ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ| ಅಮೆರಿಕ – ಚೀನಾ ವಾಣಿಜ್ಯಸಂಘರ್ಷ ಶಮನಕ್ಕೆ ಶುಭಾರಂಭ

Last Updated 17 ಜನವರಿ 2020, 20:08 IST
ಅಕ್ಷರ ಗಾತ್ರ

ವಿಶ್ವದ ಎರಡು ಬೃಹತ್‌ ಆರ್ಥಿಕತೆಗಳಾದ ಅಮೆರಿಕ ಮತ್ತು ಚೀನಾ ತಮ್ಮ ನಡುವಣ ವಾಣಿಜ್ಯ ಸಂಘರ್ಷ ಕೊನೆಗೊಳಿಸುವ ದಿಸೆಯಲ್ಲಿ ಮಹತ್ವದ ಹೆಜ್ಜೆ ಇರಿಸಿವೆ. ಎರಡೂ ದೇಶಗಳ ನಡುವೆ ವಾಣಿಜ್ಯ ಒಪ್ಪಂದವೊಂದಕ್ಕೆ ಸಹಿ ಹಾಕಲಾಗಿದ್ದು, ಇದು ಮೊದಲ ಹಂತದ ಒಪ್ಪಂದ ಎಂದು ಆ ದೇಶಗಳು ಹೇಳಿಕೊಂಡಿವೆ. ಈ ಒಪ್ಪಂದಕ್ಕೆ ರಾಜಕೀಯ ಮತ್ತು ಆರ್ಥಿಕ ಮಹತ್ವವೂ ಇದೆ. ಎರಡೂ ದೇಶಗಳು ಬಿಗಿಪಟ್ಟು ಸಡಿಲಿಸಿವೆ. ಹಾಗಿದ್ದರೂ ಚೀನಾ ಸರಕುಗಳ ಮೇಲೆ ಅಮೆರಿಕ ಹೆಚ್ಚಿಸಿದ್ದ ಎಲ್ಲಾ ಸುಂಕಗಳು ತಕ್ಷಣವೇ ರದ್ದಾಗುವುದಿಲ್ಲ. ಆದರೂ ಒಂದೂವರೆ ವರ್ಷದ ವಾಣಿಜ್ಯ ಬಿಕ್ಕಟ್ಟು ಬಗೆಹರಿಯುವ ಸೂಚನೆಯಂತೂ ಸಿಕ್ಕಿದೆ. ಇಡೀ ವಿಶ್ವಕ್ಕೆ ಕಂಟಕವಾಗಿ ಪರಿಣಮಿಸಿದ್ದ ಸುಂಕ ಸಂಘರ್ಷದ ತೀವ್ರತೆಯು ಕ್ರಮೇಣ ಕರಗಬಹುದು ಎಂಬ ನಿರೀಕ್ಷೆ ಇದೆ. ಈ ಒಪ್ಪಂದದಂತೆ ಎರಡೂ ದೇಶಗಳು ನಡೆದುಕೊಂಡರೆ ಮತ್ತು ಅದನ್ನು ಮುಂದಿನ ಹಂತಕ್ಕೆ ಕೊಂಡೊಯ್ದರೆ ಅದು ಜಾಗತಿಕ ಆರ್ಥಿಕತೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಹೆಚ್ಚು. ಅಂತರರಾಷ್ಟ್ರೀಯ ಹಣಕಾಸು ನಿಧಿ ಅಂದಾಜಿಸಿರುವಂತೆ, ಜಾಗತಿಕ ಆರ್ಥಿಕ ವೃದ್ಧಿ ದರವು ಈ ವರ್ಷ ಶೇ 3ರಷ್ಟು ಇರಬಹುದು. ಇದು, ದಶಕದಲ್ಲೇ ಕನಿಷ್ಠ ಮಟ್ಟ. ಜಾಗತಿಕ ಆರ್ಥಿಕತೆಯ ಪ್ರಗತಿ ಕುಂಠಿತಗೊಳ್ಳಲು ಈ ವಾಣಿಜ್ಯ ಸಂಘರ್ಷ ಕೂಡ ಪ್ರಧಾನ ಕಾರಣವಾಗಿತ್ತು. ದುಬಾರಿ ಸುಂಕ ಮತ್ತು ಬಂಡವಾಳ ಹೂಡಿಕೆ ಮುಂದೂಡಿಕೆ ನಿರ್ಧಾರಗಳು ಆರ್ಥಿಕತೆಯ ಸಂಕಷ್ಟ ಹೆಚ್ಚಿಸಿದ್ದವು. ಈ ಒಪ್ಪಂದದ ಪರಿಣಾಮವಾಗಿ ಜಾಗತಿಕ ಆರ್ಥಿಕ ವ್ಯವಸ್ಥೆಯ ವೃದ್ಧಿ ದರ ಉತ್ತಮ
ಗೊಳ್ಳಬಹುದು. ಅದರಿಂದಾಗಿ, ಭಾರತಕ್ಕೂ ಪ್ರಯೋಜನ ಇದೆ. ಹತ್ತಾರು ಬಗೆಯ ಹಣಕಾಸು ಬಿಕ್ಕಟ್ಟುಗಳ ಸುಳಿಯಲ್ಲಿ ಸಿಲುಕಿರುವ ದೇಶಿ ಆರ್ಥಿಕತೆಯ ಚೇತರಿಕೆಗೆ ಇದು ಕೂಡ ಒಂದು ಆಸರೆ ಆಗಬಹುದು. ದೇಶದ ಆರ್ಥಿಕ ಪ್ರಗತಿಯ ಹಿನ್ನಡೆಗೆ ಜಾಗತಿಕ ವ್ಯಾಪಾರ ವಲಯದಲ್ಲಿನ ಅನಿಶ್ಚಿತ ಸ್ಥಿತಿ ಕೂಡ ಕಾರಣವಾಗಿತ್ತು. ಜಾಗತಿಕ ವ್ಯಾಪಾರದಲ್ಲಿ ಸ್ಥಿರತೆ ಮೂಡಲು ಈ ಒಪ್ಪಂದ ಸಹಕಾರಿಯಾಗಬಹುದು.

ಅಮೆರಿಕ ಮತ್ತು ಇರಾನ್‌ ನಡುವಣ ಸಂಘರ್ಷ ಗಂಭೀರ ಸ್ವರೂಪ ಪಡೆಯಬಹುದು ಎನ್ನುವ ಸನ್ನಿವೇಶ ಇತ್ತೀಚೆಗೆ ನಿರ್ಮಾಣವಾಗಿತ್ತು. ಅದು ಕೂಡ ಈಗ ತಿಳಿಯಾಗಿದೆ. ಕಚ್ಚಾ ತೈಲ ಬಿಕ್ಕಟ್ಟು ಒಂದು ಹಂತದವರೆಗೂ ದೂರವಾದಂತೆ ಭಾಸವಾಗುತ್ತಿದೆ. ಒಟ್ಟಿನಲ್ಲಿ ಜಾಗತಿಕ ವ್ಯಾಪಾರವು ಗರಿಗೆದರಲು ಪೂರಕವಾದ ವಾತಾವರಣ ಸೃಷ್ಟಿಯಾಗುವ ಲಕ್ಷಣಗಳು ಗೋಚರಿಸಿವೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು, ಚೀನಾದಿಂದ ಆಮದಾಗುವ ಸರಕಿಗೆ2018ರಲ್ಲಿ ಗರಿಷ್ಠ ಮಟ್ಟದಲ್ಲಿ ಸುಂಕ ಹೆಚ್ಚಿಸಿ ಸಂಘರ್ಷಕ್ಕೆ ನಾಂದಿ ಹಾಡಿದ್ದರು. ಚೀನಾ ಕೂಡ ಅಮೆರಿಕದ ಹಲವು ವಸ್ತುಗಳ ಮೇಲೆ ದುಬಾರಿ ಸುಂಕ ವಿಧಿಸಿ ತಿರುಗೇಟು ನೀಡಿತ್ತು. ಚೀನಾ ಜತೆಗಿನ ವ್ಯಾಪಾರ ಕೊರತೆ ತಗ್ಗಿಸುವ ಟ್ರಂಪ್‌ ಆಡಳಿತದ ಎಣಿಕೆ ಹುಸಿಯಾಗಿದೆ. ದೇಶಿ ಉದ್ದಿಮೆಗಳ ಹಿತಾಸಕ್ತಿ ರಕ್ಷಿಸಲು ಚೀನಾದ ಸರಕುಗಳ ಮೇಲೆ ದುಬಾರಿ ಸುಂಕ ವಿಧಿಸಿದ್ದ ಟ್ರಂಪ್‌ ನಡೆಯು ಅಮೆರಿಕಕ್ಕೇ ಹೆಚ್ಚು ಪ್ರತಿಕೂಲವಾಗಿ ಪರಿಣಮಿಸಿತ್ತು. ತನ್ನ ಸರಕುಗಳಿಗೆ ಅಮೆರಿಕದಲ್ಲಿ ದರ ವಿಪರೀತವಾಗಿ, ಬೇಡಿಕೆ ಕುಸಿತ ಉಂಟಾದ ಕಾರಣ, ಚೀನಾ ಪರ್ಯಾಯ ಮಾರುಕಟ್ಟೆಗಳಿಗಾಗಿ ಹುಡುಕಾಟ ನಡೆಸಿತ್ತು. ಈ ಒಪ್ಪಂದದ ನಂತರ ಕೂಡ ಈಗಿನ ಪರಿಸ್ಥಿತಿಯಲ್ಲಿ ಹೆಚ್ಚಿನ ಬದಲಾವಣೆ ಆಗುವ ಸಾಧ್ಯತೆ ಕಡಿಮೆ. ಎರಡನೇ ಹಂತದಒಪ್ಪಂದ ಜಾರಿಗೆ ಬರುವವರೆಗೆ ಚೀನಾ ಸರಕುಗಳ ಮೇಲಿನ ದಂಡನಾತ್ಮಕ ಸುಂಕ ಜಾರಿಯಲ್ಲಿ ಇರಲಿರುವುದೇ ಇದಕ್ಕೆ ಕಾರಣ. ಈ ಒಪ್ಪಂದವು ತಮ್ಮ ಪುನರಾಯ್ಕೆಗಾಗಿ ಟ್ರಂಪ್‌ ನಡೆಸಿರುವ ಚುನಾವಣಾ ತಂತ್ರ ಎಂದೂ ವಿಶ್ಲೇಷಿಸಲಾಗುತ್ತಿದೆ. ಹಾಗಾಗದೆ, ವಾಣಿಜ್ಯ ಸಂಘರ್ಷ ಕೊನೆಗಾಣಿಸುವುದೇ ಇದರನಿಜವಾದ ಕಾಳಜಿಯಾಗಿದ್ದರೆ ಎರಡನೇ ಹಂತದ ಒಪ್ಪಂದ ತ್ವರಿತವಾಗಿ ಜಾರಿಗೆ ಬರುವಂತೆ ನೋಡಿಕೊಳ್ಳುವುದು ಅಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT