ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ: ಠಾಣೆ ಎನ್‌ಕೌಂಟರ್ ಪ್ರಕರಣ; ಪೊಲೀಸರ ಮೇಲೆ ಬಲವಾದ ಸಂದೇಹ

Published : 27 ಸೆಪ್ಟೆಂಬರ್ 2024, 20:53 IST
Last Updated : 27 ಸೆಪ್ಟೆಂಬರ್ 2024, 20:53 IST
ಫಾಲೋ ಮಾಡಿ
Comments

ಮಹಾರಾಷ್ಟ್ರದ ಠಾಣೆ ಜಿಲ್ಲೆಯ ಬದ್ಲಾಪುರದ ಶಾಲೆಯೊಂದರಲ್ಲಿ ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತಿದ್ದ ಅಕ್ಷಯ್‌ ಶಿಂದೆಯನ್ನು ಮಹಾರಾಷ್ಟ್ರ ಪೊಲೀಸರು ಎನ್‌ಕೌಂಟರ್‌ ಮಾಡಿದ್ದಾರೆ. ಆದರೆ, ಇದು ಉದ್ದೇಶಪೂರ್ವಕ ಹತ್ಯೆ, ನಕಲಿ ಎನ್‌ಕೌಂಟರ್‌ ಎಂಬ ಬಲವಾದ ಸಂಶಯ ಮೂಡಿದೆ. ಇದು ನಕಲಿ ಎನ್‌ಕೌಂಟರ್‌ ಅಲ್ಲ ಎನ್ನುವುದಕ್ಕೆ ಕಾರಣಗಳೇನೂ ಕಾಣಿಸುತ್ತಿಲ್ಲ. ಆರೋಪಿಯನ್ನು ತನಿಖೆಗಾಗಿ ಜೈಲಿನಿಂದ ಕರೆದೊಯ್ಯಲಾಗುತ್ತಿತ್ತು. ಆಗ ಆತ ಪೊಲೀಸರ ಕೈಯಲ್ಲಿದ್ದ ರಿವಾಲ್ವರ್‌ ಕಸಿದುಕೊಂಡು ಗುಂಡು ಹಾರಿಸಿದ್ದಾನೆ. ಪೊಲೀಸರು ನಡೆಸಿದ ಪ್ರತಿದಾಳಿಯಲ್ಲಿ ಆತ ಮೃತಪಟ್ಟಿದ್ದಾನೆ. ಆದರೆ ಇಲ್ಲಿ ಹಲವು ಪ್ರಶ್ನೆಗಳು ಇವೆ: ಗುತ್ತಿಗೆ ಕಾರ್ಮಿಕ, ಶಾಲೆಯೊಂದರ ಸ್ವೀಪರ್‌ ಆಗಿದ್ದ ವ್ಯಕ್ತಿ ಜೀವಮಾನದಲ್ಲಿ ಒಮ್ಮೆಯೂ ರಿವಾಲ್ವರ್‌ ಮುಟ್ಟಿರಲೂ ಸಾಧ್ಯವಿಲ್ಲ; ಅಂತಹ ವ್ಯಕ್ತಿ, ಕೈಕೋಳ ತೊಡಿಸಿದ್ದರೂ ಪೊಲೀಸರ ರಿವಾಲ್ವರ್‌ ಸೆಳೆದುಕೊಂಡು ಅವರತ್ತ ಗುಂಡು ಹಾರಿಸಿ ತಪ್ಪಿಸಿಕೊಳ್ಳುವ ಕುರಿತು ಯೋಚಿಸುವುದಕ್ಕಾದರೂ ಸಾಧ್ಯವೇ? ಹೆಚ್ಚಿನ ಸಂಖ್ಯೆಯಲ್ಲಿದ್ದ ಪೊಲೀಸರು, ಶಿಷ್ಟಾಚಾರಕ್ಕೆ ವಿರುದ್ಧವಾಗಿ ಆತ ಸಾಯುವಂತೆ ಗುಂಡು ಹಾರಿಸಿದ್ದು ಏಕೆ ಎಂಬ ಪ್ರಶ್ನೆಯನ್ನೂ ಕೇಳಬೇಕಿದೆ. 

ಸಂದೇಹಗಳನ್ನು ದೃಢಪಡಿಸಲು ಬಲವಾದ ಕಾರಣಗಳಿವೆ. ಮಹಾರಾಷ್ಟ್ರ ವಿಧಾನಸಭೆಗೆ ಕೆಲವೇ ವಾರಗಳಲ್ಲಿ ಚುನಾವಣೆ ನಡೆಯಲಿದೆ. ಅಕ್ಷಯ್‌ ಹತ್ಯೆಯ ಸನ್ನಿವೇಶವನ್ನು ಗಮನಿಸಿದರೆ, ಸರ್ಕಾರಕ್ಕೆ ಚುನಾವಣೆಯಲ್ಲಿ ಅನುಕೂಲ ಮಾಡಿಕೊಡಲು ಕೃತ್ಯ ಎಸಗಲಾಗಿದೆ ಎಂದು ಅನುಮಾನಿಸಿದರೆ ಅದನ್ನು ತಪ್ಪು ಎನ್ನಲಾಗದು. ರಾಜಕೀಯ ನಂಟುಗಳನ್ನು ಹೊಂದಿರುವ ಶಾಲಾ ಆಡಳಿತ ಮಂಡಳಿಗೂ ಈ ಹತ್ಯೆಯಿಂದ ಅನುಕೂಲವಿದೆ ಎಂದು ಆರೋಪಿಸಲಾಗಿದೆ. ಇಬ್ಬರು ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣವು ಜನರಲ್ಲಿ ಆಕ್ರೋಶ ಮೂಡಿಸಿತ್ತು ಮತ್ತು ಸರ್ಕಾರದ ವಿರುದ್ಧ ಜನರು ಪ್ರತಿ
ಭಟನೆಯನ್ನೂ ನಡೆಸಿದ್ದರು. ಆರೋಪಿಯ ಹತ್ಯೆಯಿಂದಾಗಿ ತಕ್ಷಣವೇ ನ್ಯಾಯ ದೊರಕಿತು ಎಂದು ಜನರು ಸಂಭ್ರಮಿಸುತ್ತಾರೆ. ಇದರಿಂದ ಆಡಳಿತಾರೂಢ ಪಕ್ಷಕ್ಕೆ ಲಾಭವಿದೆ. ಶಿವಸೇನಾದ ನಾಯಕರು ಹತ್ಯೆಯನ್ನು
ಸ್ವಾಗತಿಸಿದ್ದಾರೆ ಮತ್ತು ಪೊಲೀಸರು ಹೇಳಿದ ಹುರುಳಿಲ್ಲದ ಕತೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಆರೋಪಿಯನ್ನು ಗಲ್ಲಿಗೇರಿಸಬೇಕು ಎಂದು ಹೇಳುತ್ತಿದ್ದ ವಿರೋಧ ಪಕ್ಷಗಳು ಹತ್ಯೆಯನ್ನು ವಿರೋಧಿಸುತ್ತಿರುವುದು ಏಕೆ ಎಂದೂ ಸರ್ಕಾರವು ಪ್ರಶ್ನಿಸಿದೆ. ವಿರೋಧ ಪಕ್ಷಗಳದ್ದು ‘ಅತ್ಯಾಚಾರಿಗಳನ್ನು ರಕ್ಷಿಸುವ ಮೈತ್ರಿಕೂಟ’ವೇ ಎಂದು ಬಿಜೆಪಿ ಪ್ರಶ್ನಿಸಿದೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳುವ ಹೊಣೆಗಾರಿಕೆ ಇರುವ ಸರ್ಕಾರ ಮತ್ತು ಆಡಳಿತ ಪಕ್ಷವು ಪ್ರಾಥಮಿಕ ತನಿಖೆ ಕೂಡ ಮುಗಿಯುವ ಮುನ್ನ, ತೀವ್ರ ಅನುಮಾನಾಸ್ಪದವಾದ ಹತ್ಯೆಯನ್ನು ಸಮರ್ಥಿಸಿಕೊಳ್ಳುವುದು ಸರಿಯೇ?

ಕಾನೂನನ್ನು ಕೈಗೆತ್ತಿಕೊಳ್ಳುವ ಅಧಿಕಾರ ಪೊಲೀಸರಿಗೆ ಇಲ್ಲ. ಬಂದೂಕಿನ ಮೂಲಕ ಕಾನೂನು ಜಾರಿಗೆ ಅವಕಾಶ ಇಲ್ಲ. ಸಂವಿಧಾನ ಮತ್ತು ಕಾನೂನಿನ ಆಳ್ವಿಕೆ ಇರುವ ದೇಶದಲ್ಲಿ ಸಮರ್ಪಕ ಪ್ರಕ್ರಿಯೆ ಅನುಸರಿಸದೆ ಶಿಕ್ಷೆ ನೀಡಲು ಆಗದು. ತಕ್ಷಣವೇ ನ್ಯಾಯ ಸಿಗಬೇಕು ಎಂಬ ಹುಯಿಲು ನ್ಯಾಯ ವ್ಯವಸ್ಥೆ ಮತ್ತು ಕಾನೂನಿನ ಆಳ್ವಿಕೆಯು ಮುರಿದುಬಿದ್ದಿದೆ ಎಂಬುದರ ಸೂಚನೆಯಾಗಿದೆ. ಆರೋಪಿಯು ಅತ್ಯಂತ ಹೀನವಾದ ಕೃತ್ಯ ಎಸಗಿದ್ದರೂ ಆತನಿಗೆ ಶಿಕ್ಷೆ ನೀಡುವ ಮುನ್ನ ನ್ಯಾಯಸಮ್ಮತವಾದ ವಿಚಾರಣೆ ನಡೆಯಲೇಬೇಕು. ತಕ್ಷಣ ನ್ಯಾಯದ ಸಂಸ್ಕೃತಿಯನ್ನು ನಾವು ಅಪ್ಪಿಕೊಂಡರೆ, ಮನುಷ್ಯರಾಗಿ, ನಾಗರಿಕರಾಗಿ ಮತ್ತು ಒಂದು ಸಮಾಜವಾಗಿ ನಾವು ವಿಫಲರಾಗುತ್ತೇವೆ. ಇಂತಹ ಪ್ರಕರಣಗಳಲ್ಲಿ ಸ್ವಯಂಪ್ರೇರಿತ ತನಿಖೆಗೆ ಸುಪ್ರೀಂ ಕೋರ್ಟ್‌ ಈ ಹಿಂದೆ ಆದೇಶ ಮಾಡಿದ್ದಿದೆ. ಈ ಎನ್‌ಕೌಂಟರ್‌ ಪ್ರಕರಣದ ಕುರಿತು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕಾದ ಅಗತ್ಯ ಇದೆ. ತಪ್ಪು ಎಸಗಿಲ್ಲ ಎಂಬುದು ಸಾಬೀತಾಗುವವರೆಗೆ ಪೊಲೀಸರು ತಪ್ಪಿತಸ್ಥರಂತೆಯೇ ಮೇಲ್ನೋಟಕ್ಕೆ ಕಾಣುತ್ತಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT