ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಉಪನಗರ ರೈಲು ಇಂದಿನ ಅಗತ್ಯ ವಿಳಂಬವಿಲ್ಲದೆ ಅನುಷ್ಠಾನಗೊಳ್ಳಲಿ

Last Updated 4 ಫೆಬ್ರುವರಿ 2020, 3:15 IST
ಅಕ್ಷರ ಗಾತ್ರ

ಬೆಂಗಳೂರು ನಗರದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಪರಿಹಾರೋಪಾಯಗಳಲ್ಲಿ ಅತ್ಯಂತ ಮಹತ್ವದ್ದೆನಿಸಿದ ಉಪನಗರ ರೈಲು ಯೋಜನೆಯು ಕೇಂದ್ರದ ಬಜೆಟ್‌ನಲ್ಲಿ ಮತ್ತೊಮ್ಮೆ ಪ್ರಸ್ತಾಪಗೊಂಡಿದೆ. ಹಲವು ವರ್ಷಗಳಿಂದ ಚರ್ಚೆ ಆಗುತ್ತಲೇ ಇರುವ ಈ ಯೋಜನೆ, 2018–19ರ ಬಜೆಟ್‌ನಲ್ಲಿ ಮೊದಲ ಬಾರಿಗೆ ಸ್ಥಾನ ಪಡೆದಿತ್ತು. ಆದರೆ, ನಯಾಪೈಸೆಯಷ್ಟೂ ಅನುದಾನ ಹಂಚಿಕೆ ಆಗಿರಲಿಲ್ಲ. ಕಳೆದ ಬಜೆಟ್‌ನಲ್ಲಿ ಬರೀ ₹ 10 ಕೋಟಿಯನ್ನು ಮೀಸಲಿರಿಸಲಾಗಿತ್ತು. ಇಷ್ಟಾಗಿಯೂ ಯೋಜನೆ ಅನುಷ್ಠಾನಕ್ಕೆ ಅಗತ್ಯವಾಗಿದ್ದ ‘ವಿಶೇಷ ಉದ್ದೇಶದ ಘಟಕ’ವನ್ನು (ಸ್ಪೆಷಲ್‌ ಪರ್ಪಸ್‌ ವೆಹಿಕಲ್‌; ಎಸ್‌ಪಿವಿ) ಸ್ಥಾಪಿಸುವ ಕೆಲಸ ಆಗಿರಲಿಲ್ಲ. ಇದೀಗ ಎಸ್‌ಪಿವಿ ಬದಲು ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ನಿಗಮದ (ಕೆ–ರೈಡ್‌) ಮೂಲಕ ಅನುಷ್ಠಾನಕ್ಕೆ ನಿರ್ಧರಿಸಲಾಗಿದ್ದು, ಮೂರನೇ ಸಲ ಬಜೆಟ್‌ನಲ್ಲಿ ಈ ಯೋಜನೆ ಪ್ರಸ್ತಾಪಗೊಂಡಿದೆ.

ಕಳೆದ ವರ್ಷವೇ ಸಮಗ್ರ ಯೋಜನಾ ವರದಿಗೆ (ಡಿಪಿಆರ್‌) ರೈಲ್ವೆ ಮಂಡಳಿಯಿಂದ ಅನುಮೋದನೆ ಸಿಕ್ಕಿದ್ದರೂ ಅನುಷ್ಠಾನದ ಹಾದಿ ಸರಳವಾಗಿಲ್ಲ. ಕೇಂದ್ರ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯಿಂದ ಈ ಯೋಜನೆಗೆ ಒಪ್ಪಿಗೆ ಸಿಗುವುದು ಇನ್ನೂ ಬಾಕಿ ಇದೆ. ‘₹ 18,600 ಕೋಟಿ ಅಂದಾಜು ವೆಚ್ಚದ ಈ ಯೋಜನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಲಾ ಶೇ 20ರಷ್ಟು ಅನುದಾನ ಒದಗಿಸಲಿವೆ; ಮಿಕ್ಕ ಮೊತ್ತವನ್ನು ಸಾಲದ ಮೂಲಕ ಹೊಂದಾಣಿಕೆ ಮಾಡಿಕೊಳ್ಳಲಾಗುವುದು’ ಎಂದು ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ. 2020–21ರ ಹಣಕಾಸು ವರ್ಷದಲ್ಲಿ ಕೇಂದ್ರದಿಂದ ಎಷ್ಟು ಅನುದಾನವನ್ನು ಒದಗಿಸಲಾಗುತ್ತದೆ ಎಂಬುದು ಖಚಿತವಾಗಿಲ್ಲ. ಸಾಲ ಸೌಲಭ್ಯವನ್ನು ಯಾವ ರೀತಿ ಪಡೆಯಲಾಗುತ್ತದೆ ಎನ್ನುವುದರ ಸ್ಪಷ್ಟತೆಯೂ ಇಲ್ಲ.

‘ಉಪನಗರ ರೈಲಿನ ಎಲ್ಲಾ ಬೋಗಿಗಳು ಮೆಟ್ರೊದಂತೆ ಹವಾನಿಯಂತ್ರಿತ ಸೌಲಭ್ಯ ಹೊಂದಿರಲಿದ್ದು, ಪ್ರತಿದಿನ ಬೆಳಿಗ್ಗೆ 5 ಗಂಟೆಯಿಂದ ಮಧ್ಯರಾತ್ರಿವರೆಗೆ ರೈಲುಗಳು ಸಂಚರಿಸಲಿವೆ. ಮುಂದಿನ ಮೂರು ವರ್ಷಗಳಲ್ಲಿ ಯೋಜನೆ ಪೂರ್ಣಗೊಳ್ಳಲಿದೆ’ ಎಂದು ಮುಖ್ಯಮಂತ್ರಿ ಕನಸು ತೇಲಿಬಿಟ್ಟಿದ್ದಾರೆ.

ಆದರೆ, ಕೆ–ರೈಡ್‌ ಸಿದ್ಧಪಡಿಸಿರುವ ವರದಿ ಪ್ರಕಾರ, ಕಾಮಗಾರಿ ಪೂರ್ಣಗೊಳ್ಳಲು ಆರು ವರ್ಷಗಳೇ ಬೇಕು. ಅದೂ ಹಣಕಾಸಿನ ವ್ಯವಸ್ಥೆ ಲಭ್ಯವಿದ್ದು, ಸಮರ್ಪಕವಾಗಿ ಕೆಲಸಗಳು ನಡೆದರಷ್ಟೇ ಈ ಕಾಲಮಿತಿ ಅನ್ವಯವಾಗುತ್ತದೆ. ಸಾಲ ಮಂಜೂರು ವಿಳಂಬವಾದಷ್ಟೂ ಅನುಷ್ಠಾನ ವಿಳಂಬವಾಗುತ್ತಲೇ ಹೋಗುತ್ತದೆ. ಈಗಾಗಲೇ ಆಗಿರುವ ಎರಡು ವರ್ಷಗಳ ವಿಳಂಬದಿಂದ ಯೋಜನಾ ಗಾತ್ರ ₹ 1,600 ಕೋಟಿಯಷ್ಟು ಹೆಚ್ಚಳವಾಗಿದೆ.

ಆಡಳಿತಾತ್ಮಕ ಅನುಮೋದನೆ ಹಾಗೂ ಸಾಲ ಮಂಜೂರಾತಿಯಲ್ಲಿ ಆಗುವ ವಿಳಂಬವನ್ನು ತಪ್ಪಿಸಲು ಕರ್ನಾಟಕದವರೇ ಆದ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಸಾಧ್ಯವಾದ ಎಲ್ಲ ಪ್ರಯತ್ನವನ್ನೂ ಮಾಡಬೇಕು. ಈ ಯೋಜನೆ ಎಷ್ಟೊಂದು ಮಹತ್ವದ್ದು ಎನ್ನುವುದರ ಅರಿವಾಗಬೇಕಾದರೆ, ಮುಂಬೈ ಮಹಾನಗರದ ಕಡೆ ಒಮ್ಮೆ ನೋಡಬೇಕು. ಅಲ್ಲಿನ ಉಪನಗರ ರೈಲು ಸಾರಿಗೆ ಪ್ರತಿದಿನ 75 ಲಕ್ಷದಷ್ಟು ಜನರ ಹೊರೆ, ರಸ್ತೆಯ ಮೇಲೆ ಬೀಳದಂತೆ ತಡೆಯುತ್ತಿದೆ. ಈ ಯೋಜನೆ ಬೆಂಗಳೂರಿನಲ್ಲೂ ಸಮರ್ಪಕವಾಗಿ ಅನುಷ್ಠಾನಗೊಂಡರೆ ಪ್ರತಿದಿನ ಸುಮಾರು 25 ಲಕ್ಷ ಮಂದಿ ರೈಲು ಬಳಸಲಿದ್ದಾರೆ ಎನ್ನುವುದು ‘ಚುಕುಬುಕು ಬೇಕು’ ಆಂದೋಲನದಲ್ಲಿ ಪಾಲ್ಗೊಂಡ ಹೋರಾಟಗಾರರು ನೀಡುವ ಮಾಹಿತಿ.

ಹೊರವರ್ತುಲ ರಸ್ತೆಗಳಲ್ಲಿರುವ ಕಚೇರಿಗಳು, ನಗರದ ಹೊರವಲಯದಲ್ಲಿರುವ ಬಡಾವಣೆಗಳ ಸಮೀಕ್ಷೆಯಿಂದ ಈ ಲೆಕ್ಕಾಚಾರ ಹಾಕಲಾಗಿದೆ. ವಾಹನಗಳ ಮೇಲಿನ ಅವಲಂಬನೆಯಿಂದಇಷ್ಟೊಂದು ದೊಡ್ಡ ಸಂಖ್ಯೆಯ ಪ್ರಯಾಣಿಕರನ್ನು ತಪ್ಪಿಸಿದರೆ ದಟ್ಟಣೆ ಮತ್ತು ಮಾಲಿನ್ಯದ ಪ್ರಮಾಣ ಬಹುಪಾಲು ತಗ್ಗುವುದರಲ್ಲಿ ಸಂಶಯವಿಲ್ಲ. ದಟ್ಟಣೆ ತಗ್ಗುವುದರಿಂದ ರಸ್ತೆಗಳಲ್ಲಿ ಮಾನವ ಸಂಪನ್ಮೂಲದ ಅಪವ್ಯಯವೂ ನಿಲ್ಲುತ್ತದೆ. ಅಲ್ಲದೆ, ಜಗತ್ತಿನ ಅತ್ಯಂತ ನಿಧಾನಗತಿಯ ನಗರ ಎಂಬ ಹಣೆಪಟ್ಟಿಯನ್ನು ಬೆಂಗಳೂರು ಕಳಚಿಕೊಳ್ಳಲು ಸಾಧ್ಯವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT