ಬುಧವಾರ, ಜೂನ್ 29, 2022
24 °C

ಸಂಪಾದಕೀಯ| ಉದಯ್ ಮಾಹುರ್ಕರ್ ಹೇಳಿಕೆ: ಸಲ್ಲದ ಮಾತು, ಅನಪೇಕ್ಷಿತ ನಡೆ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಬಿಜೆಪಿ ವಕ್ತಾರೆ ಆಗಿದ್ದ ನೂಪುರ್ ಶರ್ಮಾ ಮತ್ತು ಪಕ್ಷದ ದೆಹಲಿ ಘಟಕದ ಮಾಧ್ಯಮ ವಿಭಾಗದ ಮುಖ್ಯಸ್ಥರಾಗಿದ್ದ ನವೀನ್ ಜಿಂದಾಲ್ ಅವರ ಹೇಳಿಕೆಗಳಿಗೆ ಸಂಬಂಧಿಸಿದಂತೆ ಮುಸ್ಲಿಂ ದೇಶಗಳು ಪ್ರತಿಭಟನೆ ವ್ಯಕ್ತಪಡಿಸುವಂತೆ ಅವುಗಳನ್ನು ‘ಎತ್ತಿಕಟ್ಟುವ’ ಕೆಲಸ ಮಾಡಿದವರ ವಿರುದ್ಧ ವಿಶ್ವಾಸ
ದ್ರೋಹದ ಪ್ರಕರಣ ದಾಖಲಿಸಬೇಕು ಎಂದು ಕೇಂದ್ರ ಮಾಹಿತಿ ಆಯೋಗದಲ್ಲಿ ಮಾಹಿತಿ ಆಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಉದಯ್ ಮಾಹುರ್ಕರ್ ಅವರು ಹೇಳಿರುವುದು ತೀರಾ ತಪ್ಪು. ಮಾಹಿತಿ ಆಯುಕ್ತ ಹುದ್ದೆಯು ಸಾಂವಿಧಾನಿಕ ಸ್ಥಾನವಲ್ಲ. ಆದರೆ ಅದು ಸ್ವತಂತ್ರವಾದ ಹುದ್ದೆ. ಆ ಹುದ್ದೆಯಲ್ಲಿ ಇರುವವರು ರಾಜಕಾರಣದಿಂದ ದೂರ ಇರಬೇಕು. ಆದರೆ, ಮಾಹಿತಿ ಆಯುಕ್ತರು ನೀಡಿರುವುದು ರಾಜಕೀಯ ಹೇಳಿಕೆ. ಈ ಹೇಳಿಕೆಯ ಮೂಲಕ ಅವರು ತಾವು ಸಹಾನುಭೂತಿ ಹೊಂದಿರುವುದು ಯಾರ ಬಗ್ಗೆ ಎಂಬುದನ್ನೂ ತಿಳಿಸಿದ್ದಾರೆ. ನೂಪುರ್‌ ಮತ್ತು ನವೀನ್‌ ಅವರ ಹೇಳಿಕೆಗಳಿಂದಾಗಿ ದೇಶದಲ್ಲಿ ಅಶಾಂತಿ ಸೃಷ್ಟಿಯಾಗಿತ್ತು. ಅಲ್ಲದೆ, ಅವರ ಹೇಳಿಕೆಗಳಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ವಿರೋಧ ವ್ಯಕ್ತವಾಯಿತು. ಅಂತರರಾಷ್ಟ್ರೀಯ ಮಟ್ಟದಲ್ಲಿ ವ್ಯಕ್ತವಾದ ಅಭಿಪ್ರಾಯಗಳು ಭಾರತದಲ್ಲಿನ ಕೆಲವರು ಇತರ ದೇಶಗಳನ್ನು ಎತ್ತಿಕಟ್ಟಿದ್ದರಿಂದ ಆಗಿದ್ದು ಎಂದು ಭಾವಿಸುವುದು ನಿಜವಾದ ಅಪರಾಧದಿಂದ ಗಮನವನ್ನು ಬೇರೆಡೆಗೆ ತಿರುಗಿಸುವ ಕೆಲಸ, ಇಲ್ಲದ ಸಮಸ್ಯೆಯ ಕಡೆ ದೃಷ್ಟಿ ತಿರುಗುವಂತೆ ಮಾಡಿ ಅದೇ ದೊಡ್ಡ ಅಪರಾಧವೆಂಬಂತೆ ಬಿಂಬಿಸುವ ಕೆಲಸವೂ ಹೌದು. ಇಡೀ ಪ್ರಕರಣದಿಂದ ಆಗಿರುವ ಮುಜುಗರ, ಬೇರೆ ಬೇರೆ ದೇಶಗಳಿಂದ ವ್ಯಕ್ತವಾದ ‍ಪ್ರತಿಕ್ರಿಯೆಗಳ ವಿಚಾರವಾಗಿ ಏನೂ ಮಾಡಲಾಗದೆ ಇದ್ದಿದ್ದಕ್ಕೆ ಉಂಟಾಗುವ ಕೋಪವನ್ನು ದೇಶದೊಳಗಿನ ವ್ಯಕ್ತಿಗಳ ಮೇಲೆ ಹರಿಬಿಡುವ ಕೆಲಸ.

ಈ ಇಬ್ಬರು ಹೇಳಿದ ಮಾತುಗಳು ದೇಶದಲ್ಲಿ ಚರ್ಚೆಯ ವಸ್ತುವಾದಾಗ, ಆ ಮಾತಿಗೆ ಬಹಳ ಜನ ವಿರೋಧ ವ್ಯಕ್ತಪಡಿಸಿದಾಗ, ಆ ಮಾತುಗಳನ್ನು ‘ಎತ್ತಿಕಟ್ಟುವ’ ಕೆಲಸ ಅಥವಾ ‘ವಿಶ್ವಾಸದ್ರೋಹ’ದ ಕೆಲಸ ಎನ್ನಲಾಗದು. ಸರ್ಕಾರ ಮತ್ತು ಬಿಜೆಪಿ ನಾಯಕರ ಮಾತು ಮತ್ತು ಕೃತಿಗೆ ದೇಶದ ಒಳಗೆ ಬರುವ ಟೀಕೆಗಳನ್ನು, ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತಿಕ್ರಿಯೆ ಬರುವಂತೆ ಮಾಡುವ ‘ಎತ್ತಿಕಟ್ಟುವ’ ಕೆಲಸ ಎಂದು ಪರಿಗಣಿಸಲಾಗದು. ಇಂತಹ ಟೀಕೆಗಳನ್ನು ದೇಶದ್ರೋಹ ಎಂದು ಈಚಿನ ದಿನಗಳಲ್ಲಿ ಹೇಳಿದ್ದಿದೆ. ಮಾಹುರ್ಕರ್ ಅವರ ಆರೋಪಗಳು ಅಂತಹ ಮಾತುಗಳ ಧಾಟಿಯಲ್ಲಿಯೇ ಇವೆ. ಅಪಮಾನಕಾರಿ ಹೇಳಿಕೆಗಳನ್ನು ನೀಡಿದ ಹಲವು ದಿನಗಳವರೆಗೆ ಅವರಿಬ್ಬರ ವಿರುದ್ಧ ಯಾವ ಕ್ರಮವನ್ನೂ ಕೈಗೊಂಡಿರಲಿಲ್ಲ. ಇತರ ದೇಶಗಳಿಂದ ಪ್ರತಿಭಟನೆ ವ್ಯಕ್ತವಾದ ನಂತರವೇ ಕ್ರಮ ಜರುಗಿಸಲಾಯಿತು ಎಂಬುದನ್ನು ಇಲ್ಲಿ ಗಮನಿಸಬೇಕು. ಅಂದರೆ, ಅಂತರರಾಷ್ಟ್ರೀಯ ಸಮುದಾಯದಿಂದ ವ್ಯತಿರಿಕ್ತವಾದ ಪ್ರತಿಕ್ರಿಯೆ ಬರುವವರೆಗೆ ಪಕ್ಷವು ಆ ಹೇಳಿಕೆಗಳ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಇದೇ ರೀತಿಯ ಮನಃಸ್ಥಿತಿಯೇ ಮಾಹುರ್ಕರ್ ಅವರ ಹೇಳಿಕೆಗಳಲ್ಲಿ ಇದೆ. ಯಾರೋ ಒಬ್ಬರು, ಯಾವುದೋ ಒಂದು ಸಂಘಟನೆಯು ಕೆಟ್ಟದ್ದಕ್ಕೆ ಕಾರಣವಾಗಿರಬಹುದು ಎಂಬ ನೆಲೆಯಲ್ಲಿ ಮಾಹಿತಿ ಆಯುಕ್ತರು ಮಾತನಾಡುವುದು ಮುಜುಗರ ಉಂಟುಮಾಡುವಂಥದ್ದು. ಇಂತಹ ಮಾತುಗಳು ಸ್ವೀಕಾರಾರ್ಹ ಅಲ್ಲ. ಇಂತಹ ಮಾತುಗಳು ಹುದ್ದೆಯ ಘನತೆಯನ್ನು ಕುಗ್ಗಿಸುತ್ತವೆ, ಹುದ್ದೆಗೆ ಇರುವ ವಿಶ್ವಾಸಾರ್ಹತೆಗೆ ಧಕ್ಕೆ ತರುತ್ತವೆ ಕೂಡ. ಮಾಹಿತಿ ಆಯೋಗಕ್ಕೆ ಒಂದು ಸಂಸ್ಥೆಯಾಗಿ ಮುಖ್ಯ ಪಾತ್ರ ಇದೆ. ಅದು ಸರ್ಕಾರದ ವಿರೋಧಿ ಅಲ್ಲದಿದ್ದರೂ, ಸರ್ಕಾರದಿಂದ ಸ್ವತಂತ್ರವಾಗಿ ಕೆಲಸ ಮಾಡಬೇಕು. ಮಾಹಿತಿ ಆಯೋಗಕ್ಕೆ ಸಂಬಂಧವೇ ಇರದ ವಿಚಾರವೊಂದರಲ್ಲಿ, ಆ ಸಂಸ್ಥೆಯಲ್ಲಿರುವ ಪ್ರಮುಖ ವ್ಯಕ್ತಿಗಳು ಸರ್ಕಾರವನ್ನು ಅಥವಾ ಆಡಳಿತಾರೂಢ ಪಕ್ಷವನ್ನು ಸಮರ್ಥಿಸಲು ತುದಿಗಾಲಿನಲ್ಲಿ ನಿಂತುಕೊಂಡಿದ್ದರೆ ಸಂಸ್ಥೆ ದುರ್ಬಲವಾಗುತ್ತದೆ.

ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್ ಹೇಳಿಕೆಗಳಿಗೆ ಕೆಲವು ವೇದಿಕೆಗಳಿಂದ ಬೆಂಬಲ ಸಿಕ್ಕಿದೆ, ಸಮರ್ಥನೆ ದೊರೆತಿದೆ. ಅವರ ವಿರುದ್ಧ ಕೈಗೊಳ್ಳಲಾಗಿರುವ ಕ್ರಮಗಳನ್ನು ವಿರೋಧಿಸುವವರು ಆಡಳಿತಾರೂಢ ಪಕ್ಷದ ಒಳಗೆಯೂ ಇದ್ದಾರೆ. ಅಲ್ಪಸಂಖ್ಯಾತ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕಾಗಿ ಅವರ ಬಗ್ಗೆ ಕೆಲವರಿಗೆ ಖುಷಿಯೂ ಆಗಿರಬಹುದು. ದೇಶದ ಸಾಮಾಜಿಕ ಮತ್ತು ರಾಜಕೀಯ ಪರಿಸರ ಅದೆಷ್ಟರಮಟ್ಟಿಗೆ ಧ್ರುವೀಕೃತವಾಗಿದೆ, ಅದೆಷ್ಟು ಹಾಳಾಗಿದೆ ಎಂಬುದನ್ನು ಇವೆಲ್ಲವೂ ತೋರಿಸುತ್ತವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು