ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್‌ ಗುಂಪುಗಾರಿಕೆ: ಇಲಾಖೆಯ‌ ರೋಗದ ಒಂದು ಬಾಹ್ಯ ಲಕ್ಷಣ ಮಾತ್ರ

Last Updated 3 ಫೆಬ್ರುವರಿ 2019, 20:25 IST
ಅಕ್ಷರ ಗಾತ್ರ

ಬೆಂಗಳೂರು ನಗರದ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯ 71 ಮಂದಿ ಸಿಬ್ಬಂದಿಯನ್ನು ಒಟ್ಟಾಗಿ ವರ್ಗಾಯಿಸಲಾಗಿದೆ ಅಥವಾ ಹೀಗೆ ಸಾಮೂಹಿಕ ವರ್ಗಾವಣೆ ಮಾಡಲೇಬೇಕಾದ ಅನಿವಾರ್ಯಕ್ಕೆ ಇಲಾಖೆ ಸಿಲುಕಿತ್ತು! ಠಾಣೆಯಲ್ಲಿ ನಡೆಯುತ್ತಿದ್ದ ‘ಗುಂಪುಗಾರಿಕೆ’ಯ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಡಿಸಿಪಿ ಅಣ್ಣಾಮಲೈ ಅವರ ವರದಿಯ ಆಧಾರದ ಮೇಲೆ ಈ ವರ್ಗಾವಣೆ ಮಾಡಲಾಗಿದೆ. ರಾಜಕೀಯ ಪಕ್ಷದೊಳಗೆ ಅಥವಾ ರಾಜಕೀಯ ಪಕ್ಷದ ನಿರ್ದಿಷ್ಟ ಘಟಕದೊಳಗೆ ಗುಂಪುಗಾರಿಕೆ ಎಂದರೆ ಅದನ್ನು ಅರ್ಥ ಮಾಡಿಕೊಳ್ಳಬಹುದು. ಆದರೆ ಕಾನೂನು ಮತ್ತು ಸುವ್ಯವಸ್ಥೆಯ ಹೊಣೆ ಹೊತ್ತಿರುವ ಇಲಾಖೆಯೊಂದರ ಸದಸ್ಯರು ಇಂಥದ್ದೇ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು ಎಂದರೆ ಅದು ಇಲಾಖೆಯನ್ನು ತೀವ್ರವಾಗಿ ಬಾಧಿಸುತ್ತಿರುವ ರೋಗವೊಂದರ ಬಾಹ್ಯಲಕ್ಷಣ ಎಂದು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಪಿಎಸ್ಐ ಹಂತದಿಂದ ಕಾನ್‌ಸ್ಟೆಬಲ್‌ವರೆಗಿನ ಸಿಬ್ಬಂದಿಯ ಈ ವರ್ತನೆ ಕೇವಲ ಒಂದು ಪೊಲೀಸ್ ಠಾಣೆಗೆ ಸೀಮಿತವಾಗಿದೆ ಎಂದು ಭಾವಿಸಬೇಕಾಗಿಯೂ ಇಲ್ಲ. ಇದು ರಾಜ್ಯವ್ಯಾಪಿಯಾಗಿ ಬೇರೆ ಬೇರೆ ಬಗೆಯಲ್ಲಿ ಇರಬಹುದಾದ ಎಲ್ಲಾ ಸಾಧ್ಯತೆಗಳಿವೆ. ಜನಸಾಮಾನ್ಯರ ಜೊತೆ ನೇರ ಸಂಬಂಧವಿರುವ ಯಾವುದೇ ಸರ್ಕಾರಿ ಇಲಾಖೆಯೊಳಗೆ ಗುಂಪುಗಾರಿಕೆಯಂಥ ಸಮಸ್ಯೆಇದ್ದರೆ ಅದರ ನೇರ ಪರಿಣಾಮವನ್ನು ಎದುರಿಸುವುದು ಸಾಮಾನ್ಯ ಜನರು. ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯ ಗುಂಪುಗಾರಿಕೆಯ ಪ್ರಕರಣದಲ್ಲಿಯೂ ಇದನ್ನು ಕಾಣಬಹುದು. ದೂರು ಕೊಡಲು ಬಂದವರಿಗೇ ಥಳಿಸಿದ್ದರಿಂದ ತೊಡಗಿ, ಪಿಎಸ್‌ಐ ಸುಪರ್ದಿಯಲ್ಲಿದ್ದ ಬಂದೂಕು ಕಾಣೆಯಾಗಿ ಮತ್ತೆ ಕಾಣಿಸಿಕೊಳ್ಳುವ ತನಕದ ಎಲ್ಲಾ ಪ್ರಸಂಗಗಳಲ್ಲಿಯೂ ತೊಂದರೆ ಅನುಭವಿಸಿದ್ದು ಸಾರ್ವಜನಿಕರೇ. ಇನ್ನು ಈ ಎಲ್ಲಾ ತಪ್ಪುಗಳಿಗೆ ಸಿಬ್ಬಂದಿ ಅನುಭವಿಸುವ ಶಿಕ್ಷೆ ‘ವರ್ಗಾವಣೆ’. ಇದರಿಂದ ಸಮಸ್ಯೆಯ ವರ್ಗಾವಣೆಯಾಗುವುದೇ ಹೊರತು ಅದಕ್ಕೆ ಪರಿಹಾರ ದೊರೆಯುವುದಿಲ್ಲ ಎಂಬುದು ಇಲಾಖೆಗೆ ತಿಳಿಯದ ವಿಚಾರವೇನೂ ಅಲ್ಲ. ಆದರೆ ಕ್ರಮ ಕೈಗೊಳ್ಳುವ ಅಧಿಕಾರವುಳ್ಳವರಿಗೆ ಇದಕ್ಕಿಂತ ಕಠಿಣ ಕ್ರಮ ಕೈಗೊಳ್ಳುವ ಧೈರ್ಯವೂ ಉಳಿದಿಲ್ಲ ಎಂಬುದು ವಾಸ್ತವ.

ಪೊಲೀಸ್ ಇಲಾಖೆಯ ಸಮಗ್ರ ಸುಧಾರಣೆಗೆ ಸಂಬಂಧಿಸಿದಂತೆ ಹಲವಾರು ಸಮಿತಿಗಳು ರಚನೆಯಾಗಿವೆ. ಬಹಳಷ್ಟು ಶಿಫಾರಸುಗಳು ಸಲ್ಲಿಕೆಯಾಗಿವೆ. ವಿಭಿನ್ನ ಪೊಲೀಸಿಂಗ್ ಪರಿಕಲ್ಪನೆಗಳ ಸುತ್ತಲೂ ಒಂದಷ್ಟು ಕೆಲಸಗಳೂ ನಡೆದಿವೆ. ಆದರೆ ಇವುಗಳಲ್ಲಿ ಕೆಲವು ಪ್ರಯೋಗಗಳ ಮಟ್ಟದಲ್ಲಿ ಉಳಿದುಹೋಗಿದ್ದರೆ ಇನ್ನು ಕೆಲವು ಕಡತಗಳಲ್ಲಿ ಸಮಾಧಿಯಾಗಿವೆ. ಪೊಲೀಸ್ ಇಲಾಖೆ ಮಾತ್ರ ವಸಾಹತುಶಾಹಿ ಕಾಲದ ಇಲಾಖೆಯಂತೆಯೇ ಇದೆ. ಠಾಣೆಯೊಳಗಿನ ಗುಂಪುಗಾರಿಕೆ ಕೂಡಾ ಇದರ ಮುಂದುವರಿದ ಭಾಗವೇ. ಜನಸಾಮಾನ್ಯರಿಗೆ ಭದ್ರತೆ ನೀಡುವುದಕ್ಕಿಂತ ಅವರನ್ನು ‘ನಿಯಂತ್ರಿಸುವುದು’ ಪೊಲೀಸರ ಮುಖ್ಯ ಕೆಲಸವಾಗಿಬಿಟ್ಟಿರುವುದರಿಂದ ಈ ಕೆಲಸದಲ್ಲಿ ಅವರು ಲಂಚದ ಅವಕಾಶಗಳನ್ನು ಸೃಷ್ಟಿಸಿಕೊಳ್ಳುವುದು ಸಾಮಾನ್ಯ. ಒಮ್ಮೆ ಹಣಕಾಸಿನ ಹರಿವು ಆರಂಭ ವಾಯಿತೆಂದರೆ ಅದನ್ನು ಹಂಚಿಕೊಳ್ಳುವ ಪ್ರಕ್ರಿಯೆಯಲ್ಲಿ ಎಲ್ಲಾ ಬಗೆಯ ಗುಂಪುಗಾರಿಕೆಗಳೂ ಆರಂಭವಾಗುತ್ತವೆ. ರಾಜ್ಯದ ಉತ್ತರ-ದಕ್ಷಿಣ ದಿಕ್ಕುಗಳಿಂದ ಆರಂಭಿಸಿ, ಜಾತಿಗಳ ಮೇಲು-ಕೀಳುತನಕದ ಈ ಗುಂಪುಗಾರಿಕೆಗಳು ಠಾಣೆಯೊಳಗೆ ಇರುವ ಭ್ರಷ್ಟಾಚಾರವೆಂಬ ಕ್ಯಾನ್ಸರ್‌ನ ಹೊರ ಲಕ್ಷಣಗಳಷ್ಟೇ. ವರ್ಗಾವಣೆ ಎಂಬುದು ಒಂದು ನಿಯತ ಆಡಳಿತಾತ್ಮಕ ಕ್ರಿಯೆಯಾಗಿ ನೆಲೆಗೊಳ್ಳುವ ತನಕವೂ ಈ ಬಗೆಯ ಸಮಸ್ಯೆಗಳು ಪರಿಹಾರವಾಗುವುದಿಲ್ಲ. ಇನ್ನು ಜನಸಾಮಾನ್ಯರ ಜೊತೆಗಿನ ಪೊಲೀಸರ ವರ್ತನೆಗೆ ಸಂಬಂಧಿಸಿದಂತೆ ತರಬೇತಿಯಿಂದ ಅನುಷ್ಠಾನ ತನಕದ ಅನೇಕ ಸಂಗತಿಗಳಲ್ಲಿ ಆಧುನಿಕತೆಯನ್ನು ಅಳವಡಿಸಿಕೊಳ್ಳಬೇಕಾಗಿದೆ. ಪೊಲೀಸ್ ಇಲಾಖೆಗೆ ಸೇರಿಕೊಳ್ಳುವುದೇ ಜನಸಾಮಾನ್ಯರನ್ನು ‘ಶಿಕ್ಷಿಸಲು’ ಎಂಬ ಮನಸ್ಥಿತಿ ಪೊಲೀಸ್ ಇಲಾಖೆಯ ಕೆಳಹಂತದ ಅಧಿಕಾರಿಗಳಲ್ಲಿದೆ. ಇವನ್ನೆಲ್ಲಾ ನಿವಾರಿಸಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳದೆ ಒಂದು ಠಾಣೆಯಿಂದ ಒಂದಷ್ಟು ಮಂದಿಯನ್ನು ಒಟ್ಟಾಗಿ ವರ್ಗಾವಣೆ ಮಾಡಿದರೆ ಎಲ್ಲವೂ ಸರಿಯಾಗುತ್ತದೆ ಎಂದು ಭಾವಿಸುವುದು ಬಾಲಿಶ. ಹೀಗೆ ವರ್ಗಾವಣೆಗೊಂಡ ಪ್ರತಿಯೊಬ್ಬರೂ ಇನ್ನು ಕೆಲವೇ ದಿನಗಳಲ್ಲಿ ‘ಪ್ರಭಾವಶಾಲಿ’ಗಳನ್ನು ಕಂಡು ವರ್ಗಾವಣೆಗೆ ಮುಂಚೆ ಇದ್ದ ಠಾಣೆಗೇ ಬರುವ ಸಾಧ್ಯತೆ ಹೆಚ್ಚು. ಈ ಪ್ರಕರಣವನ್ನು ಒಂದು ಪ್ರತ್ಯೇಕ ಘಟನೆಯೆಂಬಂತೆ ಭಾವಿಸದೆ ಇಡೀ ವ್ಯವಸ್ಥೆಯ ಹುಳುಕಿನ ಉದಾಹರಣೆಯೆಂಬಂತೆ ಪರಿಗಣಿಸಿ ಕ್ರಮ ಕೈಗೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT