್ನು ಅಲ್ಲಗಳೆಯುವ ಕೆಲಸವನ್ನು, ಹೊಣೆಗಾರಿಕೆಯಿಂದ ನುಣುಚಿಕೊಳ್ಳುವುದನ್ನು, ತಪ್ಪುಗಳಿಗೆ ಇನ್ನೊಬ್ಬರನ್ನು ಹೊಣೆ ಮಾಡುವುದನ್ನು ಹಲವರು, ಹಲವು ಸಂದರ್ಭಗಳಲ್ಲಿ ಮಾಡುತ್ತಾರೆ ಎಂಬುದು ನಿಜ. ಆದರೆ, ನುಣುಚಿಕೊಳ್ಳುವುದು ಇಷ್ಟು ಅಸಮರ್ಥನೀಯ ಮಟ್ಟಕ್ಕೆ ಇಳಿಯಬಾರದು.

ದೇಶದ ಬಹುತೇಕರಿಗೆ ಗೊತ್ತಿರುವ ಸತ್ಯವನ್ನು ಸುಳ್ಳು ಎಂದು ಹೇಳುವ ಇಂತಹ ಉತ್ತರಗಳು ಸರ್ಕಾರದ ವಿಶ್ವಾಸಾರ್ಹತೆಯನ್ನು ಹಾಳು ಮಾಡುತ್ತವೆ. ಸಾಂಕ್ರಾಮಿಕದ ವಿಚಾರವಾಗಿ ಕೇಂದ್ರವು ನೀಡಿರುವ ಇತರ ವಿವರಗಳು, ಕೋವಿಡ್‌ ಅಲ್ಲದೆ ಇನ್ನಿತರ ಬಿಕ್ಕಟ್ಟುಗಳ ಬಗ್ಗೆ ಕೊಟ್ಟಿರುವ ಮಾಹಿತಿ ಕೂಡ ತಪ್ಪಾಗಿರಬಹುದೇ ಎಂಬ ಅನುಮಾನ ಜನರಲ್ಲಿ ಮೂಡಬಹುದು. ಜನ ತೀರಾ ಅಸಹಾಯಕರಾಗಿದ್ದ ಸಂದರ್ಭಕ್ಕೆ ಸಂಬಂಧಿಸಿದ ಉತ್ತರ ಇದಾಗಿರುವ ಕಾರಣ, ಸರ್ಕಾರದ ವಿವರಣೆಯು ಅಸೂಕ್ಷ್ಮದ್ದು ಎಂದು ಜನ ಭಾವಿಸಬಹುದು. ಬಿಕ್ಕಟ್ಟಿನ ಸಂದರ್ಭಗಳಲ್ಲಿ ಸರ್ಕಾರವು ಜನರ ವಿಶ್ವಾಸಕ್ಕೆ ಪಾತ್ರವಾಗಬೇಕು. ಜನರ ಕಷ್ಟಗಳ ಬಗ್ಗೆ ಸೂಕ್ಷ್ಮ ಮನಸ್ಸಿನಿಂದ ಸ್ಪಂದಿಸಬೇಕು. ಇದು ಬಹಳ ಮಹತ್ವದ್ದು. ಆದರೆ, ಕೋವಿಡ್‌ ಸಾಂಕ್ರಾಮಿಕಕ್ಕೆ ಸಂಬಂಧಿಸಿದ ಮಾಹಿತಿ ಸಂಗ್ರಹ, ದಾಖಲಿಸುವಿಕೆ ಮತ್ತು ಅದರ ಅರ್ಥೈಸುವಿಕೆಯು ಆರಂಭದಿಂದಲೂ ಸೂಕ್ತವಾಗಿ ನಡೆದಿಲ್ಲ. ಹಲವು ಹಂತಗಳಲ್ಲಿ ಮಾಹಿತಿ ಸಮರ್ಪಕವಾಗಿ ದಾಖಲಾಗಿಲ್ಲ ಎಂಬ ವರದಿಗಳು ಇವೆ. ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ, ಮಾಹಿತಿಯನ್ನು ತಪ್ಪಾಗಿ ಹೇಳುವುದು ಅಥವಾ ಪಾರದರ್ಶಕವಾಗಿ ನಡೆದುಕೊಳ್ಳದೆ ಇರುವುದು, ಉತ್ತರದಾಯಿತ್ವ ಇಲ್ಲದವರಂತೆ ವರ್ತಿಸುವುದು ಯಾರಿಗೂ ಒಳಿತು ಮಾಡುವುದಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು