ಭಾನುವಾರ, ಜುಲೈ 3, 2022
26 °C

ಪರಿಶಿಷ್ಟರ ನಿಧಿ ವರ್ಗಾವಣೆ ಅಕ್ಷಮ್ಯ: ಸಾಮಾಜಿಕ ನ್ಯಾಯ ಪರಿಪಾಲಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ (ಎಸ್‌ಸಿ ಮತ್ತು ಎಸ್‌ಟಿ) ಸಮುದಾಯಗಳ ಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದ ₹ 7,885 ಕೋಟಿಯಷ್ಟು ಬೃಹತ್‌ ಮೊತ್ತವನ್ನು ಮೂಲಸೌಕರ್ಯ ಯೋಜನೆಗಳಿಗೆ ವರ್ಗಾಯಿಸುವ ಮೂಲಕ ರಾಜ್ಯ ಸರ್ಕಾರವು ಸಾಮಾಜಿಕ ನ್ಯಾಯದ ವಿರುದ್ಧವಾಗಿ ನಡೆದುಕೊಂಡಿದೆ. ಅಷ್ಟೇ ಅಲ್ಲ, ತಾನೇ ರೂಪಿಸಿರುವ ಕಾಯ್ದೆಯನ್ನು ಇಂತಹ ಅನುಚಿತ ಕ್ರಮದ ಮೂಲಕ ಅದು ಉಲ್ಲಂಘಿಸಿದೆ. ಸರ್ಕಾರದ ಈ ನಡೆ ಅಕ್ಷಮ್ಯ. ‘ಕರ್ನಾಟಕ ಎಸ್‌ಸಿ–ಎಸ್‌ಟಿ ಉಪಯೋಜನೆ ಕಾಯ್ದೆ– 2013’ರ ಪ್ರಕಾರ, ರಾಜ್ಯ ಸರ್ಕಾರ ತನ್ನ ವಾರ್ಷಿಕ ಬಜೆಟ್‌ನ ಶೇ 24.1ರಷ್ಟು ಮೊತ್ತವನ್ನು ಈ ಸಮುದಾಯಗಳ ಕಲ್ಯಾಣಕ್ಕಾಗಿ ವ್ಯಯಿಸಬೇಕು. ಎಸ್‌ಸಿ ಸಮುದಾಯಕ್ಕೆ ಬಜೆಟ್‌ನ ಶೇ 17.15ರಷ್ಟು ಮತ್ತು ಎಸ್‌ಟಿ ಸಮುದಾಯಕ್ಕೆ ಶೇ 6.95ರಷ್ಟು ಮೊತ್ತ ಖರ್ಚು ಮಾಡಬೇಕು ಎಂದು ಕಾಯ್ದೆಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಆದರೆ, ಕಾಯ್ದೆಯ ಸೆಕ್ಷನ್‌ 7 (ಡಿ) ಅಡಿಯಲ್ಲಿ ಇರುವ ‘ಪರಿಗಣಿತ ವೆಚ್ಚ’ದ ಅವಕಾಶವನ್ನು ದುರ್ಬಳಕೆ ಮಾಡಿಕೊಂಡ ಸರ್ಕಾರ, 2018ರಿಂದ 2020ರ ಅವಧಿಯಲ್ಲಿ ಎಸ್‌ಸಿ–ಎಸ್‌ಟಿ ಕಲ್ಯಾಣಕ್ಕೆ ಮೀಸಲಿಡಲಾಗಿದ್ದ ನಿಧಿಯಲ್ಲಿ ದೊಡ್ಡ ಪ್ರಮಾಣದ ಮೊತ್ತವನ್ನು ಅನ್ಯ ಯೋಜನೆಗಳಿಗೆ ವಿನಿಯೋಗಿಸಿದೆ. ಕುಡಿಯುವ ನೀರು ಪೂರೈಕೆ, ರಸ್ತೆ ದುರಸ್ತಿ, ನೀರಾವರಿ ಹಾಗೂ ಇತರ ಕಾಮಗಾರಿಗಳಿಗೆ ಈ ನಿಧಿಯ ಮೊತ್ತವನ್ನು ಬಳಕೆ ಮಾಡಲಾಗಿದೆ. ಒಂದುವೇಳೆ ಮೂಲಸೌಕರ್ಯ ಕಾಮಗಾರಿಯನ್ನು ವಿಭಜಿಸಲು ಸಾಧ್ಯವೇ ಆಗದಿದ್ದರೆ ಇಡೀ ಯೋಜನೆಗೆ ವ್ಯಯಿಸಿದ ಅನುದಾನದ ಒಂದು ಭಾಗವನ್ನು ಎಸ್‌ಸಿ–ಎಸ್‌ಟಿ ಕಲ್ಯಾಣಕ್ಕಾಗಿ ಬಳಸಲಾಗಿದೆಯೆಂದು ಪರಿಗಣಿಸಲು ಕಾಯ್ದೆಯ ಸೆಕ್ಷನ್‌ 7 (ಡಿ) ಅವಕಾಶ ನೀಡುತ್ತದೆ. ಇಂತಹ ‘ಪರಿಗಣಿತ ವೆಚ್ಚ’ ಕೂಡ ಒಟ್ಟಾರೆ ಕಾಯ್ದೆಯ ಉದ್ದೇಶಕ್ಕೆ ಪೂರಕವಾಗಿಯೇ ಇರಬೇಕು ಎನ್ನುವುದು ಈ ನಿಯಮದ ಹಿಂದಿನ ಆಶಯ. ಅಂದರೆ ಎಸ್‌ಸಿ–ಎಸ್‌ಟಿ ಸಮುದಾಯಗಳ ವರಮಾನ ಹೆಚ್ಚಳ, ಕೌಶಲ ಅಭಿವೃದ್ಧಿಗೆ ಪೂರಕವಾದ ಹಾಗೂ ಈ ಸಮುದಾಯಗಳು ವಾಸಿಸುವ ಪ್ರದೇಶದಲ್ಲಿ ಮೂಲಸೌಕರ್ಯ ಸೃಷ್ಟಿಸಲು ನಿಗದಿಯಾದ ಯೋಜನೆಗಳಿಗೆ ‘ಪರಿಗಣಿತ ವೆಚ್ಚ’ ಬಳಕೆ ಆಗಬೇಕಿತ್ತು. ಏಕೆಂದರೆ, ಅಲಕ್ಷಿತ ಸಮುದಾಯಗಳನ್ನು ಬಡತನದ ರೇಖೆಯಿಂದ ಮೇಲಕ್ಕೆತ್ತಿ ಸಮಾಜದ ಮುಖ್ಯವಾಹಿನಿಯೊಂದಿಗೆ ಬೆರೆಯುವಂತೆ ಮಾಡುವುದೇ ಈ ಕಾಯ್ದೆಯ ಉದ್ದೇಶವಾಗಿದೆ. ತಾನೇ ರೂಪಿಸಿದ ಕಾಯ್ದೆಯ ಉದ್ದೇಶ ತುಂಬಾ ಸ್ಪಷ್ಟವಾಗಿದ್ದರೂ ಮೇಲ್ಸೇತುವೆ ನಿರ್ಮಾಣದಂತಹ ಯೋಜನೆಗಳಿಗೆ ಎಸ್‌ಸಿ– ಎಸ್‌ಟಿ ಕಲ್ಯಾಣ ನಿಧಿಯನ್ನು ವರ್ಗಾಯಿಸಿದರೆ ಅದು ಸರ್ಕಾರದಿಂದಾದ ಅಧಿಕಾರದ ದುರ್ಬಳಕೆಯಲ್ಲದೆ ಮತ್ತೇನು? ಅದೇ ಹಣವನ್ನು ಎಸ್‌ಸಿ–ಎಸ್‌ಟಿ ಸಮುದಾಯಗಳೇ ಹೆಚ್ಚಾಗಿ ವಾಸಿಸುವ ಗ್ರಾಮೀಣ ಭಾಗಗಳಲ್ಲಿ ಮೂಲಸೌಕರ್ಯ ಸೃಷ್ಟಿಗೆ ಬಳಸಿದ್ದರೆ ಕಾಯ್ದೆಯ ಉದ್ದೇಶ ಈಡೇರಿದಂತಾಗುತ್ತಿತ್ತು.

ಕಲ್ಯಾಣ ಯೋಜನೆಗಳಿಗೆ ಮೀಸಲಿಟ್ಟ ನಿಧಿಯನ್ನು ಈ ರೀತಿ ಅನ್ಯ ಉದ್ದೇಶಕ್ಕೆ ವರ್ಗಾವಣೆ ಮಾಡುವ ಸರ್ಕಾರದ ಕ್ರಮ, ಕಳೆದ ವರ್ಷದ ವಿಧಾನಮಂಡಲ ಅಧಿವೇಶನದಲ್ಲಿ ತೀವ್ರ ಚರ್ಚೆಗೆ ಒಳಗಾಗಿತ್ತು.
₹ 5,000 ಕೋಟಿಯನ್ನು ಅನ್ಯ ಯೋಜನೆಗಳಿಗೆ ಬಳಸುವ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯು ವಂತಾಗಿತ್ತು. ತಳ ಸಮುದಾಯಗಳ ಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದ ನಿಧಿ ಹೀಗೆ ಅನ್ಯ ಉದ್ದೇಶ–ಯೋಜನೆ ಗಳಿಗೆ ಬಳಕೆಯಾಗುತ್ತಿದ್ದರೂ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು ಮೂಕಪ್ರೇಕ್ಷಕರಾಗಿ ಕುಳಿತಿರುವುದು ದುರದೃಷ್ಟಕರ. ಅಷ್ಟೇ ಅಲ್ಲ, ಕಾಯ್ದೆಗೆ ವಿರುದ್ಧವಾದ, ಆ ಮೂಲಕ ಎಸ್‌ಸಿ–ಎಸ್‌ಟಿ ಸಮುದಾಯಗಳ ಪಾಲಿಗೆ ಮಾರಕವಾದ ತೀರ್ಮಾನಕ್ಕೂ ಕಾರಣವಾದ ಪಾಪ
ಕಾರ್ಯದಲ್ಲಿ ಅವರೂ ಭಾಗೀದಾರರು. ಇಂಥವರು, ತಾವು ಯಾರ ಸಲುವಾಗಿ ಅಧಿಕಾರದಲ್ಲಿ
ರುವುದು ಎಂಬುದರ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕು. ಅಲಕ್ಷಿತ ಸಮುದಾಯಗಳಿಗೆ
ಮೀಸಲಾಗಿದ್ದ ಕಲ್ಯಾಣ ನಿಧಿ ವರ್ಗಾವಣೆಯಲ್ಲಿ ತಪ್ಪು ಎಸಗಿದ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕು. ಅದು ಇತರ ಅಧಿಕಾರಿಗಳಿಗೂ ಪಾಠವಾಗಬೇಕು.

ಪ್ರಬಲ ಜಾತಿಗಳ ಅಭಿವೃದ್ಧಿಗಾಗಿ, ಅವುಗಳ ಮಠ–ಮಾನ್ಯಗಳು ಹಾಕಿಕೊಂಡ ಯೋಜನೆಗಳಿಗಾಗಿ ನೂರಾರು ಕೋಟಿ ರೂಪಾಯಿ ಅನುದಾನವನ್ನು ಧಾರಾಳವಾಗಿ ಕೊಡುತ್ತಿರುವ ಹೊತ್ತಿನಲ್ಲಿಯೇ ಎಸ್‌ಸಿ–ಎಸ್‌ಟಿ ಕಲ್ಯಾಣ ನಿಧಿಗೆ ಕನ್ನಹಾಕಿ, ಆ ಮೊತ್ತವನ್ನು ಅನ್ಯ ಯೋಜನೆಗಳಿಗೆ ವರ್ಗಾಯಿಸುತ್ತಿರುವ ಸರ್ಕಾರದ ಕ್ರಮ ಖಂಡನಾರ್ಹ. ತಳಸಮುದಾಯಗಳನ್ನು ಮಮತೆಯಿಂದ ಕಾಣಬೇಕಿದ್ದ ಸರ್ಕಾರವೇ ಆ ಸಮುದಾಯಗಳ ಕುರಿತು ಎಂತಹ ನಿರ್ಲಕ್ಷ್ಯ ಧೋರಣೆ ತಾಳಿದೆ ಎನ್ನುವುದಕ್ಕೂ ಈ ನಡೆ ಒಂದು ನಿದರ್ಶನ. ಈ ವರ್ಷ ಎಸ್‌ಸಿ–ಎಸ್‌ಟಿ ಕಲ್ಯಾಣ ನಿಧಿಯನ್ನು ಅನ್ಯ ಯೋಜನೆಗಳಿಗೆ ವರ್ಗಾಯಿಸುವುದಿಲ್ಲ ಎಂದು ಸರ್ಕಾರವೇನೋ ಭರವಸೆ ನೀಡಿದೆ. ಆದರೆ, ಹಿಂದಿನ ವರ್ಷಗಳಲ್ಲಿ ಆಗಿರುವ ನಿಯಮ ಹಾಗೂ ಅಧಿಕಾರದ ದುರ್ಬಳಕೆ ಉದಾಹರಣೆಗಳು ಕಣ್ಮುಂದೆಯೇ ಇರುವಾಗ ಅದರ ಮಾತನ್ನು ಯಾರೂ ನಂಬುವ ಸ್ಥಿತಿಯಲ್ಲಿ ಇಲ್ಲ. ಇಂತಹ ದುರ್ಬಳಕೆಯನ್ನು ತಪ್ಪಿಸಲು ಇರುವ ಏಕೈಕ ಹಾದಿಯೆಂದರೆ ಕಾಯ್ದೆ ಯಿಂದಲೇ ಸೆಕ್ಷನ್‌ 7 (ಡಿ)ಯನ್ನು ತೆಗೆದುಹಾಕುವುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು