ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಜಿಟಲ್ ಪಾವತಿಯಲ್ಲಿ ವೈಫಲ್ಯ: ಲೋಪಕ್ಕೆ ಪರಿಹಾರದ ವ್ಯವಸ್ಥೆ ಬೇಕು

Last Updated 10 ಜನವರಿ 2021, 19:31 IST
ಅಕ್ಷರ ಗಾತ್ರ

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಕಾರ್ಯಕ್ರಮಗಳಲ್ಲಿ ಒಂದು ‘ಡಿಜಿಟಲ್ ಇಂಡಿಯಾ’. ನಗದುರಹಿತ ವಹಿವಾಟನ್ನು ಹೆಚ್ಚು ಮಾಡುವಂತೆ ಜನರನ್ನು ಪ್ರೋತ್ಸಾಹಿಸುವುದು ಈ ಕಾರ್ಯಕ್ರಮದ ಒಂದು ಭಾಗ. ಆ ಮೂಲಕ ಜನ ಕಡಿಮೆ ಪ್ರಮಾಣದಲ್ಲಿ ನಗದು ಬಳಸುವಂತೆ ಆಗಬೇಕು ಎಂಬುದು ಕೇಂದ್ರದ ಘೋಷಿತ ಉದ್ದೇಶಗಳಲ್ಲಿ ಒಂದು. ನಗದು ಬಳಕೆ ಕಡಿಮೆ ಆಗಿ, ಡಿಜಿಟಲ್ ವ್ಯವಸ್ಥೆಗಳ ಮೂಲಕ ಪಾವತಿ ಹೆಚ್ಚೆಚ್ಚು ಆದಂತೆಲ್ಲ, ಕಳ್ಳಹಣದ ಪ್ರಮಾಣ ಕಡಿಮೆ ಆಗುತ್ತದೆ, ಹೆಚ್ಚು ಜನ ತೆರಿಗೆ ವ್ಯಾಪ್ತಿಗೆ ಬರುತ್ತಾರೆ ಎಂಬ ಒಪ್ಪಬೇಕಾದ ವಿವರಣೆಗಳನ್ನು ದೇಶದ ಹಣಕಾಸು ನೀತಿ ನಿರೂಪಕರು ಈಗಾಗಲೇ ನೀಡಿದ್ದಾರೆ. ಅಷ್ಟೇ ಅಲ್ಲ, ತೀರಾ ಸಣ್ಣ ಮೊತ್ತವನ್ನು ಒಳಗೊಳ್ಳುವ ಚಿಲ್ಲರೆ ವಹಿವಾಟುಗಳಲ್ಲಿಯೂ ಡಿಜಿಟಲ್ ಪಾವತಿಯನ್ನು ಜನಪ್ರಿಯಗೊಳಿಸುವ ಉದ್ದೇಶದಿಂದ ದೇಶವು ಯುಪಿಐ (ಯೂನಿಫೈಡ್ ಪೇಮೆಂಟ್ಸ್‌ ಇಂಟರ್‌ಫೇಸ್) ಎಂಬ ಅನುಕರಣೀಯ ಪಾವತಿ ವ್ಯವಸ್ಥೆಯೊಂದನ್ನು ರೂಪಿಸಿದೆ. ಈ ವ್ಯವಸ್ಥೆಯ ಬಲದ ಮೇಲೆಯೇ ಇಂದು ಸ್ಮಾರ್ಟ್‌ಫೋನ್‌ಗಳಲ್ಲಿ ಕೆಲಸ ಮಾಡುವ ಹತ್ತು ಹಲವು ಆ್ಯಪ್‌ಗಳು ಪಾವತಿ ಸೇವೆಯನ್ನು ನೀಡುತ್ತಿವೆ. ಆದರೆ, ಡಿಜಿಟಲ್ ಪಾವತಿಗಳ ಸಂದರ್ಭದಲ್ಲಿ ಬಳಕೆದಾರನ ಕಡೆಯಿಂದ ಯಾವುದೇ ಲೋಪ ಇರದಿದ್ದರೂ ಪಾವತಿ ವಿಫಲವಾಗುತ್ತಿರುವುದು ನಗದುರಹಿತ ವಹಿವಾಟು ಪ್ರೋತ್ಸಾಹಿಸುವ ಉದ್ದೇಶಕ್ಕೆ ದೊಡ್ಡ ತೊಡರುಗಾಲು. ಖಾತೆಯಿಂದ ಕಡಿತವಾದ ಹಣವು ತಲುಪಬೇಕಾದ ಖಾತೆಯನ್ನು ತಕ್ಷಣಕ್ಕೆ ಸೇರದಿದ್ದಾಗ, ಹಣ ಪಾವತಿಸಿದ ವ್ಯಕ್ತಿಯ ಮನಸ್ಸಿಗೆ ಕಿರಿಕಿರಿ ಆಗುವುದು ತೀರಾ ಸಹಜ. ಈ ರೀತಿಯ ಅನುಭವಗಳು ಬಹಳಷ್ಟು ಜನರಿಗೆ ಒಂದಲ್ಲ ಒಂದು ಸಂದರ್ಭದಲ್ಲಿ ಆಗಿದ್ದಿರಬಹುದು. ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌, ಯುಪಿಐ, ಎಟಿಎಂ, ಆನ್‌ಲೈನ್‌ ಮೂಲಕ ಹಣದ ವರ್ಗಾವಣೆ ಸೇರಿದಂತೆ ಹಲವು ಬಗೆಯ ಡಿಜಿಟಲ್ ಪಾವತಿಗಳ ಸಂದರ್ಭದಲ್ಲಿ, ಪಾವತಿ ವಿಫಲವಾಗಿ ಬ್ಯಾಂಕಿಂಗ್ ಸೇವೆಗಳ ಗ್ರಾಹಕ ತೊಂದರೆಗೆ ಸಿಲುಕುವುದು ಇದೆ. ಆಧುನಿಕ ಕಾಲಘಟ್ಟದಲ್ಲಿ, ಹಣಕಾಸು ಸೇವೆಗಳನ್ನು ನೀಡುವ ಸಂಸ್ಥೆಗಳು ಬ್ಯಾಂಕ್‌ಗಳೇ ಆಗಿರಬೇಕು ಎಂದೇನೂ ಇಲ್ಲ, ಆ ಸಂಸ್ಥೆಗಳ ಭೌತಿಕ ಕಚೇರಿಯ ವಿಳಾಸ ಗ್ರಾಹಕರಿಗೆ ಗೊತ್ತಿರಬೇಕು ಎಂಬುದೂ ಇಲ್ಲ. ಹೀಗಿರುವಾಗ, ಪಾವತಿ ವಿಫಲವಾದಾಗ ಯಾರಿಗೆ ದೂರು ನೀಡಬೇಕು ಎಂಬುದೂ ಗೊತ್ತಾಗದೆ ಕಸಿವಿಸಿ ಅನುಭವಿಸಿದವರು ಹಲವರಿದ್ದಾರೆ.

ವಹಿವಾಟು ವಿಫಲಗೊಂಡಾಗ ಹಣವು ಗ್ರಾಹಕರ ಖಾತೆಗೆ ತಕ್ಷಣಕ್ಕೆ ಮರಳುವಂತೆ ಆಗಬೇಕು ಎಂದು ಒತ್ತಾಯಿಸಿ ಕೇಂದ್ರ ಗ್ರಾಹಕರ ಹಿತರಕ್ಷಣಾ ಪ್ರಾಧಿಕಾರವು (ಸಿಸಿಪಿಎ) ಆರ್‌ಬಿಐಗೆ ಪತ್ರ ಬರೆದಿದೆ. ವಾಸ್ತವದಲ್ಲಿ, ವಹಿವಾಟಿನ ವೈಫಲ್ಯಕ್ಕೆ ಗ್ರಾಹಕ ಕಾರಣವಲ್ಲ ಎಂದಾದರೆ, ಕಾಲಮಿತಿಯಲ್ಲಿ ಹಣ ಆತನಿಗೆ ಮರಳದಿದ್ದರೆ, ಆತನಿಗೆ ‍ಪರಿಹಾರ ನೀಡಬೇಕು ಎಂದು ಆರ್‌ಬಿಐ ಈ ಹಿಂದೆಯೇ ತಾಕೀತು ಮಾಡಿದೆ. ಆದರೆ, ಈ ನಿಯಮವು ಹಣಕಾಸು ಸೇವೆಗಳನ್ನು ಪಡೆಯುವ ಎಲ್ಲರ ಅರಿವಿಗೆ ಬಂದಿರುವ ಸಾಧ್ಯತೆ ಕಡಿಮೆ. ಈ ಅರಿವಿನ ಕೊರತೆಯು ಹಣಕಾಸು ಸೇವಾ ಸಂಸ್ಥೆಗಳ ಪಾಲಿಗೆ ವರವಾಗಿಯೂ ಗ್ರಾಹಕರ ಪಾಲಿಗೆ ಶಾಪವಾಗಿಯೂ ಪರಿಣಮಿಸಿದೆ. ಆರ್‌ಬಿಐ ಅಥವಾ ಸಂಬಂಧಪಟ್ಟ ಪ್ರಾಧಿಕಾರಗಳು ಈ ವಿಚಾರದಲ್ಲಿ ಎಲ್ಲರಲ್ಲಿಯೂ ಅರಿವು ಮೂಡಿಸುವ ಅಭಿಯಾನವನ್ನು ಪ್ರಾದೇಶಿಕ ಭಾಷೆಗಳಲ್ಲಿಯೂ ಕೈಗೆತ್ತಿಕೊಳ್ಳುವುದು ಸೂಕ್ತವಾದೀತು. ಗ್ರಾಹಕರ ಹಕ್ಕುಗಳ ರಕ್ಷಣೆಗಾಗಿ ಇರುವ ಗ್ರಾಹಕರ ನ್ಯಾಯಾಲಯಗಳನ್ನು ಗ್ರಾಹಕರಿಗೆ ಇನ್ನಷ್ಟು ಹತ್ತಿರವಾಗಿಸುವ ಕ್ರಮಗಳನ್ನು ಸರ್ಕಾರಗಳು ಕೈಗೊಳ್ಳಬಹುದು. ಆಗ ಹಣಕಾಸು ಸೇವೆಗಳ ಗ್ರಾಹಕರಿಗೆ ತಮ್ಮ ಹಕ್ಕುಗಳಿಗೆ ಚ್ಯುತಿ ಆಗಿದೆ ಎಂದು ಅನ್ನಿಸಿದಾಗ, ಅವುಗಳ ರಕ್ಷಣೆಗೆ ನ್ಯಾಯಾಲಯಗಳ ಮೊರೆ ಹೋಗುವುದು ಸುಲಭವಾಗುತ್ತದೆ. ಡಿಜಿಟಲ್ ಪಾವತಿ ವ್ಯವಸ್ಥೆಗಳಲ್ಲಿ ವೈಫಲ್ಯದ ಪ್ರಮಾಣವು ಶೂನ್ಯಕ್ಕೆ ತಲುಪುತ್ತದೆ ಎನ್ನಲಾಗದು. ಮನುಷ್ಯ ಸೃಷ್ಟಿಸುವ ಯಾವುದೇ ವ್ಯವಸ್ಥೆಗೆ ಮಿತಿಗಳು ಇದ್ದೇ ಇರುತ್ತವೆ, ವೈಫಲ್ಯಗಳು ಅಲ್ಲಿ ಆಗುತ್ತಿರುತ್ತವೆ. ಆದರೆ, ವೈಫಲ್ಯಕ್ಕೆ ಹೊಣೆ ಯಾರು ಎಂಬುದನ್ನು ಗುರುತಿಸಿ, ವೈಫಲ್ಯದಿಂದ ತೊಂದರೆಗೆ ಒಳಗಾದವರಿಗೆ ಪರಿಹಾರ ಕೊಡಿಸುವ ವಿಶ್ವಾಸಾರ್ಹ ವ್ಯವಸ್ಥೆಯೊಂದು ಮೈದಳೆದರೆ, ಡಿಜಿಟಲ್ ಪಾವತಿಗಳು ಇನ್ನಷ್ಟು ಹೆಚ್ಚು ಜನಪ್ರಿಯ ಆಗುತ್ತವೆ. ವೈಫಲ್ಯದ ಪ್ರಮಾಣ ಹೆಚ್ಚಾದರೆ, ಜನ ಮತ್ತೆ ನಗದಿನ ಬಳಕೆಯನ್ನು ಆಶ್ರಯಿಸುತ್ತಾರೆ. ಇದು ಡಿಜಿಟಲ್ ಇಂಡಿಯಾ ಎಂಬ ಸದಾಶಯದ ಕಾರ್ಯಕ್ರಮಕ್ಕೆ ಅಡಚಣೆ ಒಡ್ಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT