‘ಸರ್ಕಾರ್‌’ಗೆ ಸರ್ಕಾರಿ ಅಂಕುಶ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮಸಿ

7

‘ಸರ್ಕಾರ್‌’ಗೆ ಸರ್ಕಾರಿ ಅಂಕುಶ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮಸಿ

Published:
Updated:
Deccan Herald

ಮುರುಗದಾಸ್‌ ನಿರ್ದೇಶನದ ‘ಸರ್ಕಾರ್‌’ ತಮಿಳು ಸಿನಿಮಾಕ್ಕೆ ಸಂಬಂಧಿಸಿದಂತೆ ಎಐಎಡಿಎಂಕೆ ನಡೆದುಕೊಂಡಿರುವ ರೀತಿ ಪ್ರಜಾಸತ್ತಾತ್ಮಕ ಆಶಯಗಳಿಗೆ ವಿರುದ್ಧವಾದುದು ಹಾಗೂ ತನ್ನದಲ್ಲದ ಕಾರ್ಯಕ್ಷೇತ್ರದಲ್ಲಿ ಸರ್ಕಾರ ಮಾಡಿರುವ ಸ್ಪಷ್ಟ ಹಸ್ತಕ್ಷೇಪ. ತಮಿಳಿನ ಜನಪ್ರಿಯ ನಟ ವಿಜಯ್‌ ನಟನೆಯ ‘ಸರ್ಕಾರ್‌’ ಸಿನಿಮಾ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ವ್ಯಕ್ತಿತ್ವಕ್ಕೆ ಹಾಗೂ ಅವರು ಹಮ್ಮಿಕೊಂಡಿದ್ದ ಸರ್ಕಾರಿ ಕಾರ್ಯಕ್ರಮಗಳಿಗೆ ವಿರುದ್ಧವಾಗಿದೆ ಎನ್ನುವುದು ಎಐಎಡಿಎಂಕೆ ಸರ್ಕಾರದ ತಕರಾರು. ಚುನಾವಣೆ ಸಂದರ್ಭದಲ್ಲಿ ವಿತರಿಸಲಾಗುವ ಮಿಕ್ಸಿ, ಗ್ರೈಂಡರ್‌ಗಳನ್ನು ನಾಗರಿಕರೇ ಸುಟ್ಟುಹಾಕುವ ಸನ್ನಿವೇಶ ಹಾಗೂ ಖಳ ಪಾತ್ರವೊಂದನ್ನು ಜಯಲಲಿತಾ ಅವರ ಮೂಲ ಹೆಸರಾದ ಕೋಮಲವಲ್ಲಿ ಎನ್ನುವ ಹೆಸರಿನಿಂದ ಕರೆದಿರುವುದು ಪಕ್ಷದ ಆಕ್ರೋಶಕ್ಕೆ ಕಾರಣವಾಗಿದೆ. ಸಿನಿಮಾ ಕಾರಣದಿಂದಾಗಿ ಪಕ್ಷಕ್ಕೆ ಅಥವಾ ಕಾರ್ಯಕರ್ತರಿಗೆ ಬೇಸರವಾಗಿದ್ದರೆ ಅದರಲ್ಲಿ ಅಸಹಜವೇನೂ ಇಲ್ಲ. ಆದರೆ, ಆ ಬೇಸರವನ್ನು ವ್ಯಕ್ತ‍ಪಡಿಸಲು ಸರ್ಕಾರ ತನ್ನ ಆಡಳಿತಯಂತ್ರವನ್ನು ಬಳಸಿಕೊಂಡಿರುವುದು ಖಂಡನಾರ್ಹ. ಸಂವಿಧಾನಕ್ಕೆ ಬದ್ಧವಾಗಿರುವುದಾಗಿ ಹೇಳಿ ಪ್ರತಿಜ್ಞೆ ಸ್ವೀಕರಿಸುವ ಸರ್ಕಾರಗಳೇ ನಿರಂಕುಶವಾಗಿ ವರ್ತಿಸುವುದು ಅನೈತಿಕ ಹಾಗೂ ಅಸಾಂವಿಧಾನಿಕ. ಕಿಡಿಗೇಡಿಗಳು ಕಾನೂನನ್ನು ತಮ್ಮ ಕೈಗೆ ತೆಗೆದುಕೊಂಡಾಗ, ಅವರನ್ನು ಹತ್ತಿಕ್ಕಬೇಕಾದ ಆಡಳಿತಯಂತ್ರವೇ ಕಾನೂನುಬಾಹಿರ ಕೃತ್ಯಗಳಿಗೆ ಉತ್ತೇಜನ ನೀಡಿದ ದುರಂತ ತಮಿಳುನಾಡಿನಲ್ಲಿ ಸಂಭವಿಸಿದೆ. ವೈಯಕ್ತಿಕ ತಕರಾರುಗಳನ್ನು ವ್ಯಕ್ತಪಡಿಸಲು ಇರುವ ಪ್ರಜಾಸತ್ತಾತ್ಮಕ ಮಾರ್ಗಗಳನ್ನು ನಿರ್ಲಕ್ಷಿಸಿ ದುಂಡಾವೃತ್ತಿಯಲ್ಲಿ ತೊಡಗಿಕೊಳ್ಳುವುದನ್ನು ಯಾವ ವಿಧದಲ್ಲೂ ಸಮರ್ಥಿಸಿಕೊಳ್ಳಲಾಗದು. ಪಕ್ಷದ ಕಾರ್ಯಕರ್ತರಿಂದ ನಡೆದ ಚಿತ್ರಮಂದಿರಗಳ ಮೇಲಿನ ದಾಳಿ, ಪೋಸ್ಟರ್‌ಗಳ ನಾಶ ಹಾಗೂ ಸಾರ್ವಜನಿಕ ಹಿಂಸಾಚಾರದ ಘಟನೆಗಳನ್ನು ಎಐಎಡಿಎಂಕೆ ಸಮರ್ಥಿಸಿಕೊಂಡಿರುವುದು ನಾಚಿಕೆಗೇಡು.

ಜಾತಿ–ಧರ್ಮದ ಸಂಘಟನೆಗಳು, ರಾಜಕಾರಣಿಗಳು ಹಾಗೂ ಪಕ್ಷಗಳಿಂದ ಚಲನಚಿತ್ರಗಳು ದಾಳಿಗೊಳಗಾಗಿರುವುದು ಇದು ಮೊದಲೇನೂ ಅಲ್ಲ. ‘ಉಡ್ತಾ ಪಂಜಾಬ್‌’, ‘ಪದ್ಮಾವತ್‌’ ಚಿತ್ರಗಳು ಎದುರಿಸಿದ ಪ್ರತಿರೋಧದ ಘಟನೆಗಳು ತೀರಾ ಇತ್ತೀಚಿನವು. ಆದರೆ, ‘ಸರ್ಕಾರ್‌’ ಸಿನಿಮಾಕ್ಕೆ ಸಂಬಂಧಿಸಿದಂತೆ ಸರ್ಕಾರವೇ ಬೀದಿಗಿಳಿದಂತೆ ವರ್ತಿಸುವ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ತಾನು ಚಿಕ್ಕಾಸು ಮರ್ಯಾದೆಯನ್ನೂ ಕೊಡುವುದಿಲ್ಲ ಎನ್ನುವುದನ್ನು ಸಾಬೀತುಪಡಿಸಲು ಪ್ರಯತ್ನಿಸಿದಂತಿದೆ. ಸಿನಿಮಾ ನಿರ್ಮಾತೃಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಬೆದರಿಸಿದ್ದರೆ, ಸಚಿವ ಸಂಪುಟದ ಸದಸ್ಯರು ಸಾರ್ವಜನಿಕವಾಗಿ ಬೆದರಿಕೆ ಹಾಕುವ ಹಂತಕ್ಕೆ ಇಳಿದಿದ್ದಾರೆ. ಈ ಒತ್ತಾಯಕ್ಕೆ ಮಣಿದಿರುವ ಚಿತ್ರತಂಡ, ಆಕ್ಷೇಪಾರ್ಹ ದೃಶ್ಯಗಳನ್ನು ಕತ್ತರಿಸುವುದರ ಜೊತೆಗೆ ಕೋಮಲವಲ್ಲಿ ಎನ್ನುವ ಹೆಸರನ್ನು ಮ್ಯೂಟ್‌ ಮಾಡಿದೆ. ಇಷ್ಟಾದರೂ ‘ಸರ್ಕಾರ್‌’ ಚಿತ್ರವನ್ನು ಬೆಂಬಲಿಸುವವರ ವಿರುದ್ಧ ಸರ್ಕಾರ ಕೆಂಡ ಕಾರುತ್ತಲೇ ಇದೆ. ‘ಚಲನಚಿತ್ರ ಪ್ರಮಾಣೀಕರಣ ಮಂಡಳಿ’ಯಿಂದ ಪ್ರಮಾಣಪತ್ರ ಪಡೆದಿರುವ ಸಿನಿಮಾವನ್ನು ಮತ್ತೆ ಸೆನ್ಸಾರ್‌ ಮಾಡಲು ಹೊರಡುವ ಕ್ರಮ ದಬ್ಬಾಳಿಕೆಯಲ್ಲದೆ ಬೇರೇನೂ ಅಲ್ಲ. ‘ಪದ್ಮಾವತ್‌’ ಚಿತ್ರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌, ದಾಳಿಗೊಳಗಾದ ಸಿನಿಮಾಗಳ ಪ್ರದರ್ಶನಕ್ಕೆ ರಕ್ಷಣೆ ನೀಡುವಂತೆ ರಾಜ್ಯ ಸರ್ಕಾರಗಳಿಗೆ ಆದೇಶಿಸಿತ್ತು. ‘ಸರ್ಕಾರ್‌’ ಸಂದರ್ಭದಲ್ಲಿ ರಕ್ಷಣೆ ನೀಡಬೇಕಾದ ಸರ್ಕಾರವೇ ದಾಳಿಕೋರರ ಬೆನ್ನಹಿಂದೆ ನಿಂತಿದೆ. ಸಿನಿಮಾ, ನಾಟಕ, ಕಲಾಕೃತಿಗಳು ಸೇರಿದಂತೆ ಸೃಜನಶೀಲ ಅಭಿವ್ಯಕ್ತಿಯನ್ನು ಹತ್ತಿಕ್ಕುವ ಪ್ರಯತ್ನಗಳು ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಲೇ ಇವೆ. ಎಲ್ಲ ನಾಗರಿಕರಿಗೂ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುವ ಅಭಿವ್ಯಕ್ತಿ ಸ್ವಾತಂತ್ರ್ಯ ಇರುವುದನ್ನು ಕಿಡಿಗೇಡಿಗಳು ಮರೆಯುತ್ತಾರೆ. ತಮ್ಮ ನಂಬಿಕೆಗೆ ವಿರುದ್ಧವಾದ ನಿಲುವುಗಳು ವ್ಯಕ್ತವಾದಾಗ ಅವುಗಳನ್ನು ಸಂವಾದದ ಇಲ್ಲವೇ ಕಾನೂನಿನ ಮೂಲಕ ಪರಿಹರಿಸಿಕೊಳ್ಳುವುದನ್ನು ಬಿಟ್ಟು ತಾವೇ ದಂಡಾಧೀಶರಾಗಹೊರಡುವುದು ಸಮಾಜದ ಅನಾರೋಗ್ಯವನ್ನು ಸೂಚಿಸುವಂತಿದೆ ಹಾಗೂ ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಚಕಾರ ಒದಗಿರುವುದಕ್ಕೆ ಉದಾಹರಣೆಯಂತಿದೆ.

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !