ಬುಧವಾರ, ಡಿಸೆಂಬರ್ 2, 2020
25 °C

ಸಂಪಾದಕೀಯ| ಮೀಸಲಾತಿ ನಿಗದಿ ಪ್ರಹಸನ; ಜನಾದೇಶಕ್ಕೆ ಎಸಗಿದ ದ್ರೋಹ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಜಗತ್ತಿನಲ್ಲಿ ಈಗ ಲಭ್ಯ ಇರುವ ಆಡಳಿತ ವ್ಯವಸ್ಥೆಗಳಲ್ಲಿ ಪ್ರಜಾಪ್ರಭುತ್ವವೇ ಅತ್ಯುತ್ತಮವಾದುದು ಎಂಬುದು ನಿರ್ವಿವಾದ. ಪ್ರಜಾಪ್ರಭುತ್ವವು ಚುನಾವಣೆ ನಡೆಸುವಷ್ಟಕ್ಕೆ ಸೀಮಿತವಾದ ವಿಚಾರ ಅಲ್ಲ. ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಆಶಯಗಳು ಆಡಳಿತದಲ್ಲಿ ವ್ಯಕ್ತವಾಗಿ, ಜನರ ಜೀವನದಲ್ಲಿ ಬಿಂಬಿತವಾಗುವುದಕ್ಕೆ ಬೇಕಾದ ನಿರ್ಧಾರಗಳನ್ನು ಬಹುಮತದ ಆಧಾರದಲ್ಲಿ ಕೈಗೊಳ್ಳುವ ನಿರಂತರ ಪ್ರಕ್ರಿಯೆ. ಹಾಗಾಗಿಯೇ, ಆಡಳಿತವು ವಿಕೇಂದ್ರೀಕರಣಗೊಂಡು ಜನರ ಹತ್ತಿರಕ್ಕೇ ಬರಬೇಕು ಎಂಬುದಕ್ಕಾಗಿ ನಗರ–ಪಟ್ಟಣ ಸ್ಥಳೀಯಾಡಳಿತ ಸಂಸ್ಥೆಗಳು ಮತ್ತು ಪಂಚಾಯತ್‌ರಾಜ್‌‌ ವ್ಯವಸ್ಥೆಯನ್ನು ರೂಪಿಸಲಾಗಿದೆ. ಎಲ್ಲ ಹಂತಗಳ ಆಡಳಿತ ವ್ಯವಸ್ಥೆಯು ವಿಶ್ವಾಸಾರ್ಹವೂ ಪಾರದರ್ಶಕವೂ ಆಗಿರಬೇಕು ಎಂಬುದು ಸಿದ್ಧಾಂತವಷ್ಟೇ ಅಲ್ಲ, ಅದು ಪ್ರಜಾಪ್ರಭುತ್ವದ ತಿರುಳೇ ಆಗಿದೆ. ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ಇನ್ನಷ್ಟು ಸಂಕೀರ್ಣ. ಏಕೆಂದರೆ, ಇಲ್ಲಿ ಬಹುಮತಕ್ಕೆ ಮನ್ನಣೆಯ ಜತೆಗೆ ಸಾಮಾಜಿಕ ನ್ಯಾಯದ ಜಾರಿಗೂ ಅವಕಾಶ ಮಾಡಿಕೊಡಬೇಕಿದೆ. ಇದನ್ನು ಸಾಕಾರಗೊಳಿಸುವುದಕ್ಕಾಗಿಯೇ ಸ್ಥಳೀಯಾಡಳಿತ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗಳಿಗೆ ಮೀಸಲಾತಿ ಕಲ್ಪಿಸುವ ವ್ಯವಸ್ಥೆ ಅಸ್ತಿತ್ವದಲ್ಲಿದೆ. ಆದರೆ, ಆಯಾ ಕಾಲದಲ್ಲಿ ಅಧಿಕಾರದಲ್ಲಿರುವ ಪಕ್ಷಗಳು ಪ್ರಜಾಪ್ರಭುತ್ವದ ಮೌಲ್ಯ ಮತ್ತು ಆಶಯಗಳನ್ನು ಸಂಪೂರ್ಣವಾಗಿ ಮರೆತಂತೆ ವರ್ತಿಸಿ, ಮೀಸಲಾತಿ ಕಲ್ಪಿಸುವ ಅವಕಾಶವನ್ನೇ ಪ್ರಜಾಪ್ರಭುತ್ವದ ಕತ್ತು ಹಿಸುಕುವ ಕೆಲಸಕ್ಕೆ ಬಳಸಿಕೊಳ್ಳುತ್ತಿವೆ ಎಂಬುದು ಈ ವ್ಯವಸ್ಥೆಯ ದುರಂತ. ಕರ್ನಾಟಕದ 256 ನಗರ ಸ್ಥಳೀಯಾಡಳಿತ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ನಿಗದಿ ಇದಕ್ಕೆ ಒಂದು ಉದಾಹರಣೆ. 2018ರ ಆಗಸ್ಟ್‌ನಲ್ಲಿಯೇ ಈ ‌ಸ್ಥಳೀಯಾಡಳಿತ ಸಂಸ್ಥೆಗಳಿಗೆ ಚುನಾವಣೆ ನಡೆದಿದೆ. ಆದರೆ, ಮೀಸಲಾತಿ ನಿಗದಿಯಲ್ಲಿ ಆಡಳಿತಾರೂಢರು ತೋರುತ್ತಿರುವ ಸ್ವಪಕ್ಷಪಾತದಿಂದಾಗಿ ಬಹುಮತ ಹೊಂದಿರುವ ಪಕ್ಷ ಈ ಸಂಸ್ಥೆಗಳಲ್ಲಿ ಅಧಿಕಾರ ವಹಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂಬ ಆರೋಪ ಇದೆ. ಸರ್ಕಾರ ನಿಗದಿ ಮಾಡಿದ ಮೀಸಲಾತಿಯನ್ನು ಎರಡು ಬಾರಿ ರದ್ದು ಮಾಡಿರುವುದು ಮತ್ತು ಮೂರನೇ ಬಾರಿ ಹೈಕೋರ್ಟ್‌ ಮಧ್ಯಪ್ರವೇಶವು ಈ ಆರೋಪಕ್ಕೆ ಪುಷ್ಟಿ ಕೊಟ್ಟಿದೆ.  

ಮೀಸಲಾತಿ ನಿಗದಿಯಲ್ಲಿ ಇಷ್ಟೊಂದು ಗೊಂದಲ ಸೃಷ್ಟಿಗೆ ಸಕಾರಣವೇನೂ ಇರಲು ಸಾಧ್ಯವಿಲ್ಲ. ಮೀಸಲಾತಿ ನಿಗದಿಗಾಗಿಯೇ ದಶಕಗಳ ಹಿಂದೆಯೇ ‘ಕರ್ನಾಟಕ ನಗರ ಸ್ಥಳೀಯ ಸಂಸ್ಥೆಗಳ (ಅಧ್ಯಕ್ಷ ಮತ್ತು ಉ‍ಪಾಧ್ಯಕ್ಷರ) ಚುನಾವಣಾ ನಿಯಮ–1965’ ರೂಪಿಸಲಾಗಿದೆ. ಇದೇ ಸೆಪ್ಟೆಂಬರ್‌ 9ರಂದು ಮಾರ್ಗಸೂಚಿಯನ್ನು ಪ್ರಕಟಿಸಲಾಗಿದೆ. ಈ ಯಾವುದನ್ನೂ ಗಣನೆಗೆ ತೆಗೆದುಕೊಳ್ಳದೆ ಮೀಸಲಾತಿ ನಿಗದಿ ಮಾಡಲಾಗಿದೆ. ಹಾಗಾಗಿಯೇ ಮೀಸಲಾತಿ ವಿಚಾರ ಹೈಕೋರ್ಟ್‌ ಮೆಟ್ಟಿಲೇರಿದೆ. ‘ಮೀಸಲಾತಿ ಪುನರಾವರ್ತನೆ ಆಗದಂತೆ ನೋಡಿಕೊಳ್ಳಲಾಗಿದೆ’ ಎಂಬುದಷ್ಟೇ ಸರ್ಕಾರವು ಕೋರ್ಟ್‌ನ ಮುಂದೆ ಮಂಡಿಸಿದ ಸಮರ್ಥನೆ. ‘ಈ ಒಂದು ಕಾರಣವನ್ನು ಮುಂದಿಟ್ಟುಕೊಂಡು ಇತರ ಲೋಪಗಳನ್ನು ಮನ್ನಿಸಲಾಗದು’ ಎಂದು ಹೈಕೋರ್ಟ್‌ ಹೇಳಿದೆ. ಸ್ಥಳೀಯಾಡಳಿತ ಸಂಸ್ಥೆಗಳ ಆಡಳಿತ ಮತ್ತು ಮೀಸಲಾತಿ ನಿಗದಿಯು ಪ್ರಜಾ ಪ್ರಭುತ್ವ ಮತ್ತು ಸಾಮಾಜಿಕ ನ್ಯಾಯಕ್ಕೆ ಸಂಬಂಧಿಸಿ ಅತ್ಯಂತ ಮಹತ್ವದ ವಿಚಾರಗಳು. ಆಡಳಿತ ಪಕ್ಷವು ತನ್ನ ಅನುಕೂಲಕ್ಕೆ ತಕ್ಕಂತೆ ಮೀಸಲಾತಿ ನಿಗದಿ ಮಾಡಿ, ಬಹುಮತ ಇಲ್ಲದೇ ಇದ್ದರೂ ಅಧಿಕಾರ ಪಡೆಯಲು ಯತ್ನಿಸುವುದು ಪ್ರಜಾಪ್ರಭುತ್ವಕ್ಕೆ ಮಾರಕ. ಚುನಾವಣೆ ಪ್ರಕ್ರಿಯೆ ಮೂಲಕ ಜನರಿಂದ ಆಯ್ಕೆಯಾದ ಪ್ರತಿನಿಧಿಗಳು ಅಧಿಕಾರ ವಹಿಸಿಕೊಳ್ಳದಂತೆ ಮಾಡುವುದು ಜನರಿಗೆ ಮಾಡುವ ಅವಮಾನ ಎಂಬ ಅರಿವನ್ನು ಆಡಳಿತ ಪಕ್ಷವು ಮೂಡಿಸಿಕೊಳ್ಳಬೇಕು. ಚುನಾವಣೆ ನಡೆದು ಎರಡು ವರ್ಷ ಕಳೆದರೂ ಚುನಾಯಿತ ಪ್ರತಿನಿಧಿಗಳು ಆಡಳಿತದ ನೇತೃತ್ವ ವಹಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂಬುದು ಪ್ರಜಾಪ್ರಭುತ್ವದ ವಿಚಾರದಲ್ಲಿ ಅಧಿಕಾರಸ್ಥರು ಹೊಂದಿರುವ ಅಸಡ್ಡೆಯನ್ನೇ ತೋರಿಸುತ್ತದೆ ಎಂಬ ಆರೋಪವನ್ನು ಅಲ್ಲಗಳೆಯುವುದು ಕಷ್ಟ. ಚುನಾಯಿತ ಪ್ರತಿನಿಧಿಗಳು ಅಧಿಕಾರಕ್ಕೆ ಏರುವುದನ್ನು ತಡೆಯುವುದು, ಮೀಸಲಾತಿ ನಿಗದಿಯೂ ಸರಿಯಾಗಿ ನಡೆಯದಂತೆ ನೋಡಿಕೊಳ್ಳುವುದು ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ನ್ಯಾಯ ಎರಡಕ್ಕೂ ಎಸಗುವ ದ್ರೋಹ ಎಂಬುದನ್ನು ಸರ್ಕಾರವು ಅರ್ಥ ಮಾಡಿಕೊಳ್ಳಬೇಕು. ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ನ್ಯಾಯ ಈ ಎರಡನ್ನೂ ಜತನವಾಗಿ ಕಾಯ್ದುಕೊಳ್ಳುವ ಹೊಣೆ ಸರ್ಕಾರದ್ದೇ ಆಗಿದೆ. ‘ಮೀಸಲಾತಿ ನಿಗದಿಯಲ್ಲಿ ಸರ್ಕಾರವು ಅಧಿಕಾರ ದುರ್ಬಳಕೆಯ ಆರೋಪಕ್ಕೆ ಆಗಾಗ ಒಳಗಾಗುತ್ತಿದೆ. ಇದನ್ನು ತಪ್ಪಿಸಲು ಮೀಸಲಾತಿ ನಿಗದಿಯ ಹೊಣೆಯನ್ನು ಚುನಾವಣಾ ಆಯೋಗಕ್ಕೆ ವಹಿಸಿಕೊಡುವುದು ಉತ್ತಮ’ ಎಂಬ ಸಲಹೆಯನ್ನು ಹೈಕೋರ್ಟ್‌ ಕೊಟ್ಟಿದೆ. ಇದನ್ನು ಗಂಭೀರವಾಗಿ ಪರಿಗಣಿಸಲೇಬೇಕಾದ ಅನಿವಾರ್ಯ ಸ್ಥಿತಿ ಈಗ ನಿರ್ಮಾಣ ಆಗಿರುವುದಂತೂ ಹೌದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು