ಶನಿವಾರ, ಅಕ್ಟೋಬರ್ 16, 2021
29 °C

ಸಂಪಾದಕೀಯ| ಶಿಥಿಲ ಕಟ್ಟಡ ತೆರವಿಗೆ ವಿಳಂಬ ಧೋರಣೆ ಸಲ್ಲದು

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು ನಗರದ ಲಕ್ಕಸಂದ್ರದಲ್ಲಿ ಶಿಥಿಲಗೊಂಡಿದ್ದ ಬಹುಮಹಡಿ‌ ಕಟ್ಟಡವೊಂದು ಸೆ. 27ರಂದು ಕುಸಿಯಿತು. ಅದರ ಮರುದಿನವೇ ಬೆಂಗಳೂರು ಹಾಲು ಒಕ್ಕೂಟದ (ಬಮೂಲ್) ಆವರಣದಲ್ಲಿದ್ದ ಎರಡು ಅಂತಸ್ತುಗಳ ಕಟ್ಟಡ ಭಾಗಶಃ ಕುಸಿಯಿತು. ಈ ಕಟ್ಟಡಗಳಲ್ಲಿ ವಾಸವಿದ್ದವರನ್ನು ಕೊನೆಯ ಕ್ಷಣದಲ್ಲಿ ತೆರವುಗೊಳಿಸಿದ್ದರಿಂದ ದುರಂತ ಸಂಭವಿಸುವುದು ತಪ್ಪಿದೆ. ಈ ಘಟನೆಗಳಿಂದ ಎಚ್ಚೆತ್ತ ಬಿಬಿಎಂಪಿಯು ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ಸಮಗ್ರ ಸಮೀಕ್ಷೆ ನಡೆಸಲು ಮುಂದಾಗಿದೆ. ಸಮೀಕ್ಷೆಯನ್ನು 15 ದಿನಗಳಲ್ಲಿ ಪೂರ್ಣಗೊಳಿಸುವಂತೆ ಗಡುವನ್ನೂ ನಿಗದಿಪಡಿಸಿದೆ. ಬೆಂಗಳೂರಿನಲ್ಲಿ ಇಂತಹ ಅವಘಡಗಳು ಇದೇ ಮೊದಲಲ್ಲ. ಶಿಥಿಲಗೊಂಡ ಕಟ್ಟಡಗಳು ಕುಸಿದ ಅನೇಕ ಪ್ರಕರಣಗಳು ಈ ಹಿಂದೆಯೂ ನಡೆದಿ ದ್ದವು. 2019ರಲ್ಲಿ ಪುಟ್ಟೇನಹಳ್ಳಿಯಲ್ಲಿ ಶಿಥಿಲಗೊಂಡ ಕಟ್ಟಡವೊಂದು ಕುಸಿದಾಗ ಬಿಬಿಎಂಪಿ ಪ್ರತೀ ವಾರ್ಡ್‌ನಲ್ಲಿರುವ ವಾಸಯೋಗ್ಯವಲ್ಲದ ಕಟ್ಟಡಗಳ ಸಮೀಕ್ಷೆ ಕೈಗೊಂಡಿತ್ತು. ಇಂತಹ 185 ಕಟ್ಟಡ
ಗಳನ್ನು ಗುರುತಿಸಿದ್ದ ಬಿಬಿಎಂಪಿ, ಅವುಗಳನ್ನು ತೆರವುಗೊಳಿಸುವಂತೆ ಮಾಲೀಕರಿಗೆ ನೋಟಿಸ್‌ ಜಾರಿ ಮಾಡಿತ್ತು. ಆದರೆ, ಇವುಗಳಲ್ಲಿ ತೆರವಾಗಿದ್ದು 10 ಕಟ್ಟಡಗಳು ಮಾತ್ರ. ಇನ್ನುಳಿದವು ಎರಡು ವರ್ಷಗಳ ಬಳಿಕವೂ ಹಾಗೆಯೇ ಇವೆ. ಇತ್ತೀಚೆಗೆ ಕುಸಿದ ಎರಡೂ ಕಟ್ಟಡಗಳು 2019ರಲ್ಲಿ ತಯಾರಿಸಿದ್ದ ಶಿಥಿಲ ಕಟ್ಟಡಗಳ ಪಟ್ಟಿಯಲ್ಲಿ ಇರಲೇ ಇಲ್ಲ. 2019ರ ಸಮೀಕ್ಷೆ ಸಮರ್ಪಕವಾಗಿ ನಡೆದಿಲ್ಲ ಎಂಬ ತೀರ್ಮಾನಕ್ಕೆ ಬಂದಿರುವ ಬಿಬಿಎಂಪಿ, ಈಗ ಮತ್ತೆ ಶಿಥಿಲ ಕಟ್ಟಡಗಳ ಸಮೀಕ್ಷೆ ಆರಂಭಿಸಿದೆ. ದುರಂತಗಳು ಸಂಭವಿಸಿದಾಗ ಮಾತ್ರ ಬಿಬಿಎಂಪಿಗೆ ಶಿಥಿಲ ಕಟ್ಟಡಗಳ ನೆನಪಾಗುತ್ತದೆ. ಶಿಥಿಲಗೊಂಡ ಕಟ್ಟಡಗಳನ್ನು ಗುರುತಿಸಿದ ಎರಡು ವರ್ಷಗಳ ಬಳಿಕವೂ ಅವುಗಳನ್ನು ತೆರವುಗೊಳಿಸದಿರುವುದು ಜನರ ಜೀವಕ್ಕೆ ನಮ್ಮ ಆಡಳಿತ ವ್ಯವಸ್ಥೆ ಎಷ್ಟರಮಟ್ಟಿಗೆ ಮಹತ್ವ ನೀಡುತ್ತದೆ ಎಂಬುದನ್ನು ಬೊಟ್ಟುಮಾಡಿ ತೋರಿಸುತ್ತದೆ. ಶಿಥಿಲ ಕಟ್ಟಡಗಳನ್ನು ಗುರುತಿಸಲು ಈ ಹಿಂದೆ ಸಮೀಕ್ಷೆ ಕೈಗೊಂಡಾಗಲೂ ಪಾಲಿಕೆ ಅಧಿಕಾರಿಗಳು ಅದನ್ನು ಶ್ರದ್ಧೆಯಿಂದ ನಿರ್ವಹಿಸಿದಂತಿಲ್ಲ. ಬಿಬಿಎಂಪಿ ವ್ಯಾಪ್ತಿಯಲ್ಲಿ 20 ಲಕ್ಷಕ್ಕೂ ಅಧಿಕ ಕಟ್ಟಡಗಳಿವೆ. ಅವುಗಳಲ್ಲಿ ಶಿಥಿಲಗೊಂಡಿರುವ ಕಟ್ಟಡಗಳ ಸಂಖ್ಯೆ ಕೇವಲ 185 ಎಂದರೆ ನಂಬು ವುದು ಕಷ್ಟ. ಈಗ ಮರು ಸಮೀಕ್ಷೆ ನಡೆಸುವಾಗಲಾ
ದರೂ ವಾಸಯೋಗ್ಯವಲ್ಲದ ಕಟ್ಟಡಗಳನ್ನು ಗುರುತಿಸುವ ಕಾರ್ಯ ಸಮರ್ಪಕವಾಗಿ ನಡೆಯಬೇಕು. ವಾಸಯೋಗ್ಯವಲ್ಲದ ಕಟ್ಟಡಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳುವ ಇಚ್ಛಾಶಕ್ತಿ ಪ್ರದರ್ಶಿಸದೇ ಹೋದರೆ ಈ ಸಮೀಕ್ಷೆಯೂ ಮತ್ತೊಂದು ವ್ಯರ್ಥ ಕಸರತ್ತು ಆಗಲಿದೆ.

ಯಾವುದಾದರೂ ಕಟ್ಟಡ ವಾಸಯೋಗ್ಯವಲ್ಲ ಎಂಬುದು ಗಮನಕ್ಕೆ ಬಂದರೆ, 2020ರ ಬಿಬಿಎಂಪಿ ಕಾಯ್ದೆಯ ಸೆಕ್ಷನ್‌ 263ರ ಪ್ರಕಾರ ಮುಖ್ಯ ಆಯುಕ್ತರು ಈ ವಿಚಾರವನ್ನು ಸ್ಥಾಯಿ ಸಮಿತಿಯ ಗಮನಕ್ಕೆ ತರಬಹುದು. ಅಂತಹ ಕಟ್ಟಡವನ್ನು ವಾಸಕ್ಕೆ ಬಳಸದಂತೆ ಸ್ಥಾಯಿ ಸಮಿತಿಯು ನೋಟಿಸ್‌ ಜಾರಿಗೊಳಿಸಬಹುದು. ಆ ಕಟ್ಟಡದಲ್ಲಿರುವವರು ವಾಸ್ತವ್ಯ ಬದಲಿಸುವುದಕ್ಕೆ, ನೋಟಿಸ್‌ ಜಾರಿಯಾದ ಬಳಿಕ ಕನಿಷ್ಠ 30 ದಿನಗಳ ಕಾಲಾವಕಾಶ ನೀಡಬೇಕು. ಕಟ್ಟಡವನ್ನು ದುರಸ್ತಿಗೊಳಿಸಲು ಅವಕಾಶ ನೀಡಬಹುದು. ದುರಸ್ತಿ ಬಳಿಕವೂ ಕಟ್ಟಡ ವಾಸಯೋಗ್ಯವಲ್ಲ ಎಂದು ಕಂಡುಬಂದರೆ ಅಥವಾ ಅದರಿಂದ ಅಕ್ಕಪಕ್ಕದ ನಿವಾಸಿಗಳಿಗೂ ಅಪಾಯವಿದ್ದರೆ ಅದನ್ನು ನೆಲಸಮ ಮಾಡಲು ಮುಖ್ಯ ಆಯುಕ್ತರು ಸೂಚಿಸಬಹುದು. ಇಂತಹ ಕಟ್ಟಡಗಳನ್ನು 6 ತಿಂಗಳ ಒಳಗೆ ತೆರವುಗೊಳಿಸಲೇಬೇಕು. ಒಂದು ಕಟ್ಟಡ ಎಷ್ಟು ವರ್ಷ
ಗಳವರೆಗೆ ವಾಸಯೋಗ್ಯ ಎಂಬ ಬಗ್ಗೆ ಖಚಿತ ಲೆಕ್ಕಾಚಾರ ಬಿಬಿಎಂಪಿ ಬಳಿ ಇಲ್ಲ. ಕೊನೇಪಕ್ಷ, 50– 60 ವರ್ಷ ಹಳೆಯ ಕಟ್ಟಡಗಳ ದೃಢತೆಯನ್ನಾದರೂ ಕಾಲ ಕಾಲಕ್ಕೆ ಪರಿಶೀಲಿಸುವ ಪದ್ಧತಿಯೂ ಇಲ್ಲ. ಹಳೆ ಕಟ್ಟಡಗಳು ಮಾತ್ರ ಅಪಾಯಕಾರಿಯಲ್ಲ; ಹೊಸ ಕಟ್ಟಡಗಳನ್ನೂ ಅಸುರಕ್ಷಿತವಾಗಿ ನಿರ್ಮಿಸುವ ಪರಿಪಾಟ ನಗರದಲ್ಲಿ ಹೆಚ್ಚುತ್ತಿದೆ. ಕಟ್ಟಡ ನಕ್ಷೆಗೆ ವ್ಯತಿರಿಕ್ತವಾಗಿ ಹೊಸ ರಚನೆಗಳನ್ನು ಸೇರಿಸಲಾಗುತ್ತಿದೆ. ಇಂತಹ ಉಲ್ಲಂಘನೆಗಳು ಕಟ್ಟಡ ಕುಸಿಯುವ ಅಪಾಯವನ್ನು ಹೆಚ್ಚಿಸುತ್ತವೆ. ಇಂತಹ ಕಟ್ಟಡಗಳ ಅಕ್ಕಪಕ್ಕದ ನಿವಾಸಿಗಳಿಗೂ ಆತಂಕ ತಪ್ಪಿದ್ದಲ್ಲ. ಕಟ್ಟಡ ಯೋಜನೆಗೆ ಮಂಜೂರಾತಿ ನೀಡಿದ ಬಳಿಕ, ಅದರ ನಿರ್ಮಾಣ ಚಟುವಟಿಕೆ ಮೇಲೆ ಆಯಾ ವಾರ್ಡ್‌ನ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ನಿಗಾ ಇಡಬೇಕು. ಮಂಜೂರಾತಿ ಪಡೆದ ನಕ್ಷೆಗೆ ಅನುಗುಣವಾಗಿಯೇ ಕಟ್ಟಡ ನಿರ್ಮಿಸಲಾಗುತ್ತಿದೆ ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕು. ಉಲ್ಲಂಘನೆಗಳಾದರೆ ಕಟ್ಟಡ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು. ಆದರೆ, ಈ ನಿಯಮಗಳು ಭ್ರಷ್ಟಾಚಾರಕ್ಕೆ ದುರ್ಬಳಕೆಯಾಗುತ್ತಿವೆಯೇ ಹೊರತು ಕಟ್ಟಡಗಳ ಸುರಕ್ಷತೆಗಾಗಿ ಅಲ್ಲ ಎಂಬ ದೂರುಗಳಿವೆ. ನಿರ್ಮಾಣ ಕಾರ್ಯ ಪೂರ್ಣಗೊಂಡ ಬಳಿಕ ಸ್ವಾಧೀನಾನುಭವ ಪತ್ರ (ಒ.ಸಿ) ಪಡೆಯುವ ಕಟ್ಟಡ ಮಾಲೀಕರು, ಆ ಬಳಿಕ ಕಟ್ಟಡದಲ್ಲಿ ಅಸುರಕ್ಷಿತವಾಗಿ ಕೆಲವೊಂದು ಮಾರ್ಪಾಡು ಗಳನ್ನು ಮಾಡುವುದು ಸರ್ವೇಸಾಮಾನ್ಯ ಎಂಬಂತಾಗಿದೆ. ಇವುಗಳನ್ನು ತಡೆಯುವ ಪ್ರಯತ್ನಗಳೂ ನಡೆಯುತ್ತಿಲ್ಲ. ಅಪಾಯ ಸಂಭವಿಸಿದ ಬಳಿಕ ಎಚ್ಚೆತ್ತುಕೊಂಡಂತೆ ತೋರಿಸಿಕೊಂಡು ಆನಂತರ ಜಾಣ ಮರೆವು ಪ್ರದರ್ಶಿಸುವುದನ್ನು ಬಿಬಿಎಂಪಿ ಬಿಡಬೇಕು. ಶಿಥಿಲಗೊಂಡ ಅಪಾಯಕಾರಿ ಕಟ್ಟಡಗಳನ್ನು ತ್ವರಿತವಾಗಿ ತೆರವುಗೊಳಿಸಬೇಕು. ಕಟ್ಟಡಗಳ ದೃಢತೆಯನ್ನು ಕಾಲಕಾಲಕ್ಕೆ ಪರಿಶೀಲಿಸುವುದಕ್ಕೂ ಕ್ರಮ ಕೈಗೊಳ್ಳಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು