ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾತಂತ್ರ್ಯ ಹೋರಾಟದ ಅವಹೇಳನ ಅಂಕುಶಕ್ಕೆ ಪ್ರಧಾನಿಯೇ ಮುಂದಾಗಲಿ

Last Updated 6 ಫೆಬ್ರುವರಿ 2020, 3:53 IST
ಅಕ್ಷರ ಗಾತ್ರ

ಪ್ರಚೋದಿಸುವ, ಕೆರಳಿಸುವ ಹೇಳಿಕೆಗಳಿಂದಲೇ ಪ್ರಸಿದ್ಧರಾಗಿರುವ ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ಅವರು ಈ ಬಾರಿ ಭಾರತದ ಸ್ವಾತಂತ್ರ್ಯ ಹೋರಾಟವನ್ನೇ ಅವಮಾನಿಸುವ ರೀತಿಯಲ್ಲಿ ಮಾತನಾಡಿದ್ದಾರೆ. ಬೆಂಗಳೂರಿನಲ್ಲಿ ಅವರು ಮಾಡಿರುವ ಈ ಭಾಷಣದ ವಿಡಿಯೊ ಕೂಡ ಹರಿದಾಡುತ್ತಿದೆ. ನಮ್ಮ ದೇಶದಲ್ಲಿ ಬ್ರಿಟಿಷರ ಜತೆಗೆ ಹೋರಾಟದ ಹೆಸರಿನಲ್ಲಿ ಹೊಂದಾಣಿಕೆ ಮಾಡಿಕೊಂಡ ಒಂದು ವರ್ಗ ಇತ್ತು ಎಂದು ಅವರು ಸತ್ಯಾಗ್ರಹವನ್ನು ಹಂಗಿಸಿದ್ದಾರೆ.

‘ಈ ಬಗೆಯ ಹೋರಾಟ ನಡೆಸಿದವರು ಲಾಠಿ ಏಟು ತಿಂದವರಲ್ಲ, ಲಾಠಿಯನ್ನು ಕಂಡವರೂ ಅಲ್ಲ. ನಾವು ಹೋರಾಟ ಮಾಡುತ್ತೇವೆ, ನೀವು ನಮ್ಮನ್ನು ಜೈಲಿಗೆ ಹಾಕಿ, ನಮ್ಮನ್ನು ಚೆನ್ನಾಗಿ ನೋಡಿಕೊಂಡರೆ ಸಾಕು’ ಎಂದು ಅವರು ಬ್ರಿಟಿಷರಿಗೆ ಹೇಳಿದ್ದರು ಎಂದು ಹೆಗಡೆ ಆರೋಪಿಸಿದ್ದಾರೆ. ‘ಉಪವಾಸ ಸತ್ಯಾಗ್ರಹದಿಂದ ಭಾರತಕ್ಕೆ ಸ್ವಾತಂತ್ರ್ಯ ಬಂತೇ’ ಎಂಬ ಪ್ರಶ್ನೆಯನ್ನೂ ಆ ಭಾಷಣದಲ್ಲಿ ಅವರು ಕೇಳಿದ್ದಾರೆ. ಉಪವಾಸ ಸತ್ಯಾಗ್ರಹಕ್ಕೆ ಹೆದರಿ ಕಂಗಾಲಾಗಿ ಬ್ರಿಟಿಷರು ಭಾರತ ಬಿಟ್ಟು ತೊಲಗಿದರೇ ಎಂದು ಲೇವಡಿ ಮಾಡಿದ್ದಾರೆ. ಇಂತಹ ಹೋರಾಟ ಮಾಡಿದವರನ್ನು ನಮ್ಮ ದೇಶದ ಮಹಾ‍ಪುರುಷರು ಎಂದು ಕರೆಯುತ್ತೇವಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ. ಇಲ್ಲಿ ಯಾರ ಹೆಸರನ್ನೂ ಅವರು ಉಲ್ಲೇಖಿಸದಿದ್ದರೂ ಅವರು ಯಾರನ್ನು ಉದ್ದೇಶಿಸಿ ಹೇಳಿದ್ದಾರೆ ಎಂಬುದು ಸ್ಪಷ್ಟ.

ಮಹಾತ್ಮ ಗಾಂಧಿ ಬಗ್ಗೆ ಬಿಜೆಪಿಯ ಹಲವು ಮುಖಂಡರು ಅವಹೇಳನಕಾರಿ ಹೇಳಿಕೆಗಳನ್ನು ಈ ಹಿಂದೆಯೂ ನೀಡಿದ್ದಾರೆ. ಸಂವಿಧಾನದ ಹೆಸರಿನಲ್ಲಿ ಪ್ರತಿಜ್ಞೆ ಸ್ವೀಕರಿಸಿದವರೂ ಅವರಲ್ಲಿ ಇದ್ದಾರೆ. ಗಾಂಧೀಜಿಯನ್ನು ಕೊಂದ ಗೋಡ್ಸೆಯನ್ನು ‘ದೇಶಭಕ್ತ’ ಎಂದು ಬಿಜೆಪಿಯ ಪ್ರಜ್ಞಾ ಸಿಂಗ್‌ ಠಾಕೂರ್‌ ಬಣ್ಣಿಸಿದ್ದರು. ಬಿಜೆಪಿಯ ಅಧ್ಯಕ್ಷರಾಗಿದ್ದ, ಕೇಂದ್ರದ ಈಗಿನ ಗೃಹ ಸಚಿವ ಅಮಿತ್‌ ಶಾ ಅವರು ಗಾಂಧೀಜಿಯನ್ನು ‘ಚತುರ ಬನಿಯಾ’ ಎಂದು ಹೇಳಿದ್ದರು. ದೇಶಭಕ್ತಿಯೇ ತನ್ನ ಮೂಲಮಂತ್ರ ಎಂದು ಹೇಳಿಕೊಳ್ಳುವ ಪಕ್ಷವೊಂದರ ಉನ್ನತ ಮುಖಂಡರು ರಾಷ್ಟ್ರಪಿತನನ್ನೇ ಹಂಗಿಸುವ ಇಂತಹ ಹೇಳಿಕೆಗಳನ್ನು ನೀಡುತ್ತಿರುವುದು ಏಕೆ ಎಂಬುದು ಮಾತ್ರ ಅರಿವಾಗುತ್ತಿಲ್ಲ.

ದೇಶದ್ರೋಹದ ಪ್ರಕರಣ ದಾಖಲಿಸುವ ಪ್ರವೃತ್ತಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಹಲವರ ವಿರುದ್ಧ ದೇಶದ್ರೋಹ ಪ್ರಕರಣಗಳು ದಾಖಲಾಗಿವೆ. ‘ಫ್ರೀ ಕಾಶ್ಮೀರ’ ಎಂಬ ಫಲಕ ಹಿಡಿದವರ ಮೇಲೆಯೂ ಇಂತಹ ದೂರು ದಾಖಲಾಗಿದೆ.ರಾಷ್ಟ್ರಪಿತ ಮಹಾತ್ಮ ಗಾಂಧಿ ನೇತೃತ್ವದಲ್ಲಿ ನಡೆದ, ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಚಳವಳಿಯನ್ನು ಅವಮಾನಿಸುವುದು ದೇಶದ್ರೋಹದ ಕೃತ್ಯ ಆಗುವುದಿಲ್ಲವೇ?

ಗಾಂಧೀಜಿ ಪ್ರತಿಪಾದಿಸಿದ ಅಹಿಂಸೆ ಮತ್ತು ಸತ್ಯಾಗ್ರಹದ ಹೋರಾಟದ ಮಾದರಿಯನ್ನು ಇಡೀ ಜಗತ್ತೇ ಗೌರವದಿಂದ ಕಾಣುತ್ತಿದೆ. ಪ್ರತಿಭಟನೆ ದಾಖಲಿಸಲು ಇಂತಹದ್ದೊಂದು ಮಾರ್ಗವೂ ಇದೆ ಎಂಬುದು ಜಗತ್ತಿಗೆ ಅಚ್ಚರಿ ಹುಟ್ಟಿಸಿತ್ತು. ಹೆಗಡೆ ಅವರು ಪ್ರತಿನಿಧಿಸುವ ಹಿಂದೂ ಧರ್ಮದಿಂದ ತೊಡಗಿ, ಜಗತ್ತಿನ ಎಲ್ಲ ಧರ್ಮಗಳೂ ಅಹಿಂಸೆಯನ್ನೇ ಪ್ರತಿಪಾದಿಸುತ್ತಿವೆ. ಆದರೆ, ನಾಲಗೆ ಹರಿಯಬಿಡುವುದೇ ರಾಜಕಾರಣ ಎಂದು ಭಾವಿಸಿದವರಿಗೆ ಇದು ಅರ್ಥವಾಗಲೇಬೇಕೆಂದಿಲ್ಲ.

ಸ್ವಾತಂತ್ರ್ಯ ಹೋರಾಟವನ್ನು ಅವಹೇಳನ ಮಾಡಿದ ಆರೋಪದ ಪ್ರಕರಣದಲ್ಲಿ ಹೆಗಡೆ ಅವರಿಗೆ ಬಿಜೆಪಿ ನೋಟಿಸ್‌ ನೀಡಿದೆ. ಅದಾದ ಬಳಿಕ ಹೆಗಡೆ ಅವರು ಸ್ಪಷ್ಟೀಕರಣ ನೀಡಿದ್ದಾರೆ. ‘ಮಾಧ್ಯಮದಲ್ಲಿ ಪ್ರಕಟವಾಗಿರುವುದು ಸತ್ಯವಲ್ಲ. ನಾನು ಗಾಂಧಿ ಅಥವಾ ಯಾವುದೇ ರಾಜಕೀಯ ಪಕ್ಷದ ಹೆಸರು ಎತ್ತಿಲ್ಲ. ನನ್ನ ಹೇಳಿಕೆಗೆ ಬದ್ಧ’ ಎಂದು ಅವರು ಹೇಳಿದ್ದಾರೆ. ಅದಿರಲಿ, ಆದರೆ, ಸ್ವಾತಂತ್ರ್ಯ ಹೋರಾಟವನ್ನೇ ಹೊಂದಾಣಿಕೆ ಎಂದು ಲೇವಡಿ ಮಾಡಿರುವ ವ್ಯಕ್ತಿಯ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕಲ್ಲವೇ? ಇಲ್ಲ, ಬಿಜೆಪಿಯ ಸಂಸದರಿಗೆ ಒಂದು ಕಾನೂನು, ದೇಶದ ಇತರರಿಗೆ ಬೇರೊಂದು ಕಾನೂನು ಈ ದೇಶದಲ್ಲಿ ಇದೆಯೇ?

ಹೆಗಡೆ ಅವರ ಹೇಳಿಕೆಯಿಂದ ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಸೇರಿಸಿ ಪಕ್ಷದ ಹಿರಿಯ ಮುಖಂಡರು ಬೇಸರಗೊಂಡಿದ್ದಾರೆ ಎಂಬ ವರದಿಗಳು ಪ್ರಕಟವಾಗಿವೆ. ಆದರೆ, ಇದು ನಿಜವೇ ಎಂಬ ಪ್ರಶ್ನೆ ಉದ್ಭವಿಸುವಂತೆ ಈ ಹಿಂದೆ ನಡೆದ ಘಟನೆಗಳು ಇವೆ. ಬಿಜೆಪಿಯ ಹಲವು ಮುಖಂಡರು ಗಾಂಧೀಜಿಗೆ ಅಪಮಾನ ಮಾಡಿ ಮಾತನಾಡಿದಾಗ, ಅವರ ವಿರುದ್ಧ ಯಾವ ಕ್ರಮವನ್ನೂ ಪಕ್ಷ ಕೈಗೊಂಡಿಲ್ಲ. ಈಗ, ಹೆಗಡೆ ಅವರ ವಿರುದ್ಧ ಆ ಪಕ್ಷ ಕ್ರಮ ಕೈಗೊಳ್ಳುತ್ತದೆ ಎಂಬ ನಿರೀಕ್ಷೆಯೂ ಇಲ್ಲ. ಹಾಗಾಗಿ, ಇಂತಹ ಹೇಳಿಕೆಗಳು ಮುಂದೆಯೂ ಬರುತ್ತಲೇ ಇರಬಹುದು. ಇಂತಹ ಹೇಳಿಕೆಗಳಿಗೆ ಕಡಿವಾಣ ಹಾಕಲು ಪ್ರಧಾನಿಯವರೇ ಬಾಯಿ ಬಿಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT