ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರಮಾನ ಹೆಚ್ಚಿಸಿಕೊಳ್ಳಲು ದೂರದೃಷ್ಟಿಯ ಚಿಂತನೆ ಅಗತ್ಯ

Last Updated 12 ಮಾರ್ಚ್ 2020, 6:08 IST
ಅಕ್ಷರ ಗಾತ್ರ

ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿ ಹದಗೆಡುತ್ತಿರುವುದು ಇತ್ತೀಚಿನ ವರ್ಷಗಳಲ್ಲಿ ಎದ್ದು ಕಾಣುತ್ತಿದೆ. ಸರ್ಕಾರದ ವೆಚ್ಚ ಹೆಚ್ಚುತ್ತಲೇ ಇದೆ. ಆದರೆ, ಅದಕ್ಕೆ ತಕ್ಕಂತೆ ವರಮಾನ ಸಂಗ್ರಹ ಹೆಚ್ಚಾಗುತ್ತಿಲ್ಲ. ಇನ್ನೊಂದೆಡೆ, ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ತೆರಿಗೆಯ ಪಾಲು ಮತ್ತು ಅನುದಾನ ಕಡಿಮೆಯಾಗುತ್ತಿದೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿಧಾನಮಂಡಲದಲ್ಲಿ ಮಂಡಿಸಿರುವ ‘2020–24ರ ಮಧ್ಯಮಾವಧಿ ವಿತ್ತೀಯ ಯೋಜನೆ’ಯನ್ನು ಗಮನಿಸಿದಾಗ, ಮುಂದಿನ ವರ್ಷಗಳಲ್ಲಿ ರಾಜ್ಯದ ಆರ್ಥಿಕ ಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ ಎಂಬ ಸುಳಿವು ಸಿಗುತ್ತದೆ.

‘ಈಗಿನ ಪರಿಸ್ಥಿತಿಯೇ ಮುಂದುವರಿದರೆ, 2022ರ ಹೊತ್ತಿಗೆ ರಾಜ್ಯದಲ್ಲಿ ಸಂಗ್ರಹವಾಗುವ ಸಂಪನ್ಮೂಲದಿಂದ ಸಚಿವರು, ಶಾಸಕರು, ನೌಕರರ ವೇತನ, ಆಡಳಿತ ವೆಚ್ಚ ಮತ್ತು ಸಹಾಯಧನ ಮಾತ್ರ ಕೊಡಲು ಸಾಧ್ಯವಾಗುತ್ತದೆ. ಅಭಿವೃದ್ಧಿ ಕೆಲಸಗಳಿಗೆ ವಿನಿಯೋಗಿಸಲು ಹಣ ಉಳಿಯುವುದಿಲ್ಲ’ ಎಂದು ಈ ವಿತ್ತೀಯ ಯೋಜನೆಯು ಸ್ಪಷ್ಟವಾಗಿ ಗುರುತಿಸಿದೆ.ಸರ್ಕಾರಿ ನೌಕರರಿಗೆ ಸಂಬಳ, ಸವಲತ್ತು ಕೊಡುವುದು ಮಾತ್ರ ಸರ್ಕಾರದ ಕೆಲಸವಲ್ಲ. ಅದಕ್ಕಿಂತ ಮುಖ್ಯವಾಗಿ ಅಭಿವೃದ್ಧಿ ಕೆಲಸಗಳನ್ನು ಕೈಗೊಂಡು, ಆ ಮೂಲಕ ಜನರ ಜೀವನಮಟ್ಟ ಸುಧಾರಿಸುವುದು ಸರ್ಕಾರದ ಕರ್ತವ್ಯ.

ಇದು ಸಾಧ್ಯವಾಗ ಬೇಕಾದರೆ ಬಂಡವಾಳ ವೆಚ್ಚಕ್ಕೆ ಸರ್ಕಾರವು ಹೆಚ್ಚು ಹಣವನ್ನು ಮೀಸಲಿಡಬೇಕು ಮತ್ತು ಅದನ್ನು ಸಮರ್ಪಕವಾಗಿ ವಿನಿಯೋಗಿಸಬೇಕು. ಆದರೆ, ರಾಜ್ಯ ಸರ್ಕಾರವು ಬಜೆಟ್‌ನಲ್ಲಿ ಬಂಡವಾಳದ ವೆಚ್ಚ ಶೀರ್ಷಿಕೆಯಡಿನಮೂದಿಸಿದಷ್ಟು ಹಣವನ್ನು ಅದೇ ಉದ್ದೇಶಕ್ಕೆ ಪೂರ್ಣಪ್ರಮಾಣದಲ್ಲಿ ಖರ್ಚು ಮಾಡಿದ್ದು ಇತ್ತೀಚಿನ ವರ್ಷಗಳಲ್ಲಿ ಕಾಣಿಸುತ್ತಿಲ್ಲ. ನಿಗದಿತ ಮೊತ್ತವನ್ನು ಪೂರ್ಣ ಪ್ರಮಾಣದಲ್ಲಿ ವೆಚ್ಚ ಮಾಡಲಾಗದೇ ಇದ್ದುದಕ್ಕೆ ಸಬೂಬುಗಳನ್ನು ಕೊಡುವುದು ಸಾಮಾನ್ಯವಾಗಿದೆ. 2019–20ರ ಆರ್ಥಿಕ ಸಾಲಿನಲ್ಲಿ ಬಂಡವಾಳ ವೆಚ್ಚಕ್ಕೆ ಸರ್ಕಾರವು ₹ 42,584 ಕೋಟಿ ಮೀಸಲಿಟ್ಟಿತ್ತು. ಆದರೆ, ಖರ್ಚಾದದ್ದು ₹ 39,380 ಕೋಟಿ ಮಾತ್ರ. ಅಂದರೆ, ಬಜೆಟ್‌ನಲ್ಲಿ ನಿಗದಿಪಡಿಸಿದ್ದಕ್ಕಿಂತ ₹ 3,204 ಕೋಟಿ ಕಡಿಮೆ. ಸಂಪನ್ಮೂಲ ಸಂಗ್ರಹ ನಿರೀಕ್ಷಿತ ಪ್ರಮಾಣದಲ್ಲಿ ಆಗದಿರುವುದು, ಕೇಂದ್ರ ಸರ್ಕಾರದಿಂದ ಬರಬೇಕಾಗಿದ್ದ ತೆರಿಗೆ ಪಾಲಿನಲ್ಲಿ ಖೋತಾ ಮುಂತಾಗಿ ಇದಕ್ಕೆ ಕಾರಣಗಳನ್ನು ಕೊಡಬಹುದು. ಆದರೆ, ಬಜೆಟ್‌ನಲ್ಲಿ ಹಂಚಿಕೆ ಮಾಡಿ, ಅದಕ್ಕೆ ಸದನದಲ್ಲಿ ಒಪ್ಪಿಗೆ ಪಡೆದ ಮೇಲೆ ನಿರ್ದಿಷ್ಟ ಉದ್ದೇಶಕ್ಕೆ ಖರ್ಚು ಮಾಡದೇ ಇರುವುದು ಜನಹಿತಕ್ಕೆ ವಿರುದ್ಧವಾದ ನಡೆ.

ಇಡೀ ದೇಶವೇ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವಾಗ ರಾಜ್ಯವೊಂದು ಆರ್ಥಿಕವಾಗಿ ಹೆಚ್ಚು ಸದೃಢವಾಗುವುದು ಸುಲಭವಲ್ಲ. ಪ್ರವಾಹ ಪರಿಹಾರದಂತಹ ತುರ್ತು ಅಗತ್ಯಗಳಿಗೂ ಕೇಂದ್ರ ಸರ್ಕಾರಸೂಕ್ತ ರೀತಿಯಲ್ಲಿ ಸ್ಪಂದಿಸಿಲ್ಲ ಎಂಬ ಭಾವನೆ ಇದೆ.ಈ ಆರ್ಥಿಕ ವರ್ಷದಲ್ಲಿ ಕೇಂದ್ರದಿಂದ ಕರ್ನಾಟಕಕ್ಕೆ ಬರಬೇಕಾದ ತೆರಿಗೆ ಪಾಲಿನಲ್ಲಿ ₹ 8,887 ಕೋಟಿ ಖೋತಾ ಆಗಿದೆ. ಜಿಎಸ್‌ಟಿಯ ಪರಿಹಾರದ ಪಾಲಿನಲ್ಲಿ ₹ 3,000 ಕೋಟಿಯಷ್ಟು ಕಡಿಮೆ ಆಗಲಿದೆ ಎಂಬ ಅಂದಾಜಿದೆ. ಅಷ್ಟೇ ಅಲ್ಲ, ಮುಂದಿನ ಆರ್ಥಿಕ ವರ್ಷದಲ್ಲಿ ಕೇಂದ್ರದಿಂದ ಬರಬೇಕಿರುವ ತೆರಿಗೆ ಪಾಲಿನ ಮೊತ್ತದಲ್ಲಿ ₹ 11,215 ಕೋಟಿ ಕಡಿಮೆ ಆಗಲಿದೆ ಎಂಬ ಅಂಶ ರಾಜ್ಯದ ಬಜೆಟ್‌ನಲ್ಲಿಯೇ ಉಲ್ಲೇಖಗೊಂಡಿದೆ.

ಕೇಂದ್ರದಿಂದ ಬರಬೇಕಾದ ರಾಜ್ಯದ ಪಾಲಿನ ಹಣವನ್ನು ಪಡೆಯುವುದು ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯವೊಂದರ ಹಕ್ಕು. ಆ ಹಕ್ಕಿಗೆ ಧಕ್ಕೆಯಾದಾಗ ಗಟ್ಟಿಧ್ವನಿಯಿಂದ ಕೇಳುವ ಛಾತಿಯನ್ನು ನಮ್ಮ ಚುನಾಯಿತ ಪ್ರತಿನಿಧಿಗಳು ರೂಢಿಸಿಕೊಳ್ಳದಿದ್ದರೆ, ತಾತ್ಸಾರ ಧೋರಣೆಯನ್ನು ಕೇಂದ್ರಮುಂದುವರಿಸಿಕೊಂಡು ಹೋಗುತ್ತದೆ. ಪ್ರಕೃತಿ ವಿಕೋಪಗಳಿಗೆ ತುತ್ತಾದ ರಾಜ್ಯಗಳಿಗೆ ಕೇಂದ್ರವು ನೆರವು ನೀಡುವಲ್ಲಿ ಹೆಚ್ಚಿನ ಔದಾರ್ಯ ತೋರಬೇಕು.

ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪ‍ಕ್ಷದ ನೇತೃತ್ವದ ಸರ್ಕಾರಗಳು ಇದ್ದಾಗ ತಾರತಮ್ಯ ಇರುವುದಿಲ್ಲ, ಹೆಚ್ಚು ಪ್ರಯೋಜನ ಪಡೆಯಲು ರಾಜ್ಯಕ್ಕೆ ಅನುಕೂಲಕರ ವಾತಾವರಣ ಇರುತ್ತದೆ ಎಂಬ ನಂಬಿಕೆಯನ್ನು ಜನಮಾನಸದಲ್ಲಿ ರಾಜಕಾರಣಿಗಳೇ ಬಿತ್ತಿದ್ದಾರೆ. ಆದರೆ, ಕರ್ನಾಟಕದ ವಿಷಯದಲ್ಲಿ ಅದು ಈಗ ಹುಸಿಯಾಗಿದೆ ಎಂಬ ಅರ್ಥ ಧ್ವನಿಸುವ ಮಾತುಗಳನ್ನು ಆಡಳಿತಾರೂಢರೇ ಆಡಿದ್ದಾರೆ. ಕರ್ನಾಟಕದಿಂದ ದೊಡ್ಡ ಮೊತ್ತದ ತೆರಿಗೆ ವರಮಾನವನ್ನು ಪಡೆಯುವ ಕೇಂದ್ರ ಸರ್ಕಾರವು ಅದಕ್ಕೆ ತಕ್ಕಂತೆ ಪಾಲನ್ನು ಹಂಚಿಕೆ ಮಾಡುವುದು ನ್ಯಾಯೋಚಿತ. ಇದಕ್ಕೆ ನಿಯಮ ಅಡ್ಡಿಯಾಗಿದ್ದರೆ, ಅದನ್ನು ಬದಲಾಯಿಸುವಂತೆ ಕೇಂದ್ರದ ಮೇಲೆ ಪಕ್ಷಭೇದ ಮರೆತು ಒತ್ತಡ ಹೇರಲು ಇದು ಸಕಾಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT