ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂಜಾಕಾರ್ಯದ ಹೆಸರು ಬದಲಾವಣೆ: ಧ್ರುವೀಕರಣದ ಮತ್ತೊಂದು ಯತ್ನ

ಸಂಪಾದಕೀಯ
Last Updated 13 ಡಿಸೆಂಬರ್ 2022, 19:30 IST
ಅಕ್ಷರ ಗಾತ್ರ

ಟಿಪ್ಪು ಸುಲ್ತಾನ್‌ ಕಾಲದಿಂದಲೂ ರಾಜ್ಯದ ಕೆಲವು ದೇವಾಲಯಗಳಲ್ಲಿ ನಡೆಯುತ್ತಿರುವ ‘ಸಲಾಂ ಆರತಿ’ ಸೇರಿದಂತೆ ಕೆಲವು ಪೂಜಾಕಾರ್ಯಗಳ ಹೆಸರುಗಳನ್ನು ಬದಲಾಯಿಸಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮ ಕುಚೋದ್ಯದಿಂದ ಕೂಡಿರುವಂಥದ್ದು. ಹಿಂದುತ್ವವಾದಿಗಳನ್ನು ತುಷ್ಟೀಕರಿಸುವ ಹಾಗೂ ಅಲ್ಪಸಂಖ್ಯಾತರ ಮನಸ್ಸಿಗೆ ಗಾಸಿ ಉಂಟುಮಾಡುವ ಕುತ್ಸಿತ ಮನೋಭಾವವು ಇಂತಹ ತೀರ್ಮಾನದ ಹಿಂದೆ ಕೆಲಸ ಮಾಡಿರುವುದು ಸುಸ್ಪಷ್ಟ. ದೇವಾಲಯಗಳಲ್ಲಿ ನಡೆಯುವ ಸಂಪ್ರದಾಯಗಳನ್ನು ‘ಸ್ಥಳೀಯ’ ಹೆಸರುಗಳಿಂದ ಕರೆಯುವ ಸಲುವಾಗಿ ಈ ಮರುನಾಮಕರಣ ಮಾಡಲಾಗುತ್ತಿದೆ ಎಂಬ ಪ್ರತಿಪಾದನೆಯನ್ನೇನೋ ಸರ್ಕಾರ ಮಾಡಿದೆ. ಆದರೆ, ಅಸಹಿಷ್ಣುತೆಯ ಧ್ವನಿಗೆ ಬಲ ತುಂಬಿ, ಸಮಾಜದ ಧ್ರುವೀಕರಣಕ್ಕೂ ಕಾರಣವಾಗಿ ರಾಜಕೀಯ ಲಾಭವನ್ನು ಪಡೆಯುವುದೇ ಇಲ್ಲಿನ ಮುಖ್ಯ ಗುರಿಯಾಗಿದೆ. ಕೊಲ್ಲೂರು ಮೂಕಾಂಬಿಕಾ ಹಾಗೂ ಮೇಲುಕೋಟೆಯ ಚೆಲುವನಾರಾಯಣಸ್ವಾಮಿ ದೇವಾಲಯ ಸೇರಿದಂತೆ ರಾಜ್ಯದ ಕೆಲವು ದೇವಾಲಯಗಳಲ್ಲಿ ಲಾಗಾಯ್ತಿನಿಂದ ಈ ಆಚರಣೆಗಳು ನಡೆಯುತ್ತಿವೆ. ಇನ್ನುಮುಂದೆ ‘ಸಲಾಂ ಆರತಿ’, ‘ಸಲಾಂ ಮಂಗಳಾರತಿ’, ‘ದೀವಟಿಗೆ ಸಲಾಂ’ ಆಚರಣೆ ಗಳನ್ನು ಕ್ರಮವಾಗಿ ‘ಆರತಿ ನಮಸ್ಕಾರ’, ‘ಮಂಗಳಾರತಿ ನಮಸ್ಕಾರ’, ‘ದೀವಟಿಗೆ ನಮಸ್ಕಾರ’ ಎಂಬ ಹೆಸರುಗಳಿಂದ ಕರೆಯಲು ನಿರ್ಧರಿಸಲಾಗಿದೆ. ‘ಹೆಸರು ಬದಲಿಸಬೇಕು ಎಂದು ಭಕ್ತಾದಿಗಳಿಂದ ಒತ್ತಾಯ ಬಂದಿತ್ತು. ಈ ಬಗ್ಗೆ ವಿಸ್ತೃತವಾಗಿ ಚರ್ಚಿಸಿ, ಆಗಮ ಪಂಡಿತರ ಅಭಿಪ್ರಾಯದಂತೆ ಈ ತೀರ್ಮಾನ ಕೈಗೊಳ್ಳಲಾಗಿದೆ’ ಎಂದು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ. ಹೆಸರುಗಳಷ್ಟೇ ಬದಲಾಗಲಿದ್ದು, ಈ ಹಿಂದಿನಿಂದ ನಡೆದುಕೊಂಡು ಬಂದಿರುವ ಸಂಪ್ರದಾಯ ಮತ್ತು ಪೂಜಾಕಾರ್ಯಗಳು ಯಥಾಪ್ರಕಾರ ಮುಂದುವರಿಯಲಿವೆ ಎಂದೂ ಸಚಿವೆ ಸ್ಪಷ್ಟಪಡಿಸಿದ್ದಾರೆ. ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರದಲ್ಲಿರುವಾಗ ‘ಭಕ್ತ’ರಿಂದ ಹೇಗೆ ಮತ್ತು ಯಾಕೆ ಈ ದಿಢೀರ್‌ ಆಗ್ರಹ ಕೇಳಿಬಂತು ಎಂಬ ಪ್ರಶ್ನೆಗೆ ಜೊಲ್ಲೆ ಅವರು ಉತ್ತರಿಸುವ ಗೋಜಿಗೆ ಹೋಗಿಲ್ಲ.

ಟಿಪ್ಪು ಸುಲ್ತಾನನು ದೇವಾಲಯಗಳಿಗೆ ಭೇಟಿ ನೀಡಿ, ಕಾಣಿಕೆ ಅರ್ಪಿಸಿದ ನೆನಪಿಗಾಗಿ ‘ಸಲಾಂ ಆರತಿ’ ನಡೆಯುತ್ತಾ ಬಂದಿದೆ ಎನ್ನುವುದು ಒಂದು ವಾದ. ಮೈಸೂರು ರಾಜ್ಯದ ಒಳಿತಿಗಾಗಿ ಟಿಪ್ಪುವೇ ದೇವಾಲಯಗಳಲ್ಲಿ ಈ ಆಚರಣೆಗಳನ್ನು ಆರಂಭಿಸಿದ್ದ ಎನ್ನುವುದು ಇನ್ನೊಂದು ವಾದ. ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದಮೇಲೆ ಟಿಪ್ಪು ಜಯಂತಿ ಆಚರಣೆಯನ್ನು ರದ್ದುಗೊಳಿಸ
ಲಾಯಿತು. ನಾಲ್ಕು ದಶಕಗಳಿಂದಲೂ ‘ಟಿಪ್ಪು ಎಕ್ಸ್‌ಪ್ರೆಸ್‌’ ಎಂದೇ ಹೆಸರಾಗಿದ್ದ, ಬೆಂಗಳೂರು–ಮೈಸೂರು ನಡುವೆ ಸಂಚರಿಸುವ ಸೂಪರ್‌ಫಾಸ್ಟ್‌ ರೈಲಿಗೆ ಕೆಲ ತಿಂಗಳ ಹಿಂದೆಯಷ್ಟೇ ಕೇಂದ್ರ ಸರ್ಕಾರವು ‘ಒಡೆಯರ್‌ ಎಕ್ಸ್‌ಪ್ರೆಸ್‌’ ಎಂದು ಮರುನಾಮಕರಣ ಮಾಡಿತು. ಮೊನ್ನೆ ಮೊನ್ನೆ ಮೈಸೂರಿನಲ್ಲಿ ನಿರ್ಮಿಸಲಾಗಿದ್ದ ಬಸ್‌ ತಂಗುದಾಣವೊಂದು ಅದರ ಮೇಲಿನ ಗುಂಬಜ್‌ಗಳಿಂದಾಗಿ ಮಸೀದಿಯಂತೆ ಕಾಣುತ್ತದೆ ಎಂದು ಬಿಜೆಪಿಯಸ್ಥಳೀಯ ಸಂಸದ ಆಕ್ಷೇಪಿಸಿದ್ದರಿಂದ, ಆ ತಂಗುದಾಣದ ಮೇಲಿನ ಗುಂಬಜ್‌ಗಳನ್ನು ರಾತ್ರೋರಾತ್ರಿ ತೆರವುಗೊಳಿಸಲಾಯಿತು. ಪೂಜಾಕಾರ್ಯಗಳ ಆಚರಣೆಗಳಿಗೆ ಮರುನಾಮಕರಣ ಮಾಡುತ್ತಿರುವ ವಿದ್ಯಮಾನವನ್ನು ಮೇಲಿನ ಎಲ್ಲ ಘಟನೆಗಳ ಹಿನ್ನೆಲೆಯಲ್ಲಿ ಅವಲೋಕಿಸುವುದು ಅಗತ್ಯ.

ಯಾವುದೇ ಆಚರಣೆ ಇಲ್ಲವೆ ಸಂಪ್ರದಾಯದ ಹೆಸರನ್ನು ಬದಲಾಯಿಸಿದ ಮಾತ್ರಕ್ಕೆ ಅದಕ್ಕಿರುವ ಅರ್ಥ ಮತ್ತು ಮಹತ್ವದಲ್ಲಿ ಏನೂ ವ್ಯತ್ಯಾಸವಾಗುವುದಿಲ್ಲ. ಹೆಸರು ಬದಲಾವಣೆಗೆ ನೀಡಿದ ಕಾರಣವೇನೂ ಗಹನವಾದುದಲ್ಲ. ‘ಸಲಾಂ’ ಪದದ ಸ್ಥಾನವನ್ನು ತುಂಬಿರುವ ಹೊಸ ಪದ ‘ಸಲಾಂ’ಗಿಂತಲೂ ‘ಸ್ಥಳೀಯ’ವಾದುದು ಎಂದೇನೂ ಅನಿಸುವುದಿಲ್ಲ. ಅಲ್ಲದೆ, ದೇವರ ಪೂಜೆಗೆ ಯಾವ ಭಾಷೆ ಆದರೇನು? ವಾಸ್ತವವಾಗಿ, ‘ಸಲಾಂ ಆರತಿ’ ಎಂಬ ನುಡಿಗಟ್ಟು ಬಹುತ್ವದ ಸಂಕೇತವಾಗಿದ್ದು, ಈ ನುಡಿಗಟ್ಟನ್ನು ಮತ್ತು ಅದರ ಹಿಂದಿರುವ ಪರಿಕಲ್ಪನೆಯನ್ನು ನಾವು ಸಂಭ್ರಮಿಸಬೇಕು. ದೇವಾಲಯದ ಕೆಲವು ಆಚರಣೆಗಳಿಗೆ ಮುಸ್ಲಿಂ ದೊರೆಯೊಬ್ಬ ಕಾರಣವಾಗಿದ್ದು ಕೂಡ ಹೆಮ್ಮೆಪಡಬೇಕಾದ ಸಂಗತಿಯೇ ಸರಿ. ಹಲವು ಪೀಳಿಗೆಗಳಿಂದ ಈ ಆಚರಣೆಗಳು ಉಳಿದುಕೊಂಡು ಬಂದಿರುವುದು ಸಮಾಜ ಅವುಗಳನ್ನು ಹೃತ್ಪೂರ್ವಕವಾಗಿ ಒಪ್ಪಿಕೊಂಡಿರುವುದರ ಸಂಕೇತ. ಅಲ್ಲದೆ, ಈ ಆಚರಣೆಗಳು ಸಮುದಾಯಗಳ ನಡುವಿನ ಗಟ್ಟಿ ಸಂಬಂಧದ ಪ್ರತೀಕಗಳೂ ಹೌದು. ಕೋಮು ಭಾವನೆಯಿಂದ ಕದಡಿದ ಮನಸ್ಸುಗಳು ಮಾತ್ರ ಇಂತಹ ಆಚರಣೆಗಳಲ್ಲಿ ತಪ್ಪು ಹುಡುಕಲು ಸಾಧ್ಯ. ಚಾರಿತ್ರಿಕ ಪುರುಷನೊಬ್ಬ ನಿರ್ದಿಷ್ಟ ಸಮುದಾಯಕ್ಕೆ ಸೇರಿದವನು ಎಂಬ ಕಾರಣಕ್ಕಾಗಿ ಅಥವಾ ಪ್ರಸ್ತುತ ಅಧಿಕಾರದಲ್ಲಿರುವ ಪಕ್ಷದ ರಾಜಕೀಯ ನಿರೂಪಣೆಗೆ ವಾಸ್ತವಾಂಶಗಳು ಸರಿಹೊಂದುವುದಿಲ್ಲ ಎಂಬ ಕಾರಣಕ್ಕಾಗಿ ಇತಿಹಾಸವನ್ನು ತಿರುಚುವುದು, ಅಳಿಸಿ ಹಾಕುವುದು ಇಲ್ಲವೆ ಮೂಗಿನ ನೇರಕ್ಕೆ ಮರುಸೃಷ್ಟಿಸುವುದು ದೊಡ್ಡ ತಪ್ಪಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT