ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಮಾಸ್ಕೊ ಮೇಲೆ ದಾಳಿ; ಪುಟಿನ್‌ಗೆ ಎಚ್ಚರಿಕೆಯ ಗಂಟೆ

Published 27 ಮಾರ್ಚ್ 2024, 20:58 IST
Last Updated 27 ಮಾರ್ಚ್ 2024, 20:58 IST
ಅಕ್ಷರ ಗಾತ್ರ

ಮಾಸ್ಕೊದಲ್ಲಿ ಕಳೆದ ವಾರ ನಡೆದ ಭಯೋತ್ಪಾದಕ ದಾಳಿಯ ಹೊಣೆಯನ್ನು ಇಸ್ಲಾಮಿಕ್‌ ಸ್ಟೇಟ್–ಖೊರಾಸಾನ್ (ಐಎಸ್‌–ಕೆ) ಹೊತ್ತುಕೊಂಡಿದೆ. ಇದು ರಷ್ಯಾ ಪಾಲಿನ ದುಃಸ್ವಪ್ನವೊಂದು ವಾಸ್ತವದಲ್ಲಿ ಘಟಿಸಿದಂತೆ ಇದೆ. 1990ರ ದಶಕದ ಕೊನೆಯ ಭಾಗದಿಂದ ಹೊಸ ಶತಮಾನದ ಮೊದಲ ದಶಕದವರೆಗೆ ಚೆಚೆನ್ ಪ್ರತ್ಯೇಕತಾವಾದವು ರಷ್ಯಾದಲ್ಲಿ ಹಲವು ಭಯೋತ್ಪಾದಕ ದಾಳಿಗಳಿಗೆ ಮೂಲವಾಯಿತು. ಇದಾದ ನಂತರದಲ್ಲಿ ಸರಿಸುಮಾರು ಒಂದು ದಶಕದಿಂದಲೂ ರಷ್ಯಾ ಮೇಲೆ ಇಸ್ಲಾಮಿಕ್ ಸ್ಟೇಟ್‌ ದಾಳಿಯ ಅಪಾಯ ಇದ್ದೇ ಇತ್ತು. 2015ರಲ್ಲಿ ಶರ್ಮ್‌ ಎಲ್ ಶೇಖ್ ವಿಮಾನ ನಿಲ್ದಾಣದಿಂದ ಮಾಸ್ಕೊಗೆ ತೆರಳುತ್ತಿದ್ದ ವಿಮಾನವೊಂದನ್ನು ಆಗಸದಲ್ಲೇ ಸ್ಫೋಟಿಸಿದ ಪ್ರಕರಣದ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್‌ ಆಫ್ ಇರಾಕ್ ಆ್ಯಂಡ್ ಲವಂತ್ (ಐಎಸ್‌ಐಎಲ್‌) ಹೊತ್ತುಕೊಂಡಿತ್ತು. ಈ ವಿಮಾನದಲ್ಲಿ ಇದ್ದ 217 ಮಂದಿ ಪ್ರಯಾಣಿಕರು ಹಾಗೂ ಏಳು ಮಂದಿ ಸಿಬ್ಬಂದಿ ಮೃತಪಟ್ಟಿದ್ದರು. ಸಿರಿಯಾದಲ್ಲಿ ಬಶರ್ ಅಲ್ ಅಸದ್ ಆಡಳಿತಕ್ಕೆ ಮಿಲಿಟರಿ ನೆರವನ್ನು ರಷ್ಯಾ ಒದಗಿಸಿದಾಗಿನಿಂದಲೂ ರಷ್ಯಾ ಮೇಲೆ ದಾಳಿ ನಡೆಸಲು ಐಎಸ್‌ ಹೊಂಚು ಹಾಕಿತ್ತು. ಏಕೆಂದರೆ, ಐಎಸ್‌ಐಎಲ್‌ ಹಿಡಿತದಲ್ಲಿದ್ದ ಪ್ರದೇಶಗಳನ್ನು ಸ್ವಾಧೀನಕ್ಕೆ ತೆಗೆದುಕೊಳ್ಳಲು ಅಲ್ ಅಸದ್ ಆಡಳಿತಕ್ಕೆ ಈ ಮಿಲಿಟರಿ ನೆರವು ಸಹಾಯಕ್ಕೆ ಬಂದಿತ್ತು. ಮುಂದೆ ಈ ಪ್ರದೇಶದಲ್ಲಿ ಐಎಸ್‌ಐಎಲ್‌ ಪ್ರಾಬಲ್ಯ ಕಳೆದುಕೊಂಡಿತು. ಇಸ್ಲಾಮಿಕ್‌ ಸ್ಟೇಟ್ ಸಂಘಟನೆಗೆ ಅಫ್ಗಾನಿಸ್ತಾನದಲ್ಲಿ ಹೊಸ ನೆಲೆ ದೊರೆತ ನಂತರದಲ್ಲಿ, ತಾಲಿಬಾನ್‌ ನಾಯಕರ ನಡೆಯ ಬಗ್ಗೆ ಅಸಮಾಧಾನ ಹೊಂದಿರುವವರನ್ನು, ಉಯ್ಘರ್‌, ಉಜ್ಬೇಕ್‌ ಸಮುದಾಯದವರನ್ನು ತನ್ನತ್ತ ಸೆಳೆದು ಅದು ಕಾರ್ಯಾಚರಣೆ ನಡೆಸುತ್ತಿದೆ. ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಮತ್ತೆ ಆರಂಭವಾದ ನಂತರದಲ್ಲಿ ಐಎಸ್‌–ಕೆ ಸಂಘಟನೆಯಲ್ಲಿ ಮಧ್ಯ ಏಷ್ಯಾದವರ ಸಂಖ್ಯೆ ಹೆಚ್ಚಾಗಿದೆ. 2021ರ ನಂತರದಲ್ಲಿ ರಷ್ಯಾ ಹಾಗೂ ಮಧ್ಯ ಏಷ್ಯಾದ ಕೆಲವು ದೇಶಗಳು ಅಫ್ಗಾನಿಸ್ತಾನದ ಜೊತೆ ಮಾತುಕತೆ ಆರಂಭಿಸಿದ್ದರ ಹಿಂದೆ ಇದ್ದಿದ್ದು ಐಎಸ್‌ ಮಾದರಿಯ ಭಯೋತ್ಪಾದನಾ ಚಟುವಟಿಕೆಗಳು ಹೆಚ್ಚಾಗದಂತೆ ನೋಡಿಕೊಳ್ಳುವ ಆಶಯವೂ ಒಂದು.

ಮಾಸ್ಕೊ ಮೇಲೆ ನಡೆದ ದಾಳಿಯು ಐಎಸ್‌–ಕೆ ಸಂಘಟನೆಯು ರಷ್ಯಾ ಮೇಲೆ ನಡೆಸಿದ ಮೊದಲ ದೊಡ್ಡ ದಾಳಿ. ಅಲ್ಲದೆ, ರಷ್ಯಾ ದೇಶವು ಎರಡು ದಶಕಗಳಲ್ಲಿ ಕಂಡ ಅತ್ಯಂತ ಕೆಟ್ಟ ದಾಳಿ ಕೂಡ ಹೌದು. ಈ ದಾಳಿಯು ರಷ್ಯಾದ ಆತಂಕಗಳಿಗೆ ಕಾರಣಗಳು ಇದ್ದವು ಎಂಬುದನ್ನು ತೋರಿಸಿಕೊಟ್ಟಿದೆ. ಅಫ್ಗಾನಿಸ್ತಾನದ ಆಚೆಗೂ ಐಎಸ್‌–ಕೆ ಸಂಘಟನೆಯು ಕಾರ್ಯಾಚರಣೆ ವಿಸ್ತರಿಸಿದೆ ಎಂಬುದನ್ನು ಕೂಡ ಇದು ಜಾಹೀರುಗೊಳಿಸಿದೆ. ಐಎಸ್‌–ಕೆ ಒಡ್ಡಿದ ಸವಾಲವನ್ನು ನಿವಾರಿಸಲಾಗಿದೆ ಎಂದು ತಾಲಿಬಾನ್ ಹೇಳಿಕೊಂಡಿದೆಯಾದರೂ, ಅಫ್ಗಾನಿಸ್ತಾನದಲ್ಲಿ 2023ರಲ್ಲಿ ನಡೆದ ದಾಳಿಗಳ ಸಂಖ್ಯೆಯು 2022ರಲ್ಲಿ ನಡೆದ ದಾಳಿಗಳಿಗಿಂತ ಕಡಿಮೆಯಾಗಿದ್ದರೂ, ಇರಾನ್‌ನ ಕೆರ್ಮಾನ್‌ನಲ್ಲಿ ನಡೆದ ಅವಳಿ ಬಾಂಬ್ ಸ್ಫೋಟದ ಹೊಣೆಯನ್ನು ಐಎಸ್‌–ಕೆ ಹೊತ್ತುಕೊಂಡಿದೆ. ಈ ದಾಳಿಯಲ್ಲಿ 100ಕ್ಕೂ ಹೆಚ್ಚು ಮಂದಿ ಮೃತಪಟ್ಟರು. 

ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಉಕ್ರೇನ್‌ ಯುದ್ಧದ ಸವಾಲನ್ನು ಈಗಾಗಲೇ ಎದುರಿಸುತ್ತಿದ್ದಾರೆ. ಆ ಸವಾಲಿನ ಜೊತೆಗೆ ಈಗ ಮಾಸ್ಕೊ ಮೇಲಿನ ದಾಳಿಯು ಹೊಸದೊಂದು ಸವಾಲನ್ನು ಸೃಷ್ಟಿಸಿದೆ. ರಷ್ಯಾದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಪ್ರದೇಶದಲ್ಲಿ ಭಯೋತ್ಪಾದಕ, ತೀವ್ರಗಾಮಿ ಗುಂಪುಗಳ ಕಡೆಯಿಂದ ದಾಳಿ ನಡೆಯಬಹುದು ಎಂಬ ಎಚ್ಚರಿಕೆಯನ್ನು ಅಮೆರಿಕ ನೀಡಿತ್ತು. ಆದರೆ ಈ ಎಚ್ಚರಿಕೆಗೆ ರಷ್ಯಾ ಕಿವಿಗೊಡಲಿಲ್ಲ. ಪುಟಿನ್ ಅವರು ದೇಶದ ಭದ್ರತೆಗೆ ಸಂಬಂಧಿಸಿದ ವಿಚಾರಗಳಲ್ಲಿ ಅನಕ್ಷರಸ್ಥರೇನೂ ಅಲ್ಲ. ಮಾಸ್ಕೊ ಮೇಲೆ ಐಎಸ್‌ ನಡೆಸಲು ಉದ್ದೇಶಿಸಿದ್ದ ದಾಳಿಯನ್ನು ತಡೆಯಲಾಗಿದೆ ಎಂದು ರಷ್ಯಾದ ಗುಪ್ತಚರ ಸಂಸ್ಥೆಗಳು ಕೆಲವೇ ದಿನಗಳ ಹಿಂದೆ ಹೇಳಿದ್ದವು. ಈಗ ಆಗಿರುವ ದುರಂತವನ್ನು ಪುಟಿನ್ ಅವರು ಬಳಸಿಕೊಂಡು, ದೇಶದ ಮೇಲಿನ ತಮ್ಮ ಹಿಡಿತವನ್ನು ಇನ್ನಷ್ಟು ಬಿಗಿಗೊಳಿಸಲು ಹಾಗೂ ಅಳಿದುಳಿದ ಭಿನ್ನ ದನಿಗಳನ್ನು ಹತ್ತಿಕ್ಕಲು ಮುಂದಾಗಬಹುದು. ದಾಳಿಗೆ ಅಮೆರಿಕ ಮತ್ತು ಉಕ್ರೇನ್ ದೇಶಗಳನ್ನು ಪುಟಿನ್ ಅವರು ದೂಷಿಸಬಹುದು. ಆದರೆ ರಷ್ಯಾದಲ್ಲಿ ತಾವು ಕಟ್ಟಿರುವ ವ್ಯವಸ್ಥೆಗೆ ಐಎಸ್‌–ಕೆ ಒಂದು ಸವಾಲು ಎಂಬುದನ್ನು ಅವರು ಅರ್ಥಮಾಡಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT