ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ನಿರ್ದಿಷ್ಟ ಸೇವೆಗಳಿಗೆ ಮಾತ್ರ ನಿರ್ಬಂಧ– ಆಶಯದ ಅನುಷ್ಠಾನಕ್ಕೆ ಬೇಕು ಬದ್ಧತೆ

ಗಲಭೆ ಪೀಡಿತ ಪ್ರದೇಶಗಳ ಬಗ್ಗೆ
Published 14 ಜುಲೈ 2023, 22:39 IST
Last Updated 14 ಜುಲೈ 2023, 22:39 IST
ಅಕ್ಷರ ಗಾತ್ರ

ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಎದುರಾದ ಸಂದರ್ಭಗಳಲ್ಲಿ, ಗಲಭೆಪೀಡಿತ ಪ್ರದೇಶಗಳಲ್ಲಿ ಇಂಟರ್ನೆಟ್ ಸೇವೆಯ ಸ್ಥಗಿತಕ್ಕೆ ಸರ್ಕಾರಗಳು ಆದೇಶಿಸುವುದು ಈಗ ಸಹಜವೆಂಬಂತೆ ಆಗಿದೆ. ಆದರೆ, ಇಂಟರ್ನೆಟ್ ಆಧಾರಿತ ಅರ್ಥ ವ್ಯವಸ್ಥೆ ಬೆಳೆದಿರುವಾಗ ಹಾಗೂ ಇಂಟರ್ನೆಟ್‌ ನೆಚ್ಚಿಕೊಂಡು ಉದ್ಯೋಗ ನಡೆಸುವವರ ಸಂಖ್ಯೆಯು ದೊಡ್ಡದಾಗಿರುವಾಗ ಗಲಭೆಗಳನ್ನು ನಿಯಂತ್ರಿಸಲು ಬದಲಿ ಮಾರ್ಗವನ್ನು ಕಂಡುಕೊಳ್ಳುವುದು ಸೂಕ್ತ ಎಂಬ ವಾದದಲ್ಲಿ ಹುರುಳಿದೆ. ದೇಶದ ಒಂದೆರಡು ಕಡೆ ಸತತ ಐನೂರಕ್ಕೂ ಹೆಚ್ಚು ದಿನಗಳವರೆಗೆ ಇಂಟರ್ನೆಟ್‌ ಸೇವೆಗಳನ್ನು ನಿಷೇಧಿಸಿದ ನಿದರ್ಶನ ಇದೆ. ಇಂಟರ್ನೆಟ್‌ ಸೇವೆಗಳನ್ನು ಅನಿರ್ದಿಷ್ಟ ಅವಧಿಗೆ ನಿಷೇಧಿಸುವುದು ಸರಿಯಲ್ಲ ಎಂದು ಸುಪ್ರೀಂ ಕೋರ್ಟ್‌ ಈಗಾಗಲೇ ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿ, ಪ್ರಕ್ಷುಬ್ಧ ಪರಿಸ್ಥಿತಿ ಸೃಷ್ಟಿಯಾಗಿರುವ ಪ್ರದೇಶಗಳಲ್ಲಿ ದುಷ್ಕೃತ್ಯಗಳಿಗೆ ಬಳಕೆಯಾಗುವ ನಿರ್ದಿಷ್ಟ ವೆಬ್‌ಸೈಟ್‌ಗಳನ್ನು ಹಾಗೂ ನಿರ್ದಿಷ್ಟ ಒಟಿಟಿ ಆ್ಯಪ್‌ಗಳನ್ನು ಮಾತ್ರವೇ ನಿರ್ಬಂಧಿಸುವುದು ಸೂಕ್ತವಾದ ಕ್ರಮವಲ್ಲವೇ ಎಂಬ ನೆಲೆಯಲ್ಲಿ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು (ಟ್ರಾಯ್) ಈಚೆಗೆ ಸಮಾಲೋಚನಾ ಪತ್ರವೊಂದನ್ನು ಹೊರಡಿಸಿದೆ.

ಗಲಭೆಗೆ ತುತ್ತಾದ ಪ್ರದೇಶಗಳಲ್ಲಿ ಇಂಟರ್ನೆಟ್‌ ಸೇವೆಯನ್ನು ನಿಷೇಧಿಸುವುದು ದೇಶದ ಅರ್ಥ ವ್ಯವಸ್ಥೆಯ ಮೇಲೆ ಗಣನೀಯವಾದ ಪರಿಣಾಮವನ್ನು ಉಂಟುಮಾಡುತ್ತದೆ ಎಂದು ಟ್ರಾಯ್‌ ಈ ಪತ್ರದಲ್ಲಿ ವಿವರಿಸಿದೆ. ಗಲಭೆಕೋರರು ಹಿಂಸಾಚಾರಕ್ಕೆ ಪ್ರಚೋದನೆ ನೀಡುವ ವಸ್ತು–ವಿಷಯಗಳನ್ನು ಪ್ರಸಾರ ಮಾಡುವುದನ್ನು ತಡೆಯುವ ಉದ್ದೇಶದಿಂದ ಇಂಟರ್ನೆಟ್‌ ಸೇವೆಗೆ ನಿಷೇಧ ಹೇರಿದಾಗ, ಶಿಕ್ಷಣ, ಆರೋಗ್ಯ ಸೇವೆಗಳು, ಬ್ಯಾಂಕಿಂಗ್‌ನಂತಹ ಅತಿ ಮಹತ್ವದ ಸೇವಾ ವಲಯಗಳೂ ಸಮರ್ಪಕವಾಗಿ ಕೆಲಸ ಮಾಡಲು ಆಗದ ಸ್ಥಿತಿ ನಿರ್ಮಾಣವಾಗಿಬಿಡುತ್ತದೆ. ‘ಪರಿಣಾಮವಾಗಿ, ಇಂತಹ ನಿಷೇಧ ಕ್ರಮಗಳು ದೇಶದ ಜನರ ಜೀವನ ಹಾಗೂ ಜೀವನೋಪಾಯಕ್ಕೆ ಪೆಟ್ಟು ಕೊಡುತ್ತವೆ’ ಎಂದು ಟ್ರಾಯ್‌ ಅಭಿಪ್ರಾಯಪಟ್ಟಿರುವುದು ಸರಿಯಾಗಿಯೇ ಇದೆ. ಇಂಟರ್ನೆಟ್‌ ಸೇವೆ ನಿಷೇಧದ ವಿಚಾರವಾಗಿ 2022ರ ಜನವರಿಯಲ್ಲಿ ಸಿದ್ಧಪಡಿಸಿದ ವರದಿಯೊಂದರಲ್ಲಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗವು ನಿರ್ಬಂಧಗಳಿಂದಾಗಿ ಸಿಗುತ್ತದೆ ಎಂದು ಭಾವಿಸಿರುವ ಪ್ರಯೋಜನಗಳಿಗಿಂತಲೂ ‘ಉದ್ಯೋಗ, ಶಿಕ್ಷಣ, ಆರೋಗ್ಯಸೇವೆ ಮತ್ತು ರಾಜಕೀಯ ಪ್ರಾತಿನಿಧ್ಯದ ಮೇಲೆ ಆಗುವ ಪರಿಣಾಮವು ಬಹಳ ಹೆಚ್ಚು’ ಎಂದು ಅಭಿಪ್ರಾಯಪಟ್ಟಿದೆ. ಈ ಕಾರಣಗಳಿಂದಾಗಿ, ಪ್ರಕ್ಷುಬ್ಧ ಪರಿಸ್ಥಿತಿಗಳ ಸಂದರ್ಭದಲ್ಲಿ ದುಷ್ಕರ್ಮಿಗಳು ದುರ್ಬಳಕೆ ಮಾಡಿಕೊಳ್ಳಬಹುದು ಎಂದು ಗುರುತಿಸಲಾದ ವೆಬ್‌ಸೈಟ್‌ಗಳು ಹಾಗೂ ಒಟಿಟಿ ವೇದಿಕೆಗಳನ್ನು ಮಾತ್ರ ನಿರ್ಬಂಧಿಸುವುದು ಹೆಚ್ಚು ಸೂಕ್ತವಾಗುತ್ತದೆ. ಅದರಲ್ಲೂ, ನಿರ್ದಿಷ್ಟ ಪ್ರದೇಶಗಳಿಗೆ ಮಾತ್ರ ಈ ನಿರ್ಬಂಧವು ಅನ್ವಯವಾಗುವಂತಿದ್ದರೆ ಸೂಕ್ತ ಎಂದು ಟ್ರಾಯ್‌ ಹೇಳಿರುವುದರಲ್ಲಿ ಅರ್ಥವಿದೆ.

2020ರಲ್ಲಿ ನೀಡಿರುವ ತೀರ್ಪೊಂದರಲ್ಲಿ ಸುಪ್ರೀಂ ಕೋರ್ಟ್‌, ‘ಇಂಟರ್ನೆಟ್‌ ಮಾಧ್ಯಮದ ಮೂಲಕ ಅಭಿವ್ಯಕ್ತಿಸುವ ಸ್ವಾತಂತ್ರ್ಯ ಹಾಗೂ ಯಾವುದೇ ವೃತ್ತಿಯನ್ನು ನಡೆಸುವ ಸ್ವಾತಂತ್ರ್ಯಕ್ಕೆ ಸಾಂವಿಧಾನಿಕ ರಕ್ಷಣೆ ಇದೆ. ಈ ಸ್ವಾತಂತ್ರ್ಯಕ್ಕೆ ಹೇರುವ ಮಿತಿಗಳು ಸಂವಿಧಾನದ ಚೌಕಟ್ಟಿನಲ್ಲಿಯೇ ಇರಬೇಕು’ ಎಂದು ಸ್ಪಷ್ಟಪಡಿಸಿದೆ. ಇಂಟರ್ನೆಟ್ ಸೇವೆಗಳನ್ನು ಅನಿರ್ದಿಷ್ಟಾವಧಿಗೆ ಅಮಾನತಿನಲ್ಲಿ ಇರಿಸುವುದಕ್ಕೆ ಅವಕಾಶ ಇಲ್ಲ. ಇಂಟರ್ನೆಟ್ ಸೇವೆಗಳನ್ನು ತಾತ್ಕಾಲಿಕ ಅವಧಿಗೆ ಮಾತ್ರ ಅಮಾನತಿನಲ್ಲಿ ಇರಿಸಬಹುದು ಎಂದು ಕೂಡ ಕೋರ್ಟ್‌ ಹೇಳಿದೆ. ಸಂವಹನ ಮತ್ತು ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಸಂಸತ್ತಿನ ಸ್ಥಾಯಿ ಸಮಿತಿಯು 2021ರ ಡಿಸೆಂಬರ್‌ನಲ್ಲಿ ವರದಿಯೊಂದನ್ನು ಸಲ್ಲಿಸಿದೆ. ಇದರಲ್ಲಿ ಸಮಿತಿಯು ಇಂಟರ್ನೆಟ್‌ ಸೇವೆ ಮೇಲೆ ಸಂಪೂರ್ಣವಾಗಿ ನಿಷೇಧ ಹೇರುವ ಬದಲು, ನಿರ್ದಿಷ್ಟ ವೆಬ್‌ಸೈಟ್‌ ಅಥವಾ ಒಟಿಟಿ ಆ್ಯಪ್‌ಗಳನ್ನು ಮಾತ್ರ ನಿರ್ಬಂಧಿಸುವುದರ ಪರವಾಗಿ ಮಾತನಾಡಿದೆ. ‘ಇಂಟರ್ನೆಟ್‌ ನಿರ್ಬಂಧಿಸುವ ಬದಲು ಫೇಸ್‌ಬುಕ್‌, ವಾಟ್ಸ್‌ಆ್ಯಪ್‌, ಟೆಲಿಗ್ರಾಂನಂತಹ ಸೇವೆಗಳನ್ನು ಮಾತ್ರ ನಿರ್ಬಂಧಿಸುವ ಸಾಧ್ಯತೆಗಳ ಬಗ್ಗೆ ದೂರಸಂಪರ್ಕ ಇಲಾಖೆಯು ಪರಿಶೀಲಿಸಬೇಕು’ ಎಂದು ಸಮಿತಿ ಹೇಳಿದೆ. ಈ ರೀತಿ ನಿರ್ದಿಷ್ಟ ಆ್ಯಪ್‌ಗಳನ್ನು ಮಾತ್ರ ನಿರ್ಬಂಧಿಸಿದರೆ ಹಣಕಾಸು ಸೇವೆಗಳು, ಆರೋಗ್ಯಸೇವೆಗಳು, ಶಿಕ್ಷಣ ಹಾಗೂ ಇತರ ಹಲವು ಸೇವೆಗಳು ಅಡೆತಡೆ ಇಲ್ಲದೆ ಮುಂದುವರಿಯುತ್ತವೆ, ಜನಸಾಮಾನ್ಯರಿಗೆ ಆಗುವ ತೊಂದರೆಯು ಕನಿಷ್ಠ ಮಟ್ಟದಲ್ಲಿ ಇರುತ್ತದೆ ಎಂದು ಸ್ಥಾಯಿ ಸಮಿತಿಯು ಅಭಿಪ್ರಾಯಪಟ್ಟಿದೆ. ನಿರ್ಬಂಧಗಳು ಕಡಿಮೆ ಮಟ್ಟದಲ್ಲಿರುವ ಮಾದರಿಯನ್ನು ಅನುಕರಿಸುವುದು ಒಳಿತು ಎಂದು ಅದು ಹೇಳಿದೆ. ಟ್ರಾಯ್‌ ಸಿದ್ಧಪಡಿಸಿರುವ ಸಮಾಲೋಚನಾ ಪತ್ರದಲ್ಲಿನ ಮಾತುಗಳು, ಸುಪ್ರೀಂ ಕೋರ್ಟ್‌ನ ತೀರ್ಪು ಹಾಗೂ ಸ್ಥಾಯಿ ಸಮಿತಿಯ ಆಶಯವನ್ನು ಕಾರ್ಯರೂಪಕ್ಕೆ ತರುವ ಕೆಲಸವು ಸರ್ಕಾರದ ಕಡೆಯಿಂದ ಈಗ ಆಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT