ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ಪಕ್ಷಗಳಿಗೆ ದಂಡದ ಬಿಸಿ ಶುದ್ಧೀಕರಣಕ್ಕೆ ಬೇಕು ಬದ್ಧತೆ

Last Updated 11 ಆಗಸ್ಟ್ 2021, 19:31 IST
ಅಕ್ಷರ ಗಾತ್ರ

ಬಿಹಾರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ಅಪರಾಧ ಹಿನ್ನೆಲೆ ಯನ್ನು ಮತ್ತು ಅಭ್ಯರ್ಥಿಗಳಾಗಿ ಅವರನ್ನು ಆಯ್ಕೆ ಮಾಡಿದ್ದಕ್ಕೆ ಕಾರಣಗಳನ್ನು ಬಹಿರಂಗಪಡಿಸದ ಎಲ್ಲ ರಾಜಕೀಯ ಪಕ್ಷಗಳಿಗೂ ದಂಡ ವಿಧಿಸುವ ಮೂಲಕ ಸುಪ್ರೀಂ ಕೋರ್ಟ್ ದಿಟ್ಟ ಕ್ರಮವೊಂದನ್ನು ಕೈಗೊಂಡಿದೆ. ಎಲ್ಲ ಪಕ್ಷಗಳೂ ತಮ್ಮ ಅಭ್ಯರ್ಥಿಗಳ ಅಪರಾಧ ಹಿನ್ನೆಲೆಯನ್ನು ಬಹಿರಂಗಪಡಿಸಬೇಕು ಎಂದು 2020ರಲ್ಲಿ ಸುಪ್ರೀಂ ಕೋರ್ಟ್ ಸೂಚಿಸಿತ್ತು. ಆದರೆ ಆ ಬಳಿಕ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷವೂ ಸುಪ್ರೀಂ ಕೋರ್ಟ್‌ನ ಈ ನಿರ್ದೇಶನವನ್ನು ಅನುಸರಿಸಿರಲಿಲ್ಲ. ತನ್ನ ನಿರ್ದೇಶನದ ಉಲ್ಲಂಘನೆಯನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್, ದಂಡ ವಿಧಿಸುವ ಮೂಲಕ ಎಲ್ಲ ರಾಜಕೀಯ ಪಕ್ಷಗಳಿಗೂ ಎಚ್ಚರಿಕೆಯ ಚಾಟಿ ಬೀಸಿದೆ. ಬಿಜೆಪಿ, ಕಾಂಗ್ರೆಸ್, ಜೆಡಿಯು, ಆರ್‌ಜೆಡಿ, ಎಲ್‍ಜೆಪಿ ಮತ್ತು ಸಿಪಿಐ ಪಕ್ಷಗಳಿಗೆ ತಲಾ ಒಂದು ಲಕ್ಷ ರೂಪಾಯಿ ದಂಡ ವಿಧಿಸಿರುವ ಸುಪ್ರೀಂ ಕೋರ್ಟ್‌ ನ್ಯಾಯಪೀಠವು ಎನ್‍ಸಿಪಿ ಮತ್ತು ಸಿಪಿಎಂಗೆ ತಲಾ ₹ 5 ಲಕ್ಷ ದಂಡ ವಿಧಿಸಿದೆ. ಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ 48 ಗಂಟೆಗಳೊಳಗೆ ಪಕ್ಷಗಳು ತಮ್ಮ ಅಭ್ಯರ್ಥಿಗಳ ಮೇಲೆ ಇರುವ ಕ್ರಿಮಿನಲ್ ಮೊಕದ್ದಮೆ ವಿವರಗಳನ್ನು ಪಕ್ಷದ ವೆಬ್‍ಸೈಟ್‍ಗಳಲ್ಲಿ ಪ್ರಕಟಿಸಬೇಕು ಎಂದೂ ನ್ಯಾಯಪೀಠವು ಆದೇಶಿಸಿದೆ. ನ್ಯಾಯಪೀಠದ ಈ ಕ್ರಮ ರಾಜಕೀಯ ಪಕ್ಷಗಳಲ್ಲಿ ನಾಚಿಕೆಯನ್ನು ಹುಟ್ಟು ಹಾಕಬಹುದೇ? ಇನ್ನು ಮುಂದೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ, ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿಗಳನ್ನು ಆಯ್ಕೆ ಪ್ರಕ್ರಿಯೆಯಿಂದ ದೂರ ಇಡುವು ದಕ್ಕೆ ತೀರ್ಪು ಪ್ರೇರಣೆ ನೀಡಬಹುದೇ? ಈ ಪ್ರಶ್ನೆಗಳಿಗೆ ಈಗಲೇ ಉತ್ತರ ಹೇಳುವುದು ಕಷ್ಟ.

ಚುನಾವಣೆಯಲ್ಲಿ ಸ್ಪರ್ಧಿಸಲು ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಗಳಿಗೆ ಟಿಕೆಟ್ ನೀಡುವುದು ನೈತಿಕ ನೆಲೆಯಲ್ಲಿ ಸರಿಯಾದ ನಡೆಯಲ್ಲ. ಜನಹಿತಕ್ಕಾಗಿ ಕಾನೂನುಗಳನ್ನು ರೂಪಿಸುವ ಸಂಸದೀಯ ವೇದಿಕೆ ಗಳಲ್ಲಿ ಕಾನೂನುಗಳನ್ನು ಮುರಿದವರನ್ನೇ ಆ ಕೆಲಸ ಕ್ಕಾಗಿ ನಿಯೋಜಿಸುವುದು ರಾಜಕೀಯ ಪಕ್ಷಗಳ ನೈತಿಕ ದಿವಾಳಿತನಕ್ಕೆ ಸಾಕ್ಷಿ ಎನ್ನುವುದು ಸ್ಪಷ್ಟ. ರಾಜಕೀಯದಲ್ಲಿ ಹೆಚ್ಚುತ್ತಿರುವ ಅಪರಾಧೀಕರಣವನ್ನು ತಡೆಗಟ್ಟಲು ಸಂಸದೀಯ ವ್ಯವಸ್ಥೆಯ ಒಳಗೇ ಸುಧಾರಣೆಗಳು ನಡೆಯಬೇಕು. ಆದರೆ ಸಂಸತ್ ಅಥವಾ ವಿಧಾನ ಮಂಡಲಗಳಿಂದ ಈ ವಿಷಯದಲ್ಲಿ ಹೆಚ್ಚಿನ ಸ್ಪಂದನ ವ್ಯಕ್ತವಾಗಿಲ್ಲ. ನ್ಯಾಯಾಂಗವು ಇಂತಹ ಕಠಿಣ ಕ್ರಮಗಳ ಮೂಲಕ ಮಹತ್ವದ ಹೆಜ್ಜೆಯನ್ನೇ ಇಟ್ಟಿದೆ. ಚುನಾವಣಾ ಆಯೋಗವು ಇತ್ತೀಚಿನ ದಿನಗಳಲ್ಲಿ ಹಲ್ಲಿಲ್ಲದ ಹಾವಿನಂತೆ ವರ್ತಿಸುತ್ತಿರುವುದು ಎಲ್ಲರ ಗಮನಕ್ಕೂ ಬಂದಿದೆ. ಸುಪ್ರೀಂ ಕೋರ್ಟಿನ ನಿರ್ದೇಶನಗಳನ್ನು ಉಲ್ಲಂಘಿಸುವ ಪಕ್ಷಗಳ ಕುರಿತು ಕಾಲಕಾಲಕ್ಕೆ ಮಾಹಿತಿ ನೀಡಬೇಕು, ಚುನಾವಣಾ ಅಭ್ಯರ್ಥಿಗಳ ಕ್ರಿಮಿನಲ್ ಹಿನ್ನೆಲೆಯ ವಿವರಗಳನ್ನು ಒದಗಿಸುವ ಆ್ಯಪ್‍ಗಳನ್ನು ರೂಪಿಸಬೇಕೆಂದೂ ನ್ಯಾಯಪೀಠವು ಆಯೋಗಕ್ಕೆ ಸೂಚಿಸಿರುವುದು ಗಮನಾರ್ಹ ಸಂಗತಿ. ರಾಜಕೀಯದಲ್ಲಿ ಅಪರಾಧೀಕರಣವನ್ನು ತಡೆಗಟ್ಟಲು ಕಾನೂನಿಗೆ ತಿದ್ದುಪಡಿ ತರಬೇಕಾದ ಅಗತ್ಯದ ಬಗೆಗೆ ನ್ಯಾಯಾಲಯವು ಈ ಹಿಂದೆಯೇ ಪ್ರಸ್ತಾಪಿಸಿದೆ. ಕ್ರಿಮಿನಲ್ ಪ್ರಕರಣವೊಂದರಲ್ಲಿ ಎರಡು ವರ್ಷಕ್ಕಿಂತ ಹೆಚ್ಚು ಜೈಲು ಶಿಕ್ಷೆ ಅನುಭವಿಸಿದ ವ್ಯಕ್ತಿಯು ಶಿಕ್ಷೆ ಪೂರೈಸಿದ ಬಳಿಕ ಆರು ವರ್ಷಗಳವರೆಗೆ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂಬ ಅಂಶ ಪ್ರಜಾಪ್ರಾತಿನಿಧ್ಯ ಕಾಯ್ದೆಯಲ್ಲಿ ಇದೆ. ಆದರೆ ನಮ್ಮಲ್ಲಿ ಬಹುತೇಕ ಕ್ರಿಮಿನಲ್ ಪ್ರಕರಣಗಳಲ್ಲಿ ತೀರ್ಪು ಹೊರಬರಲು ನ್ಯಾಯಾಂಗದ ಪ್ರಕ್ರಿಯೆಯು ಸುದೀರ್ಘ ಅವಧಿಯನ್ನು ತೆಗೆದುಕೊಳ್ಳುತ್ತಿದೆ. ಕ್ರಿಮಿನಲ್ ಹಿನ್ನೆಲೆಯಬಹುತೇಕ ವ್ಯಕ್ತಿಗಳು ವಿಳಂಬ ನ್ಯಾಯದ ಈ ಅವಕಾಶವನ್ನೇ ರಾಜಕೀಯವಾಗಿ ದುರುಪಯೋಗಪಡಿಸಿಕೊಳ್ಳುತ್ತಿರುವುದು ಸ್ಪಷ್ಟ. ನ್ಯಾಷನಲ್ ಎಲೆಕ್ಷನ್ ವಾಚ್ ಮತ್ತು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್‌ ಸಂಸ್ಥೆಗಳು ಪ್ರಕಟಿಸಿದ ಅಂಕಿ ಅಂಶಗಳ ಪ್ರಕಾರ, ಅಸ್ಸಾಂ, ಕೇರಳ, ಪುದುಚೇರಿ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದ ವಿಧಾನಸಭೆಗಳ ಚುನಾವಣೆಗೆ ಸ್ಪರ್ಧಿಸಿದ್ದ ಒಟ್ಟು 6,318 ಅಭ್ಯರ್ಥಿಗಳ ಪೈಕಿ 1,157 ಅಭ್ಯರ್ಥಿಗಳ ವಿರುದ್ಧ ನ್ಯಾಯಾಲಯಗಳಲ್ಲಿ ಕ್ರಿಮಿನಲ್ ಪ್ರಕರಣಗಳು ಬಾಕಿ ಉಳಿದಿವೆ. ಪ್ರಜಾ ಪ್ರಾತಿನಿಧ್ಯ ಕಾಯ್ದೆಯನ್ನು ಸೂಕ್ತ ತಿದ್ದುಪಡಿಗಳ ಮೂಲಕ ಇನ್ನಷ್ಟು ಬಲಪಡಿಸಬೇಕಾದ ಅಗತ್ಯವಿದೆ ಎನ್ನುವುದನ್ನು ಇದು ಸೂಚಿಸುತ್ತಿದೆ. ಸದಾ ವೋಟ್‍ಬ್ಯಾಂಕ್ ಮೇಲೆ ಕಣ್ಣಿಟ್ಟು, ಗೆಲುವು ಮಾತ್ರ ಅಭ್ಯರ್ಥಿ ಆಯ್ಕೆಗೆ ಮಾನದಂಡ ಎಂದುಕೊಂಡಿರುವ ರಾಜಕೀಯ ಪಕ್ಷಗಳಿಂದ ಇಂತಹ ನೈತಿಕ ನಿಲುವನ್ನು ನಿರೀಕ್ಷಿಸಲು ಸಾಧ್ಯವಿಲ್ಲದ ಪರಿಸ್ಥಿತಿ ದೇಶದಲ್ಲಿದೆ. ಈ ಕೆಲಸ ಮಾಡಬೇಕಾದ ಜವಾಬ್ದಾರಿ ಶಾಸಕಾಂಗದ್ದು. ನಮ್ಮ ಸಂಸದರು ಮತ್ತು ಶಾಸಕರು ಈ ದಿಸೆಯಲ್ಲಿ ಕಾನೂನು ತಿದ್ದುಪಡಿ ತರಲು ಶೀಘ್ರ ಕ್ರಮಗಳನ್ನು ಕೈಗೊಳ್ಳುವರೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT