ಶುಕ್ರವಾರ, 12 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ರೆಪೊ ಹೆಚ್ಚಳ ನಿರೀಕ್ಷಿತ- ಬೆಲೆ ಸ್ಥಿರತೆ ಈಗಿನ ಆದ್ಯತೆ

Last Updated 9 ಡಿಸೆಂಬರ್ 2022, 18:43 IST
ಅಕ್ಷರ ಗಾತ್ರ

ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಹಣಕಾಸು ನೀತಿ ಸಮಿತಿಯು (ಎಂಪಿಸಿ), ಬ್ಯಾಂಕ್‌ಗಳಿಗೆ ಆರ್‌ಬಿಐ ನೀಡುವ ಸಾಲದ ಮೇಲಿನ ಬಡ್ಡಿಯ ದರವನ್ನು ಹೆಚ್ಚಿಸುವ ತೀರ್ಮಾನ ಕೈಗೊಂಡಿರುವುದು ಅನಿರೀಕ್ಷಿತ ಅಲ್ಲ. ಎಂಪಿಸಿ ಸಭೆಯು ರೆಪೊ ದರವನ್ನು ಶೇಕಡ 0.35ರಷ್ಟು ಹೆಚ್ಚಿಸುವ ತೀರ್ಮಾನ ಕೈಗೊಂಡಿದೆ. ಈ ಹೆಚ್ಚಳದ ನಂತರದಲ್ಲಿ ರೆಪೊ ದರವು ಶೇ 6.25ಕ್ಕೆ ತಲುಪಿದೆ. ರೆಪೊ ದರವು ಈ ಮಟ್ಟದಲ್ಲಿ ಇದ್ದಿದ್ದು 2019ರ ಮಾರ್ಚ್‌ನಲ್ಲಿ. ಚಿಲ್ಲರೆ ಹಣದುಬ್ಬರ ದರವು ಈಗಲೂ ಒಂದು ಸವಾಲಾಗಿಯೇ ಉಳಿದುಕೊಂಡಿದೆ ಹಾಗೂ ಈ ಸವಾಲನ್ನು ಎದುರಿಸಬೇಕಿದೆ ಎಂಬುದನ್ನು ಎಂಪಿಸಿ ತೀರ್ಮಾನವು ಹೇಳುತ್ತಿದೆ. ಎಂಪಿಸಿಯ ಆರು ಮಂದಿ ಸದಸ್ಯರ ಪೈಕಿ ಐದು ಮಂದಿ ದರ ಏರಿಕೆಯ ಪರವಾಗಿ ಹಾಗೂ ಒಬ್ಬ ಸದಸ್ಯ ದರ ಏರಿಕೆಯ ವಿರುದ್ಧವಾಗಿ ಮತ ಚಲಾಯಿಸಿದ್ದಾರೆ. ಜಯಂತ ವರ್ಮ ಅವರು ರೆಪೊ ಏರಿಕೆಯ ವಿರುದ್ಧವಾಗಿ ಮತ ಚಲಾಯಿಸಿದ್ದಾರೆ. ಹೊಂದಾಣಿಕೆಯ ಹಣಕಾಸು ನೀತಿಯನ್ನು ಹಿಂಪಡೆಯುವುದರ ಪರವಾಗಿ ಎಂಪಿಸಿ ಬಹುಮತದ ನಿರ್ಧಾರ ಕೈಗೊಂಡಿದೆ. ಈ ತೀರ್ಮಾನಗಳು, ಹಣದುಬ್ಬರವು ಆರ್‌ಬಿಐ ಪಾಲಿಗೆ ಕಳವಳ ಮೂಡಿಸುವ ಸಮಸ್ಯೆಯಾಗಿ ಈಗಲೂ ಮುಂದುವರಿದಿದೆ ಎಂಬುದನ್ನು ಹೇಳುತ್ತಿವೆ. ಈಗ ರೆಪೊ ದರವನ್ನು ಹೆಚ್ಚಿಸುವ ವೇಗವು ಕಡಿಮೆ ಆಗಿದೆ. ಹಿಂದೆ ರೆಪೊ ದರವನ್ನು ಸತತವಾಗಿ ಮೂರು ಬಾರಿ ಶೇ 0.50ರಷ್ಟು ಹೆಚ್ಚಿಸಲಾಗಿತ್ತು. ಈಗ ಹೆಚ್ಚಳದ ಪ್ರಮಾಣ ಕಡಿಮೆ ಆಗಿದ್ದರೂ, ದರ ಹೆಚ್ಚಳ ಇಲ್ಲಿಗೇ ಕೊನೆಯಾಗಿಲ್ಲ ಎಂಬ ಸೂಚನೆಗಳು ಇವೆ.

ಪ್ರಸಕ್ತ ತ್ರೈಮಾಸಿಕದಲ್ಲಿ ಚಿಲ್ಲರೆ ಹಣದುಬ್ಬರದ ಪ್ರಮಾಣವು ಶೇ 6.6ರಷ್ಟು ಇರಲಿದೆ ಎಂದು ಆರ್‌ಬಿಐ ಅಂದಾಜಿಸಿದೆ. ಮುಂದಿನ ತ್ರೈಮಾಸಿಕದಲ್ಲಿ (ಜನವರಿಯಿಂದ ಮಾರ್ಚ್‌ವರೆಗಿನ ಅವಧಿ) ಹಣದುಬ್ಬರದ ಪ್ರಮಾಣವು ಶೇ 5.9ಕ್ಕೆ ಇಳಿಕೆ ಆಗಲಿದೆ ಎಂದು ಅಂದಾಜು ಮಾಡಲಾಗಿದೆ. ಅಂದರೆ, ‍ಪ್ರಸಕ್ತ ಹಣಕಾಸು ವರ್ಷದಲ್ಲಿ ಹಣದುಬ್ಬರದ ಪ್ರಮಾಣವು ಶೇ 6.7ರ ಮಟ್ಟದಲ್ಲಿ ಇರಲಿದೆ. ಇದು ಆರ್‌ಬಿಐ ನಿಗದಿ ಮಾಡಿರುವ ಗರಿಷ್ಠ ಮಿತಿಗಿಂತಲೂ ಹೆಚ್ಚು. ಅಕ್ಟೋಬರ್ ತಿಂಗಳನ್ನು ಪರಿಗಣಿಸಿದರೆ, ಚಿಲ್ಲರೆ ಹಣದುಬ್ಬರ ದರವು ಸತತವಾಗಿ 10 ತಿಂಗಳ ಅವಧಿಗೆ ಶೇ 6ಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಉಳಿದಿದೆ.
ಅಕ್ಟೋಬರ್‌ನಲ್ಲಿ ಹಣದುಬ್ಬರ ತಗ್ಗುವಂತೆ ಕಂಡರೂ, ಅದು ಆಹಾರ ವಸ್ತುಗಳ ಹಣದುಬ್ಬರ ತಗ್ಗಿದ್ದರ ಕಾರಣದಿಂದಾಗಿತ್ತು. ‘ಹಣದುಬ್ಬರದ ವಿರುದ್ಧದ ಸಮರವು ಇನ್ನೂ ಕೊನೆಗೊಂಡಿಲ್ಲ’ ಎಂದು ಎಂಪಿಸಿ ಹೇಳಿಕೆಯಲ್ಲಿ ತಿಳಿಸಲಾಗಿದೆ. ಮುಂದಿನ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಹಣದುಬ್ಬರವು ಶೇ 5.2ಕ್ಕೆ ಇಳಿಕೆಯಾಗಬಹುದು ಎಂದು ಆರ್‌ಬಿಐ ಅಂದಾಜಿಸಿದೆ. ಆದರೆ ಈ ಮಟ್ಟವು ಕೂಡ ಕಡಿಮೆಯೇನೂ ಅಲ್ಲ. ವಾಸ್ತವದಲ್ಲಿ ಹಣದುಬ್ಬರದ ಪ್ರಮಾಣವನ್ನು ಶೇ 4ರಲ್ಲಿ ಮಿತಿಗೊಳಿಸಬೇಕು.
ಶೇ 6 ಅದರ ಗರಿಷ್ಠ ಮಿತಿ ಮಾತ್ರ. ಆರ್‌ಬಿಐ ತಾನು ಈಗ ತಳೆದಿರುವ ನಿಲುವನ್ನು ಮರುಪರಿಶೀಲಿಸುವ ಮೊದಲು ಹಣದುಬ್ಬರವು ಕಡಿಮೆ ಮಟ್ಟದಲ್ಲಿ ಸ್ಥಿರವಾಗುವುದನ್ನು ಬಯಸಬಹುದು.

ಕೇಂದ್ರೀಯ ಬ್ಯಾಂಕ್‌ ಭಾರತದ ಆರ್ಥಿಕ ಬೆಳವಣಿಗೆ ದರದ ಅಂದಾಜನ್ನು ಈ ಆರ್ಥಿಕ ವರ್ಷಕ್ಕೆ
ಶೇ 6.8ಕ್ಕೆ ಇಳಿಕೆ ಮಾಡಿದೆ. ಸೆಪ್ಟೆಂಬರ್‌ನಲ್ಲಿ ಮಾಡಿದ್ದ ಅಂದಾಜಿನ ಪ್ರಕಾರ ಅದು ಶೇ 7 ಆಗಿತ್ತು. ಅದಕ್ಕೂ ಮೊದಲು, ಅಂದರೆ ಆಗಸ್ಟ್‌ನಲ್ಲಿ ಬೆಳವಣಿಗೆ ಅಂದಾಜನ್ನು ಶೇ 7.2ಕ್ಕೆ ಇರಿಸಿತ್ತು. ಬೆಳವಣಿಗೆ ದರದ ಮರು ಅಂದಾಜುಗಳಿಗೆ ಕಾರಣ ಜಾಗತಿಕ ಮಟ್ಟದಲ್ಲಿನ ಕೆಲವು ಬಿಕ್ಕಟ್ಟುಗಳು ದೀರ್ಘಾವಧಿಗೆ
ಮುಂದುವರಿಯುತ್ತಿರುವುದು, ಜಾಗತಿಕ ಹಣಕಾಸಿನ ಸ್ಥಿತಿ ಬಿಗಿಯಾಗುತ್ತಿರುವುದು ಮತ್ತು ವಿದೇಶ ಗಳಿಂದ ಬೇಡಿಕೆ ಕಡಿಮೆ ಆಗುತ್ತಿರುವುದು ಎಂದು ಆರ್‌ಬಿಐ ಹೇಳಿದೆ. ಈಗ ದೇಶದಲ್ಲಿ ಹಣಕಾಸು ನೀತಿಯನ್ನು ಬಿಗಿಗೊಳಿಸುತ್ತಿರುವುದರಿಂದಾಗಿ ಬೆಳವಣಿಗೆ ಮೇಲೆ ಪರಿಣಾಮ ಉಂಟಾಗಬಹುದು. ಹೀಗಿದ್ದರೂ, ಆರ್‌ಬಿಐ ಗಮನವು ಈಗ ವ್ಯವಸ್ಥೆಯಲ್ಲಿ ಬೆಲೆ ಸ್ಥಿರತೆಯನ್ನು ಕಾಯ್ದುಕೊಳ್ಳುವುದರ ಮೇಲೆ ಇದೆ. ಏಕೆಂದರೆ, ಹಣದುಬ್ಬರವು ಮಂದಗತಿಯ ಬೆಳವಣಿಗೆಗಿಂತಲೂ ಹೆಚ್ಚಿನ ಅಪಾಯವನ್ನು ಆರ್ಥಿಕ ವ್ಯವಸ್ಥೆಗೆ ತಂದೊಡ್ಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT