ಗುರುವಾರ , ಮಾರ್ಚ್ 23, 2023
20 °C

ಸಂಪಾದಕೀಯ: ತೈಲ ಬೆಲೆ ಇಳಿಕೆ ಸ್ವಾಗತಾರ್ಹ; ಅಗತ್ಯವಾಗಿತ್ತು, ವಿಳಂಬವೂ ಆಯಿತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಎಕ್ಸೈಸ್ ಸುಂಕವನ್ನು ಕ್ರಮವಾಗಿ ₹ 5 ಹಾಗೂ ₹ 10ರಷ್ಟು ತಗ್ಗಿಸಿದೆ. ಕೇಂದ್ರದ ಈ ಕ್ರಮಕ್ಕೆ ಪ್ರತಿಯಾಗಿ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು (ವ್ಯಾಟ್) ತಗ್ಗಿಸುವ ಘೋಷಣೆ ಮಾಡಿವೆ. ಕರ್ನಾಟಕದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್‌ ಪ್ರಮಾಣದಲ್ಲಿ ತಲಾ ₹ 7ರಷ್ಟು ಇಳಿಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದ್ದಾರೆ. ‘ಹಿಂಗಾರು ಹಂಗಾಮಿನಲ್ಲಿ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಡೀಸೆಲ್ ಮೇಲೆ ₹ 10ರಷ್ಟು ಬೆಲೆ ಇಳಿಕೆ ಮಾಡಲಾಗಿದೆ. ಅಲ್ಲದೆ, ಹಬ್ಬದ ಸಂದರ್ಭದಲ್ಲಿ ಜನರು ಖರೀದಿ ಚಟುವಟಿಕೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೊಡಗಲಿ, ಆರ್ಥಿಕ ಚಟುವಟಿಕೆಗಳು ಬಿರುಸು ಪಡೆಯಲಿ ಎಂಬ ಉದ್ದೇಶವೂ ಎಕ್ಸೈಸ್ ಸುಂಕ ಇಳಿಕೆಯ ಹಿಂದೆ ಇದೆ. ಡೀಸೆಲ್ ಬೆಲೆ ಇಳಿಕೆಯಿಂದ ಹಣದುಬ್ಬರ ತಗ್ಗಬಹುದು’ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ. ಅತ್ಯಂತ ಅಗತ್ಯವಾಗಿದ್ದ, ಸ್ವಾಗತಾರ್ಹ ತೀರ್ಮಾನವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ ಎಂಬುದರಲ್ಲಿ ಅನುಮಾನ ಇಲ್ಲ. ಈ ಕ್ರಮವನ್ನು ಅದು ಬಹಳ ಹಿಂದೆಯೇ ತೆಗೆದುಕೊಳ್ಳಬಹುದಿತ್ತು. ಆದರೆ, ಅದನ್ನು ಈಗ ಮಾಡಿರುವುದರ ಹಿಂದೆ ರಾಜಕೀಯ ಲೆಕ್ಕಾಚಾರಗಳು ಇಲ್ಲವೇ ಇಲ್ಲ ಎನ್ನಲು ಸಾಧ್ಯವಿಲ್ಲ. ದೇಶದ ವಿವಿಧ ರಾಜ್ಯಗಳ ಒಟ್ಟು 29 ವಿಧಾನಸಭಾ ಕ್ಷೇತ್ರಗಳಿಗೆ ಹಾಗೂ ಮೂರು ಲೋಕಸಭಾ ಕ್ಷೇತ್ರಗಳಿಗೆ ಈಚೆಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಒಟ್ಟಾರೆಯಾಗಿ ತುಸು ಹಿನ್ನಡೆ ಅನುಭವಿಸಿದೆ. ಹಿಮಾಚಲ ಪ್ರದೇಶದಲ್ಲಿ ದೊಡ್ಡ ಹಿನ್ನಡೆ ಕಂಡಿದೆ. ಕರ್ನಾಟಕದಲ್ಲಿನ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶವು ಬಿಜೆಪಿಗೆ ಅಲ್ಪತೃಪ್ತಿಯನ್ನಷ್ಟೇ ತಂದಿರಬಹುದು. ಈ ಫಲಿತಾಂಶಗಳು ಬಂದ ಒಂದೇ ದಿನದಲ್ಲಿ ಕೇಂದ್ರವು ಈ ತೈಲೋತ್ಪನ್ನಗಳ ಮೇಲಿನ ಎಕ್ಸೈಸ್ ಸುಂಕವನ್ನು ತಗ್ಗಿಸಿದೆ.

2022ರ ಆರಂಭದಲ್ಲಿಯೇ ಉತ್ತರಪ್ರದೇಶ, ಉತ್ತರಾಖಂಡ, ಪಂಜಾಬ್, ಗೋವಾ ಮತ್ತು ಮಣಿಪುರ ರಾಜ್ಯ ವಿಧಾನಸಭೆಗಳಿಗೆ ಚುನಾವಣೆ ನಡೆಯಲಿದೆ. ಈ ರಾಜ್ಯಗಳ ಪೈಕಿ ಉತ್ತರಪ್ರದೇಶವು ಬಿಜೆಪಿ ಪಾಲಿಗೆ ಬಹುಮುಖ್ಯವಾದುದು. ಕೋವಿಡ್‌ ಸಾಂಕ್ರಾಮಿಕವು ವಿಶ್ವವನ್ನು ಅಪ್ಪಳಿಸಿದ ನಂತರದಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯು ತೀರಾ ಕಡಿಮೆ ಮಟ್ಟಕ್ಕೆ ಕುಸಿದಿದ್ದಾಗಲೂ, ದೇಶಿ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳವಾದ ಪರಿಯು ಜನಸಾಮಾನ್ಯರನ್ನು ಹಿಂಡಿ ಹಿಪ್ಪೆ ಮಾಡಿತ್ತು. ಈ ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣ ಸರ್ಕಾರಗಳು ಹೆಚ್ಚಿಸಿದ ಸುಂಕ ಮತ್ತು ತೆರಿಗೆ. ತೈಲೋತ್ಪನ್ನಗಳ ದರವು ದೇಶದಲ್ಲಿ ಸರ್ಕಾರದ ನಿಯಂತ್ರಣದಿಂದ ಮುಕ್ತವಾಗಿದೆ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ದರ ಏರಿಳಿತಗಳಿಗೆ ಅನುಗುಣವಾಗಿ ದೇಶಿ ಮಾರುಕಟ್ಟೆಯಲ್ಲಿಯೂ ಬೆಲೆ ನಿಗದಿ ಆಗುತ್ತದೆ ಎಂದು ಕೇಂದ್ರ ಸರ್ಕಾರ ಎಷ್ಟೇ ಹೇಳಿದರೂ ವಾಸ್ತವ ಬೇರೆಯೇ ಆಗಿರುತ್ತಿತ್ತು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ತಗ್ಗಿದಾಗ ದೇಶದಲ್ಲಿ ತೈಲೋತ್ಪನ್ನಗಳಿಗೆ ಸುಂಕ ಅಥವಾ ತೆರಿಗೆ ಹೆಚ್ಚಿಸಿ, ಬೆಲೆ ಇಳಿಕೆಯ ಪ್ರಯೋಜನವು ಜನಸಾಮಾನ್ಯರಿಗೆ ಸಿಗದಂತೆ ಮಾಡಲಾಗುತ್ತಿತ್ತು.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆ ಕಂಡಾಗ, ದೇಶಿ ಮಾರುಕಟ್ಟೆಯಲ್ಲಿ ತೈಲೋತ್ಪನ್ನಗಳ ಬೆಲೆ ಹೆಚ್ಚಿಸುವುದು ಇದ್ದೇ ಇತ್ತು. 2020ರ ಮಾರ್ಚ್‌–ಮೇ ನಡುವೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಎಕ್ಸೈಸ್ ಸುಂಕವನ್ನು ಕೇಂದ್ರವು ಕ್ರಮವಾಗಿ ₹ 13 ಹಾಗೂ ₹ 16ರಷ್ಟು ಏರಿಸಿತ್ತು. ಇಂತಹ ಕ್ರಮಗಳಿಂದಾಗಿ ದೇಶದ ಬಹುತೇಕ ಕಡೆಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರ ₹ 100ರ ಗಡಿ ದಾಟಿತ್ತು.

ಹಣದುಬ್ಬರ ಪ್ರಮಾಣವನ್ನು ನಿಯಂತ್ರಣದಲ್ಲಿ ಇರಿಸಬೇಕಾದ ಹೊಣೆ ಹೊತ್ತಿರುವ ಭಾರತೀಯ ರಿಸರ್ವ್‌ ಬ್ಯಾಂಕ್, ತೆರಿಗೆ ಪ್ರಮಾಣ ಕಡಿತ ಮಾಡಬೇಕು ಎಂದು ಮತ್ತೆ ಮತ್ತೆ ಹೇಳಿತ್ತು. ಉಪಚುನಾವಣೆಗಳ ನಂತರದಲ್ಲಿ, ಪ್ರಮುಖ ರಾಜ್ಯಗಳ ವಿಧಾನಸಭಾ ಚುನಾವಣೆಗಳು ಹತ್ತಿರವಾಗುತ್ತಿರುವ ಹೊತ್ತಿನಲ್ಲಿ ಜನರ ಕಷ್ಟ ಸರ್ಕಾರಗಳ ಕಣ್ಣಿಗೆ ಬಿದ್ದಿದೆ. ವಿರೋಧ ಪಕ್ಷಗಳ ಹಾಗೂ ಆರ್‌ಬಿಐನ ಮನವಿ, ಒತ್ತಾಯ ಕಿವಿಗೆ ಕೇಳಿಸಿದೆ. ಈ ಮನವಿ, ಒತ್ತಾಯಗಳಿಗೆ ಸರ್ಕಾರಗಳು ಈಗ ಸ್ಪಂದಿಸಿವೆ. 

ಸರ್ಕಾರಗಳು ತೈಲೋತ್ಪನ್ನಗಳ ಬೆಲೆಯನ್ನು ನಿಯಂತ್ರಣಮುಕ್ತಗೊಳಿಸುವ ಇರಾದೆ ನಿಜಕ್ಕೂ ತಮಗೆ ಇದೆಯೇ ಎಂಬುದನ್ನು ಸ್ಪಷ್ಟಪಡಿಸಬೇಕು. ಕಚ್ಚಾ ತೈಲದ ಬೆಲೆ ತಗ್ಗಿದಾಗ, ಸುಂಕ ಹೆಚ್ಚಿಸುವುದು ನಿಯಂತ್ರಣಮುಕ್ತಗೊಳಿಸುವ ನಡೆ ಆಗುವುದಿಲ್ಲ. ಅದು ಬೆಲೆಯನ್ನು ಸರ್ಕಾರವೇ ತೀರ್ಮಾನಿಸುವ ವ್ಯವಸ್ಥೆ ಆಗುತ್ತದೆ. ಮುಕ್ತ ಮಾರುಕಟ್ಟೆ ನೀತಿಯನ್ನು ಬೆಂಬಲಿಸುವುದಾಗಿ ಹೇಳಿಕೊಳ್ಳುವ ಸರ್ಕಾರಗಳು ಈ ಕ್ರಮವನ್ನು ಹೇಗೆ ಸಮರ್ಥಿಸಿಕೊಳ್ಳುತ್ತವೆ? ಎಕ್ಸೈಸ್ ಸುಂಕ ತಗ್ಗಿಸಿರುವುದರಿಂದಾಗಿ ಕೇಂದ್ರ ಸರ್ಕಾರಕ್ಕೆ ಹಾಲಿ ಹಣಕಾಸು ವರ್ಷದಲ್ಲಿ ಬರಬಹುದಾಗಿದ್ದ ವರಮಾನದಲ್ಲಿ ₹ 43,500 ಕೋಟಿ ಕಡಿಮೆ ಆಗಲಿದೆ ಎಂಬ ಅಂದಾಜು ಇದೆ.

ಆದರೆ, ಬೆಲೆ ಇಳಿಕೆಯ ಕಾರಣದಿಂದಾಗಿ ಜನ ಸಂಚಾರ ಮಾಡುವುದು ಹೆಚ್ಚಾಗುತ್ತದೆ. ಆಗ ತೈಲೋತ್ಪನ್ನಗಳ ಬಳಕೆ ಈಗಿನ ಮಟ್ಟಕ್ಕಿಂತ ಹೆಚ್ಚಾಗಿ, ವರಮಾನ ಸಂಗ್ರಹ ಹೆಚ್ಚುತ್ತದೆ. ಡೀಸೆಲ್ ಬೆಲೆ ಇಳಿಕೆಯಿಂದಾಗಿ ಹಣದುಬ್ಬರ ಕಡಿಮೆಯಾಗಿ, ಜನ ಮಾರುಕಟ್ಟೆಗಳಲ್ಲಿ ವಸ್ತುಗಳನ್ನು ಖರೀದಿಸುವುದು ಜಾಸ್ತಿ ಆಗಬಹುದು. ಆಗ ಜಿಎಸ್‌ಟಿ ವ್ಯವಸ್ಥೆಯ ಮೂಲಕ ಸರ್ಕಾರಗಳಿಗೆ ವರಮಾನ ಹೆಚ್ಚಬಹುದು ಎಂದು ಅರ್ಥಶಾಸ್ತ್ರಜ್ಞರಲ್ಲಿ ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೀಗಾಗಿ, ಸರ್ಕಾರಗಳು ಬೆಲೆ ತಗ್ಗಿಸಿ, ತಾವು ನಷ್ಟ ಉಂಡು ಜನರಿಗೆ ಮಹದುಪಕಾರ ಮಾಡಿರುವುದಾಗಿ ಹೇಳಿಕೊಳ್ಳಬೇಕಾಗಿಲ್ಲ. ಜನರ ಹಿತದೃಷ್ಟಿಯಿಂದ ತೀರಾ ಅಗತ್ಯವಾಗಿದ್ದ ಕ್ರಮವೊಂದನ್ನು ಸರ್ಕಾರಗಳು ತಡವಾಗಿಯಾದರೂ ಕೈಗೊಂಡಿವೆ ಎಂದಷ್ಟೇ ಹೇಳಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು