ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಪೌರತ್ವ ಮಸೂದೆ: ಧರ್ಮ ನಿರಪೇಕ್ಷ ಪರಂಪರೆಗೆ ಕಪ್ಪುಚುಕ್ಕೆ

Last Updated 11 ಡಿಸೆಂಬರ್ 2019, 1:49 IST
ಅಕ್ಷರ ಗಾತ್ರ

ವಸಾಹತುಶಾಹಿಯ ಹಿಡಿತದಿಂದ ಹೊರಬರಲು ಧರ್ಮದ ಚೌಕಟ್ಟುಗಳನ್ನು ಮೀರಿ ಹೋರಾಟ ನಡೆಸಿದ ಭಾರತವು ಧರ್ಮದ ಆಧಾರದಲ್ಲಿ ವಿಭಜನೆ ಕಾಣಬೇಕಾಯಿತು. ಪರಿಣಾಮವಾಗಿ ಇಂದಿನ ಬಾಂಗ್ಲಾದೇಶವನ್ನೂ ಒಳಗೊಂಡ ಇಸ್ಲಾಮಿಕ್ ದೇಶ ಪಾಕಿಸ್ತಾನವು ಉದಯವಾಯಿತು. ಆ ಸಂದರ್ಭದಲ್ಲಿ ಭಾರತವನ್ನು ‘ಹಿಂದೂ ರಾಷ್ಟ್ರ’ ಆಗಿಸಬೇಕು ಎಂಬ ಆಗ್ರಹಗಳು ಗಟ್ಟಿಯಾಗಿಯೇ ಕೇಳಿಬಂದಿದ್ದವು. ಆದರೆ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದವರು ಮತ್ತು ದೇಶದ ಸಂವಿಧಾನವನ್ನು ರೂಪಿಸಿದವರು, ಈ ದೇಶದ ಪರಂಪರೆ ಕಲಿಸಿದ ಪಾಠಗಳನ್ನು ಗಮನದಲ್ಲಿ ಇರಿಸಿಕೊಂಡು, ಧರ್ಮನಿರಪೇಕ್ಷತೆ ಮತ್ತು ಸಮಾನತೆ ಎಂಬ ಮೌಲ್ಯಗಳನ್ನು ದೇಶದ ಸಂವಿಧಾನದ ಆತ್ಮದ ಸ್ಥಾನದಲ್ಲಿ ಇರಿಸಿದರು.

ಆದರೆ, ಈ ದೇಶ ಪಾಲಿಸಿಕೊಂಡು ಬಂದಿರುವ ಧರ್ಮನಿರಪೇಕ್ಷತೆ ಹಾಗೂ ಸಮಾನತೆಯ ಅಣಕದಂತೆ ಕಾಣುತ್ತಿರುವ ‘ಪೌರತ್ವ (ತಿದ್ದುಪಡಿ) ಮಸೂದೆ– 2019’ ಸೋಮವಾರ ರಾತ್ರಿ ಲೋಕಸಭೆಯ ಅನುಮೋದನೆ ಪಡೆದುಕೊಂಡಿದೆ. ಈ ಮಸೂದೆಯು ಭಾರತದ ಪೌರತ್ವ ನೀಡುವ ವಿಚಾರದಲ್ಲಿ ಧರ್ಮದ ಆಧಾರದಲ್ಲಿ ತಾರತಮ್ಯ ಎಸಗುತ್ತದೆ, ದೇಶಗಳ ಆಧಾರದಲ್ಲಿ ತಾರತಮ್ಯ ಎಸಗುತ್ತದೆ. ಅಷ್ಟೇ ಅಲ್ಲ, ವ್ಯಕ್ತಿಯೊಬ್ಬ ಒಂದು ನಿರ್ದಿಷ್ಟ ಬಗೆಯ ದೌರ್ಜನ್ಯಕ್ಕೆ ಒಳಗಾಗಿದ್ದರೆ ಮಾತ್ರ ಆತನಿಗೆ ಭಾರತದ ಪೌರತ್ವ ನೀಡಲಾಗುವುದು ಎನ್ನುವ ಮೂಲಕವೂ ತಾರತಮ್ಯಕ್ಕೆ ದಾರಿ ಮಾಡಿಕೊಡುತ್ತದೆ. ಈ ಮಸೂದೆಗೆ ರಾಜ್ಯಸಭೆಯ ಅನುಮೋದನೆ ಇನ್ನಷ್ಟೇ ಸಿಗಬೇಕಿದೆ. ಇದಕ್ಕೆ ಒಂದು ವೇಳೆ, ರಾಜ್ಯಸಭೆಯ ಅನುಮೋದನೆ ದೊರೆತು ಈ ತಿದ್ದುಪಡಿಗಳು ಮೂಲ ಕಾಯ್ದೆಯ ಭಾಗವಾದರೂ ಮೇಲ್ನೋಟಕ್ಕೇ ಕಾಣಿಸುವ ತಾರತಮ್ಯದ ಅಂಶಗಳ ಕಾರಣದಿಂದಾಗಿ ಇವು ನ್ಯಾಯಾಂಗದ ನಿಕಷಕ್ಕೆ ಒಳಪ‍ಡಬಹುದು.

ಧರ್ಮನಿರಪೇಕ್ಷತೆಯು ಸಂವಿಧಾನದ ಮೂಲಸ್ವರೂಪಗಳಲ್ಲಿ ಒಂದು. ಅದರ ಉಲ್ಲಂಘನೆಗೆ ಎಷ್ಟೇ ಬಹುಮತ ಇರುವ ಸರ್ಕಾರಕ್ಕೂ ಅವಕಾಶ ಇಲ್ಲ. ಕೇಂದ್ರ ಸರ್ಕಾರವು ಈ ಮಸೂದೆಯನ್ನು ಕಳೆದ ವರ್ಷವೂ ಮಂಡಿಸಿತ್ತು. ಹಿಂದೆ ಮಂಡಿಸಿದ್ದ ಮಸೂದೆಗೆ ಹೋಲಿಸಿದರೆ ಈಗಿನ ಮಸೂದೆಯಲ್ಲಿ ಒಂದೆರಡು ಬದಲಾವಣೆಗಳು ಆಗಿವೆ. ಈಶಾನ್ಯ ಭಾರತದ ಕೆಲವು ಪ್ರದೇಶಗಳನ್ನು ಬಹುಶಃ ರಾಜಕೀಯ ಕಾರಣಗಳಿಗಾಗಿ ಮಸೂದೆಯ ವ್ಯಾಪ್ತಿಯಿಂದ ಹೊರಗಿಡಲಾಗಿದೆ.

ಅಫ್ಗಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲಿ ಧರ್ಮದ ಕಾರಣಕ್ಕೆ ದೌರ್ಜನ್ಯಕ್ಕೆ ತುತ್ತಾಗಿ, ಭಾರತಕ್ಕೆ 2014ರ ಡಿಸೆಂಬರ್ 31ಕ್ಕೂ ಮೊದಲು ಬಂದ ಹಿಂದೂ, ಸಿಖ್, ಬೌದ್ಧ, ಜೈನ, ಪಾರ್ಸಿ, ಕ್ರೈಸ್ತ ಸಮುದಾಯದ ಅಕ್ರಮ ವಲಸಿಗರಿಗೆ ಭಾರತದ ಪೌರತ್ವ ನೀಡುವುದು ಈ ತಿದ್ದುಪಡಿಯ ಉದ್ದೇಶ. ಮಸೂದೆಯ ಉದ್ದೇಶವನ್ನು ಓದಿದಾಗ, ಅದರಲ್ಲಿನ ಲೋಪಗಳು ಮೇಲ್ನೋಟಕ್ಕೇ ಗೊತ್ತಾಗುತ್ತವೆ.

ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫ್ಗಾನಿಸ್ತಾನದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಧರ್ಮದ ಕಾರಣಕ್ಕೆ ದೌರ್ಜನ್ಯಗಳು ನಡೆದಿರುವುದು ನಿಜವಾದರೂ, ಇತರ ಕಾರಣಗಳಿಗಾಗಿ ಅಲ್ಲಿ ದೌರ್ಜನ್ಯಕ್ಕೆ ಗುರಿಯಾದ ಸಮುದಾಯಗಳಿಗೆ ಸೇರಿದವರು ಭಾರತದೊಳಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದರೆ ಅವರಿಗೆ ಭಾರತದ ಪೌರತ್ವ ನೀಡುವುದಿಲ್ಲವೇಕೆ ಎಂಬ ಪ್ರಶ್ನೆ ಎದುರಾಗುತ್ತದೆ. ‘ಧರ್ಮದ ಆಧಾರದಲ್ಲಿ ವಿಭಜನೆ ಕಾಣುವ ಮೊದಲು ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಭಾರತದ ಭಾಗವೇ ಆಗಿದ್ದವು. ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಧರ್ಮದ ಕಾರಣದಿಂದಾಗಿ ದೌರ್ಜನ್ಯಕ್ಕೆ ತುತ್ತಾದವರಿಗೆ ಆಶ್ರಯ ಕಲ್ಪಿಸುವುದು ಭಾರತದ ನೈತಿಕ ಜವಾಬ್ದಾರಿ’ ಎಂದು ತಿದ್ದುಪಡಿಯ ಪರವಾಗಿ ವಾದಿಸಬಹುದು. ಆದರೆ, ಈ ಎರಡು ದೇಶಗಳ ಜೊತೆಯಲ್ಲಿ ಅಫ್ಗಾನಿಸ್ತಾನವನ್ನು ಮಾತ್ರ ಸೇರಿಸಿಕೊಂಡಿದ್ದು ಏಕೆ?ಭಾರತದ ಜೊತೆ ಗಡಿ ಹಂಚಿಕೊಂಡಿರುವ ಇತರ ನೆರೆ ರಾಷ್ಟ್ರಗಳು ಏಕೆ ಮಸೂದೆಯ ವ್ಯಾಪ್ತಿಗೆ ಏಕೆಒಳಪಡಲಿಲ್ಲ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ.

ಭಾರತದ ಜೊತೆ ಗಡಿ ಹಂಚಿಕೊಂಡಿರುವ ಮ್ಯಾನ್ಮಾರ್‌ ದೇಶದಲ್ಲಿ ರೋಹಿಂಗ್ಯಾ ಮುಸ್ಲಿಂ ಸಮುದಾಯದವರು ಕೂಡ ಧರ್ಮದ ಕಾರಣಕ್ಕೇ ದೌರ್ಜನ್ಯಕ್ಕೆ ತುತ್ತಾಗಿದ್ದಾರೆ. ಆದರೆ, ಆ ಸಮುದಾಯದವರು ಅಕ್ರಮವಾಗಿ ಭಾರತ ಪ್ರವೇಶಿಸಿದ್ದರೆ, ಅವರಿಗೆ ಪೌರತ್ವ ನೀಡುವ ಪ್ರಸ್ತಾವ ತಿದ್ದುಪಡಿಯಲ್ಲಿ ಇಲ್ಲ. ಇನ್ನೊಂದು ನೆರೆರಾಷ್ಟ್ರ ಶ್ರೀಲಂಕಾದಲ್ಲಿ ಭಾರತ ಮೂಲದ ತಮಿಳರು, ಭಾಷೆಯ ಕಾರಣಕ್ಕಾಗಿ ಮತ್ತು ಜನಾಂಗೀಯ ನೆಲೆಯಲ್ಲಿ ಕಿರುಕುಳ ಅನುಭವಿಸಿದ್ದಾರೆ. ಹೀಗಿರುವಾಗ, ಶ್ರೀಲಂಕಾದಿಂದ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ ತಮಿಳರಿಗೆ ಪೌರತ್ವ ನೀಡುವ ಪ್ರಸ್ತಾವ ಕೂಡ ಮಸೂದೆಯಲ್ಲಿ ಇಲ್ಲ. ಈ ಮಸೂದೆಯು ಮುಸ್ಲಿಮರನ್ನು ಮಾತ್ರ ತನ್ನ ವ್ಯಾಪ್ತಿಯಿಂದ ಹೊರಗಿರಿಸುವ ಉದ್ದೇಶ ಹೊಂದಿದೆ. ಧರ್ಮದ ಆಧಾರದಲ್ಲಿ ತಾರತಮ್ಯ ಎಸಗುವ ಈ ಮಸೂದೆಯು ದೇಶದ ಧರ್ಮನಿರಪೇಕ್ಷ ಪರಂಪರೆಗೆ ಒಂದು ಕಪ್ಪುಚುಕ್ಕೆಯಂತೆ ಕಾಣಿಸುತ್ತಿದೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT