ಮಂಗಳವಾರ, ನವೆಂಬರ್ 30, 2021
21 °C

ದೇವಸ್ಥಾನಗಳು ಶ್ರದ್ಧಾ ಕೇಂದ್ರಗಳು ದುರ್ಬಳಕೆಗೆ ಅವಕಾಶ ಬೇಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಿಂದೂ ದೇವಸ್ಥಾನಗಳ ನಿರ್ವಹಣೆಯ ಹಕ್ಕು ಹಿಂದೂಗಳ ಕೈಗೆ ಮರಳಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಸರಸಂಘಚಾಲಕ ಮೋಹನ್ ಭಾಗವತ್ ಅವರು ಈಚೆಗೆ ಹೇಳಿದ್ದಾರೆ. ಅಲ್ಲದೆ, ಹಿಂದೂ ದೇವಸ್ಥಾನಗಳಲ್ಲಿನ ಸಂಪತ್ತನ್ನು ಹಿಂದೂಗಳ ಕಲ್ಯಾಣಕ್ಕಾಗಿ ಮಾತ್ರ ಬಳಸಿಕೊಳ್ಳಬೇಕು ಎಂದೂ ಅವರು ಆಗ್ರಹಿಸಿದ್ದಾರೆ. ಇದು ತಪ್ಪುಗ್ರಹಿಕೆಯಿಂದ ಕೂಡಿರುವ ಆಗ್ರಹ. ಇದರ ಹಿಂದೆ ಇರುವುದು ರಾಜಕೀಯ ಹಿಡಿತ ಸಾಧಿಸುವ ಉದ್ದೇಶವೇ ವಿನಾ ದೇವಸ್ಥಾನಗಳಿಗೆ ಒಳ್ಳೆಯ ಆಡಳಿತ ನೀಡಬೇಕು ಎಂಬುದಲ್ಲ. ಆರ್‌ಎಸ್‌ಎಸ್‌ ತನ್ನನ್ನು ಸಾಂಸ್ಕೃತಿಕ ಸಂಘಟನೆ ಎಂದು ಕರೆದುಕೊಳ್ಳುತ್ತದೆಯಾದರೂ ಅದರ ಮೂಲದಲ್ಲಿ ಇರುವುದು ಧರ್ಮ. ರಾಜಕೀಯ ವಲಯದಲ್ಲಿಯೂ ಸಂಘದ ಕಾರ್ಯಚಟುವಟಿಕೆಗಳು ಇವೆ. ದೇವಸ್ಥಾನಗಳನ್ನು ಹಿಂದೂಗಳೇ ನಿರ್ವಹಣೆ ಮಾಡುವಂತೆ ಆಗಬೇಕು ಎಂಬ ಬೇಡಿಕೆಯ ಹಿಂದೆ ಒಂದು ಲೆಕ್ಕಾಚಾರ ಇದೆ. ದೇವಸ್ಥಾನಗಳ ನಿರ್ವಹಣೆಯು ಕೈಗೆ ಸಿಕ್ಕರೆ, ತನಗೆ ಮತ್ತು ತನ್ನ ಪರಿವಾರದ ಸಂಘಟನೆಗಳಿಗೆ ಭಕ್ತರ ಮೇಲೆ ಪ್ರಭಾವ ಬೀರಲು ಸಾಧ್ಯವಾಗುತ್ತದೆ ಎಂಬುದು ಆ ಲೆಕ್ಕಾಚಾರ. ದೇಶದಲ್ಲಿ ಅಸಂಖ್ಯ ದೇವಸ್ಥಾನಗಳು ಇವೆ. ಕೆಲವು ಸಣ್ಣವು, ಇನ್ನು ಕೆಲವು ಬೃಹತ್ ಆಗಿರುವಂಥವು. ಹಿಂದೂಗಳನ್ನು ತಾವು ಪ್ರತಿನಿಧಿಸುತ್ತೇವೆ ಎಂದು ಹೇಳಿಕೊಳ್ಳುವ ಸಂಘಟನೆಗಳಿಗೆ, ಆ ದೇವಸ್ಥಾನಗಳು ತಮ್ಮ ಚಟುವಟಿಕೆಗಳಿಗೆ ಕೇಂದ್ರಗಳಂತೆ ಒದಗಿಬರಬಹುದು ಎನ್ನುವ ಲೆಕ್ಕಾಚಾರವೂ ಇದ್ದಿರಬಹುದು. ಇದು ಜನರ ಭಕ್ತಿ ಹಾಗೂ ಧಾರ್ಮಿಕ ಭಾವನೆಗಳ ದುರ್ಬಳಕೆಗೆ ಸಮವಾಗುತ್ತದೆ. ಹಿಂದೂಗಳು ಯಾವುದೇ ಸಂಘಟನೆಗೆ ತಮ್ಮನ್ನು ಪ್ರತಿನಿಧಿಸುವ ಅಧಿಕಾರವನ್ನು ನೀಡಿಲ್ಲ.

ದಕ್ಷಿಣ ಭಾರತದಲ್ಲಿನ ದೇವಸ್ಥಾನಗಳನ್ನು ರಾಜ್ಯ ಸರ್ಕಾರಗಳೇ ನಿಯಂತ್ರಿಸುತ್ತಿವೆ ಎಂದು ಭಾಗವತ್ ಅವರು ಹೇಳಿರುವುದು ಗಮನಾರ್ಹ. ದಕ್ಷಿಣ ಭಾರತದಲ್ಲಿ (ಕರ್ನಾಟಕವನ್ನು ಹೊರತುಪಡಿಸಿದರೆ), ದೊಡ್ಡ ಮಟ್ಟದಲ್ಲಿ ಪ್ರಾಬಲ್ಯ ಹೊಂದಲು ಸಂಘ ಪರಿವಾರಕ್ಕೆ ಸಾಧ್ಯವಾಗಿಲ್ಲ. ತಮಿಳುನಾಡಿ
ನಲ್ಲಿ ಈ ವರ್ಷ ನಡೆದ ವಿಧಾನಸಭಾ ಚುನಾವಣೆಗೂ ಮೊದಲು, ದೇವಸ್ಥಾನಗಳನ್ನು ಸರ್ಕಾರದ ಹಿಡಿತದಿಂದ ಮುಕ್ತಗೊಳಿಸಬೇಕು ಎಂಬ ಅಭಿಯಾನ ಶುರುವಾಗಿದ್ದು ಕೇವಲ ಕಾಕತಾಳೀಯ ಆಗಿರಲಾರದು. ದೇವಸ್ಥಾನಗಳ ಆಡಳಿತವನ್ನು ನೋಡಿಕೊಳ್ಳುವ ಹೊಣೆಯಿಂದ ಸರ್ಕಾರಗಳು ಹಿಂದೆ ಸರಿಯಬೇಕು, ನಿರ್ವಹಣೆಯನ್ನು ‘ಭಕ್ತ’ರಿಗೆ ಹಸ್ತಾಂತರ ಮಾಡಬೇಕು ಎಂದು ಆಗ್ರಹಿಸಲು ಈಗ ಯಾವುದೇ ನಿರ್ದಿಷ್ಟ ಕಾರಣಗಳು ಇಲ್ಲ. ಹಲವು ದೇವಸ್ಥಾನಗಳನ್ನು ಹಿಂದಿನಿಂದಲೂ ಪ್ರಭುತ್ವಗಳೇ ನಿರ್ವಹಿಸಿಕೊಂಡು ಬಂದಿದ್ದಿದೆ– ತೀರಾ ಹಿಂದಿನ ಕಾಲದಲ್ಲಿ ದೇವಸ್ಥಾನಗಳನ್ನು ರಾಜರು ನೋಡಿಕೊಳ್ಳುತ್ತಿದ್ದರು, ನಂತರ ಬ್ರಿಟಿಷ್ ಸರ್ಕಾರ ಆ ಕೆಲಸ ಮಾಡಿತು, ಈಗ ಚುನಾಯಿತ ರಾಜ್ಯ ಸರ್ಕಾರಗಳು ತಮ್ಮ ಪ್ರತಿನಿಧಿಗಳ ಮೂಲಕ ಅದನ್ನು ಮಾಡಿಕೊಂಡು ಬರುತ್ತಿವೆ. ದೇವಸ್ಥಾನಗಳ ಮಾಲೀಕರು ತಾವು ಎಂದು ಹೇಳಿಕೊಂಡ ವ್ಯಕ್ತಿಗಳು, ಕುಟುಂಬಗಳು ಅಥವಾ ಖಾಸಗಿ ಸಂಸ್ಥೆಗಳು ತಮ್ಮ ಕೆಲಸವನ್ನು ಸರಿಯಾಗಿ ಮಾಡದೆ ಇದ್ದಾಗ, ಆ ದೇವಸ್ಥಾನಗಳನ್ನು ಸರ್ಕಾರಗಳು ತಮ್ಮ ಸುಪರ್ದಿಗೆ ತೆಗೆದುಕೊಂಡಿವೆ. ಕೆಲವು ಸಂದರ್ಭಗಳಲ್ಲಿ, ದೇವಸ್ಥಾನಗಳ ಆವರಣದಲ್ಲಿನ ಜಾತಿ ಆಧಾರಿತ ನಿರ್ಬಂಧಗಳನ್ನು ನಿವಾರಿಸುವ ಉದ್ದೇಶದಿಂದ ಸರ್ಕಾರಗಳು ಇಂತಹ ಕ್ರಮಕ್ಕೆ ಮುಂದಾಗಿದ್ದು ಇದೆ. ಶಾಸನಸಭೆಗಳು ಅನುಮೋದನೆ ನೀಡಿದ ಕಾನೂನುಗಳ ಅಡಿಯಲ್ಲಿ ಸರ್ಕಾರಗಳು ದೇವಸ್ಥಾನಗಳ ಆಡಳಿತ ನಿರ್ವಹಣೆ ಮಾಡುತ್ತಿವೆ. ಇದನ್ನು ನ್ಯಾಯಾಲಯಗಳು ಮಾನ್ಯ ಮಾಡಿವೆ.

ದೇವಸ್ಥಾನಗಳನ್ನು ಹಸ್ತಾಂತರ ಮಾಡಬೇಕಿರುವುದು ಯಾವ ‘ಭಕ್ತ’ರಿಗೆ ಎಂಬುದು ಸ್ಪಷ್ಟವಿಲ್ಲ. ಅವರನ್ನು ಹೇಗೆ ಗುರುತಿಸಲಾಗುತ್ತದೆ? ದೇವಸ್ಥಾನವನ್ನು ಒಂದು ಟ್ರಸ್ಟ್‌ ಮೂಲಕ ನಿರ್ವಹಣೆ ಮಾಡಲಾಗುತ್ತದೆ ಎಂದಾದರೆ, ಆ ಟ್ರಸ್ಟ್‌ನ ಸದಸ್ಯರ ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ? ಆ ಟ್ರಸ್ಟ್‌ ಎಲ್ಲರನ್ನೂ ಒಳಗೊಳ್ಳುವಂತೆ ಇರುತ್ತದೆಯೇ? ಈ ವಿಚಾರಗಳು ಸ್ಪಷ್ಟವಾಗಬೇಕಿದೆ. ಸರ್ಕಾರಗಳು ದೇವಸ್ಥಾನಗಳ ನಿರ್ವಹಣೆಯ ಜವಾಬ್ದಾರಿಯಿಂದ ಹಿಂದೆ ಸರಿದರೆ, ದೇವಸ್ಥಾನ ಇರುವ ಪ್ರದೇಶದ ಪ್ರಭಾವಿಗಳು ಅಥವಾ ಬಲಾಢ್ಯರು ಅವುಗಳನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಬಹುದು. ದೇವಸ್ಥಾನಗಳ ಪೈಕಿ ಹಲವು ಶ್ರೀಮಂತವಾಗಿಯೂ ಇವೆ. ಖಾಸಗಿ ಹಿತಾಸಕ್ತಿ ರಕ್ಷಿಸಿಕೊಳ್ಳಲು ಪ್ರಭಾವಿಗಳು ಇಂತಹ ದೇವಸ್ಥಾನಗಳನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡರೆ, ದೇವಸ್ಥಾನ ನಡೆಸುವುದನ್ನೇ ವ್ಯವಹಾರ ಮಾಡಿಕೊಳ್ಳಬಹುದು. ದೇವಸ್ಥಾನಗಳಲ್ಲಿ ಕೆಲವು ಪ್ರತಿಗಾಮಿ ಆಚರಣೆಗಳು ಮತ್ತೆ ಶುರುವಾಗುವ ಅಪಾಯವೂ ಇರುತ್ತದೆ. ಕರ್ನಾಟಕದ ಕೆಲವು ದೇವಸ್ಥಾನಗಳಲ್ಲಿ ಕೂಡ ತೀರಾ ಅಮಾನವೀಯ ಆಚರಣೆಗಳು ಇದ್ದವು. ಸರ್ಕಾರ ಮತ್ತು ನ್ಯಾಯಾಲಯದ ಮಧ್ಯಪ್ರವೇಶದ ಪರಿಣಾಮವಾಗಿ ಅಂತಹ ಆಚರಣೆಗಳಲ್ಲಿ ಸುಧಾರಣೆಗಳನ್ನು ತರಲು ಸಾಧ್ಯವಾಗಿದೆ. ದೇವಸ್ಥಾನಗಳ ನಿರ್ವಹಣೆಯಿಂದ ಸರ್ಕಾರಗಳು ಪೂರ್ತಿಯಾಗಿ ವಿಮುಖವಾದರೆ, ಅಮಾನವೀಯ ಆಚರಣೆಗಳನ್ನು ತಡೆಯುವುದು ಕಷ್ಟವಾಗಬಹುದು. ಭಾಗವತ್ ಅವರ ಆಗ್ರಹದ ಬಗ್ಗೆ ಆಲೋಚನೆ ಮಾಡುವಾಗ, ಇಂತಹ ಅಂಶಗಳನ್ನೂ ಮನಸ್ಸಿನಲ್ಲಿ ಇರಿಸಿಕೊಳ್ಳಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು