ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Editorial | ಕ್ಷಯರೋಗದ ವಿರುದ್ಧ ಸಮರ: ಮೊನಚು ಕಳೆದುಕೊಳ್ಳದಿರಲಿ

Published 5 ಏಪ್ರಿಲ್ 2024, 0:16 IST
Last Updated 5 ಏಪ್ರಿಲ್ 2024, 0:16 IST
ಅಕ್ಷರ ಗಾತ್ರ

ಭಾರತದಲ್ಲಿ ಕ್ಷಯರೋಗಕ್ಕೆ ಸಂಬಂಧಿಸಿದಂತೆ ಈಚೆಗೆ ಬಿಡುಗಡೆ ಮಾಡಲಾದ ವರದಿಯು ಈ ರೋಗದ ವಿರುದ್ಧ ದೇಶ ನಡೆಸಿರುವ ಹೋರಾಟದ ವಿಚಾರವಾಗಿ ಒಂದಿಷ್ಟು ಆಶಾದಾಯಕ ಚಿತ್ರಣವನ್ನು ನೀಡಿದೆ. ಹೀಗಿದ್ದರೂ ಕಳವಳಕ್ಕೆ ಕಾರಣ ಆಗುವ ಕೆಲವಷ್ಟು ಅಂಶಗಳು ಉಳಿದಿವೆ ಎಂಬುದನ್ನು ಅದು ತೋರಿಸಿಕೊಟ್ಟಿದೆ. ಕ್ಷಯರೋಗ ಪತ್ತೆಯಾಗಿರುವ ರೋಗಿಗಳ ಪೈಕಿ ಶೇಕಡ 95ರಷ್ಟು ಮಂದಿಗೆ 2023ರ ವೇಳೆಗೆ ಚಿಕಿತ್ಸೆ ಒದಗಿಸಬೇಕು ಎಂಬ ಗುರಿಯನ್ನು ದೇಶ ತಲುಪಿದೆ ಎಂಬುದನ್ನು ವರದಿಯು ಹೇಳಿದೆ. ಆದರೆ, ಕ್ಷಯರೋಗ ಪ್ರಕರಣಗಳು ದೇಶದಲ್ಲಿ ವರದಿಯಾಗುವುದೇ ಕಡಿಮೆ ಎಂಬ ಸಂಗತಿಯು ಚಿಂತೆಗೆ ಈಡುಮಾಡುವ ಒಂದು ವಿಚಾರ. ಇದು ಈ ರೋಗದ ವಿರುದ್ಧದ ಸಮರದಲ್ಲಿ ಒಂದು ಸಮಸ್ಯೆ. ಚಿಕಿತ್ಸೆಗೆ ಒಳಗಾಗದ ರೋಗಿಗಳು ತಮಗೂ ಸಮಸ್ಯೆ ತಂದುಕೊಳ್ಳುತ್ತಾರೆ, ಇತರರಿಗೂ ಈ ಸೋಂಕು ಹರಡಲು ಕಾರಣರಾಗುತ್ತಾರೆ. ಆದರೆ ದೇಶದಲ್ಲಿ ಕ್ಷಯರೋಗದ ಅಂದಾಜು ಪ್ರಕರಣಗಳ ಸಂಖ್ಯೆ ಹಾಗೂ ವಾಸ್ತವ ಪ್ರಕರಣಗಳ ಸಂಖ್ಯೆಯ ನಡುವಿನ ಅಂತರ ಕಡಿಮೆ ಆಗುತ್ತಿರುವುದು ಒಂದು ಆಶಾದಾಯಕ ಬೆಳವಣಿಗೆ. ಖಾಸಗಿ ವಲಯದ ಪಾಲುದಾರಿಕೆ, ಉತ್ತರಪ್ರದೇಶ ಮತ್ತು ಬಿಹಾರದಲ್ಲಿ ಸುಧಾರಣೆ ಕಂಡುಬಂದಿರುವುದು ಇದಕ್ಕೆ ಪ್ರಮುಖ ಕಾರಣಗಳು. ಈಗ ಹೆಚ್ಚಿನ ಸಂಖ್ಯೆಯ ರೋಗಿಗಳಿಗೆ ಚಿಕಿತ್ಸೆ ಒದಗಿಸುವ ಸಾಮರ್ಥ್ಯವು ದೇಶಕ್ಕಿದೆ. ಇದರ ಪರಿಣಾಮವಾಗಿ ಸಾವಿನ ಸಂಖ್ಯೆ ಕಡಿಮೆ ಆಗುತ್ತದೆ, ರೋಗ ಹರಡುವುದನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ ಮತ್ತು ಇನ್ನಷ್ಟು ಬಲಿಷ್ಠವಾದ ರೋಗಕಾರಕವು ವಿಕಾಸ ಹೊಂದುವುದನ್ನು ತಡೆಯಲು ಸಾಧ್ಯವಾಗುತ್ತದೆ.

ಕ್ಷಯರೋಗದ ನಿರ್ಮೂಲನೆಯು 2025ರ ವೇಳೆಗೆ ಆಗಬೇಕು ಎಂಬುದು ದೇಶ ಹೊಂದಿರುವ ಗುರಿ. ಈಚಿನ ವರ್ಷಗಳಲ್ಲಿ ಕ್ಷಯರೋಗದ ವಿರುದ್ಧ ರೂಪಿಸಿದ ಯೋಜನೆಗಳು ಒಳ್ಳೆಯ ಫಲಿತಾಂಶ ನೀಡಿವೆಯಾದರೂ ದೇಶವು ಈ ಗುರಿಯನ್ನು ಸಾಧಿಸುವ ಸಾಧ್ಯತೆ ಕಡಿಮೆ ಇದೆ. ಏಕೆಂದರೆ, ಹಲವು ಔಷಧಗಳಿಗೆ ಪ್ರತಿರೋಧ ಶಕ್ತಿಯನ್ನು ಬೆಳೆಸಿಕೊಂಡಿರುವ (ಎಂಡಿಆರ್) ಕ್ಷಯ ರೋಗಕಾರಕವು ಗಂಭೀರ ಸವಾಲಾಗಿ ಪರಿಣಮಿಸಿದೆ. ಈ ರೋಗಕಾರಕವನ್ನು ಗುರುತಿಸುವಲ್ಲಿ ಒಂದಿಷ್ಟು ಪ್ರಗತಿ ಆಗಿದೆ ಎಂಬುದನ್ನು ವರದಿಯು ತೋರಿಸಿಕೊಟ್ಟಿದೆ. ಕ್ಷಯರೋಗ ಪತ್ತೆಯಾದ ಶೇಕಡ 60ರಷ್ಟು ರೋಗಿಗಳನ್ನು ಮತ್ತೆ ಪರೀಕ್ಷೆಗೆ ಒಳಪಡಿಸಿ, ಅವರಲ್ಲಿನ ರೋಗಕಾರಕವು ಆರಂಭಿಕ ಹಂತದಲ್ಲಿ ನೀಡುವ ಔಷಧಗಳಿಗೆ ಪ್ರತಿರೋಧ ಶಕ್ತಿಯನ್ನು ಬೆಳೆಸಿಕೊಂಡಿದೆಯೇ ಎಂಬುದನ್ನು ಪರಿಶೀಲಿಸಲಾಗಿದೆ. ಮುಂದೆ ಈ ಪರೀಕ್ಷೆಯನ್ನು ಇನ್ನಷ್ಟು ಹೆಚ್ಚಿನ ಸಂಖ್ಯೆಯ ರೋಗಿಗಳಲ್ಲಿ ನಡೆಸಲಾಗುತ್ತದೆ. ಆಗ, ಎರಡನೆಯ ಹಂತದಲ್ಲಿ ನೀಡುವ ಔಷಧಗಳ ಅಗತ್ಯವಿರುವ ರೋಗಿಗಳ ಸಂಖ್ಯೆ ಎಷ್ಟು ಎಂಬುದನ್ನು ಗುರುತಿಸಲು ಸಾಧ್ಯವಾಗುತ್ತದೆ. ಪರೀಕ್ಷೆಯನ್ನು ಇನ್ನಷ್ಟು ಉತ್ತಮಪಡಿಸಿ, ಎಲ್ಲ ಎಂಡಿಆರ್ ಕ್ಷಯ ಪ್ರಕರಣಗಳನ್ನು ಗುರುತಿಸುವ ಗುರಿ ಹೊಂದಲಾಗಿದೆ. ಎಂಡಿಆರ್ ಕ್ಷಯರೋಗದ ಸಂಖ್ಯೆಯು ಕೋವಿಡ್‌ಗೂ ಮೊದಲು ದೇಶದಲ್ಲಿ ಕಡಿಮೆ ಆಗುತ್ತಿತ್ತು. ಆದರೆ ಕೋವಿಡ್‌ ಸಾಂಕ್ರಾಮಿಕದ ನಂತರದಲ್ಲಿ ವರದಿಯಾಗುತ್ತಿರುವ ಈ ಬಗೆಯ ಕ್ಷಯ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.

ಎಂಡಿಆರ್‌ ಕ್ಷಯಕ್ಕೆ ಚಿಕಿತ್ಸೆ ಬಹಳ ಕಷ್ಟದ ಕೆಲಸ. ಏಕೆಂದರೆ ಹಲವು ಔಷಧಿಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ. ಅಲ್ಲದೆ, ಎರಡನೆಯ ಹಂತದ ಔಷಧಗಳನ್ನು ನೀಡಲಾದ ರೋಗಿಗಳ ಪೈಕಿ ಹಲವರು ಚಿಕಿತ್ಸೆಯನ್ನು ಪೂರ್ಣಗೊಳಿಸಲೇ ಇಲ್ಲ. ಈ ನಡುವೆ, ಅಲ್ಪಾವಧಿಗೆ ನೀಡುವ ಅಂತಿಮ ಹಂತದ ಒಂದು ಔಷಧಿಯು ಪರಿಣಾಮಕಾರಿಯಾಗಿ ಕಂಡುಬಂದಿದೆ. ಈ ಔಷಧದ ಮೇಲಿನ ಹಕ್ಕುಸ್ವಾಮ್ಯವನ್ನು ವಿಸ್ತರಿಸದೇ ಇರಲು ತೀರ್ಮಾನಿಸಿರುವುದರ ಪರಿಣಾಮವಾಗಿ, ಕಡಿಮೆ ವೆಚ್ಚದ ಜೆನರಿಕ್ ಮಾದರಿಯು ಬಹಳ ಬೇಗ ಲಭ್ಯವಾಗಬಹುದು. ಮಹಿಳೆಯರಲ್ಲಿ ವ್ಯಾಪಕವಾಗಿರುವ, ಶ್ವಾಸಕೋಶಕ್ಕೆ ಸಂಬಂಧಿಸದೇ ಇರುವ ಕ್ಷಯರೋಗಕ್ಕೆ ಹೆಚ್ಚಿನ ಗಮನ ನೀಡುವುದು ಕೂಡ ಬಹಳ ಮಹತ್ವದ್ದು. 2015ರ ನಂತರದಲ್ಲಿ ಭಾರತದಲ್ಲಿ ವರದಿಯಾಗುವ ಹೊಸ ಕ್ಷಯರೋಗ ಪ್ರಕರಣಗಳ ಪ್ರಮಾಣವು ಶೇ 16ರಷ್ಟು ಕಡಿಮೆ ಆಗಿದೆ, ಮರಣ ಸಂಖ್ಯೆಯಲ್ಲಿ ಶೇ 18ರಷ್ಟು ಕಡಿಮೆ ಆಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಆದರೆ ಕ್ಷಯರೋಗದ ಹೊರೆಯು ಅತ್ಯಂತ ಹೆಚ್ಚು ಇರುವುದು ಭಾರತದಲ್ಲಿ ಎಂಬುದು ಕೂಡ ಇಲ್ಲಿ ಉಲ್ಲೇಖಿಸಬೇಕಾದ ಸಂಗತಿ. ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದೆ ಉಳಿದಿರುವ ಸಮುದಾಯಗಳಲ್ಲಿ ಕ್ಷಯರೋಗ ಹೆಚ್ಚಿದೆ. ಹೀಗಾಗಿ, ದೇಶದಲ್ಲಿ ಕ್ಷಯರೋಗದ ವಿರುದ್ಧ ನಡೆದಿರುವ ಹೋರಾಟಕ್ಕೆ ವಿಶೇಷ ಮಹತ್ವ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT