ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಜಾತ್ರೆಗಳಿಗೆ ಕೋಮುದ್ವೇಷದ ನೆರಳು ಚಿಗುರಿನಲ್ಲಿಯೇ ಚಿವುಟುವುದು ಅಗತ್ಯ

Last Updated 21 ಮಾರ್ಚ್ 2022, 19:31 IST
ಅಕ್ಷರ ಗಾತ್ರ

ಧಾರ್ಮಿಕ ಸಾಮರಸ್ಯದ ವೇದಿಕೆಗಳಾಗಿದ್ದ ಜಾತ್ರೆಗಳಿಗೆ ನಾಡಿನ ಕೆಲವು ಭಾಗಗಳಲ್ಲಿ ಕೋಮು ಬಣ್ಣ ಬಳಿಯುತ್ತಿರುವ ಪ್ರಕರಣಗಳು ವರದಿಯಾಗುತ್ತಿರುವುದು ದುರದೃಷ್ಟಕರ. ಶಿವಮೊಗ್ಗದ ಮಾರಿಕಾಂಬಾ ಜಾತ್ರೆಯಲ್ಲಿ ಮುಸ್ಲಿಮರಿಗೆ ವ್ಯಾಪಾರಕ್ಕೆ ಅವಕಾಶ ನೀಡದಿರಲು ಬಿಜೆಪಿ ಮತ್ತು ಬಜರಂಗದಳದ ಕಾರ್ಯಕರ್ತರು ಮುಂದಾಗಿದ್ದಾರೆ. ಉಡುಪಿ ಜಿಲ್ಲೆಯ ಕಾಪುವಿನ ಮೂರು ಮಾರಿಗುಡಿಗಳಲ್ಲಿನ ಸುಗ್ಗಿ ಮಾರಿ ಪೂಜೆ ಸಂದರ್ಭದಲ್ಲಿ ಮುಸ್ಲಿಮರಿಗೆ ವ್ಯಾಪಾರಕ್ಕೆ ಅವಕಾಶ ನೀಡದಂತೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಪ್ರಯತ್ನ ನಡೆಸಿದ್ದಾರೆ.

‘ಮುಸ್ಲಿಂ ಸಮುದಾಯದವರಿಗೆ ಅಂಗಡಿಗಳನ್ನು ಹಾಕಲು ಅವಕಾಶ ಕೊಟ್ಟರೆ ಮುಂದೆ ಎದುರಾಗುವ ಅನಾಹುತಗಳಿಗೆ ನೀವೇ ಹೊಣೆ’ ಎಂದು ಕಾಪುವಿನಲ್ಲಿ ಪುರಸಭೆ ಮುಖ್ಯಾಧಿಕಾರಿಗೆ ನೀಡಿರುವ ಎಚ್ಚರಿಕೆ ರೂಪದ ಮನವಿಯಲ್ಲಿ ತಿಳಿಸಲಾಗಿದೆ. ಈ ಬೆದರಿಕೆಗೆ ಪ್ರತಿಕ್ರಿಯಿಸಿರುವ ಪುರಸಭೆ ಮುಖ್ಯಾಧಿಕಾರಿಯು ನಿರ್ದಿಷ್ಟ ಸಮುದಾಯದವರಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಹೇಳಿರುವುದು ಸರಿಯಾಗಿದೆ. ಆದರೆ, ಹಿಂದೂಗಳಿಗೆ ಮಾತ್ರ ವ್ಯಾಪಾರ ಮಾಡಲು ಅವಕಾಶ ಕಲ್ಪಿಸುವಂತೆ ಹಿಂದೂ ಸಂಘಟನೆಗಳು ಮಾಡಿಕೊಂಡಿರುವ ಮನವಿಗೆ ದೇವಸ್ಥಾನದ ಆಡಳಿತ ಮಂಡಳಿಸಕಾರಾತ್ಮಕವಾಗಿ ಸ್ಪಂದಿಸಿರುವುದು ಧರ್ಮ ಒಪ್ಪುವಂತಹದ್ದೂ ಅಲ್ಲ, ಸಂವಿಧಾನಾತ್ಮಕವೂ ಅಲ್ಲ. ಇಷ್ಟು ವರ್ಷಗಳ ಕಾಲ ಮುಸ್ಲಿಂ ವ್ಯಾಪಾರಿಗಳು ಜಾತ್ರೆಗಳಲ್ಲಿ ವಹಿವಾಟು ನಡೆಸುತ್ತಿದ್ದಾಗ ಇಲ್ಲದ ತಕರಾರು ಈಗ ದಿಢೀರ್‌ ಉದ್ಭವಿಸಿರುವುದು ಅನುಮಾನಗಳಿಗೆ ಕಾರಣವಾಗುವಂತಿದೆ.

ಶಿವಮೊಗ್ಗದ ಮಾರಿಕಾಂಬಾ ಜಾತ್ರೆ ಹಲವು ದಶಕಗಳಿಂದ ಸೌಹಾರ್ದಕ್ಕೆ ಹೆಸರಾದುದು. ಈಗ ಇದ್ದಕ್ಕಿದ್ದಂತೆ ಬಿಜೆಪಿ ಹಾಗೂ ಬಜರಂಗದಳದ ಕೆಲವು ಮುಖಂಡರು ಧರ್ಮದ ಹೆಸರಿನಲ್ಲಿ ಪ್ರತ್ಯೇಕತೆಯ ಮಾತನಾಡುವ ಮೂಲಕ ಜಾತ್ರೆ ಹೊಂದಿರುವ ಧಾರ್ಮಿಕ ಸಹಿಷ್ಣುತೆಯ ವರ್ಚಸ್ಸಿಗೆ ಧಕ್ಕೆಯುಂಟು ಮಾಡುತ್ತಿದ್ದಾರೆ. ಮಳಿಗೆಗಳ ವಿತರಣೆ ಮತ್ತು ನಿರ್ವ ಹಣೆಯ ಟೆಂಡರ್ ಪಡೆದಿದ್ದ ವ್ಯಕ್ತಿಯನ್ನು ಹಿಂದಕ್ಕೆ ಸರಿಯುವಂತೆ ಮಾಡಿ, ಆ ಟೆಂಡರ್‌ ಹಣ ಭರಿಸುವ ಮೂಲಕ ಹಿಂದೂಗಳಿಗೆ ಮಾತ್ರ ಮಳಿಗೆ ವಿತರಿಸಲು ಮುಂದಾಗಿರುವ ಬಜರಂಗದಳದ ಪ್ರಯತ್ನ ಆತಂಕಕಾರಿಯಾದುದು.

ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ಮಾಡಿಕೊಡುವುದಿಲ್ಲ ಎನ್ನುವ ಧೋರಣೆಗೆ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಅವಕಾಶವಿಲ್ಲ. ದೇಶದ ಯಾವುದೇ ಭಾಗದಲ್ಲಿ ಹಿಂದೂಗಳಿಗೆ ವ್ಯಾಪಾರ ಮಾಡಲು ಅವಕಾಶವಿರುವಂತೆಯೇ ಮುಸ್ಲಿಂ ಸೇರಿದಂತೆ ಎಲ್ಲ ಧರ್ಮದವರಿಗೂ ಅವಕಾಶವಿದೆ. ಸಂವಿಧಾನ ಕಲ್ಪಿಸಿರುವ ಈ ವ್ಯವಸ್ಥೆಗೆ ಯಾರಿಂದಲಾದರೂ ಅಡ್ಡಿಯುಂಟಾದರೆ ಅಂಥವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು. ಕ್ರಿಯೆ–ಪ್ರತಿಕ್ರಿಯೆಯ ಮಾತನಾಡುವ ಮೂಲಕ ಕೋಮುಕೃತ್ಯಗಳಿಗೆ ಗಾಳಿ ಹಾಕುವು ದನ್ನು ನಿಲ್ಲಿಸಿ, ಕೋಮುದ್ವೇಷ ಹರಡುವವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ಕ್ರಿಯಾಶೀಲವಾಗಬೇಕು.

ಮುಸ್ಲಿಂ ಸಮುದಾಯದವರಿಗೆ ವ್ಯಾಪಾರ ಮಾಡಲು ಅವಕಾಶ ಕೊಡುವುದಿಲ್ಲ ಎನ್ನುವ ಯೋಚನೆಯೇ ನಂಜಿನಿಂದ ಕೂಡಿದ್ದು, ಅಂಥ ಪ್ರಯತ್ನಗಳನ್ನು ಸರ್ಕಾರ ಚಿಗುರಿನಲ್ಲಿಯೇ ಚಿವುಟಿ ಹಾಕಬೇಕು; ಅಲ್ಪಸಂಖ್ಯಾತರಲ್ಲಿ ಅಸುರಕ್ಷತೆಯನ್ನು ಮೂಡಿಸುವ ಪ್ರಯತ್ನಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಧಾರ್ಮಿಕ ಅಸಹನೆಯನ್ನು ಬಿತ್ತುವವರ ವಿರುದ್ಧ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡು ಕ್ರಮ ಜರುಗಿಸಬೇಕು. ಶಿವಮೊಗ್ಗ ಮತ್ತು ಕಾ‍ಪುವಿನ ಪ್ರಕರಣಗಳಿಗೆ ಸಂಬಂಧಿಸಿದಂತೆ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ, ಮುಸ್ಲಿಂ ವ್ಯಾಪಾರಿಗಳಿಗೆ ಜಾತ್ರೆಗಳಲ್ಲಿ ವ್ಯಾಪಾರ ನಡೆಸಲು ಅವಕಾಶ ದೊರೆಯುವಂತೆ ನೋಡಿಕೊಳ್ಳಬೇಕು.

ನಾಡಿನ ಅನೇಕ ಜಾತ್ರೆಗಳು ಧಾರ್ಮಿಕ ಸಾಮರಸ್ಯದ ಪ್ರಯೋಗಶಾಲೆಗಳಾಗಿವೆ. ಹಿಂದೂ ಮತ್ತು ಮುಸ್ಲಿಂ ಎರಡೂ ಸಮುದಾಯಗಳು ಬೆರೆತು ಜಾತ್ರೆಗಳು, ಧಾರ್ಮಿಕ ಆಚರಣೆಗಳ ಶೋಭೆ‌ ಹೆಚ್ಚಿಸುವ ಹಲವು ಜೀವಂತ ಉದಾಹರಣೆಗಳು ಕರ್ನಾಟಕದಲ್ಲಿವೆ. ಅಂಥ ಸಾಮರಸ್ಯವನ್ನು ಕದಡುವ ಹಾಗೂ ಧರ್ಮದ ಹೆಸರಿನಲ್ಲಿ ಸಮಾಜವನ್ನು ವಿಭಜಿಸುವ ಪ್ರವೃತ್ತಿ ಖಂಡನೀಯ. ಕೋವಿಡ್‌ ಸಾಂಕ್ರಾಮಿಕ
ದಿಂದಾಗಿ ಎರಡು ವರ್ಷಗಳಿಂದ ಜಾತ್ರೆಗಳು ಔಪಚಾರಿಕ ಆಚರಣೆಗಷ್ಟೇ ಸೀಮಿತವಾಗಿದ್ದವು. ಸೋಂಕಿನ ಆತಂಕ ಕಡಿಮೆಯಾಗಿರುವ ಸಂದರ್ಭದಲ್ಲಿ ಜಾತ್ರೆಗಳು ವಿಜೃಂಭಣೆಯಿಂದ ನಡೆಯುತ್ತಿವೆ. ಈ ಸಂಭ್ರಮಕ್ಕೆ ಧರ್ಮದ ಹೆಸರಿನಲ್ಲಿ ವಿಷ ಕಾರುವ ಕೆಲವರು ಅಡ್ಡಿಯುಂಟು ಮಾಡುತ್ತಿರುವುದು ದುರದೃಷ್ಟಕರ.

ಹಿಜಾಬ್‌ಗೆ ಸಂಬಂಧಿಸಿದಂತೆ ಹೈಕೋರ್ಟ್‌ ತೀರ್ಪು ವಿರೋಧಿಸಿ ಮುಸ್ಲಿಂ ವರ್ತಕರು ಅಂಗಡಿಗಳನ್ನು ಮುಚ್ಚಿ ಪ್ರತಿಭಟಿಸಿದ್ದನ್ನು ನೆಪವಾಗಿಸಿಕೊಂಡು, ಅವರ ಜೊತೆ ವ್ಯವಹಾರ ನಡೆಸಬೇಡಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ನಡೆಸುವ ಅಪಪ್ರಚಾರವೂ ಸರಿಯಾದುದಲ್ಲ. ಇಂಥ ಪ್ರಯತ್ನಗಳು ಒಂದು ವರ್ಗದ ಬದುಕುವ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನಗಳಾಗಿವೆ. ಆಯಾ ದಿನದ ದುಡಿಮೆಯನ್ನು ನೆಚ್ಚಿಕೊಂಡು ಬದುಕುವ ಶ್ರೀಸಾಮಾನ್ಯರು ಎಲ್ಲ ಧರ್ಮಗಳಲ್ಲೂ ಇದ್ದಾರೆ. ಅಂಥವರನ್ನು ಧರ್ಮದ ಹೆಸರಿನಲ್ಲಿ ಪ್ರತ್ಯೇಕಿಸಿ ದೂರ ಸರಿಸುವುದು ಕಾನೂನಿಗೆ ವಿರುದ್ಧವಾದುದಷ್ಟೇ ಅಲ್ಲ, ಅಮಾನವೀಯವೂ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT