ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ನ್ಯಾಯಮಂಡಳಿ ಸುಧಾರಣಾ ಮಸೂದೆ-ಸಂಸತ್ತಿನ ನಡೆ ಸಮಂಜಸವೇ?

ಸುಪ್ರೀಂ ಕೋರ್ಟ್‌ನಿಂದ ಅಸಾಂವಿಧಾನಿಕ ಎಂದು ಕರೆಸಿಕೊಂಡ ಅಂಶಗಳನ್ನು ಸಂಸತ್ತು ಅಂಗೀಕರಿಸುವುದು ಸರಿಯೇ?
Last Updated 23 ಆಗಸ್ಟ್ 2021, 1:12 IST
ಅಕ್ಷರ ಗಾತ್ರ

ನ್ಯಾಯಮಂಡಳಿ ಸುಧಾರಣಾ ಮಸೂದೆಗೆ ಸಂಸತ್ತು ಮುಂಗಾರು ಅಧಿವೇಶನದಲ್ಲಿ ಅನುಮೋದನೆ ನೀಡಿದೆ. ಇದು, ಸಂಸತ್ತಿನ ಕೆಲವು ನಡವಳಿಕೆಗಳ ಬಗ್ಗೆ, ಸರ್ಕಾರದ ಕೆಲವು ಹೆಜ್ಜೆಗಳ ಬಗ್ಗೆ, ಸಂಸತ್ತು ಮತ್ತು ಸುಪ್ರೀಂ ಕೋರ್ಟ್‌ ನಡುವಿನ ಸಂಬಂಧದ ಬಗ್ಗೆ ಕೆಲವು ಅಹಿತಕರ ಪ್ರಶ್ನೆಗಳು ಮೂಡುವಂತೆ ಮಾಡಿದೆ. ಸುಪ್ರೀಂ ಕೋರ್ಟ್‌ ಈ ಹಿಂದೆ ಅಸಿಂಧುಗೊಳಿಸಿದ್ದ ಸುಗ್ರೀವಾಜ್ಞೆಯೊಂದರ ಕೆಲವು ಅಂಶಗಳಿಗೆ ಈ ಮಸೂದೆಯು ಮತ್ತೆ ಜೀವ ನೀಡಿದೆ. ಈ ಮಸೂದೆಯ ಬಗ್ಗೆ ಸುಪ್ರೀಂ ಕೋರ್ಟ್‌ ಕಟು ಮಾತುಗಳನ್ನು ಆಡಿದೆ. ಅಲ್ಲದೆ, ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್.ವಿ. ರಮಣ ಅವರೇ ಕೆಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ಸಂಸತ್ತು ಅನುಮೋದನೆ ನೀಡಿರುವ ಮಸೂದೆಯು ಒಂಬತ್ತು ಮೇಲ್ಮನವಿ ನ್ಯಾಯಮಂಡಳಿಗಳನ್ನು ರದ್ದುಪಡಿಸಲು ಅನುವಾಗಿಸುತ್ತದೆ.

ನ್ಯಾಯಮಂಡಳಿಗಳ ಸದಸ್ಯರು ಹಾಗೂ ಅಧ್ಯಕ್ಷರ ಅಧಿಕಾರ ಅವಧಿ ಮತ್ತು ಸೇವೆಗೆ ಸಂಬಂಧಿಸಿ ಸುಗ್ರೀವಾಜ್ಞೆಯಲ್ಲಿ ಇದ್ದ ಕೆಲವು ಅಂಶಗಳಿಗೆ ಮಸೂದೆಯು ಮತ್ತೆ ಜೀವ ನೀಡಿದೆ. ಸುಗ್ರೀವಾಜ್ಞೆಯಲ್ಲಿ ಇದ್ದ ಇಂಥದ್ದೇ ಅಂಶಗಳನ್ನು ಜುಲೈ ತಿಂಗಳಿನಲ್ಲಿ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ನ್ಯಾಯಪೀಠವೊಂದು, ಅಸಾಂವಿಧಾನಿಕ ಎಂದು ಘೋಷಿಸಿತ್ತು. ಈ ಅಂಶಗಳು ನ್ಯಾಯಾಂಗದ ಸ್ವಾತಂತ್ರ್ಯದಲ್ಲಿ ಹಸ್ತಕ್ಷೇಪ ನಡೆಸುತ್ತವೆ ಎಂದು ಹೇಳಿತ್ತು. ನ್ಯಾಯಾಂಗದ ಸ್ವಾತಂತ್ರ್ಯವು ಸಂವಿಧಾನದ ಮೂಲ ಸ್ವರೂಪಗಳಲ್ಲಿ ಒಂದು. ಸರ್ಕಾರಕ್ಕೆ ಎಷ್ಟೇ ಬಹುಮತ ಇದ್ದರೂ, ಮೂಲ ಸ್ವರೂಪವನ್ನು ಬದಲಾಯಿಸಲು ಅವಕಾಶ ಇಲ್ಲ. ಕೇಶವಾನಂದ ಭಾರತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ತೀರ್ಪು ಬಂದ ನಂತರದಲ್ಲಿ ಈ ವಿಚಾರವಾಗಿ ಗೊಂದಲಗಳು ಉಳಿದಿಲ್ಲ.

ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಚ್ಯುತಿ ತರುವ ಸಾಧ್ಯತೆ ಇದ್ದ ಸಂವಿಧಾನ ತಿದ್ದುಪಡಿ ಕಾಯ್ದೆಯನ್ನು ಕೂಡ ಸುಪ್ರೀಂ ಕೋರ್ಟ್‌ ಈ ಹಿಂದೆ ರದ್ದುಪಡಿಸಿದ ನಿದರ್ಶನ ಇದೆ. ‘ನಿಷ್ಪಕ್ಷಪಾತವಾಗಿ, ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವುದು, ನ್ಯಾಯಸಮ್ಮತವಾಗಿ ಹಾಗೂ ತರ್ಕಬದ್ಧವಾಗಿ ಇರುವುದು ನ್ಯಾಯಾಂಗದ ಹೆಗ್ಗುರುತುಗಳು’ ಎಂದು ತ್ರಿಸದಸ್ಯ ಪೀಠವು ಸುಗ್ರೀವಾಜ್ಞೆ ವಿಚಾರವಾಗಿ ಹೇಳಿತ್ತು.

ಸುಗ್ರೀವಾಜ್ಞೆಯಲ್ಲಿ ಹಾಗೂ ಈಗಿನ ಮಸೂದೆಯಲ್ಲಿ ಇರುವ ಕೆಲವು ಅಂಶಗಳ ಒಳಿತು–ಕೆಡುಕುಗಳ ಬಗ್ಗೆ ಗಮನ ಕೊಡಬೇಕಾಗಿದೆ. ನ್ಯಾಯಮಂಡಳಿಗಳ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳು ಇಲ್ಲಿ ಇವೆ. ನ್ಯಾಯಮಂಡಳಿಗಳು ಕೂಡ ನ್ಯಾಯಾಂಗದ ಒಂದು ಭಾಗವೇ ಎಂಬುದನ್ನು ಮರೆಯುವಂತಿಲ್ಲ. ಹಾಗಾಗಿ, ಅವುಗಳ ಸ್ವತಂತ್ರ ಕಾರ್ಯನಿರ್ವಹಣೆಗೆ ಸಂಬಂಧಿಸಿದ ಯಾವುದೇ ಪ್ರಶ್ನೆಯನ್ನು ಅಲಕ್ಷಿಸಲು ಆಗದು. ಸುಪ್ರೀಂ ಕೋರ್ಟ್‌ನಿಂದ ಅಸಾಂವಿಧಾನಿಕ ಎಂದು ಕರೆಸಿಕೊಂಡ ಅಂಶಗಳನ್ನು ಸಂಸತ್ತು ಅಂಗೀಕರಿಸುವುದು ಸರಿಯೇ ಎಂಬುದು ಚರ್ಚಾರ್ಹ ವಿಷಯ.

ಆದರೆ, ಈ ರೀತಿಯಲ್ಲಿ ಮಸೂದೆಯೊಂದಕ್ಕೆ ಅನುಮೋದನೆ ನೀಡುವುದು, ಸಾಂವಿಧಾನಿಕ ನ್ಯಾಯಾಲಯವೊಂದರ ತೀರ್ಮಾನವನ್ನು ಉಪೇಕ್ಷಿಸಿದಂತೆ ಆಗುವುದಿಲ್ಲವೇ? ಇದು ಸಾಂವಿಧಾನಿಕ ವ್ಯವಸ್ಥೆಯ ಬೇರೆ ಬೇರೆ ಅಂಗಗಳ ನಡುವಿನ ಅಧಿಕಾರ ಹಂಚಿಕೆಯ ಸಮತೋಲನವನ್ನು ಕೆಡಿಸಿದಂತೆ ಆಗದೇ? ಸಂಸತ್ತು ಹಾಗೂ ನ್ಯಾಯಾಂಗದ ನಡುವೆ ಯಾವುದೂ ಹೆಚ್ಚಲ್ಲ, ಯಾವುದೂ ಕಡಿಮೆ ಅಲ್ಲ. ಈ ಎರಡೂ ಸಂಸ್ಥೆಗಳು ಸಮಾನ ಘನತೆ ಹೊಂದಿರುವಂಥವು. ದೇಶದ ಜನ ತಾವೇ ತಮಗಾಗಿ ರೂಪಿಸಿಕೊಂಡ ಸಂವಿಧಾನವನ್ನು ರಕ್ಷಿಸುವ ಹೊಣೆ ಈ ಎರಡೂ ಸಂಸ್ಥೆಗಳ ಮೇಲೆ ಇದೆ. ಈ ಮಸೂದೆಗೆ ಅನುಮೋದನೆ ನೀಡುವ ಸಂದರ್ಭದಲ್ಲಿ ಸಂಸತ್ತಿನಲ್ಲಿ ಚರ್ಚೆಯೇ ಆಗಲಿಲ್ಲ ಎಂಬುದು ಗಮನಾರ್ಹ. ಇದನ್ನು ಕೂಡ ನ್ಯಾಯಾಲಯ ಗಮನಿಸಿದೆ. ‘ಸಂಸತ್ತಿನಲ್ಲಿ ಚರ್ಚೆ ನಡೆದಿದ್ದನ್ನು ನಾವು ಕಾಣಲಿಲ್ಲ. ಕಾನೂನು ಮಾಡುವ ಪರಮಾಧಿಕಾರ ಸಂಸತ್ತಿಗೆ ಇದೆ ಎಂಬುದು ನಿಜ. ಈ ನ್ಯಾಯಾಲಯವು ಅಸಿಂಧು ಎಂದು ಹೇಳಿದ್ದರೂ, ಸರ್ಕಾರವು ಮಸೂದೆಯನ್ನು ಮಂಡಿಸಿದ್ದು ಏಕೆ ಎಂಬುದನ್ನು ನಾವು ತಿಳಿಯಬೇಕಿದೆ. ಚರ್ಚೆ ನಡೆದಿದ್ದನ್ನು, ಕಾರಣ ನೀಡಿದ್ದನ್ನು ನಮಗೆ ತೋರಿಸಿ’ ಎಂದು ನ್ಯಾಯಾಲಯವು ಈ ಮಸೂದೆಯ ಕುರಿತಾಗಿ ಹೇಳಿದೆ. ನ್ಯಾಯಾಲಯ ಆಡಿರುವ ಮಾತುಗಳಲ್ಲಿ ಗಟ್ಟಿತನ ಇದೆ.

ನ್ಯಾಯಾಲಯದ ನಿರ್ದೇಶನಗಳನ್ನು ಉಪೇಕ್ಷಿಸಿ, ಮಸೂದೆಯೊಂದು ರೂಪುಗೊಳ್ಳುವ ಸಾಧ್ಯತೆಗಳ ಬಗ್ಗೆ ನ್ಯಾಯಾಲಯದ ತೀರ್ಪಿನಲ್ಲಿ ಉಲ್ಲೇಖವಿದೆ. ‘ಆದೇಶದ ಮೂಲಕ ಗುರುತಿಸಲಾಗಿರುವ ಲೋಪಗಳನ್ನು ಸರಿಪಡಿಸದೆಯೇ, ಕೋರ್ಟ್‌ನ ಆದೇಶವನ್ನು ನಿರ್ಲಕ್ಷ್ಯ ಮಾಡುವುದರಿಂದ ಕಾನೂನಿಗೆ ಅನುಗುಣವಾಗಿ ಆಡಳಿತ ಎಂಬ ತತ್ವಕ್ಕೆ ಅಂತ್ಯಹಾಡಿದಂತೆ ಆಗುತ್ತದೆ. ಕಾನೂನಿಗೆ ಅನುಗುಣವಾಗಿ ಆಡಳಿತ ಎಂಬ ಮಾತಿಗೆ ಯಾವ ಅರ್ಥವೂ ಇಲ್ಲದಂತೆ ಆಗುತ್ತದೆ. ಏಕೆಂದರೆ, ಆಗ ಯಾವುದೇ ಕಾನೂನನ್ನು ಉಲ್ಲಂಘಿಸಲು ಸರ್ಕಾರಕ್ಕೆ ಮುಕ್ತ ವಾತಾವರಣ ಇರುತ್ತದೆ, ಉಲ್ಲಂಘಿಸಿಯೂ ಪರಿಣಾಮಗಳಿಂದ ತಪ್ಪಿಸಿಕೊಳ್ಳಬಹುದು ಎಂದಾಗುತ್ತದೆ’ ಎಂದು ಕೋರ್ಟ್‌ ಹೇಳಿತ್ತು.

ಈಗ ಈ ಮಸೂದೆಯನ್ನು ಅಸಾಂವಿಧಾನಿಕ ಎಂದು ಘೋಷಿಸಬೇಕು ಎನ್ನುವ ಕೋರಿಕೆ ಇರುವ ಅರ್ಜಿಯೊಂದು ಕೋರ್ಟ್‌ಗೆ ಸಲ್ಲಿಕೆಯಾಗಿದೆ. ಅರ್ಜಿಯಲ್ಲಿ ಹೇಳಿರುವಂತೆ, ಕಾನೂನು ರೂಪಿಸುವ ವಿಚಾರದಲ್ಲಿ ಸಂಸತ್ತಿಗೆ ಇರುವ ಸಾಂವಿಧಾನಿಕ ಮಿತಿಗಳು ಏನು, ಕಾನೂನುಗಳನ್ನು ಪರಾಮರ್ಶಿಸುವ ವಿಚಾರದಲ್ಲಿ ನ್ಯಾಯಾಂಗಕ್ಕೆ ಇರುವ ಅಧಿಕಾರ ಏನು ಎಂಬ ಪ್ರಶ್ನೆಗಳು ಇಲ್ಲಿ ಅಡಕವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT