ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ನ್ಯಾಯ ಸಂಹಿತೆ ಮಸೂದೆಗಳ ಅಂಗೀಕಾರಕ್ಕೆ ತರಾತುರಿ ಬೇಕಿರಲಿಲ್ಲ

Published 21 ಡಿಸೆಂಬರ್ 2023, 23:30 IST
Last Updated 21 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ಈಗ ಅಸ್ತಿತ್ವದಲ್ಲಿ ಇರುವ ಅಪರಾಧ ಕಾನೂನುಗಳ ಬದಲಿಗೆ– ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಸಂಹಿತೆ ಎಂಬ ಮೂರು ಮಸೂದೆಗಳನ್ನು ಸಂಸತ್ತು ಅಂಗೀಕರಿಸಿದೆ. ಈಗ ಇರುವ ಕಾನೂನುಗಳು ನ್ಯಾಯಕ್ಕಿಂತ ಶಿಕ್ಷೆಗೆ ಹೆಚ್ಚು ಒತ್ತು ಕೊಡುವ ವಸಾಹತುಶಾಹಿ ಮನಃಸ್ಥಿತಿ ಹೊಂದಿವೆ ಎಂದು ಸರ್ಕಾರ ಹೇಳಿದೆ. ಹಾಗೆಯೇ, ಭಾರತೀಯ ಚಿಂತನಾ ಕ್ರಮದ ಆಧಾರದಲ್ಲಿ ನ್ಯಾಯ ವ್ಯವಸ್ಥೆಯನ್ನು ಈ ಸಂಹಿತೆಗಳು ಸ್ಥಾಪಿಸಲಿವೆ ಎಂದು ಸರ್ಕಾರ ಪ್ರತಿಪಾದಿಸಿದೆ. ವ್ಯಾಪಕ ಸಮಾಲೋಚನೆಯ ನಂತರ ಈ ಸಂಹಿತೆಗಳನ್ನು ಅಂತಿಮಗೊಳಿಸಲಾಗಿದೆ ಎಂದೂ ಸರ್ಕಾರ ಹೇಳಿದೆ. ಆದರೆ, ಈ ಎರಡೂ ಪ್ರತಿಪಾದನೆಗಳನ್ನು ಪರಿಶೀಲನೆಗೆ ಒಳಪಡಿಸಿದರೆ, ಅವುಗಳಲ್ಲಿ ಸತ್ಯಾಂಶವಿಲ್ಲ ಎಂಬುದು ತಿಳಿಯುತ್ತದೆ. ಪ್ರಕರಣಗಳನ್ನು ತ್ವರಿತವಾಗಿ ಮತ್ತು ಕಾಲಮಿತಿಯೊಳಗೆ ಇತ್ಯರ್ಥ ಮಾಡುವ ಅವಕಾಶ ಮಸೂದೆಗಳಲ್ಲಿ ಇದೆ. ಕೆಲವು ಪ್ರಕ್ರಿಯೆಗಳನ್ನು ಸರಳಗೊಳಿಸಲಾಗಿದೆ ಎಂಬುದೂ ನಿಜ. ಆದರೆ, ಈ ಸಂಹಿತೆಗಳು ಸರ್ಕಾರ ಮತ್ತು ಪೊಲೀಸ್‌ ಇಲಾಖೆಗೆ ಹೆಚ್ಚಿನ ಅಧಿಕಾರವನ್ನು ಕೊಟ್ಟಿವೆ. ಪೌರರ ಹಕ್ಕುಗಳನ್ನು ಮೊಟಕು ಮಾಡಿವೆ. ಈ ಮಸೂದೆಗಳನ್ನು ಪರಿಶೀಲನೆಗೆ ಒಳಪಡಿಸಿದ ಸಂಸತ್‌ ಸಮಿತಿಯು ತರಾತುರಿಯಲ್ಲಿ ಕೆಲಸ ಮುಗಿಸಿದೆ. ವಿರೋಧ ಪಕ್ಷಗಳ ಸದಸ್ಯರ ಅಭಿಪ್ರಾಯಗಳಿಗೆ ಕಿವಿಗೊಟ್ಟಿಲ್ಲ. ಸಮಿತಿಯು ಗುರುತಿಸಿದ್ದ ಕೆಲವು ಸಮಸ್ಯೆಗಳನ್ನು ಪರಿಹರಿಸಲಾಗಿಲ್ಲ. ಅಂತಿಮವಾಗಿ, ಅರೆಬೆಂದ ಮಸೂದೆಗಳನ್ನು ಸಂಸತ್ತು ಅನುಮೋದಿಸಿದೆ. ಅದೂ ವಿರೋಧ ಪಕ್ಷಗಳ ಬಹುಪಾಲು ಸದಸ್ಯರ ಅನುಪಸ್ಥಿತಿಯಲ್ಲಿ ಮಸೂದೆಗಳಿಗೆ ಅನುಮೋದನೆ ನೀಡಲಾಗಿದೆ. 

ಹೊಸ ಮಸೂದೆಗಳು ಜನಕೇಂದ್ರಿತ ಎಂದು ಸರ್ಕಾರ ಹೇಳಿಕೊಂಡಿದೆ. ಆದರೆ, ಈ ಮಸೂದೆಗಳು ಈಗ ಇರುವ ಕಾನೂನುಗಳಿಗಿಂತಲೂ ಹೆಚ್ಚು ಸರ್ಕಾರಕೇಂದ್ರಿತವಾಗಿವೆ. ಹಾಗಾಗಿ, ನಿರ್ವಸಾಹತೀಕರಣದ ವಾದದಲ್ಲಿ ಹೆಚ್ಚಿನ ಹುರುಳು ಇಲ್ಲ. ಹಲವು ಅಪರಾಧಗಳ ವ್ಯಾಖ್ಯೆಗಳನ್ನು ಹೆಚ್ಚು ವಿಸ್ತಾರಗೊಳಿಸಲಾಗಿದೆ. ಸಾರ್ವಭೌಮತೆಗೆ ಧಕ್ಕೆ ಉಂಟು ಮಾಡುವಂತಹ ಕ್ರಮಗಳು, ಈ ಸಂಬಂಧ ಸುಳ್ಳು ಮಾಹಿತಿ ಹಂಚಿಕೆ, ಭಯೋತ್ಪಾದಕ ಕೃತ್ಯಗಳಂತಹ ಸಂಘಟಿತ ಅಪರಾಧಗಳ ಇತ್ಯರ್ಥಕ್ಕೆ ಹೆಚ್ಚು ವ್ಯಾಪಕವಾದ ಅವಕಾಶಗಳನ್ನು ಮಸೂದೆಗಳು ಹೊಂದಿವೆ. ಆದರೆ, ಪೊಲೀಸರ ಕೈಗೆ ಹೆಚ್ಚಿನ ಅಧಿಕಾರ ದೊರಕುವ ಕಾರಣ, ಜನರ ಹಕ್ಕುಗಳು ಮತ್ತು ಸ್ವಾತಂತ್ರ್ಯವು ಅಪಾಯಕ್ಕೆ ಸಿಲುಕಬಹುದು. ಈಗಿನ ಅಪರಾಧ ದಂಡ ಪ್ರಕ್ರಿಯಾ ಸಂಹಿತೆಯಲ್ಲಿ ಇರುವುದಕ್ಕಿಂತ ಹೆಚ್ಚು ಅವಧಿಗೆ ಆರೋಪಿಗಳನ್ನು ಪೊಲೀಸ್‌ ಕಸ್ಟಡಿಯಲ್ಲಿ ಇರಿಸಲು ಹೊಸ ಮಸೂದೆಗಳು ಅವಕಾಶ ಕಲ್ಪಿಸುತ್ತವೆ. ಭಯೋತ್ಪಾದನಾ ಕೃತ್ಯಗಳಿಗೆ ಸಂಬಂಧಿಸಿ ಈಗಿನ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯ (ಯುಎಪಿಎ) ಅಡಿಯಲ್ಲಿ ಇರುವುದಕ್ಕಿಂತ ಹೆಚ್ಚು ಅಧಿಕಾರವನ್ನು ಪೊಲೀಸರಿಗೆ ನೀಡಲಾಗಿದೆ. ಪ್ರಥಮ ಮಾಹಿತಿ ವರದಿಗೆ (ಎಫ್‌ಐಆರ್‌) ಸಂಬಂಧಿಸಿ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಪೊಲೀಸರಿಗೆ ನೀಡಲಾಗಿದೆ. ಆರೋಪಿಗಳಿಗೆ ಕೈಕೋಳ ತೊಡಿಸುವುದು ಸರಿಯಲ್ಲ ಎಂದು ಸುಪ್ರೀಂ ಕೋರ್ಟ್‌ ಹಲವು ಪ್ರಕರಣಗಳಲ್ಲಿ ಹೇಳಿದೆ. ಹಾಗಿದ್ದರೂ ಆರ್ಥಿಕ ಅಪರಾಧಗಳು ಸೇರಿದಂತೆ ಹಲವು ಅಪರಾಧ ಕೃತ್ಯಗಳ ಆರೋಪ ಹೊತ್ತು ಬಂಧಿತರಾದವರಿಗೆ ಬೇಡಿ ತೊಡಿಸುವುದಕ್ಕೆ ಅವಕಾಶ ನೀಡಲಾಗಿದೆ. 

ದೇಶದ್ರೋಹದ ಎಲ್ಲ ಪ್ರಕರಣಗಳಿಗೆ ಸುಪ್ರೀಂ ಕೋರ್ಟ್‌ ತಡೆ ನೀಡಿದೆ. ಅಂತಹ ಪ್ರಕರಣ ದಾಖಲಿಸುವ ಅವಕಾಶವನ್ನೇ ತೆಗೆದುಹಾಕಲಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ. ಆದರೆ ಇದು ಬೇರೊಂದು ರೂಪದಲ್ಲಿ ಬಂದಿದೆ. ‘ರಾಜದ್ರೋಹ’ ಎಂಬುದನ್ನು ‘ದೇಶದ್ರೋಹ’ ಎಂದು ಬದಲಿಸಲಾಗಿದೆ. ಗುಂಪು ಹಲ್ಲೆಯನ್ನು ಪ್ರತ್ಯೇಕ ಅಪರಾಧ ಎಂದು ಗುರುತಿಸಿ, ಮರಣದಂಡನೆ ವಿಧಿಸಲು ಅವಕಾಶ ಒದಗಿಸಲಾಗಿದೆ. ಮರಣದಂಡನೆಯನ್ನು ಹಲವು ದೇಶಗಳು ಈಗಾಗಲೇ ರದ್ದುಪಡಿಸಿವೆ. ಹಲವು ದೇಶಗಳು ಇಂತಹ ಚಿಂತನೆ ನಡೆಸುತ್ತಿವೆ. ಆದರೆ, ಹೊಸ ಮಸೂದೆಗಳಲ್ಲಿ ಹೆಚ್ಚಿನ ಅಪರಾಧ ಗಳನ್ನು ಮರಣದಂಡನೆ ವ್ಯಾಪ್ತಿಗೆ ಒಳಪಡಿಸಲಾಗಿದೆ. ಬಂಧನಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ ರೂಪಿಸಿರುವ ಮಾರ್ಗಸೂಚಿಯನ್ನು ಮಸೂದೆಗಳಲ್ಲಿ ಸೇರಿಸಿಕೊಳ್ಳಲಾಗಿಲ್ಲ; ಮರಣದಂಡನೆಗೆ ಒಳಗಾದವರ ಪರವಾಗಿ ಮೂರನೆಯವರು ದಯಾ ಅರ್ಜಿ ಸಲ್ಲಿಸುವುದನ್ನು ನಿಷೇಧಿಸಲಾಗಿದೆ; ಜಾಮೀನು ನೀಡಿಕೆಯನ್ನು ಬಿಗಿಗೊಳಿಸಲಾಗಿದೆ. ಈ ಎಲ್ಲವೂ ಹೆಚ್ಚು ನಿರ್ಬಂಧಕಾರಿಯೇ ಆಗಿವೆ. ಈ ಮಸೂದೆಗಳು ದೇಶದ ನ್ಯಾಯ ವ್ಯವಸ್ಥೆಯನ್ನು ಹೆಚ್ಚು ಕಠಿಣಗೊಳಿಸಲಿವೆ. ವಿರೋಧ ಪಕ್ಷಗಳ ಭಾಗವಹಿಸುವಿಕೆ ಇಲ್ಲದೆ, ವ್ಯಾಪಕ ಸಮಾಲೋಚನೆ ಇಲ್ಲದೆ ಈ ಮಸೂದೆಗಳನ್ನು ತರಾತುರಿಯಲ್ಲಿ ಅನುಮೋದಿಸಬಾರದಿತ್ತು. ವಸಾಹತುಶಾಹಿ ಅಪರಾಧ ಕಾನೂನುಗಳ ಬದಲಾವಣೆಗಾಗಿ ದೇಶವು 75 ವರ್ಷ ಕಾದಿದೆ. ದೇಶದ ಅಪರಾಧ ನ್ಯಾಯ ವ್ಯವಸ್ಥೆಗೆ ಈ ಮಸೂದೆಗಳು ಮುಂದೆ ಕಾನೂನು ಆಗಿ ಆಧಾರಸ್ತಂಭಗಳು ಎನಿಸಲಿವೆ. ಅಂತಹ ಕಾನೂನುಗಳನ್ನು ರೂಪಿಸುವಾಗ ಹೆಚ್ಚಿನ ಸಹಮತ ಬೇಕಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT