ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ | ಲೈಂಗಿಕ ದೌರ್ಜನ್ಯ: ತಪ್ಪಿತಸ್ಥರಿಗೆ ತ್ವರಿತವಾಗಿ ಶಿಕ್ಷೆಯಾಗಲಿ

Published 26 ಆಗಸ್ಟ್ 2024, 23:30 IST
Last Updated 26 ಆಗಸ್ಟ್ 2024, 23:30 IST
ಅಕ್ಷರ ಗಾತ್ರ

ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಕೃತ್ಯಗಳಲ್ಲಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ದೊರೆಯುವಂತೆ ಮಾಡಲು ಕಾಯ್ದೆಗಳನ್ನು ಇನ್ನಷ್ಟು ಬಲಪಡಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮಹಿಳೆಯರ ಮೇಲಿನ ದೌರ್ಜನ್ಯ ಕೃತ್ಯಗಳು ಕ್ಷಮಿಸಲಾರದ ಪಾಪವಾಗಿದ್ದು, ತಪ್ಪಿತಸ್ಥರು ಶಿಕ್ಷೆಯಿಂದ ಪಾರಾಗಬಾರದು ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ. ಕೋಲ್ಕತ್ತದಲ್ಲಿ ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಲೈಂಗಿಕ ದೌರ್ಜನ್ಯದ ಪ್ರಕರಣಗಳು ವ್ಯಾಪಕವಾಗಿ ವರದಿಯಾಗುತ್ತಿರುವ ವಿದ್ಯಮಾನಕ್ಕೆ ಪ್ರತಿಕ್ರಿಯೆ ರೂಪದಲ್ಲಿ ಪ್ರಧಾನಿಯವರ ಹೇಳಿಕೆಯನ್ನು ಗಮನಿಸಬಹುದು. ಅತ್ಯಾಚಾರಿಗಳ ಅಟ್ಟಹಾಸವನ್ನು ತಡೆಗಟ್ಟುವ ದಿಸೆಯಲ್ಲಿ ಕಠಿಣ ಕಾಯ್ದೆಗಳು ಅಗತ್ಯ ಎನ್ನುವುದು ಕೇಂದ್ರ ಸರ್ಕಾರಕ್ಕೆ ವಿಳಂಬವಾಗಿಯಾದರೂ ಮನವರಿಕೆಯಾದಂತಿರುವುದು ಸ್ವಾಗತಾರ್ಹ. 2012ರಲ್ಲಿ ದೆಹಲಿಯಲ್ಲಿ ಯುವತಿಯೊಬ್ಬಳ ಮೇಲೆ ಚಲಿಸುವ ಬಸ್‌ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ‘ನಿರ್ಭಯಾ ಪ್ರಕರಣ’ದ ಹೆಸರಿನಲ್ಲಿ ವಿಶ್ವದ ಗಮನ ಸೆಳೆದಿತ್ತು. ಅತ್ಯಾಚಾರದ ವಿರುದ್ಧ ಮಹಿಳೆಯರ ಪ್ರತಿಭಟನೆ ಮತ್ತು ಜಾಗೃತಿಯ ರೂಪದಲ್ಲಿ ಗುರುತಿಸಲಾಗುತ್ತಿರುವ ‘ನಿರ್ಭಯಾ ಪ್ರಕರಣ’ಕ್ಕೆ ಹನ್ನೆರಡು ವರ್ಷಗಳು ತುಂಬಿದರೂ ಅತ್ಯಾಚಾರ ಪ್ರಕರಣಗಳ ನಿಗ್ರಹದ ಉದ್ದೇಶವು ನಿರೀಕ್ಷಿತ ಮಟ್ಟವನ್ನು ಮುಟ್ಟಿಲ್ಲ ಎನ್ನುವುದು ಕಳವಳ ಹುಟ್ಟಿಸುವ ಸಂಗತಿ. ಒಂದು ತಿಂಗಳ ಅವಧಿಯಲ್ಲಿ ದೇಶದ ವಿವಿಧ ಭಾಗಗಳಿಂದ ವರದಿಯಾಗಿರುವ ಅತ್ಯಾಚಾರದ ಪ್ರಕರಣಗಳು, ಭಾರತೀಯ ಮಹಿಳೆಯ ಸುರಕ್ಷತೆಯ ಬಗ್ಗೆ ಆತಂಕ ಮೂಡಿಸುವಂತಿವೆ. ಕೋಲ್ಕತ್ತದಲ್ಲಿ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವುದು, ಮಹಾರಾಷ್ಟ್ರದಲ್ಲಿ ಇಬ್ಬರು ಪುಟ್ಟ ಬಾಲಕಿಯರ ಮೇಲೆ ನಡೆದಿರುವ ಲೈಂಗಿಕ ಕಿರುಕುಳ, ಉತ್ತರಪ್ರದೇಶದಲ್ಲಿ ದಾದಿಯ ಮೇಲೆ ವೈದ್ಯನಿಂದಲೇ ನಡೆದಿದೆ ಎನ್ನಲಾದ ಅತ್ಯಾಚಾರ, ತಮಿಳುನಾಡಿನಲ್ಲಿ ವಿದ್ಯಾರ್ಥಿನಿಯ ಮೇಲೆ ಎನ್‌ಸಿಸಿ ಶಿಬಿರದ ಸಂಯೋಜಕ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪ, ಶಿವಮೊಗ್ಗ ಜಿಲ್ಲೆಯ ವಸತಿ ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯರ ಮೇಲೆ ಶಿಕ್ಷಕ ಎಸಗಿದ್ದಾನೆ ಎನ್ನಲಾದ ಲೈಂಗಿಕ ದೌರ್ಜನ್ಯ, ಚಿಂತಾಮಣಿಯಲ್ಲಿ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಮಲಗಿದ್ದ ವೃದ್ಧೆಯ ಮೇಲೆ ನಡೆದಿರುವ ಅತ್ಯಾಚಾರ... ಹೀಗೆ ಪಟ್ಟಿ ಮಾಡಿದಷ್ಟೂ ಮುಗಿಯದ ಅಮಾನುಷ ಲೈಂಗಿಕ ದೌರ್ಜನ್ಯಗಳು, ಹೆಣ್ಣುಮಕ್ಕಳ ಜಂಘಾಬಲವನ್ನೇ ಉಡುಗಿಸುವಂತಿವೆ ಹಾಗೂ ನಾಗರಿಕ ಸಮಾಜ ಲಜ್ಜೆಯಿಂದ ತಲೆ ತಗ್ಗಿಸಬೇಕಾದ ಕೃತ್ಯಗಳಾಗಿವೆ. ಪುಂಡು ಪೋಕರಿಗಳು ಮಾತ್ರವಲ್ಲ, ಧಾರ್ಮಿಕ ಗುರುಗಳು ಸೇರಿದಂತೆ ಸಮಾಜದಲ್ಲಿ ಗೌರವಾನ್ವಿತ ಪೋಷಾಕಿನಲ್ಲಿರುವವರೂ ಲೈಂಗಿಕ ದೌರ್ಜನ್ಯ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ. 135 ಶಾಸಕರು ಹಾಗೂ 16 ಸಂಸದರು ಸೇರಿದಂತೆ ಒಟ್ಟು 151 ಜನಪ್ರತಿನಿಧಿಗಳು ಮಹಿಳೆಯರ ಮೇಲೆ ದೌರ್ಜನ್ಯವೆಸಗಿದ ಆರೋಪ ಎದುರಿಸುತ್ತಿದ್ದಾರೆ.

ಅತ್ಯಾಚಾರ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಸಂದರ್ಭದಲ್ಲೇ, ತಪ್ಪಿತಸ್ಥರು ಕಾನೂನಿನ ಕುಣಿಕೆಯಿಂದ ಪಾರಾಗುತ್ತಿರುವುದು ಕಳವಳ ಹುಟ್ಟಿಸುವ ಸಂಗತಿ. ಈ ವರ್ಷದ ಆರಂಭದ 7 ತಿಂಗಳಲ್ಲಿಯೇ 340 ಅತ್ಯಾಚಾರ ಪ್ರಕರಣಗಳು ರಾಜ್ಯದಲ್ಲಿ ವರದಿಯಾಗಿವೆ. 2023ರಲ್ಲಿ 537 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದವು. ಇವುಗಳಲ್ಲಿ ಎಷ್ಟು ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೆಂದು ಹೇಳಲಾಗದು. ಅತ್ಯಾಚಾರ ಪ್ರಕರಣಗಳನ್ನು ನಮ್ಮ ವ್ಯವಸ್ಥೆ ಹೇಗೆ ನಿರ್ವಹಿಸುತ್ತಿದೆ ಎನ್ನುವುದಕ್ಕೆ ನಿದರ್ಶನವಾಗಿ, 2013ರಿಂದ 2023ರವರೆಗಿನ ಹತ್ತು ವರ್ಷಗಳ ಅವಧಿಯಲ್ಲಿ ಬೆಂಗಳೂರಿನಲ್ಲಿ ದಾಖಲಾದ 1,322 ಅತ್ಯಾಚಾರ ಪ್ರಕರಣಗಳಲ್ಲಿನ ಶಿಕ್ಷೆಯ ಅಂಕಿಅಂಶವನ್ನು ಗಮನಿಸಬಹುದು. 1,322ರಲ್ಲಿ ಈವರೆಗೆ 10 ಪ್ರಕರಣಗಳಲ್ಲಷ್ಟೇ ದಂಡನೆ ದೊರೆತಿದ್ದು, ಶಿಕ್ಷೆಯ ಪ್ರಮಾಣ ಕೇವಲ ಶೇ 0.76ರಷ್ಟಿದೆ. 713 ಪ್ರಕರಣಗಳ ವಿಚಾರಣೆ ನಡೆಯುತ್ತಿದ್ದರೆ, 230 ಪ್ರಕರಣಗಳು ತನಿಖಾ ಹಂತದಲ್ಲಿವೆ. 259 ಪ್ರಕರಣಗಳಲ್ಲಿ ಆರೋಪಿಗಳು ಖುಲಾಸೆಗೊಂಡಿದ್ದರೆ, 110 ಪ್ರಕರಣಗಳಲ್ಲಿ ಸಾಕ್ಷ್ಯಗಳಿಲ್ಲದೆ ‘ಬಿ’ ರಿಪೋರ್ಟ್‌ ಸಲ್ಲಿಸಲಾಗಿದೆ. ಈ ಅಂಕಿಅಂಶಗಳು ಕಾನೂನು ಸುವ್ಯವಸ್ಥೆಯಲ್ಲಿನ ಲೋಪಗಳಿಗೆ ಕನ್ನಡಿ ಹಿಡಿಯುವಂತಿವೆ. ಅತ್ಯಾಚಾರ ಪ್ರಕರಣಗಳು ನ್ಯಾಯಾಲಯದಲ್ಲಿ ಗಟ್ಟಿಯಾಗಿ ನಿಲ್ಲದಿರಲು ಸಾಕ್ಷ್ಯ ಕೊರತೆ ಮುಖ್ಯ ಕಾರಣವಾಗಿದೆ. ಬಹುತೇಕ ಪ್ರಕರಣಗಳಲ್ಲಿ ಸಂತ್ರಸ್ತೆಯರೇ ಪ್ರತಿಕೂಲ ಸಾಕ್ಷಿಗಳಾಗಿ ಬದಲಾಗುವುದಿದೆ. ನ್ಯಾಯಾಲಯದಾಚೆ ನಡೆಯುವ ರಾಜಿ ಪಂಚಾಯಿತಿಗಳಿಂದಾಗಿಯೂ ಅತ್ಯಾಚಾರ ಪ್ರಕರಣಗಳು ಜೀವ ಕಳೆದುಕೊಳ್ಳುತ್ತವೆ. ಇವೆಲ್ಲಕ್ಕೂ ಮಿಗಿಲಾಗಿ ಆತಂಕ ಹುಟ್ಟಿಸುವುದು, ತನಿಖೆ ಮತ್ತು ವಿಚಾರಣೆಯಲ್ಲಿನ ವಿಳಂಬಗತಿ. ಪ್ರಕರಣವೊಂದರ ವಿಚಾರಣೆ ವರ್ಷಗಟ್ಟಲೆ ನಡೆದಾಗ, ದೀರ್ಘಕಾಲದವರೆಗೆ ಸಂತ್ರಸ್ತೆಯರು ಹೋರಾಟದ ಮನೋಭಾವ ಉಳಿಸಿಕೊಳ್ಳುವುದು ಸುಲಭವಲ್ಲ. ಪ್ರಕರಣ ನಡೆಯುವಷ್ಟೂ ಕಾಲ ಅತ್ಯಾಚಾರದ ನೋವು ಮರುಕಳಿಸುತ್ತಿರುತ್ತದೆ. ಹಾಗಾಗಿ, ಪ್ರಕರಣಗಳು ತ್ವರಿತಗತಿಯಲ್ಲಿ ಕೊನೆಗೊಳ್ಳುವಂತೆ ಕಾನೂನು ವ್ಯವಸ್ಥೆಯನ್ನು ಮಾನವೀಯಗೊಳಿಸಬೇಕಾಗಿದೆ. ಕಾಯ್ದೆಗಳನ್ನು ಬಲಪಡಿಸುವುದರ ಜೊತೆಗೆ, ಅತ್ಯಾಚಾರ ಘಟನೆಗಳನ್ನು ರಾಜಕೀಯಗೊಳಿಸದಿರುವ ಸಂವೇದನೆಯನ್ನು ಸಮಾಜದಲ್ಲಿ ರೂಪಿಸುವ ಆಂದೋಲನವೂ ತುರ್ತಾಗಿ ನಡೆಯಬೇಕಾಗಿದೆ. ಜಾತಿ, ಧರ್ಮ, ಹಣ ಹಾಗೂ ಅಧಿಕಾರ ಬಲ ಕೂಡ ಕೆಲವೊಮ್ಮೆ ತಪ್ಪಿತಸ್ಥರ ಪರವಾಗಿ ಕೆಲಸ ಮಾಡಿರುವ ಉದಾಹರಣೆಗಳಿವೆ. ಉತ್ತರಪ್ರದೇಶದ ಹಾಥರಸ್‌ನಲ್ಲಿ 2020ರಲ್ಲಿ ನಡೆದ ದಲಿತ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಪೊಲೀಸರು ನಡೆದುಕೊಂಡ ರೀತಿ ಕಾನೂನು ಸುವ್ಯವಸ್ಥೆಯ ಮೇಲೆ ಜನಸಾಮಾನ್ಯರಿಗೆ ನಂಬಿಕೆ ಕುಸಿದುಹೋಗುವಂತೆ ಇತ್ತು. ಇತ್ತೀಚೆಗೆ ಕೋಲ್ಕತ್ತದಲ್ಲಿ ನಡೆದ ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ–ಕೊಲೆ ಪ್ರಕರಣದಲ್ಲಿ ಪೊಲೀಸರು ಅನುಸರಿಸಿದ ವಿಳಂಬ ನೀತಿಯ ಬಗ್ಗೆ ಸುಪ್ರೀಂ ಕೋರ್ಟ್‌ ಅತೃಪ್ತಿ ವ್ಯಕ್ತಪಡಿಸಿದೆ. ಇನ್ನು ಮೇಲಾದರೂ ಇಂಥ ಅಲಕ್ಷ್ಯ ಕೊನೆಗೊಳ್ಳಬೇಕು. ಕಾಯ್ದೆಗಳನ್ನು ಬಲಪಡಿಸುವ ಕೇಂದ್ರದ ಉದ್ದೇಶ ಸ್ವಾಗತಾರ್ಹ. ಕಾನೂನನ್ನು ಬಲಪಡಿಸುವ ಪ್ರಕ್ರಿಯೆ ವಿಳಂಬವಿಲ್ಲದೆ ನಡೆಯುವಂತೆ ನೋಡಿಕೊಳ್ಳಬೇಕಾದುದು ಕೇಂದ್ರ ಸರ್ಕಾರದ ಹೊಣೆಗಾರಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT