ಸೋಮವಾರ, ಏಪ್ರಿಲ್ 12, 2021
31 °C

ಸಂಪಾದಕೀಯ | ಆರ್‌ಬಿಐ: ರೆಪೊ ದರದಲ್ಲಿ ಯಥಾಸ್ಥಿತಿ ಎದುರಾಗಬಹುದು ದೊಡ್ಡ ಸವಾಲು

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಹಣಕಾಸು ನೀತಿ ಸಮಿತಿಯ (ಎಂಪಿಸಿ) ಹೊಸ ಹಣಕಾಸು ವರ್ಷದ ಮೊದಲ ಸಭೆಯು ರೆಪೊ ದರಗಳಲ್ಲಿ ಯಾವ ಬದಲಾವಣೆಯನ್ನೂ ಮಾಡದಿರುವ ತೀರ್ಮಾನ ಕೈಗೊಂಡಿದೆ. ಅಲ್ಲದೆ, ಹಣಕಾಸಿನ ಹೊಂದಾಣಿಕೆಯ ನಿಲುವನ್ನು ಮುಂದುವರಿಸುವ ತೀರ್ಮಾನವನ್ನೂ ಕೈಗೊಂಡಿದೆ. ವ್ಯವಸ್ಥೆಯಲ್ಲಿ ನಗದು ಲಭ್ಯತೆ ಹೆಚ್ಚಿಸಲು ಪೂರಕವಾಗುವ ಕೆಲವು ಕ್ರಮಗಳನ್ನು ಜಾರಿಗೆ ತರಲು ಕೂಡ ಅದು ತೀರ್ಮಾನಿಸಿದೆ.

ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ತೀರ್ಮಾನಿಸಿದ್ದರಲ್ಲಿ ಅಚ್ಚರಿಗೆ ಕಾರಣವಾಗುವಂಥದ್ದು ಏನೂ ಇಲ್ಲ. ‘ಪೆಟ್ರೋಲ್ ಮತ್ತು ಡೀಸೆಲ್‌ನ ಮಾರುಕಟ್ಟೆ ಬೆಲೆಯು ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ತೆರಿಗೆಯನ್ನು ತಗ್ಗಿಸುವುದರಿಂದ ಬೆಲೆ ಹೆಚ್ಚಳದ ಒತ್ತಡ ತುಸು ತಗ್ಗಬಹುದು. ಹಣದುಬ್ಬರ ದರವು ಹೆಚ್ಚಿನ ಅವಧಿಗೆ ಕಡಿಮೆ ಮಟ್ಟದಲ್ಲಿ ಇರುವಂತಹ ಪರಿಸ್ಥಿತಿ ಸೃಷ್ಟಿಯಾಗಬೇಕಿರುವುದು ಈ ಸಂದರ್ಭದ ಅಗತ್ಯ’ ಎಂಬ ಅಭಿಪ್ರಾಯವು ಫೆಬ್ರುವರಿಯಲ್ಲಿ ನಡೆದಿದ್ದ ಎಂಪಿಸಿ ಸಭೆಯಲ್ಲಿ ವ್ಯಕ್ತವಾಗಿತ್ತು. ಆದರೆ, ದೇಶದ ಬಹುತೇಕ ಕಡೆಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯು ಗರಿಷ್ಠ ಮಟ್ಟದಲ್ಲಿಯೇ ಇದೆ. ಈ ವರ್ಷದ ಫೆಬ್ರುವರಿಯಲ್ಲಿ ಚಿಲ್ಲರೆ ಹಣದುಬ್ಬರ ದರವು ಶೇಕಡ 5.03ಕ್ಕೆ ತಲುಪಿದೆ.

ತೈಲ ಬೆಲೆಯನ್ನು ತಗ್ಗಿಸುವ ವಿಚಾರದಲ್ಲಿ ಕೇಂದ್ರ ಮೊದಲ ಹೆಜ್ಜೆ ಇರಿಸಬೇಕೋ ರಾಜ್ಯಗಳು ಮೊದಲ ಹೆಜ್ಜೆ ಇರಿಸಬೇಕೋ ಎಂಬ ರಾಜಕೀಯ ಚರ್ಚೆಯೇ ಇನ್ನೂ ಮುಂದುವರಿದಿದೆ. ತೈಲ ಬೆಲೆ ತಗ್ಗಿಸುವ ವಿಚಾರದಲ್ಲಿ ಸಹಮತ ಇನ್ನೂ ಮೂಡಿಲ್ಲ; ತೈಲ ಬೆಲೆ ತಗ್ಗಿಲ್ಲ. ಹಣದುಬ್ಬರ ಕಡಿಮೆ ಆಗದಿರುವುದಕ್ಕೆ ಇದೂ ಒಂದು ಕಾರಣ. ಈ ಹಂತದಲ್ಲಿ ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳದೆ ಅನ್ಯ ಮಾರ್ಗ ಆರ್‌ಬಿಐಗೆ ಇರಲಿಲ್ಲ ಅನಿಸುತ್ತದೆ. ಹೊಸ ಹಣಕಾಸು ವರ್ಷದ ಮೊದಲ ಆರು ತಿಂಗಳ ಅವಧಿಯಲ್ಲಿ ಹಣದುಬ್ಬರವು ಶೇ 5ಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಇರಲಿದೆ ಎಂದು ಆರ್‌ಬಿಐ ಅಂದಾಜಿಸಿದೆ.

ಕೊರೊನಾ ಎರಡನೆಯ ಅಲೆಯು ಆರ್ಥಿಕ ಪರಿಸ್ಥಿತಿಯ ಮೇಲೆ ಬೀರಬಹುದಾದ ಪರಿಣಾಮಗಳ ಬಗ್ಗೆ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರ ಮಾತಿನಲ್ಲಿ ಕೆಲವು ಕಳವಳಗಳು ವ್ಯಕ್ತವಾಗಿವೆ. ಎರಡನೆಯ ಅಲೆಯನ್ನು ತಡೆಯಲು ದೇಶದ ಅಲ್ಲಲ್ಲಿ ಲಾಕ್‌ಡೌನ್‌ ಜಾರಿಗೆ ಬಂದಿದೆ. ಇನ್ನು ಕೆಲವೆಡೆ ಜನರ ಮುಕ್ತ ಸಂಚಾರದ ಮೇಲೆ ನಿರ್ಬಂಧ ವಿಧಿಸಲಾಗುತ್ತಿದೆ. ಕೆಲವು ವಾಣಿಜ್ಯ ಚಟುವಟಿಕೆಗಳ ಮೇಲೆ ಕೂಡ ನಿರ್ಬಂಧಗಳು ಜಾರಿಯಾಗಿವೆ. ಇಂತಹ ನಿರ್ಬಂಧಗಳ ಉದ್ದೇಶ ಏನೇ ಇರಲಿ, ಇವೆಲ್ಲವೂ ಅರ್ಥ ವ್ಯವಸ್ಥೆಗೆ ಬೀಳುವ ಏಟುಗಳು ಎಂಬುದರಲ್ಲಿ ಅನುಮಾನ ಇಲ್ಲ. ಮೊದಲ ಲಾಕ್‌ಡೌನ್‌ ತಂದಿತ್ತ ವಿಷಮ ಪರಿಸ್ಥಿತಿ ಇನ್ನೂ ಪೂರ್ತಿಯಾಗಿ ತಿಳಿಯಾಗಿಲ್ಲ.

ಉದ್ಯಮಗಳ, ಜನರ ಆದಾಯ ಪೂರ್ತಿಯಾಗಿ ಮೊದಲಿನ ಸ್ಥಿತಿಗೆ ಬಂದ ವರದಿಗಳು ಇಲ್ಲ. ಆರ್‌ಬಿಐ ತಾನಾಗಿಯೇ ಅಂದಾಜಿಸಿರುವಂತೆ ಹಣದುಬ್ಬರ ದರ ಹೆಚ್ಚಿನ ಮಟ್ಟದಲ್ಲಿ ಇದೆ. ತೈಲ ಬೆಲೆ ಗರಿಷ್ಠ ಮಟ್ಟದಲ್ಲಿರುವ ಕಾರಣ ಹಣದುಬ್ಬರವು ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಕೋವಿಡ್ ತಡೆಯಲು ಜಾರಿಯಾಗಿರುವ ಹೊಸ ನಿರ್ಬಂಧಗಳು ಜನರ ಆದಾಯಕ್ಕೆ ಏಟು ಕೊಡಬಹುದು. ಇವೆಲ್ಲವೂ ಈಗಾಗಲೇ ಬಸವಳಿದಿರುವ ಜನಸಾಮಾನ್ಯರ ದೈನಂದಿನ ಬದುಕಿನ ಮೇಲೆ ಇನ್ನಷ್ಟು ಒತ್ತಡಗಳನ್ನು ಹೇರುತ್ತವೆ. ಇಂತಹ ಸ್ಥಿತಿ ಎದುರಾದರೆ, ಜನರ ಬದುಕನ್ನು ಹೆಚ್ಚು ಸಹನೀಯ ಆಗಿಸುವುದು ಆಡಳಿತದಲ್ಲಿ ಇರುವವರ ಎದುರಿನ, ನೀತಿ ನಿರೂಪಕರ ಎದುರಿನ ಬಹುದೊಡ್ಡ ಸವಾಲುಗಳಲ್ಲಿ ಒಂದಾಗಲಿದೆ.

ತೈಲ ದರವನ್ನು ತಗ್ಗಿಸಿ, ಹಣದುಬ್ಬರವನ್ನು ನಿಯಂತ್ರಿಸಲು ಆರ್‌ಬಿಐಗೆ ನೆರವಾಗಲು ಆಡಳಿತಾರೂಢರು ಮುಂದಾಗುವುದು ಈ ಸಂದರ್ಭದಲ್ಲಿ ಹೆಚ್ಚು ಅಪೇಕ್ಷಣೀಯ. ಹಾಗೆಯೇ, ಸಾಂಕ್ರಾಮಿಕವನ್ನು ತಡೆಯುವ ಕ್ರಮಗಳು ಆರ್ಥಿಕ ಚಟುವಟಿಕೆಗಳ ಮೇಲೆ ಅನಪೇಕ್ಷಿತ ಮಟ್ಟದಲ್ಲಿ ಅಡಚಣೆಗಳನ್ನು ಉಂಟುಮಾಡದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಆಡಳಿತಾರೂಢರ ಮೇಲೆ ಇರುತ್ತದೆ. ಆರ್‌ಬಿಐ ಕೈಗೊಳ್ಳುವ ತೀರ್ಮಾನಗಳಿಗೆ ಆಡಳಿತಾರೂಢರ ನೆರವು ದೊರೆತರೆ ಬದಲಾವಣೆಗಳು ತ್ವರಿತವಾಗಿ ಆಗಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು