ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Editorial- ಹೆಚ್ಚಲಿದೆ ಸೆಕೆ ಅಲೆಗಳಿಂದ ಸಂಕಷ್ಟ: ಎಲ್ಲಿಂದ ಬಂದೀತು ನೆರವಿನ ಹಸ್ತ?

Published 3 ಏಪ್ರಿಲ್ 2024, 0:02 IST
Last Updated 3 ಏಪ್ರಿಲ್ 2024, 0:02 IST
ಅಕ್ಷರ ಗಾತ್ರ

ಚುನಾವಣೆಯ ಕಾವು ಹೆಚ್ಚುತ್ತಿರುವ ಅವಧಿಯಲ್ಲೇ ಈ ಬಾರಿ ಸೆಕೆಯ ಅಲೆಯೂ ಹಿಂದೆಂದಿಗಿಂತ ಹೆಚ್ಚಲಿದೆ ಎಂದು ಕೇಂದ್ರ ಹವಾಮಾನ ಇಲಾಖೆಯು ಎಚ್ಚರಿಕೆಯ ಮುನ್ಸೂಚನೆಯನ್ನು ನೀಡಿದೆ. ಏಪ್ರಿಲ್‌ನಿಂದ ಜೂನ್‌ ಅವಧಿಯಲ್ಲಿ ದೇಶದ ಬಹುತೇಕ ಕಡೆಗಳಲ್ಲಿ ಗರಿಷ್ಠ ತಾಪಮಾನವು ವಾಡಿಕೆಗಿಂತ ಹೆಚ್ಚಾಗಲಿದೆ ಎಂದೂ ವಿಶೇಷವಾಗಿ ಗುಜರಾತ್, ಮಹಾರಾಷ್ಟ್ರ, ಕರ್ನಾಟಕದ ಉತ್ತರ ಕರ್ನಾಟಕ, ಮಧ್ಯಪ್ರದೇಶ, ಒಡಿಶಾ ಮತ್ತು ಆಂಧ್ರಪ್ರದೇಶದಲ್ಲಿ ಸೆಕೆಯ ಅಲೆಗಳ ಅವಧಿ ಹೆಚ್ಚುತ್ತದೆಂದೂ ಹೇಳಲಾಗಿದೆ. ದಿನದ ತಾಪಮಾನ 45 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾಗಿದ್ದರೆ, ಸತತ ಎರಡು– ಮೂರು ದಿನ ಅದೇ ಮಟ್ಟದಲ್ಲಿದ್ದರೆ ಅದಕ್ಕೆ ‘ಸೆಕೆಯ ಅಲೆ’ ಎನ್ನುತ್ತಾರೆ. ಪ್ರತಿ ಬೇಸಿಗೆಯಲ್ಲೂ ಒಂದೆರಡು ಬಾರಿ ಅಂಥ ಅಲೆಗಳು ಕಂಡುಬರುತ್ತವಾದರೂ ಈ ಬಾರಿಯ ಬೇಸಿಗೆಯಲ್ಲಿ ಏಳೆಂಟು ಬಾರಿ ಸೆಕೆಯ ಅಲೆಯನ್ನು ಎದುರಿಸಬೇಕಾದೀತೆಂದು ಇಲಾಖೆ ಹೇಳಿದೆ. ನಮ್ಮ ರಾಜ್ಯದಲ್ಲಿ ಬಾಗಲಕೋಟೆ, ಕಲಬುರಗಿ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಮಾರ್ಚ್‌ ತಿಂಗಳಿಂದಲೇ ಬಿಸಿಲಿನ ಝಳ ಹೆಚ್ಚಾಗುತ್ತ ಬಂದಿದೆ. ಅದು ಇನ್ನಷ್ಟು ತೀವ್ರವಾಗಲಿದೆ, ಇನ್ನಷ್ಟು ಜಿಲ್ಲೆಗಳಿಗೆ ವ್ಯಾಪಿಸಲಿದೆ. ಬಿಸಿ ಅಲೆಯ ಜೊತೆಜೊತೆಗೇ ದೂಳು ಮಾರುತ, ನೀರಿನ ಅಭಾವ, ಕೊಳೆನೀರಿನ ಅನಿವಾರ್ಯ ಬಳಕೆ ಎಲ್ಲವೂ ಹೆಚ್ಚುವುದರಿಂದ ಸಾರ್ವಜನಿಕ ಸ್ವಾಸ್ಥ್ಯದ ಹೊಸ ಹೊಸ ಸವಾಲುಗಳು ಎದುರಾಗಲಿವೆ. ವಿಪರ್ಯಾಸ ಏನೆಂದರೆ ಚಂಡಮಾರುತ, ಮಹಾಪೂರ, ಭೂಕುಸಿತದಂಥ ನೈಸರ್ಗಿಕ ಪ್ರಕೋಪಗಳಿಗಿಂತ ಇದು ಭಿನ್ನವಾಗಿದ್ದು ‘ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ’ದಂಥ ಸಾಂಸ್ಥಿಕ ನೆರವು ಕೂಡ ಧಾವಿಸಿ ಬರುವಂತಿಲ್ಲ. ಸೆಕೆಯ ಅಲೆ ತೀರಾ ಹೆಚ್ಚಾದ ಸಂದರ್ಭಗಳಲ್ಲಿ ಪಾಶ್ಚಿಮಾತ್ಯ ದೇಶಗಳ ದೊಡ್ಡ ನಗರಗಳಲ್ಲಿ ತಾತ್ಕಾಲಿಕವಾಗಿ ‘ತಂಪು ತಂಗುದಾಣ’ಗಳನ್ನು ನಿರ್ಮಿಸುವ ವ್ಯವಸ್ಥೆ ಬರುತ್ತಿದೆಯಾದರೂ ಅಲ್ಲಿನ ಮಾದರಿಗಳನ್ನು ನಮ್ಮ ಗ್ರಾಮೀಣ ಪ್ರದೇಶಗಳಲ್ಲಿ ಜಾರಿಗೆ ತರುವಂಥ ಸಿದ್ಧತೆಯೇನೂ ಕಾಣುತ್ತಿಲ್ಲ. ಬಿಸಿಲಿಗೆ ಮೈಯೊಡ್ಡದಂತೆ, ನಿರ್ಜಲೀಕರಣ ಆಗದಂತೆ ವೈಯಕ್ತಿಕವಾಗಿ ಏನೇನು ಕ್ರಮ ಕೈಗೊಳ್ಳಬೇಕೆಂದು ಸಲಹೆ ನೀಡಲೆಂದು ‘ಸೆಕೆ ನಿರ್ವಹಣಾ ಯೋಜನೆ’ ಇದೆಯಾದರೂ ಅದರ ಕಾರ್ಯವ್ಯಾಪ್ತಿ ಕುರಿತ ಸ್ಪಷ್ಟ ಚಿತ್ರಣ ಇನ್ನೂ ಸಿಗಬೇಕಿದೆ.

ಥಾರ್‌ ಮರುಭೂಮಿಯನ್ನು ಬಿಟ್ಟರೆ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಭಾರತದ ಎರಡನೆಯ ಅತಿ ದೊಡ್ಡ ‘ಮರುಭೂಮಿ ಸದೃಶ’ ಶುಷ್ಕ ಭೂಪ್ರದೇಶ ಸೃಷ್ಟಿಯಾಗುತ್ತಿದೆ ಎಂದು ವಿಜ್ಞಾನಿಗಳು ಈ ಹಿಂದೆಯೇ ಎಚ್ಚರಿಕೆ ನೀಡಿದ್ದರು. ನೆಲದ ಮೇಲೆ ಹಸಿರಿನ ಹೊದಿಕೆ ಶೀಘ್ರಗತಿಯಲ್ಲಿ ನಿರ್ನಾಮವಾಗುತ್ತಿರುವುದು, ಅದರಿಂದಾಗಿ ಮಣ್ಣಿನಲ್ಲಿ, ಗಾಳಿಯಲ್ಲಿ ತೇವಾಂಶ ಕಡಿಮೆಯಾಗುವುದು ಮತ್ತು ಎಲ್ಲಕ್ಕಿಂತ ಶೀಘ್ರವಾಗಿ ಅಂತರ್ಜಲ ಮಟ್ಟ ಕುಸಿಯುತ್ತಿರುವುದನ್ನು ನೋಡಿದರೆ, ಅರಿವಿದ್ದೋ ಇಲ್ಲದೆಯೋ ಮರುಭೂಮಿಯ ನಿರ್ಮಾಣದಲ್ಲಿ ಎಲ್ಲರೂ ಕೈಜೋಡಿಸಿದಂತೆ ಭಾಸವಾಗುತ್ತದೆ. ಜಾಗತಿಕ ತಾಪಮಾನದ ನಿರಂತರ ಏರಿಕೆಗೆ ವಿಕಸಿತ ದೇಶಗಳೇ ಕಾರಣವೆಂದು ಅದೆಷ್ಟೇ ಎತ್ತರದ ಧ್ವನಿಯಲ್ಲಿ ಅಭಿವೃದ್ಧಿಶೀಲ ದೇಶಗಳು ವಾದಿಸಿದರೂ ನಮ್ಮ ಸುತ್ತಲಿನ ಪರಿಸರ ದಿನದಿನಕ್ಕೆ ಬಿಗಡಾಯಿಸುತ್ತಿರುವುದಕ್ಕೆ ಸ್ಥಳೀಯ ನಾಯಕತ್ವದ ನಿಷ್ಕಾಳಜಿ ಮತ್ತು ಸರ್ಕಾರಗಳ ಧೋರಣೆಗಳೂ ಕಾರಣವಾಗುತ್ತಿವೆ ಎಂಬುದಂತೂ ನಿಜ. ಅನೇಕ ದೇಶಗಳಲ್ಲಿ ಬರನಿರೋಧಕ ಯೋಜನೆಗಳಲ್ಲಿ ನಾಗರಿಕರನ್ನು ತೊಡಗಿಸಿಕೊಳ್ಳಲಾಗುತ್ತಿದೆ. ಆಫ್ರಿಕಾದ ಸಹೇಲ್‌ ಮರುಭೂಮಿಯ ವಿಸ್ತರಣೆಯನ್ನು ತಡೆಯಲೆಂದು ಎಂಟು ಸಾವಿರ ಕಿಲೊಮೀಟರ್‌ ವರೆಗೆ ಗಿಡಮರಗಳ ‘ಹಸಿರುಗೋಡೆ’ ನಿರ್ಮಾಣಕ್ಕೆ 22 ರಾಷ್ಟ್ರಗಳು ಕೈಜೋಡಿಸಿವೆ. ವಿಜ್ಞಾನ-ತಂತ್ರಜ್ಞಾನ ಅದೆಷ್ಟೇ ಮುಂದುವರಿದರೂ ಯಾರೂ ಒಂದು ತೊಟ್ಟು ನೀರನ್ನು ಸೃಷ್ಟಿಸಲು ಸಾಧ್ಯವಿಲ್ಲ. ಆದರೆ ಜನಸಾಮಾನ್ಯರನ್ನು ಸಹಭಾಗಿಗಳನ್ನಾಗಿ ಮಾಡಿದರೆ ಪ್ರಕೃತಿ ನೀಡುವ ಹನಿಹನಿ ನೀರನ್ನೂ ಸರಿಯಾಗಿ ಬಳಸಿಕೊಂಡು ಮರುಭೂಮಿಯನ್ನು ತಡೆಗಟ್ಟಲು, ಬಿಸಿಲ ಬೇಗೆಯನ್ನು ಸಹನೀಯ ಮಾಡಲು ಸಾಧ್ಯವಿದೆ.

ರಾಜಕೀಯ ಪಕ್ಷಗಳು ತಂತಮ್ಮ ಚುನಾವಣಾ ಪ್ರಣಾಳಿಕೆಗಳನ್ನು ಸಿದ್ಧಪಡಿಸುತ್ತಿರುವ ಸಂದರ್ಭದಲ್ಲೇ ಹವಾಮಾನ ಇಲಾಖೆಯ ಎಚ್ಚರಿಕೆ ಬಂದಿದ್ದು ಸಕಾಲಿಕವಾಗಿದೆ. ಈಗಿನ ಬರಗಾಲ, ಬಿಸಿಗಾಳಿ, ದೂಳು ಮಾರುತದಂಥ ಝಳಪ್ರಳಯದ ನಂತರ ಸುಂಟರಗಾಳಿ, ಮೇಘಸ್ಫೋಟ, ಭೂಕುಸಿತ, ನೆರೆಹಾವಳಿ ಎಲ್ಲವೂ ಆವರ್ತರೂಪದಲ್ಲಿ ಮತ್ತಷ್ಟು ಉಗ್ರವಾಗುತ್ತಲೇ ಹೋಗಲಿವೆ ಎಂದು ವಿಶ್ವಸಂಸ್ಥೆಯ ತಜ್ಞರು
ಎಚ್ಚರಿಸುತ್ತಲೇ ಬಂದಿದ್ದಾರೆ. ಅಭಿವೃದ್ಧಿಯ ಪರಿಕಲ್ಪನೆಯನ್ನೇ ಬದಲಿಸಬೇಕಾದ ಹಂತಕ್ಕೆ ನಾವು ಬಂದಿದ್ದೇವೆ. ಬರ ನಿವಾರಣೆ, ಜಲಮೂಲಗಳ ಸಂವರ್ಧನೆ, ಕೃಷಿ ಕ್ಷೇತ್ರದ ರಕ್ಷಣೆ, ಅರಣ್ಯ ನಿರ್ಮಾಣದಂಥ ಸುಸ್ಥಿರ ಅಭಿವೃದ್ಧಿಯ ಯೋಜನೆಗಳಿಗೆ ರಾಜಕೀಯ ಪಕ್ಷಗಳು ಚುನಾವಣಾ ಪ್ರಣಾಳಿಕೆಗಳಲ್ಲಿ ಹಿಂದೆಂದಿಗಿಂತ ಹೆಚ್ಚಿನ ಆದ್ಯತೆಯನ್ನು ನೀಡಬೇಕಿದೆ. ಬಿಸಿಲ ಬೇಗೆಯಲ್ಲಿ ಚುನಾವಣಾ ಪ್ರಚಾರಕ್ಕೆ ಹೋಗುವವರನ್ನು ಈ ಕುರಿತು ಪ್ರಶ್ನಿಸುವ ಅವಕಾಶ ಮತದಾರರಿಗೆ ಬಂದಿದೆ. ‘ಋತುಮಾನದ ಸಂಕಷ್ಟಗಳಿಗೆ ನಿಮ್ಮ ಅಭ್ಯರ್ಥಿ ನೀಡುವ ಪರಿಹಾರ ಏನು’ ಎಂಬ ಪ್ರಶ್ನೆಗೆ ಉತ್ತರಿಸಲು ಮತಬೇಟೆಗೆ ಹೋಗುವವರು ಸಿದ್ಧರಾಗಬೇಕಿದೆ. ‘ಸುಡುಬಿಸಿಲಲ್ಲಿ ಮತಗಟ್ಟೆಗೆ ಹೋಗಬೇಕಾದರೆ ಎಳೆಮಕ್ಕಳನ್ನು ಒಯ್ಯಬೇಡಿ’ ಎಂದು ತಾಯಂದಿರಿಗೆ ಚುನಾವಣಾ ಆಯೋಗವೇನೋ ಆಗಲೇ ಎಚ್ಚರಿಕೆ ನೀಡಿದೆ. ಚುನಾವಣೆಯ ನಂತರವೂ ಎಳೆಮಕ್ಕಳ ಭವಿಷ್ಯ ಸುಭದ್ರವಾಗುವಂಥ ದೀರ್ಘಕಾಲದ ಯೋಜನೆಗಳು ಬೇಕಲ್ಲವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT