ಸೋಮವಾರ, 2 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಮತ್ತೆ ಹಿಡಿತ ತಪ್ಪಿದ ಹಣದುಬ್ಬರ-ಸರ್ಕಾರದ ನೆರವಿಲ್ಲದೆ ನಿಯಂತ್ರಣ ಕಷ್ಟ

Published 16 ಆಗಸ್ಟ್ 2023, 0:12 IST
Last Updated 16 ಆಗಸ್ಟ್ 2023, 0:12 IST
ಅಕ್ಷರ ಗಾತ್ರ

ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಹಣಕಾಸು ನೀತಿ ಸಮಿತಿಯ (ಎಂಪಿಸಿ) ಸಭೆಯು ಈಚೆಗೆ ನಡೆಯಿತು. ಸಭೆಯ ನಿರ್ಣಯಗಳ ಪೈಕಿ ಹೆಚ್ಚು ಗಮನ ಸೆಳೆದಿದ್ದು, ರೆಪೊ ದರದಲ್ಲಿ ಯಥಾಸ್ಥಿತಿ ಮುಂದುವರಿಸಿಕೊಂಡು ಹೋಗುವ ತೀರ್ಮಾನ ಮಾತ್ರವೇ ಅಲ್ಲದೆ, ‌ಹಣದುಬ್ಬರ ದರದ ಅಂದಾಜನ್ನು ಹೆಚ್ಚಿಸಿದ್ದು ಕೂಡ ಒಂದು. ತರಕಾರಿಗಳ ಬೆಲೆಯಲ್ಲಿನ ಹೆಚ್ಚಳವು ಚಿಲ್ಲರೆ ಹಣದುಬ್ಬರದ ಒಟ್ಟು ಪ್ರಮಾಣವನ್ನು ಹೆಚ್ಚು ಮಾಡಬಹುದು ಎಂಬ ಆತಂಕವನ್ನು ಆರ್‌ಬಿಐ ವ್ಯಕ್ತಪಡಿಸಿತ್ತು. 2023–24ನೇ ಹಣಕಾಸು ವರ್ಷದ ಹಾಲಿ ತ್ರೈಮಾಸಿಕದಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇಕಡ 6.2ಕ್ಕೆ ಹೆಚ್ಚಬಹುದು ಎಂದು ಆರ್‌ಬಿಐ ಅಂದಾಜಿಸಿತ್ತು ಕೂಡ. ಆದರೆ ಚಿಲ್ಲರೆ ಹಣದುಬ್ಬರ ದರವು ಜುಲೈ ತಿಂಗಳಲ್ಲಿ ಆರ್‌ಬಿಐ ಅಂದಾಜನ್ನು ಮೀರಿ ನಿಂತಿದೆ. ಜುಲೈನಲ್ಲಿ ಅದು ಶೇಕಡ 7.44ರಷ್ಟಾಗಿದೆ. ಇದು 15 ತಿಂಗಳ ಗರಿಷ್ಠ ಮಟ್ಟ. ಈ ಜಿಗಿತದ ನೇರ ಪರಿಣಾಮ ಅಂದರೆ, ಆರ್‌ಬಿಐ ಈ ವರ್ಷದಲ್ಲಿ ರೆಪೊ ದರವನ್ನು ತಗ್ಗಿಸುವ ಸಾಧ್ಯತೆ ಇಲ್ಲವೇ ಇಲ್ಲ ಎಂಬ ಸ್ಥಿತಿ ನಿರ್ಮಾಣ ಆಗಿರುವುದು. ಚಿಲ್ಲರೆ ಹಣದುಬ್ಬರ ಪ್ರಮಾಣದಲ್ಲಿನ ಏರಿಕೆಯು ಗ್ರಾಹಕರ ಜೇಬನ್ನು ನೇರವಾಗಿ ಸುಡುತ್ತಿರುತ್ತದೆ. ರೆಪೊ ದರದಲ್ಲಿ ಸದ್ಯಕ್ಕೆ ಯಾವ ಇಳಿಕೆಯೂ ಆಗುವುದಿಲ್ಲ ಎಂಬುದು ಸಾಲಗಾರರನ್ನು ಹಾಗೂ ಬಂಡವಾಳಕ್ಕಾಗಿ ಬ್ಯಾಂಕುಗಳನ್ನೇ ನೆಚ್ಚಿಕೊಂಡಿರುವ ಅತಿಸಣ್ಣ, ಸಣ್ಣ ಹಾಗೂ ಮಧ್ಯಮ ಪ್ರಮಾಣದ (ಎಂಎಸ್‌ಎಂಇ) ಉದ್ಯಮಗಳನ್ನು ಬಹುವಾಗಿ ಬಾಧಿಸುತ್ತದೆ. ಆರ್‌ಬಿಐ ಹಣಕಾಸು ನೀತಿಯನ್ನು ತುಸು ಸಡಿಲಗೊಳಿಸಿದರೆ, ಮಾರುಕಟ್ಟೆ ಯಲ್ಲಿ ಚಟುವಟಿಕೆಗಳು ಇನ್ನಷ್ಟು ಗರಿಗೆದರುತ್ತವೆ ಎಂಬ ನಿರೀಕ್ಷೆಯಲ್ಲಿ ಇರುವ ವರ್ತಕ ಸಮೂಹಕ್ಕೂ ಇದು ನಿರಾಶೆ ತರುತ್ತದೆ.

ಜುಲೈ ತಿಂಗಳಿನಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಭಾರಿ ಹೆಚ್ಚಳ ಕಂಡಿರುವುದಕ್ಕೆ ಮುಖ್ಯ ಕಾರಣ ತರಕಾರಿ, ಸಂಬಾರ ಪದಾರ್ಥಗಳು ಹಾಗೂ ವಿವಿಧ ಧಾನ್ಯಗಳ ಬೆಲೆಯಲ್ಲಿ ಆಗಿರುವ ಏರಿಕೆ. ಇವನ್ನು ಹೊರತುಪಡಿಸಿದರೆ ಮಾಂಸ, ಮೊಟ್ಟೆ, ಹಣ್ಣುಗಳು, ಸಿದ್ಧಪಡಿಸಿದ ಊಟ, ತಿಂಡಿ ಹಾಗೂ ಸಿಹಿತಿನಿಸು ಮುಂತಾದ ಅಗತ್ಯ ಉತ್ಪನ್ನಗಳು, ಸೇವೆಗಳ ಬೆಲೆಯಲ್ಲಿ ಭಾರಿ ಏರಿಕೆ ಆಗಿಲ್ಲ. ಎಣ್ಣೆ ಹಾಗೂ ಕೊಬ್ಬಿನ ಅಂಶ ಹೆಚ್ಚಿರುವ ಉತ್ಪನ್ನಗಳ ಬೆಲೆಯಲ್ಲಿ ದೊಡ್ಡಮಟ್ಟದ ಇಳಿಕೆ ಕಂಡುಬಂದಿದೆ ಎಂಬುದು ಗಮನಾರ್ಹ. ಚಿಲ್ಲರೆ ಹಣದುಬ್ಬರ ದರವನ್ನು ಹೇಳುವ ಗ್ರಾಹಕ ಬೆಲೆ ಸೂಚ್ಯಂಕದಲ್ಲಿ ಆಹಾರ ವಸ್ತುಗಳಿಗೆ ಹೆಚ್ಚಿನ ಪ್ರಾಧಾನ್ಯ ಇರುವ ಕಾರಣ, ತರಕಾರಿ, ಧಾನ್ಯಗಳ ಬೆಲೆಯಲ್ಲಿ ಆಗುವ ಏರಿಕೆಯು ಒಟ್ಟು ಅಂಕಿ–ಅಂಶಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ದೇಶದಲ್ಲಿ ಚಿಲ್ಲರೆ ಹಣದುಬ್ಬರ ದರವನ್ನು ನಿಯಂತ್ರಣದಲ್ಲಿ ಇರಿಸುವ ಹೊಣೆ ಇರುವುದು ಆರ್‌ಬಿಐ ಮೇಲೆ. ಅದು ಈ ಹೊಣೆ ನಿಭಾಯಿಸಲಿಕ್ಕಾಗಿ ಹಣಕಾಸು ವ್ಯವಸ್ಥೆಯಲ್ಲಿನ ಹಣದ ಹರಿವನ್ನು ಕಡಿಮೆ ಮಾಡಲು ಮುಂದಾಗುತ್ತದೆ. ಆದರೆ, ವಾಸ್ತವದಲ್ಲಿ ಆಹಾರ ವಸ್ತುಗಳ ಬೆಲೆ ಏರಿಕೆಯನ್ನು ತಡೆಯುವ ಪರಿಣಾಮಕಾರಿ ಅಸ್ತ್ರ ಆರ್‌ಬಿಐ ಬಳಿ ಇದ್ದಂತಿಲ್ಲ. ರೆಪೊ ದರ ಏರಿಕೆ ಅಥವಾ ನಗದು ಮೀಸಲು ಅನುಪಾತ (ಸಿಆರ್‌ಆರ್‌) ಹೆಚ್ಚಳದ ಮೂಲಕ ತರಕಾರಿ, ಧಾನ್ಯಗಳಂತಹ ಅವಶ್ಯಕ ವಸ್ತುಗಳ ಬೆಲೆ ಏರಿಕೆ ನಿಯಂತ್ರಣ ಸಾಧ್ಯವಿಲ್ಲ.

ಜುಲೈನಲ್ಲಿ ಟೊಮೆಟೊ ಬೆಲೆ ಏರಿಕೆಯು ಬಹಳ ತೀವ್ರವಾಗಿತ್ತು. ಈಗ ಇದು ಕಡಿಮೆ ಆಗುತ್ತಿದೆ. ಟೊಮೆಟೊ ಬೆಲೆ ತೀರಾ ಹೆಚ್ಚಿದ್ದ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ದೇಶದ ಆಯ್ದ ಪ್ರದೇಶಗಳಲ್ಲಿ ಮಾತ್ರ ರಿಯಾಯಿತಿ ದರದಲ್ಲಿ ಟೊಮೆಟೊ ಮಾರಾಟ ಮಾಡಿತು. ಆಗಸ್ಟ್‌ ಕೊನೆಯ ವಾರದಿಂದ ಈರುಳ್ಳಿ ಬೆಲೆಯು ಗಗನಮುಖಿ ಆಗಲಿದೆ ಎಂದು ಕೆಲವು ಮಾರುಕಟ್ಟೆ ಅಧ್ಯಯನ ವರದಿಗಳು ಅಂದಾಜು ಮಾಡಿವೆ. ಈರುಳ್ಳಿ ಬೆಲೆ ಏರಿಕೆ ತಡೆಯಲು ಕೇಂದ್ರವು ತನ್ನ ದಾಸ್ತಾನಿನಲ್ಲಿ ಇರುವ ಈರುಳ್ಳಿಯನ್ನು ತಕ್ಷಣದಿಂದಲೇ ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಹೇಳಿದೆ. ಆಗಸ್ಟ್‌ನಲ್ಲಿ ವಾಡಿಕೆಯಂತೆ ಮಳೆ ಆಗಿಲ್ಲ. ಇದರಿಂದಾಗಿಯೂ ತರಕಾರಿಗಳ ಬೆಲೆಯು ಹೆಚ್ಚಾಗಬಹುದು. ಜಾಗತಿಕ ಪೂರೈಕೆ ವ್ಯವಸ್ಥೆ ಯಲ್ಲಿ ವ್ಯತ್ಯಯ ಉಂಟಾದರೆ ಧಾನ್ಯಗಳ ಬೆಲೆಯ ಮೇಲೆ ಕೆಟ್ಟ ಪರಿಣಾಮ ಆಗಬಹುದು. ಇಂತಹ ಸಂದರ್ಭಗಳಲ್ಲಿ ಚಿಲ್ಲರೆ ಹಣದುಬ್ಬರವನ್ನು ತಗ್ಗಿಸುವ ಹೊಣೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೆಚ್ಚು ಹೊರಬೇಕು. ಇಲ್ಲಿ ಆರ್‌ಬಿಐ ತೆಗೆದುಕೊಳ್ಳಬಹುದಾದ ಕ್ರಮಗಳು ಅಲ್ಪ. ಸರ್ಕಾರಗಳು ಆರ್‌ಬಿಐ ಜೊತೆ ಕೈಜೋಡಿಸದೆ ಇದ್ದಲ್ಲಿ, ಹಣದುಬ್ಬರ ಪ್ರಮಾಣವು ಮುಂದಿನ ತಿಂಗಳುಗಳಲ್ಲಿಯೂ ನಿಯಂತ್ರಣಕ್ಕೆ ಬರುವುದು ಅನುಮಾನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT