ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ದ್ವೇಷ ಭಾಷಣಕಾರರಿಗೆ ಸಂಸತ್ತಿನಲ್ಲಿ ಸ್ಥಾನವಿರುವುದೇ ದುರದೃಷ್ಟಕರ

Last Updated 30 ಡಿಸೆಂಬರ್ 2022, 0:15 IST
ಅಕ್ಷರ ಗಾತ್ರ

ಭೋಪಾಲ್‌ನ ಸಂಸದೆ, ಬಿಜೆಪಿಯ ಪ್ರಜ್ಞಾ ಸಿಂಗ್ ಠಾಕೂರ್‌ ಅವರು ತಮ್ಮ ಭಂಡ ಮಾತುಗಳ ಮೂಲಕ ಮತ್ತೊಮ್ಮೆ ಲಕ್ಷ್ಮಣ ರೇಖೆಯನ್ನು ದಾಟಿದ್ದಾರೆ. ಮುಸ್ಲಿಮರ ವಿರುದ್ಧ ಹಿಂದೂಗಳು ಆಯುಧ ಕೈಗೆತ್ತಿಕೊಳ್ಳಬೇಕು ಎಂದು ಶಿವಮೊಗ್ಗದಲ್ಲಿ ಭಾನುವಾರ ನಡೆದ ಹಿಂದೂ ಜಾಗರಣ ವೇದಿಕೆಯ ಕಾರ್ಯಕ್ರಮದಲ್ಲಿ ಅವರು ಹೇಳಿದ್ದಾರೆ. ಹಿಂದೂಗಳು ತಮ್ಮ ಹೆಣ್ಣು ಮಕ್ಕಳ ರಕ್ಷಣೆ ಮಾಡಬೇಕು ಮತ್ತು ಮನೆಯಲ್ಲಿ ಆಯುಧ ಇರಿಸಿಕೊಳ್ಳಬೇಕು ಎಂದಿದ್ದಾರೆ. ‘ಅವರು ನಮ್ಮ ಹರ್ಷನನ್ನು (ಬಜರಂಗದಳದ ಕಾರ್ಯಕರ್ತರಾಗಿದ್ದ ಅವರು ಈ ವರ್ಷದ ಆರಂಭದಲ್ಲಿ ಹತ್ಯೆಯಾಗಿದ್ದಾರೆ) ಇರಿದು ಕೊಂದರು. ಅವರು ನಮ್ಮ ಹಿಂದೂ ಹೀರೊಗಳನ್ನು ಕೊಂದಿದ್ದಾರೆ’ ಎಂದೂ ಹೇಳಿದ್ದಾರೆ. ‘ಮನೆಯಲ್ಲಿ ಆಯುಧ ಇಟ್ಟುಕೊಳ್ಳಿ, ಅವುಗಳನ್ನು ಹರಿತವಾಗಿ ಇರಿಸಿಕೊಳ್ಳಿ, ಇವು ತರಕಾರಿಯನ್ನು ಸರಿಯಾಗಿ ಕತ್ತರಿಸುತ್ತವೆ ಎಂದಾದರೆ, ನಮ್ಮ ಶತ್ರುಗಳ ಬಾಯಿ ಮತ್ತು ತಲೆಯನ್ನೂ ಕತ್ತರಿಸಬಲ್ಲವು’ ಎಂದಿದ್ದಾರೆ. ‘ಲವ್‌ ಜಿಹಾದ್‌’ ಸೇರಿದಂತೆ ಹಿಂದುತ್ವವಾದಿಗಳ ಅಚ್ಚುಮೆಚ್ಚಿನ ಎಲ್ಲ ವಿಚಾರಗಳನ್ನೂ ಅವರು ಪ್ರಸ್ತಾಪಿಸಿದ್ದಾರೆ. ಸರ್ಕಾರವು ಕಾನೂನು ಕ್ರಮ ಕೈಗೊಳ್ಳಬೇಕಾದ ರೀತಿಯಲ್ಲಿ ಅವರ ಹೇಳಿಕೆಗಳು ಪ್ರಚೋದನಕಾರಿಯಾಗಿದ್ದವು ಮತ್ತು ಗಂಭೀರವಾದ ರಾಜಕೀಯ ಪ್ರತಿಕ್ರಿಯೆಗೂ ಅರ್ಹವಾಗಿವೆ. ದ್ವೇಷ ಭಾಷಣಗಳಿಗೆ ತಡೆ ಒಡ್ಡಲೇಬೇಕು ಎಂದು ಸುಪ್ರೀಂ ಕೋರ್ಟ್‌ ಇತ್ತೀಚೆಗೆ ಹೇಳಿತ್ತು. ಅದಕ್ಕಾಗಿ ಕೆಲವು ಮಾರ್ಗಸೂಚಿಗಳನ್ನೂ ನೀಡಿತ್ತು. ದ್ವೇಷ ಭಾಷಣದ ಪ್ರಕರಣ ನಡೆದಾಗ ಸರ್ಕಾರವು ಸ್ವಯಂಪ್ರೇರಿತವಾಗಿ ಕ್ರಮ ಕೈಗೊಳ್ಳಬೇಕು, ದೂರು ಬರಬೇಕು ಎಂದು ಕಾಯಬಾರದು ಎಂದು ಸುಪ್ರೀಂ ಕೋರ್ಟ್‌ ಹೇಳಿತ್ತು. ಹಾಗಿದ್ದರೂ ಪ್ರಜ್ಞಾ ಪ್ರಕರಣದಲ್ಲಿ ಪೊಲೀಸರು ಈ ಮಾರ್ಗಸೂಚಿಯನ್ನು ಪಾಲಿಸಲಿಲ್ಲ. ದೂರು ಬರುವವರೆಗೂ ಸುಮ್ಮನಿದ್ದರು. ಕಾಂಗ್ರೆಸ್‌ ನೀಡಿದ ದೂರು ಆಧರಿಸಿ ಬುಧವಾರ ಎಫ್‌ಐಆರ್‌ ದಾಖಲಿಸಿದ್ದಾರೆ.

ಪ್ರಜ್ಞಾ ಅವರ ಹೇಳಿಕೆಗಳ ಹಿಂದೆ ಇದ್ದದ್ದು ಕಿಚ್ಚು ಹಚ್ಚುವ ಉದ್ದೇಶ. ಹಾಗಾಗಿ, ಹಿಂಸೆಗೆ ಪ್ರಚೋದನೆ ನೀಡಿದ ಮತ್ತು ದ್ವೇಷ ಭಾಷಣದ ಆರೋಪದಲ್ಲಿ ಅವರ ಮೇಲೆ ಕ್ರಮ ಕೈಗೊಳ್ಳಬೇಕು. ಇಂತಹ ವ್ಯಕ್ತಿಯೊಬ್ಬರಿಗೆ ಸಂಸತ್ತಿನಲ್ಲಿ ಸ್ಥಾನ ಇದೆ ಎಂಬುದೇ ದುರದೃಷ್ಟಕರ. ಬಿಜೆಪಿಯವರು ಮತ್ತು ಬಿಜೆಪಿಯ ಬೆಂಬಲಿಗರು ಪ‍್ರಜ್ಞಾ ಅವರ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಅವರು ಸ್ವರಕ್ಷಣೆ ಕುರಿತು ಮಾತನಾಡಿದ್ದಾರೆ ಮತ್ತು ಮುಸ್ಲಿಮರನ್ನು ಅವರು ಉಲ್ಲೇಖಿಸಿಯೇ ಇಲ್ಲ ಎಂದಿದ್ದಾರೆ. ಆದರೆ, ಅವರು ಹೇಳಿದ್ದು ಏನು ಎಂಬುದು ಬಹಳ ಸ್ಪಷ್ಟ. ಹಿಂದೂಗಳು ಮುಸ್ಲಿಮರ ವಿರುದ್ಧ ತಮ್ಮ ಆಯುಧಗಳನ್ನು ಹರಿತವಾಗಿಸಿಕೊಳ್ಳಿ ಎಂಬುದೇ ಅವರು ಹೇಳಿದ್ದರ ಅರ್ಥ. ಶಸ್ತ್ರಸಜ್ಜಿತರಾಗಿ ಎಂಬ ಕರೆ ಇದು. ನರಮೇಧಕ್ಕಾಗಿ ಈ ಹಿಂದೆ ನೀಡಿದ ಕರೆಗಳ ಮುಂದುವರಿದ ಭಾಗ ಇದು. ಈ ಕರೆಯ ಹಿಂದೆ ಇರುವ ಕೆಟ್ಟ ಉದ್ದೇಶವನ್ನು ಗುರುತಿಸಲು ನಿರಾಕರಿಸಿರುವುದು ಉದ್ದೇಶಪೂರ್ವಕವೇ. ಈ ಕರೆಯು ದೇಶದಲ್ಲಿ ಈಗ ಇರುವ ದ್ವೇಷ ಮತ್ತು ಹಿಂಸೆಯ ಮನೋಭಾವವನ್ನು ಇನ್ನಷ್ಟು ಗಾಢಗೊಳಿಸುತ್ತದೆ.

ಪ್ರಜ್ಞಾ ಅವರು ಭಯೋತ್ಪಾದನಾ ಪ್ರಕರಣದ ಆರೋಪಿ. ಆರು ಮಂದಿಯ ಸಾವಿಗೆ ಕಾರಣವಾದ ಮಾಲೇಗಾಂವ್‌ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಅವರು ವಿಚಾರಣೆ ಎದುರಿಸುತ್ತಿದ್ದಾರೆ. ದ್ವೇಷ ಕಾರುವ ಕೆಲಸವನ್ನು ಅವರು ಪದೇ ಪದೇ ಮಾಡಿದ್ದಾರೆ. ವಿವಿಧ ವಿಚಾರಗಳಿಗೆ ಸಂಬಂಧಿಸಿ ಅತ್ಯಂತ ಆಕ್ಷೇಪಾರ್ಹ ಮತ್ತು ಘಾತಕತನದ ಹೇಳಿಕೆಗಳನ್ನು ಅವರು ನೀಡಿದ್ದಾರೆ. ನಾಥೂರಾಮ್‌ ಗೋಡ್ಸೆಯನ್ನು ಅವರು ಹೊಗಳಿದ್ದರು. ಗೋಡ್ಸೆ ದೇಶಭಕ್ತ ಎಂದಿದ್ದರು. ಈ ಹೇಳಿಕೆ ನೀಡಿದ ಪ್ರಜ್ಞಾ ಅವರನ್ನು ಎಂದಿಗೂ
ಕ್ಷಮಿಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಪಕ್ಷದ ಶಿಸ್ತು ಸಮಿತಿ ಕೂಡ ಈ ಹೇಳಿಕೆಗಳ ಕುರಿತು ಗಮನ ಹರಿಸಿತ್ತು.

ಆದರೆ, ಮುಂದೆ ಯಾವ ಕ್ರಮವನ್ನೂ ಕೈಗೊಳ್ಳಲಾಗಿಲ್ಲ. ಪ್ರಜ್ಞಾ ಅವರು ದ್ವೇಷ ಹರಡುವ ಹೇಳಿಕೆಗಳನ್ನು ನೀಡುವುದನ್ನು ಮುಂದುವರಿಸಿದ್ದಾರೆ. ಪಕ್ಷವು ಅವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಇಂತಹ ಆಕ್ಷೇಪಾರ್ಹ ಹೇಳಿಕೆ ನೀಡಿದವರ ಮೇಲೆ ಕ್ರಮ ಕೈಗೊಳ್ಳಲು ಕಾನೂನಿನಲ್ಲಿ ಅವಕಾಶ ಇದೆ. ಅವರ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳದಿರುವ ಮೂಲಕ ದ್ವೇಷ ಮತ್ತು ಪ್ರಚೋದನಕಾರಿಯಾದ ಅವರ ರಾಜಕೀಯಕ್ಕೆ ಪ್ರೋತ್ಸಾಹ ಕೊಟ್ಟಂತಾಗಿದೆ. ಮತ್ತೆ ಮತ್ತೆ ನೀಡಲಾಗುವ ಇಂತಹ ಹೇಳಿಕೆಗಳ ಗುರಿ ಅಲ್ಪಸಂಖ್ಯಾತರು ಅದರಲ್ಲೂ ವಿಶೇಷವಾಗಿ ಮುಸ್ಲಿಮರೇ ಆಗಿದ್ದಾರೆ. ಅವರನ್ನು ಭೀತಗೊಳಿಸುವುದು ಇಂತಹ ಹೇಳಿಕೆಗಳ ಉದ್ದೇಶವಾಗಿದೆ. ದ್ವೇಷದ ವಾತಾವರಣವು ವಿಷಮಗೊಳ್ಳುತ್ತಲೇ ಇದೆ ಮತ್ತು ಇದುವೇ ಸಹಜ ಎನ್ನುವ ಮನೋಭಾವ ಮೂಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT